ಐಟಿಸಿ ಕಂಪನಿ ಗೋದಾಮುಗಳಿಗೆ ಬೀಗ ಜಡಿಯುವುದು ನಿಶ್ಚಿತ

ಪಶುಸಂಗೋಪನೆ ಮತ್ತು ರೇಷ್ಮ ಸಚಿವ ಕೆ.ವೆಂಕಟೇಶ್ ಅವರು ನಗರದ ಜಿಪಂ ಡಿ.ದೇವರಾಜ ಅರಸು ಸಭಾಂಗಣದಲ್ಲಿ ತಂಬಾಕು ಬೆಳೆಗಾರರು, ಸಿಗರೇಟ್ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.
ಪಶುಸಂಗೋಪನೆ ಮತ್ತು ರೇಷ್ಮ ಸಚಿವ ಕೆ.ವೆಂಕಟೇಶ್ ಅವರು ನಗರದ ಜಿಪಂ ಡಿ.ದೇವರಾಜ ಅರಸು ಸಭಾಂಗಣದಲ್ಲಿ ತಂಬಾಕು ಬೆಳೆಗಾರರು, ಸಿಗರೇಟ್ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಕೆ.ವೆಂಕಟೇಶ್ ಎಚ್ಚರಿಕೆ ಹಿಂದಿನ ದರದಂತೆ ಹೊಗೆಸೊಪ್ಪು ಖರೀದಿಸುವಂತೆ ಆಗ್ರಹ
  • ಹಿಂದಿನ ದರದಂತೆ ಹೊಗೆಸೊಪ್ಪು ಖರೀದಿ ಮಾಡಿ. ಇಲ್ಲವಾದರೆ ಗೋದಾಮು ಸೀಜ್
ಮೈಸೂರು: ಹಿಂದಿನ ದರದಂತೆ ಹೊಗೆಸೊಪ್ಪು ಖರೀದಿ ಮಾಡಿ. ಇಲ್ಲವಾದರೆ ತಂಬಾಕು ಖರೀದಿ ಮಾಡುವ ಸಿಗರೇಟ್ ಕಂಪನಿಗಳ ಗೋದಾಮುಗಳನ್ನು ಸೀಜ್ ಮಾಡಿ ಬೀಗ ಜಡಿಯುವುದು ನಿಶ್ಚಿತ!
ಪಶುಸಂಗೋಪನೆ ಮತ್ತು ರೇಷ್ಮ ಸಚಿವ ಕೆ.ವೆಂಕಟೇಶ್ ಅವರು ಐಟಿಸಿ ಸೇರಿದಂತೆ ತಂಬಾಕು ಖರೀದಿ ಮಾಡುವ ಕಂಪನಿಗಳಿಗೆ ಕೊಟ್ಟ ಖಡಕ್ ಎಚ್ಚರಿಕೆ ಇದು. 
ಜಿಲ್ಲಾ ಪಂಚಾಯಿತಿ ಡಿ.ದೇವರಾಜ ಅರಸು ಸಭಾಂಗಣದಲ್ಲಿ ತಂಬಾಕು ಬೆಳೆಗಾರರು, ಸಿಗರೇಟ್ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸೋಮವಾರ ಸಭೆ ನಡೆಸಿದರು.
ಪೂರ್ವನಿಗದಿತ ದರದಂತೆ ರೈತರಿಂದ ಹೊಗೆಸೊಪ್ಪು ಖರೀದಿ ಮಾಡಬೇಕು. ಈ ಕುರಿತು ಕಂಪನಿಗಳ ಮುಖ್ಯಸ್ಥರೊಂದಿಗೆ ಚರ್ಚೆ ಮಾಡಿ ಫೆ.24ರ ಮಧ್ಯಾಹ್ನದ ಒಳಗೆ ತೀರ್ಮಾನ ತೆಗೆದುಕೊಳ್ಳಬೇಕು. ಕಡಿಮೆ ದರಕ್ಕೆ ಹೊಗೆಸೊಪ್ಪು ಖರೀದಿಗೆ ಮುಂದಾದರೆ ಕಂಪನಿಗಳ ಎಲ್ಲ ಗೋದಾಮುಗಳನ್ನು ಜಿಲ್ಲಾಡಳಿತವು ವಶಕ್ಕೆ ತೆಗೆದುಕೊಳ್ಳಲಿದೆ ಎಂದು ಎಚ್ಚರಿಸಿದರು.
ಹರಾಜು ಪ್ರಕ್ರಿಯೆಯಲ್ಲಿ ಸೂಕ್ತ ಬೆಲೆಯೊಂದಿಗೆ ಹೊಗೆಸೊಪ್ಪು ಖರೀದಿ ಮಾಡಲಾಗುತ್ತಿತ್ತು. ಆದರೆ, ಕೇಂದ್ರ ಸರ್ಕಾರವು ತುಂಬಾಕು ಉತ್ಪನ್ನಗಳ ಮೇಲೆ ಜಿಎಸ್‌ಟಿ ಹೆಚ್ಚು ಮಾಡಿದ್ದರಿಂದ ಐಟಿಸಿ ಸೇರಿದಂತೆ ಸಿಗರೇಟ್ ತಯಾರಿಸುವ ಕಂಪನಿಗಳು ಖರೀದಿ ಪ್ರಕ್ರಿಯೆಯನ್ನೇ ವಾರಗಟ್ಟಲೇ ಸ್ಥಗಿತಗೊಳಿಸಿವೆ. ಇದು ಇತಿಹಾಸದಲ್ಲೇ ಮೊದಲು. ಜತೆಗೆ, ದರ ಕಡಿಮೆಗೊಳಿಸಿ, ಖರೀದಿ ಪ್ರಮಾಣವನ್ನೂ ತಗ್ಗಿಸಲಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ನಿಮಗೆಲ್ಲ ನಾಚಿಕೆ ಆಗಬೇಕು ಎಂದು ಕಂಪನಿಗಳ ಪ್ರತಿನಿಧಿಗಳಿಗೆ ಜಾಡಿಸಿದರು.
ಐಟಿಸಿ ಕಂಪನಿಯು 100 ಮಿಲಿಯನ್ ಕೆಜಿ ತಂಬಾಕು ಬೆಳೆಯಲು ರೈತರಿಗೆ ಹೇಳಿತ್ತು. ಮಾರುಕಟ್ಟೆ ಪ್ರಾರಂಭವಾದಾಗ ಉತ್ತಮ ಬೆಲೆ ನೀಡಲಾಗಿತ್ತು. ಇದೀಗ ದರ ಕಡಿಮೆ ಮಾಡಿದೆ. ರೈತರು ನಷ್ಟವಾಗುತ್ತದೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಟಿಸಿಯವರು ಹಿಂದಿನ ದರಕ್ಕೆ ತಂಬಾಕು ಖರೀದಿ ಮಾಡಬೇಕು ಎಂದು ಸೂಚಿಸಿದರು.

ರೈತರ ಅಳಲು: 

ದರ ಕುಸಿತದಿಂದ ಆಕ್ರೋಶಗೊಂಡಿದ್ದ ರೈತರು, ತಂಬಾಕು ಬೆಳೆಯನ್ನು ನಿಷೇಧಿಸಿದರೆ ಬೆಳೆಯುವುದನ್ನು ನಿಲ್ಲಿಸಲಾಗುವುದು. ನಿಗದಿಪಡಿಸಿದ್ದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ತಂಬಾಕು ಬೆಳೆದಿದ್ದು, ಬೆಳೆ ಕಡಿಮೆಯಾದ ಮೇಲೆ ಹೆಚ್ಚು ಬೆಲೆ ಸಿಗಬೇಕಿತ್ತು. ಇದೀಗ ಬೆಳೆ ಕಡಿಮೆಯಾಗಿದ್ದರೂ ಬೆಲೆ ಕುಸಿತವಾಗಿದೆ. ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿರುವ ನೆರೆಯ ಆಂಧ್ರಪ್ರದೇಶದ ರೈತರಿಗೆ ಹೆಚ್ಚಿನ ಬೆಲೆ ಸಿಗುತ್ತಿದೆ. ರಾಜ್ಯದ ರೈತರಿಗೆ ಅನ್ಯಾಯ ಆಗುತ್ತಿದೆ ಎಂದು ಅಳಲು ತೋಡಿಕೊಂಡರು.

ಐಟಿಸಿ ವಿರುದ್ಧ ಕಿಡಿ:

ಬೆಲೆ ನಿಗದಿ ಮಾಡುವ ಅಧಿಕಾರ ನನಗಿಲ್ಲ. ಆಂಧ್ರಪ್ರದೇಶದ ಗುಂಟೂರಿಗೆ ಬಂದು ಚರ್ಚಿಸುವಂತೆ ಹೇಳಿದ ಐಟಿಸಿ ಸಿಗರೇಟ್ ಕಂಪನಿಯ ಪ್ರತಿನಿಧಿಯ ವಿರುದ್ಧ ಜನಪ್ರತಿನಿಧಿಗಳು, ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು ಐಟಿಸಿ ಕಂಪನಿಯ ಪ್ರತಿನಿಧಿ ವಿರುದ್ಧ ಗರಂ ಆದರು. ‘ಸಮರ್ಪಕ ಮಾಹಿತಿ ಇಲ್ಲದೇ ಸಭೆಗೆ ಬಂದಿದ್ದೀರಿ’ ಎಂದು ಹರಿಹಾಯ್ದರು. ರೈತರ ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ಭರವಸೆ ಕೊಟ್ಟ ದರಕ್ಕೆ ತಂಬಾಕು ಖರೀದಿ ಮಾಡಬೇಕು ಎಂದು ಡಿಸಿ ತಾಕೀತು ಮಾಡಿದರು.
 ಜತೆಗೆ, ಐಟಿಸಿ ಕಂಪನಿಯವರು ಮಂಗಳವಾರ ಮಧ್ಯಾಹ್ನದೊಳಗೆ ನಿರ್ಧಾರವನ್ನು ತಿಳಿಸುವಂತೆಯೂ ಸೂಚಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಶಾಸಕ ಡಿ.ರವಿಶಂಕರ್, ಉಡಾಫೆಯ ಉತ್ತರ ಕೊಡಬಾರದು. ಈಗಿನ ಸಮಸ್ಯೆಗೆ ಪರಿಹಾರ ಹುಡುಕಬೇಕು. ತಂಬಾಕು ಬೆಳೆಗಾರರಿಂದ ಕಂಪನಿ ಇರುವುದು. ಕಂಪನಿಯಿಂದ ರೈತರಲ್ಲ ಎಂದು ಗುಡುಗಿದರು. ಈ ವೇಳೆ ರೈತರು ಜೋರು ದನಿಯಲ್ಲಿ ಮಾತಾಡಿದರು.
ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಕೇಂದ್ರ ಸರ್ಕಾರದ ಅಧೀನದ ತಂಬಾಕು ಮಂಡಳಿ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಐಟಿಸಿ ಕಂಪನಿ ಪರ ಕೆಲಸ ಮಾಡುತ್ತಿದ್ದು, ಈ ಕಂಪನಿಯೊಂದೇ ಏಕಸ್ವಾಮ್ಯ ಹೊಂದಿರುವುದರಿಂದ ಸಮಸ್ಯೆಯಾಗುತ್ತಿದೆ. ತಂಬಾಕು ಮಂಡಳಿ ದರ ಕುಸಿಯದಂತೆ ನೋಡಿಕೊಳ್ಳಬೇಕು. ಆದರೆ, ಆ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ಹರಿಹಾಯ್ದರು.

ಕೇಂದ್ರಕ್ಕೆ ನಿಯೋಗ 

ತಂಬಾಕು ದರ ಸಮಸ್ಯೆಯನ್ನು ಇತ್ಯರ್ಥಪಡಿಸುವಂತೆ ಕೇಂದ್ರಕ್ಕೆ ನಿಯೋಗ ಹೋಗುವುದಾಗಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಈ ಹಿಂದೆಯೇ ಆಂಧ್ರಪ್ರದೇಶದ ಸಂಸದರೊಂದಿಗೆ ಕೇಂದ್ರ ಸರ್ಕಾರದ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿಯನ್ನು ಭೇಟಿ ಮಾಡಿ ಸಮಸ್ಯೆಯನ್ನು ಗಮನಕ್ಕೆ ತರಲಾಗಿದೆ. ಹೆಚ್ಚಿಸಿರುವ ತಂಬಾಕು ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರವನ್ನು ಮರುಪರಿಶೀಲನೆ ಮಾಡಬೇಕು. ಈ ವಿಷಯದಲ್ಲಿ ತಾತ್ಕಾಲಿಕ ಪರಿಹಾರದ ಬದಲು ಶಾಶ್ವತ ಪರಿಹಾರ ಕಲ್ಪಿಸಬೇಕು. ರೈತರಿಗೆ ನ್ಯಾಯಯುತ ಬೆಲೆ ಕೊಡಬೇಕು ಎಂದು ಆಗ್ರಹಿಸಲಾಗಿದೆ ಎಂದರು. 
 ಶಾಸಕ ಜಿ.ಡಿ.ಹರೀಶ್‌ಗೌಡ, ಜಿಪಂ ಸಿಇಒ ಎಸ್.ಯುಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ಮುಖಂಡರಾದ ಬಿ.ಎಂ.ರಾಮು, ಎನ್.ಭಾಸ್ಕರ್, ವಕೀಲ ಕಾಂತರಾಜ್, ಕೆ.ಮಹೇಶ್ ಇನ್ನಿತರರಿದ್ದರು.

ರೈತರ ಬೇಡಿಕೆಗಳು 

*ಹೊಗೆಸೊಪ್ಪಿಗೆ ನ್ಯಾಯಯುತ ಬೆಲೆ ಕೊಡಿಸುವುದು ಕೇಂದ್ರ, ರಾಜ್ಯ ಸರ್ಕಾರದ ಜಂಟಿ ಜವಾಬ್ದಾರಿಯಾಗಿದೆ. ರೈತರ ಹಿತ ಕಾಪಾಡಬೇಕು.
*ದರ ಕುಸಿತಕ್ಕೆ ಕಡಿವಾಣ ಹಾಕಿ, ನಿಗದಿತ ಬೆಲೆಗೆ ಖರೀದಿ ಮಾಡಬೇಕು. 
*ರೈತರ ನಷ್ಟಕ್ಕೆ ಪರಿಹಾರ ಕೊಡಬೇಕು
*ಸೂಕ್ತ ಬೆಲೆ ಕೊಡಲಾಗದಿದ್ದರೆ ತಂಬಾಕು ಬೆಳೆಯನ್ನು ಸಂಪೂರ್ಣವಾಗಿ ನಿಷೇಧಿಸಿ. ಪರ್ಯಾಯ ಬೆಳೆ ಬೆಳೆಯುವುದು ರೈತರಿಗೆ ಗೊತ್ತು.
*ರೈತರಿಂದ ಸಿಗರೇಟ್ ಕಂಪನಿಗಳು ಬದುಕುತ್ತಿವೆ. ಅವುಗಳಿಂದ ರೈತರು ಅವಲಂಬನೆಯಾಗಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net