ಜಂತರ್ ಮಂತರ್ ವೇದಶಾಲೆ ಉದ್ಘಾಟನೆ

ಮೈಸೂರಿನ ಉತ್ತನಹಳ್ಳಿಯಲ್ಲಿರುವ ಭಾರತೀ ಯೋಗಧಾಮದಲ್ಲಿ ಭಾನುವಾರ ಜಂತರ್ ಮಂತರ್ ವೇದಶಾಲೆಯನ್ನು ಗಣ್ಯರು ಉದ್ಘಾಟಿಸಿದರು. ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕೂಡ್ಲಿ ಶೃಂಗೇರಿ ಮಠದ ಶ್ರೀ ಅಭಿನವ ಶಂಕರಭಾರತೀ ಸ್ವಾಮೀಜಿ, ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ಶ್ರೀ ಪ್ರಕಾಶಾನಂದೇಂದ್ರ ಸರಸ್ವತೀ ಸ್ವಾಮೀಜಿ, ಡಾ.ಕೆ. ಎಲ್.ಶಂಕರನಾರಾಯಣ ಜೋಯಿಸ್ ಇತರರಿದ್ದರು.
ಮೈಸೂರಿನ ಉತ್ತನಹಳ್ಳಿಯಲ್ಲಿರುವ ಭಾರತೀ ಯೋಗಧಾಮದಲ್ಲಿ ಭಾನುವಾರ ಜಂತರ್ ಮಂತರ್ ವೇದಶಾಲೆಯನ್ನು ಗಣ್ಯರು ಉದ್ಘಾಟಿಸಿದರು. ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕೂಡ್ಲಿ ಶೃಂಗೇರಿ ಮಠದ ಶ್ರೀ ಅಭಿನವ ಶಂಕರಭಾರತೀ ಸ್ವಾಮೀಜಿ, ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ಶ್ರೀ ಪ್ರಕಾಶಾನಂದೇಂದ್ರ ಸರಸ್ವತೀ ಸ್ವಾಮೀಜಿ, ಡಾ.ಕೆ. ಎಲ್.ಶಂಕರನಾರಾಯಣ ಜೋಯಿಸ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಮಠದ ಸ್ವಾಮೀಜಿಗಳು, ವಿದ್ವಾಂಸರ ಉಪಸ್ಥಿತಿಯಲ್ಲಿ ಅನಾವರಣ
ಮೈಸೂರು: ಮೈಸೂರಿನ ಉತ್ತನಹಳ್ಳಿಯಲ್ಲಿರುವ ಭಾರತೀ ಯೋಗಧಾಮದಲ್ಲಿ ನಿರ್ಮಿಸಿರುವ ದಕ್ಷಿಣ ಭಾರತದಲ್ಲಿಯೇ ಮೊದಲ ಜಂತರ್ ಮಂತರ್ ವೇದಶಾಲೆಯನ್ನು ಭಾನುವಾರ ಉದ್ಘಾಟಿಸಲಾಯಿತು.
ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕೂಡ್ಲಿ ಶೃಂಗೇರಿ ಮಠದ ಶ್ರೀ ಅಭಿನವ ಶಂಕರಭಾರತೀ ಸ್ವಾಮೀಜಿ, ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ಶ್ರೀ ಪ್ರಕಾಶಾನಂದೇಂದ್ರ ಸರಸ್ವತೀ ಸ್ವಾಮೀಜಿ ಮತ್ತು ಅನೇಕ ವಿದ್ವಾಂಸರು ಉಪಸ್ಥಿತರಿದ್ದರು. ಸಂಸ್ಥೆಯ ಸಂಸ್ಥಾಪಕರೂ ಆಗಿರುವ ಹಿರಿಯ ವಿದ್ವಾಂಸರಾದ ಡಾ.ಕೆ.ಎಲ್.ಶಂಕರನಾರಾಯಣ ಜೋಯಿಸರ ಅಧ್ಯಕ್ಷತೆಯಲ್ಲಿ ಉದ್ಘಾಟಿಸಲಾಯಿತು.
ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಭಾರತಿಯೋಗಧಾಮ ಸಂಸ್ಥೆಯ ಆವರಣದಲ್ಲಿ ವೇದಶಾಲೆ ಸ್ಥಾಪಿಸಿರುವುದು ಶ್ಲಾಘನೀಯ. ಸಮಾಜದ ಎಲ್ಲರೂ ಇಂತಹ ಕೆಲಸಗಳಿಗೆ ಸಹಕಾರ ನೀಡಬೇಕು. ನಾಡಿನಲ್ಲಿ ಇಂತಹ ಕೆಲಸಗಳು ಬಹಳ ವಿಶೇಷವಾಗಿ ಆಗಬೇಕು. ಇದರಿಂದ ಅನೇಕರಿಗೆ ಅನುಕೂಲವಾಗುತ್ತದೆ. ಇದು ಮುಂದೆ ಜೋತಿಷ್ಯದ ಹೆಚ್ಚಿನ ಅಧ್ಯಯನಕ್ಕೂ ದಾರಿಮಾಡಿಕೊಡಲಿ ಎಂದು ಆಶಿಸಿದರು.
ಕೂಡ್ಲಿ ಶೃಂಗೇರಿ ಮಠದ ಶ್ರೀ ಅಭಿನವ ಶಂಕರಭಾರತೀ ಸ್ವಾಮೀಜಿ ಮಾತನಾಡಿ, ಭಾರತೀಯ ಖಗೋಳ ವಿದ್ಯೆ ಉಳಿಸುವ ಕೆಲಸ ಆಗಬೇಕು. ಭಾರತಿ ಯೋಗಧಾಮ ಸಂಸ್ಥೆಯ ಆವರಣದಲ್ಲಿ ಸ್ಥಾಪಿತವಾಗಿರುವ ವೇದಶಾಲೆಯ ಮೂಲಕ ನಮ್ಮ ಖಗೋಳ ವಿಜ್ಞಾನ ಪರಿಶುದ್ಧವಾಗಿ ಬೆಳೆಯಲಿದೆ. ಅದಕ್ಕೆ ಎಲ್ಲರೂ ಸಹಕಾರ ನೀಡಬೇಕು. ಇಂತಹ ವಿದ್ಯೆ ಉಳಿಯಲು ಭಾರತಿಯೋಗಧಾಮದ ಜತೆ ಸರ್ಕಾರಗಳ ಸಹಕಾರ ನೀಡಬೇಕು. ನಮ್ಮ ದೇಶದಲ್ಲಿ ಇಂತಹ ವಿದ್ಯೆಗಳನ್ನು ವ್ಯವಸ್ಥಿತವಾಗಿ ಬೆಳೆಸುವ ಕೆಲಸ ಮಾಡಬೇಕು ಎಂದರು.
ಶ್ರೀ ಪ್ರಕಾಶಾನಂದೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿ, ದೇಶ, ಕಾಲಗಳ ಬಗ್ಗೆ ನಮಗೆ ಸೂಕ್ತ ತಿಳಿವಳಿಕೆ ಬೇಕು. ಕಾಲದ ಬಗ್ಗೆ, ಕಾಲಾಧೀನವಾದ ಎಲ್ಲ ಗ್ರಹಗಳ ಬಗ್ಗೆ, ನಕ್ಷತ್ರಗಳ ಬಗ್ಗೆ ತಿಳಿವಳಿಕೆ ಬೇಕಾಗುತ್ತದೆ. ಜತೆಗೆ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಬಹುದಾದ ಜ್ಞಾನ ಈ ಜಂತರ್ ಮಂತರ್ ಸಿಗಲಿದೆ. ಅಂತಹ ವಿದ್ಯೆಯನ್ನು ಭಾರತಿಯೋಗಧಾಮ ಸಂಸ್ಥೆ ಆರಂಭಿಸುತ್ತಿರುವುದು ಸಮಾಧಾನದ ವಿಷಯ ಎಂದರು.
ಡಾ.ಕೆ.ಎಲ್.ಶಂಕರನಾರಾಯಣ ಜೋಯಿಸ್ ಮಾತನಾಡಿ, ಆಕಾಶಕಾಯಗಳನ್ನು ಅರಿಯುವ ಭಾರತೀಯ ಮಾದರಿಯ ವೇದಶಾಲೆಗಳು ಇರುವುದು ಪ್ರಧಾನವಾಗಿ ರಾಜಸ್ಥಾನದ ಜೈಪುರ, ಉಜ್ಜಯನಿ ಮತ್ತು ದೆಹಲಿಯಲ್ಲಿ. ಚಿಕ್ಕಪ್ರಮಾಣದಲ್ಲಿ ಕಾಶಿಯಲ್ಲೂ, ಮಥುರಾದಲ್ಲೂ ಇವೆ. ಇವುಗಳ ಹೊರತಾಗಿ ಸದ್ಯ ಮೈಸೂರಿನ ಭಾರತೀ ಯೋಗಧಾಮದಲ್ಲಿ ಸ್ಥಾಪಿಸಲಾಗಿದೆ. ಇದು ಈ ಸಂಸ್ಥೆಯ ಮಹತ್ವದ ಯೋಜನೆಗಳಲ್ಲೊಂದು. ಜ್ಯೋತಿರ್ಧಾಮ ಎಂಬ ನಾಮಾಂಕಿತದಿಂದ ಇಲ್ಲಿ ಈ ಯೋಜನೆಯು ಪೂರ್ವಪದ, ಮಧ್ಯಪದ, ಪಶ್ಚಿಮಪದ ಎಂಬ ಮೂರು ಹಂತಗಳಲ್ಲಿ ನಿರ್ಮಾಣವಾಗಲಿದೆ ಎಂದರು.
ಇದು ಮೂಲತಃ ಪ್ರಾಚೀನ ಭಾರತೀಯರ ಖಗೋಳ ವಿಜ್ಞಾನವಾಗಿದೆ. ನೂರಾರು ವರ್ಷಗಳ ಹಿಂದೆ ಭಾರತೀಯ ಜ್ಯೋತಿರ್ವಿಜ್ಞಾನಿಗಳು ಈ ಯಂತ್ರಗಳ ಸಹಾಯದಿಂದಲೇ ಗ್ರಹ-ನಕ್ಷತ್ರ-ಸೂರ್ಯ-ಚಂದ್ರ ಮೊದಲಾದ ಆಕಾಶಕಾಯಗಳ ಸ್ಥಿತಿ ಹಾಗೂ ಚಲನೆಯನ್ನು ನಿಖರವಾಗಿ ತಿಳಿಯುತ್ತಿದ್ದರು. ಜ್ಯೋತಿಷ್ಯ ಶಾಸ್ತ್ರದ ಅಂಗಗಳಾದ ಗಣಿತ ಮತ್ತು ಖಗೋಳದ ಕುರಿತಾದ ಅಧ್ಯಯನ ಮತ್ತು ಸಂಶೋಧನೆಗಳಿಗೆ ಇಲ್ಲಿ ಆಸ್ಪದವಿದೆ. ಈಗ ಮೈಸೂರಿನಲ್ಲಿಯೇ ಅದನ್ನು ಪುನರ್ದರ್ಶನ ಮಾಡಬಹುದಾಗಿದೆ. ಗ್ರಹ, ನಕ್ಷತ್ರ ಮೊದಲಾದ ಆಕಾಶ ಕಾಯಗಳ ನಿರ್ದಿಷ್ಟ ಸ್ಥಾನಗಳು, ಆಕಾಶದಲ್ಲಿ ಗೋಚರಿಸುವ ಗ್ರಹಣ, ವಿಷುವ, ಅಯನ ಇತ್ಯಾದಿಗಳನ್ನು ಇಲ್ಲಿನ ಯಂತ್ರಗಳ ಮೂಲಕ ಅರಿಯಬಹುದಾಗಿದೆ. ಪಂಚಾಂಗದ ಮತ್ತು ಖಗೋಳಕ್ಕೆ ಸಂಬಂಧಿಸಿದ ಲೆಕ್ಕಾಚಾರಗಳನ್ನು ಸಾಧಿಸಬಹುದಾಗಿದೆ. ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೂ, ಅಧ್ಯಯನಶೀಲರಾದ ಖಗೋಳ ಕ್ಷೇತ್ರದವರಿಗೂ, ಸಂಶೋಧಕರಿಗೂ ಇದರಿಂದ ಬಹಳಷ್ಟು ಸಹಾಯವಾಗಲಿದೆ ಎಂದರು.
ಪ್ರಮುಖರಾದ ಅಶೋಕ ಹಾರನಹಳ್ಳಿ, ಡಾ.ಗಿರಿಧರ ಕಜೆ, ಪ್ರೊ.ಶ್ರೀನಿವಾಸ ಅಡಿಗರು, ವೆಂಕಟೇಶ್ ಭಟ್, ಡಾ.ಚಂದ್ರಶೇಖರ್, ಮುಖೇಶ ಶರ್ಮಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net