ಜೆಡಿಎಸ್‌ಗೆ ದೊರಕಲಿದೆ 58ಕ್ಕಿಂತ ಹೆಚ್ಚು ಸ್ಥಾನ: ನಿಖಿಲ್ ಕುಮಾರಸ್ವಾಮಿ ವಿಶ್ವಾಸ

ಜನರೊಂದಿಗೆ ಜನತಾದಳ ಕಾರ್ಯಕ್ರಮವನ್ನು ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಿದರು.
ಜನರೊಂದಿಗೆ ಜನತಾದಳ ಕಾರ್ಯಕ್ರಮವನ್ನು ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯಮಂತ್ರಿಗಳ ವರುಣ ಕ್ಷೇತ್ರದಲ್ಲೇ ಈ ಸವಾಲನ್ನು ಸ್ವೀಕರಿಸುತ್ತೇನೆ
  • ಅಹಿಂದ ನಾಯಕರೆಂದು ಹೇಳಿಕೊಳ್ಳುವ ಸಿಎಂ, ತಮ್ಮನ್ನು ಚಾಂಪಿಯನ್ ಮಾಡಿದ್ದು ಯಾರು ಎಂದು ಮರೆತಿದ್ದಾರೆ.
  • ಜೆಡಿಎಸ್ ಎಲ್ಲಿದೆ ಎನ್ನುವವರಿಗೆ ಮುಂದಿನ ಚುನಾವಣೆಯಲ್ಲಿ ತಿಳಿಯಲಿದೆ
ಮೈಸೂರು:ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 58ಕ್ಕಿಂತ ಹೆಚ್ಚು ಸ್ಥಾನ ಪಡೆಯಲಿದೆ ಎಂದು ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಮೈಸೂರು ತಾಲೂಕು ಮೆಲ್ಲಹಳ್ಳಿ ಗ್ರಾಮದ ಹೊರ ವಲಯದಲ್ಲಿ ಆಯೋಜಿಸಿದ್ದ ‘ವರುಣ ವಿಧಾನಸಭಾ ಕ್ಷೇತ್ರದ ಜನರೊಂದಿಗೆ ಜನತಾದಳ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ಅವರು ಸದನದ ಒಳಗಡೆ ಜೆಡಿಎಸ್ 17 ಸ್ಥಾನದಿಂದ ಸಿಂಗಲ್ ಡಿಜಿಟ್‌ಗೆ ಬರುತ್ತೆ ಎಂದು ಅಪಹಾಸ್ಯ ಮಾಡಿದ್ದಾರೆ. ವರುಣದಲ್ಲೇ ಈ ಸವಾಲನ್ನು ಸ್ವೀಕರಿಸುತ್ತೇನೆ. ಅವರು 2004ರಲ್ಲಿ ಜೆಡಿಎಸ್‌ನಲ್ಲಿ ಇದ್ದಾಗ 58 ಸ್ಥಾನ ಪಡೆದಿತ್ತು. ಮುಂಬರುವ ಚುನಾವಣೆಯಲ್ಲಿ ಅದಕ್ಕಿಂತ ಒಂದು ಸ್ಥಾನ ಹೆಚ್ಚಾಗಿ ಪಡೆದು, 2028ಕ್ಕೆ ಎನ್‌ಡಿಎ ಸರ್ಕಾರ ರಚನೆ ಮಾಡುತ್ತೇವೆ ಎಂದು ತಿರುಗೇಟು ನೀಡಿದರು.
ಅಹಿಂದ ನಾಯಕರೆಂದು ಹೇಳಿಕೊಳ್ಳುವ ಸಿಎಂ, ತಮ್ಮನ್ನು ಚಾಂಪಿಯನ್ ಮಾಡಿದ್ದು ಯಾರು ಎಂದು ಮರೆತಿದ್ದಾರೆ. ಸಮಾಜವಾದಿ ಎಂದು ಗುರುತಿಸಿಕೊಳ್ಳುವುದಕ್ಕೆ ಕಾರಣವಾದ ಪಕ್ಷ ಯಾವುದು? ಅಂದು ದೇವೇಗೌಡ ಇವರ ಕೈಯಲ್ಲಿ ಬಜೆಟ್ ಮಂಡಿಸಲು ಅವಕಾಶ ನೀಡದಿದ್ದರೆ, ಇಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ ಪಕ್ಷದಿಂದಲೇ ಬೆಳೆದು, ಆ ಪಕ್ಷದ ಋಣವನ್ನೇ ಮರೆತು ದೇವೇಗೌಡರ ಬಗ್ಗೆಯೇ ಗೇಲಿ ಮಾಡುತ್ತಿದ್ದಾರೆ. ಇದಕ್ಕೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ. ತಮಿಳುನಾಡಿನ ರೀತಿ ರಾಜ್ಯದಲ್ಲಿಯೂ ಬದಲಾವಣೆ ಗಾಳಿ ಬೀಸಲಿದೆ ಎಂದರು.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಕುರ್ಚಿ ಕದನ ಮತ್ತು ಸುಳ್ಳು ಪ್ರಚಾರದಿಂದ ರಾಜ್ಯದ ವ್ಯವಸ್ಥೆ ಮೂರಾ ಬಟ್ಟೆಯಾಗಿದೆ. ಕಳೆದ 3 ವರ್ಷಗಳಲ್ಲಿ ಎಸ್‌ಟಿ, ಎಸ್‌ಟಿ ವರ್ಗದ ಅಭಿವೃದ್ಧಿಗೆ ಮೀಸಲಿಟ್ಟ 29,764.10 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗಿದೆ. ಅಲ್ಲದೇ ಅನುದಾನವನ್ನು 190 ಕೋಟಿ ರೂ.ನಿಂದ 50 ಕೋಟಿ ರೂ.ಗೆ ಇಳಿಸಿ 140 ಕೋಟಿ ರೂ. ಕಡಿತ ಮಾಡುವ ಮೂಲಕ ದಲಿತರಿಗೆ ದ್ರೋಹವೆಸಗಲಾಗಿದೆ ಎಂದು ನಿಖಿಲ್ ಕಿಡಿಕಾರಿದರು.
ಕಳೆದ ಎರಡು ದಶಕದಲ್ಲಿ 54 ಜನ ಜೆಡಿಎಸ್‌ನಿಂದ ಶಾಸಕ ಸ್ಥಾನ ಅನುಭವಿಸಿ, ರಾಜಕೀಯ ಲಾಭಕ್ಕಾಗಿ ಪಕ್ಷಾಂತರ ಮಾಡಿದ್ದಾರೆ. ಅಷ್ಟು ಜನ ಬಿಟ್ಟರೂ ಪಕ್ಷ ಇಷ್ಟು ಸದೃಢವಾಗಿರುವುದಕ್ಕೆ ನಿಷ್ಠಾವಂತ ಕಾರ್ಯಕರ್ತರು, ರೈತರೇ ಕಾರಣ. ಆದ್ದರಿಂದ ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ರೈತರಿಗೆ ಯಾವುದೇ ಯೋಜನೆಗಳಿಲ್ಲ
ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ 2,416 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಮೈಸೂರು ಜಿಲ್ಲೆಯಲ್ಲಿ 2 ವರ್ಷಗಳಲ್ಲಿ 138 ರೈತರು ಬಲಿಯಾಗಿದ್ದಾರೆ. 2026ರ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ 7.64 ಲಕ್ಷ ಕೋಟಿ ರೂ. ಮೀರಲಿದೆ. ಕುಮಾರಸ್ವಾಮಿ ರೈತರ ಸಂಕಷ್ಟಕ್ಕೆ ಮಿಡಿದು 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವ ಮೂಲಕ 25 ಲಕ್ಷಕ್ಕೂ ಹೆಚ್ಚು ರೈತರಿಗೆ ನೆರವಾಗಿದ್ದರು. ಆದರೆ ಸಿದ್ದರಾಮಯ್ಯ ಸರ್ಕಾರದಲ್ಲಿ ರೈತರಿಗೆ ಯಾವುದೇ ಯೋಜನೆಗಳಿಲ್ಲ ಎಂದು ನಿಖಿಲ್ ಟೀಕಿಸಿದರು.
ಸಾಲ ಹೊರೆಸಿದ್ದಾರೆ
ಮಾಜಿ ಶಾಸಕ ಸಾ.ರಾ.ಮಹೇಶ್ ಮಾತನಾಡಿ, ಪ್ರಾದೇಶಿಕ ಪಕ್ಷ ಕಟ್ಟಿ ಮುನ್ನಡೆಸಲು ಅಗದೆ ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ ಅವರು, ದೇವೇಗೌಡರದು ಕುಟುಂಬ ರಾಜಕಾರಣ ಎಂದು ಪದೇ ಪದೆ ಟೀಕಿಸುತ್ತಾರೆ. ಅವರೇ ಮಗನನ್ನು ಎಂಎಲ್‌ಎ, ಎಂಎಲ್‌ಸಿ ಮಾಡಿದ್ದಲ್ಲದೇ ಬೆಂಗಳೂರು ಕಾರ್ಯಪಡೆಗೆ ಸದಸ್ಯರನ್ನಾಗಿಸಿದ್ದಾರೆ ಎಂದು ಟೀಕಿಸಿದರು.
ಗ್ಯಾರಂಟಿ ಯೋಜನೆ ಕೊಡುವುದಾಗಿ ಹೇಳಿ ಇದುವರೆಗೆ ಕುಟುಂಬಕ್ಕೆ 72 ಸಾವಿರ ರೂ. ಕೊಟ್ಟು ಒಬ್ಬರ ಮೇಲೆ ಬರೋಬ್ಬರಿ 1.17 ಲಕ್ಷ ರೂ. ಸಾಲ ಹೊರೆಸಿದ್ದಾರೆ ಎಂದು ದೂರಿದರು.
ಜನರೇ ತಕ್ಕ ಉತ್ತರ ನೀಡಲಿದ್ದಾರೆ:
ಹುಣಸೂರು ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಜೆಡಿಎಸ್ ಎಲ್ಲಿದೆ ಎನ್ನುವವರಿಗೆ ಈಗ ಸಮಾವೇಶಕ್ಕೆ ಜನ ಬೆಂಬಲ ನೀಡುತ್ತಿರುವುದೇ ಉತ್ತರವಾಗಿದೆ. ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಈಗಾಗಲೇ 71 ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಸಮಾವೇಶ ನಡೆಸಲಾಗಿದೆ. ಮುಖ್ಯಮಂತ್ರಿ ಕ್ಷೇತ್ರದಲ್ಲಿಯೂ ಸಮಾವೇಶ ಯಶಸ್ವಿಗೊಂಡಿದೆ. ಉಚಿತ ಗ್ಯಾರಂಟಿ ನೀಡಿ ಇನ್ನೊಂದೆಡೆ ಎಲ್ಲ ಬೆಲೆಗಳನ್ನೂ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕ ಕೆ. ಮಹದೇವ್, ಜೆಡಿಎಸ್ ಜಿಲ್ಲಾಧ್ಯಕ್ಷ ಅಶ್ವಿನ್ ಕುಮಾರ್, ನಗರಾಧ್ಯಕ್ಷ ಎಸ್‌ಬಿಎಂ ಮಂಜು, ಮುಖಂಡರಾದ ಕೃಷ್ಣ ನಾಯಕ್, ಪ್ರಸನ್ನಕುಮಾರ್, ಅಭಿಷೇಕ್, ಎಂ.ಜೆ.ರವಿಕುಮಾರ್, ಮೆಲ್ಲಹಳ್ಳಿ ಮಹದೇವಸ್ವಾಮಿ, ಶಿವಮೂರ್ತಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net