ವಚನಕ್ರಾಂತಿ ವಿಶ್ವ ಚರಿತ್ರೆಯಲ್ಲಿ ದಾಖಲಾಗದಿರುವುದು ದೌರ್ಭಾಗ್ಯ: ಪ್ರೊ.ಎನ್.ಎಂ. ತಳವಾರ
ನಗರದ ಹೊಸಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಎನ್.ಎಂ. ತಳವಾರ, ಅಂಶಿ ಪ್ರಸನ್ನಕುಮಾರ್, ಪ್ರೊ.ಎಸ್. ಶಿವರಾಜಪ್ಪ, ಪ್ರೊ.ಚಂದ್ರಶೇಖರಯ್ಯ, ಎಲ್. ಶಿವಲಿಂಗಪ್ಪ, ಶ್ರೀಗೌರಿಶಂಕರ ಸ್ವಾಮೀಜಿ, ಶ್ರೀಸಿದ್ಧಬಸವ ಸ್ವಾಮೀಜಿ, ಶ್ರೀ ನಂದಿಕೇಶ್ವರ ಸ್ವಾಮೀಜಿ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಾಮಾಜಿಕ ಕ್ರಾಂತಿ ಜತೆಗೆ ಸಾಹಿತ್ಯದಲ್ಲಿಯೂ ಸಮಾಜದಲ್ಲಿ ಜಾಗೃತಿ ಮೂಡಿಸಿದ್ದರು
‘ಅಲ್ಲಮಪ್ರಭು’ ಸಚಿತ್ರ ಕಥಾಮಾಲಿಕೆ ಕೃತಿ ಬಿಡುಗಡೆ
ಮೈಸೂರು:ಸಾಮಾಜಿಕ ಕ್ರಾಂತಿ ಮಾಡಿದ ಶರಣರ ವಚನಕ್ರಾಂತಿ ವಿಶ್ವ ಚರಿತ್ರೆಯಲ್ಲಿ ಸರಿಯಾಗಿ ದಾಖಲಾಗದಿರುವುದು ದೌರ್ಭಾಗ್ಯ ಎಂದು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ. ತಳವಾರ ವಿಷಾದಿಸಿದರು.
ನಗರದ ಶ್ರೀಹೊಸಮಠದಿಂದ ನಟರಾಜ ಸಭಾಭವನದಲ್ಲಿ ಆಯೋಜಿಸಿದ್ದ ಅಲ್ಲಮಪ್ರಭು ಜಯಂತಿ ಹಾಗೂ ಶ್ರೀಬಸವಲಿಂಗ ಸ್ವಾಮೀಜಿ 75ನೇ ಪುಣ್ಯಾರಾಧನಾ ಮಹೋತ್ಸವದಲ್ಲಿ ಹಿರಿಯ ಕಲಾವಿದ ಎಲ್.ಶಿವಲಿಂಗಪ್ಪ ಅವರು ರಚಿಸಿರುವ ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ.ಚಂದ್ರಶೇಖರಯ್ಯ ಇಂಗ್ಲಿಷ್‌ಗೆ ಅನುವಾದಿಸಿರುವ ‘ಅಲ್ಲಮಪ್ರಭು’ ಸಚಿತ್ರ ಕಥಾಮಾಲಿಕೆ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಹನ್ನೆರಡನೇ ಶತಮಾನ ಅವಿಸ್ಮರಣೀಯ ಕಾಲ. ಬಸವಾದಿ ಶರಣರು ತಮ್ಮ ಸಂದೇಶಗಳ ಮೂಲಕ ಅದ್ಭುತ ಕ್ರಾಂತಿ ಮಾಡಿದರು. ಸಾಮಾಜಿಕ ಕ್ರಾಂತಿ ಜತೆಗೆ ಸಾಹಿತ್ಯದಲ್ಲಿಯೂ ಸಮಾಜದಲ್ಲಿ ಜಾಗೃತಿ ಮೂಡಿಸಿದ್ದರು. ಆದರೆ ಇಂತಹ ಶರಣ ಚರಿತ್ರೆ ವಿಶ್ವಚರಿತ್ರೆಯಲ್ಲಿ ದಾಖಲಾಗುವುದಿಲ್ಲ. ಆದರೆ ಫ್ರೆಂಚ್ ಕ್ರಾಂತಿ ದಾಖಲಾಗುತ್ತದೆ ಎಂದು ಹೇಳಿದರು.
ಅಲ್ಲಮಪ್ರಭು ಅವರು ಕನ್ನಡ ಸಾಹಿತ್ಯವನ್ನು ಸಾಕಷ್ಟು ಪ್ರಭಾವಿಸಿದ್ದಾರೆ. ವಿಚಾರ ಸಾಹಿತ್ಯಕ್ಕೆ ಅವರು ಕೊಟ್ಟ ಕೊಡುಗೆ ಅತ್ಯಮೂಲ್ಯವಾದದ್ದು. ಅಲ್ಲಮಪ್ರಭು ಅವರನ್ನು ಜ್ಞಾನನಿಧಿ, ವೈರಾಗ್ಯನಿಧಿ ಎಂದು ಹೇಳಲಾಗುತ್ತದೆ. ಅವರನ್ನು ಕೇಂದ್ರೀಕರಿಸಿ, ವೀರಶೈವ ಸಾಹಿತ್ಯದ ಹಲವಾರು ಕೃತಿಗಳು ಬಂದಿವೆ ಎಂದು ತಿಳಿಸಿದರು.
ಒಂದು ಚಿತ್ರ ನೂರು ಭಾವ ತಿಳಿಸುತ್ತದೆ. ಶಿವಲಿಂಗಪ್ಪ ಅವರು ಸಚಿತ್ರ ಸಮೇತ ರಚಿಸಿದ ಅಲ್ಲಮಪ್ರಭು ಕೃತಿಯನ್ನು ಪ್ರೊ.ಚಂದ್ರಶೇಖರಯ್ಯ ಅವರು ಅಷ್ಟೇ ಸಮರ್ಥವಾಗಿ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಆ ಮೂಲಕ ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಶರಣರ ಸಂದೇಶವನ್ನು ತಲುಪಿಸುವ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಕೃತಿ ಅನುವಾದಕ ಪ್ರೊ.ಚಂದ್ರಶೇಖರಯ್ಯ ಮಾತನಾಡಿ, ಕನ್ನಡದಲ್ಲಿ ನಾವು ಎಷ್ಟೇ ಬರೆದರೂ ಕರ್ನಾಟಕ ಗಡಿ ದಾಟಿ ಹೋಗದು. ಆದ್ದರಿಂದ ಆಂಗ್ಲ ಭಾಷೆಗೆ ಅನುವಾದಿಸಿದರೆ ವಿಶ್ವದೆಲ್ಲೆಡೆ ತಲುಪಬಹುದು. ಶರಣರ ಯಾವುದೇ ಕೃತಿಗಳಾದರೂ ಉಚಿತವಾಗಿ ಆಂಗ್ಲ ಭಾಷೆಗೆ ಅನುವಾದ ಮಾಡಿಕೊಡುವೆ ಎಂದು ತಿಳಿಸಿದರು.
ಹಿರಿಯ ಕಲಾವಿದ ಎಲ್.ಶಿವಲಿಂಗಪ್ಪ ಮಾತನಾಡಿ, ಎಲ್ಲರಿಗೂ ವಿದ್ಯೆ ನೀಡುವಲ್ಲಿ ವೀರಶೈವ ಮಠಮಾನ್ಯಗಳ ಕೊಡುಗೆ ಇದೆ. ಆದರೆ ವಚನ ಸಾಹಿತ್ಯದಲ್ಲಿ ಎಲ್ಲವೂ ಇದೆ. ಆದರೆ ಈ ಬಗ್ಗೆ ಗಂಭೀರ ಚಿಂತನೆ ಆಗಿಲ್ಲ ಎಂದು ವಿಷಾದಿಸಿದರು.
ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ಅಲ್ಲಮ ಶೋಷಿತ ವರ್ಗದಿಂದ ಬಂದ ವ್ಯಕ್ತಿ. ಶೂನ್ಯಪೀಠದ ಅಧ್ಯಕ್ಷರಾಗಿ ಸಾಮಾಜಿಕ ಕ್ರಾಂತಿ ಮಾಡಿದವರು ಎಂದರು.
ಶರಣ ಪರಂಪರೆಯನ್ನು ಮುಂದುವರಿಸಿದ ಹೊಸಮಠದ ಶ್ರೀಬಸವಲಿಂಗ ಸ್ವಾಮೀಜಿ, ರಾಜರಿಂದಲೇ ಆಸ್ಥಾನ ವಿದ್ವಾನ್ ಪದವಿ ಪಡೆದಿದ್ದರು. ಅದೇ ರೀತಿ ಶ್ರೀಗುರುಶಾಂತ ಸ್ವಾಮೀಜಿ ಕೂಡ ಅಪಾರ ಪಾಂಡಿತ್ಯ ಪಡೆದಿದ್ದರು. ಈ ಪರಂಪರೆಯನ್ನು ಈಗಿನ ಶ್ರೀಚಿದಾನಂದ ಸ್ವಾಮೀಜಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.
ತಿ. ನರಸೀಪುರ ತಾಲೂಕು ಎಂ.ಎಲ್. ಹುಂಡಿ ಮಠಾಧ್ಯಕ್ಷ ಶ್ರೀಗೌರಿಶಂಕರ ಸ್ವಾಮೀಜಿ ಆಶೀರ್ವಚನ ನೀಡಿ, ಅಲ್ಲಮಪ್ರಭು ಅನುಭವ ಮಂಟಪದ ದೊಡ್ಡ ಶಕ್ತಿ. ಬಸವಾದಿ ಶರಣರು ಕಾಯಕವೇ ಕೆಲಾಸ ಎಂಬ ತತ್ವದ ಮೂಲಕ ದುಡಿಮೆಯ ಮಹತ್ವ ಸಾರಿದರು. ಪ್ರತಿಯೊಬ್ಬರಿಗೂ ವಿದ್ಯೆಯ ಜತೆಗೆ ಉದ್ಯೋಗ, ಮಾನವೀಯತೆ ಹಾಗೂ ಸಂಸ್ಕಾರ ಮುಖ್ಯಎಂದು ತಿಳಿಸಿದರು.
ಅಲ್ಲಮಪ್ರಭುಗಳ ಜೀವನ- ಸಾಧನೆ ಕುರಿತ ಕಲಾ ಪ್ರದರ್ಶನವನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿ, ಮಾತನಾಡಿದರು.
ಹೊಸಮಠದ ಕಿರಿಯ ಗುರುಗಳಾದ ಶ್ರೀಸಿದ್ಧಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಡುಕುತೊರೆ ಕಲ್ಮಠದ ಶ್ರೀ ನಂದಿಕೇಶ್ವರ ಸ್ವಾಮೀಜಿ, ಸೇತುವೆಮಠದ ಶ್ರೀಸಹಜಾನಂದ ಸ್ವಾಮೀಜಿ, ನೆರಗ್ಯಾತನಹಳ್ಳಿಯ ಶ್ರೀಇಮ್ಮಡಿ ಶಿವಕುಮಾರ ಸ್ವಾಮೀಜಿ, ಕಳ್ಳೀಪುರದ ಶ್ರೀಗುರುಪಾದ ಶಿವಾಚಾರ್ಯ ಸ್ವಾಮೀಜಿ ಇದ್ದರು.
ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸಿ.ಎನ್. ಸಂತೋಷ್ ಪಟೇಲ್, ಶ್ರೀನಟರಾಜ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ವಿ.ಡಿ. ಸುನೀತಾ ರಾಣಿ, ಶ್ರೀನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಎಂ.ಎಸ್. ಸಂಧ್ಯಾರಾಣಿ, ಎನ್.ಚೂಡಾಮಣಿ ಇತರರು ಇದ್ದರು.