ಅಂಗವಿಕಲರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಕಾರ್ಡ್
ಮೈಸೂರು:
ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ ನೀಡುವ ಉದ್ದೇಶದೊಂದಿಗೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಅಜೀವಿಕ ಮಿಷನ್(ಗ್ರಾಮೀಣ, ವಿಬಿ ಜಿ ರಾಮ್ ಜಿ) ಮತ್ತಷ್ಟು ಬಲಪಡಿಸಿ ವಿಸ್ತರಿಸಲು ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಜಾಬ್ ಕಾರ್ಡ್ ಮೇಳ ಆರಂಭವಾಗಿದೆ.
ಯೋಜನೆಯಡಿ ಲಭ್ಯವಿರುವ ಅನುಕೂಲಗಳ ಬಗ್ಗೆ ಜಾಗೃತಿ ಮೂಡಿಸಿ ಗ್ರಾಮೀಣ ಜನರ ಭಾಗವಹಿಸುವಿಕೆ ಹೆಚ್ಚಿಸುವುದು, ಗ್ರಾಮೀಣ ಜನರ ಜೀವನೋಪಾಯಕ್ಕೆ ಭದ್ರತೆ ಕಲ್ಪಿಸುವುದಾಗಿದೆ.
ಜತೆಗೆ, ಜಲಸಂರಕ್ಷಣೆ, ಅಂತರ್ಜಲ, ಮರುಪೂರಣ ಹಾಗೂ ದೀರ್ಘಕಾಲಿನ ಜೀವನೋಪಾಯಕ್ಕೆ ಆದ್ಯತೆ ನೀಡುವ ಮೂಲಕ ಬರ ನಿರ್ವಹಣೆ, ಮೂಲಸೌಕರ್ಯ ಅಭಿವೃದ್ಧಿ, ಸ್ವಗ್ರಾಮದಲ್ಲೇ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ನಗರಗಳಿಗೆ ವಲಸೆ ಹೋಗುವುದನ್ನು ತಡೆಯುವುದು ಮೇಳದ ಉದ್ದೇಶವಾಗಿದೆ.
ಮನೆ ಮನೆಗೂ ಭೇಟಿ ನೀಡಿ ಬೇಡಿಕೆ ಸ್ವೀಕರಿಸಲಾಗುತ್ತದೆ. ಈವರೆಗೂ ನೋಂದಣಿಯಾಗದ ದುರ್ಬಲ ವರ್ಗದ ಕುಟುಂಬಗಳಿಗೆ ರೋಜ್‌ಗಾರ್ ಗ್ಯಾರಂಟಿ ಕಾರ್ಡ್ ವಿತರಿಸುವುದು, ಅಂಗವಿಕಲರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಕಾರ್ಡ್ ನೀಡಲಾಗುತ್ತದೆ.
ಸ್ಥಳದಲ್ಲೇ ಈ ಕಾರ್ಡ್ ನವೀಕರಣ, ಇ-ಕೆವೈಸಿ ಅಪ್ಡೇಟ್ ಮಾಡಲಾಗುತ್ತದೆ. ಅಕುಶಲ ಕೆಲಸದ ಬೇಡಿಕೆ ಸ್ವೀಕೃತಿ ಮಾಡಲಾಗುತ್ತದೆ.
ನಿತ್ಯ 382 ರೂ. ದರದಲ್ಲಿ ಕೂಲಿ ನೀಡುವ ಜತೆಗೆ ಜಾಬ್ ಕಾರ್ಡ್ ಮೂಲಕ ಪ್ರತಿ ಕುಟುಂಬಕ್ಕೆ 125 ದಿನಗಳ ಕೆಲಸ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ಮನೆ ಮನೆಗೆ ಭೇಟಿ ನೀಡುವುದು ಅಭಿಯಾನದ ಮೊದಲ ಆದ್ಯತೆಯಾಗಿದೆ.
ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ ನೀಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಜಾಬ್ ಕಾರ್ಡ್ ಮೇಳವನ್ನು ಜಿಲ್ಲಾದ್ಯಂತ ಎಲ್ಲ ಗ್ರಾಮ ಪಂಚಾಯಿತಿಯಲ್ಲಿ ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದು ಜಿ.ಪಂ ಸಿಇಒ ಎಸ್. ಯುಕೇಶ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲೆಯ 255 ಗ್ರಾಪಂಗಳಲ್ಲಿಯೂ ಈ ಮೇಳ ಪ್ರಾರಂಭಗೊಂಡಿವೆ. ಗ್ರಾಮೀಣ, ದುರ್ಬಲ ಜನರ ಜೀವನೋಪಾಯ ಭದ್ರತೆ ಒದಗಿಸಲು ಸಹಕಾರಿಯಾಗಲಿದೆ. ಜತೆಗೆ ಗ್ರಾಮೀಣ ಭಾಗದ ಜನರ ಆರ್ಥಿಕ ಜೀವನ ಸುಧಾರಣೆಯೊಂದಿಗೆ ಜಲ ಸಂರಕ್ಷಣೆ ಪ್ರಮುಖ ಧ್ಯೇಯವಾಗಿದೆ ಎಂದು ಜಿಪಂ ಉಪಕಾರ್ಯದರ್ಶಿ(ಅಭಿವೃದ್ಧಿ) ಭೀಮಪ್ಪ ಕಲಾಳಿ ತಿಳಿಸಿದ್ದಾರೆ.