ಜನರ ಆಶೀರ್ವಾದವಿದ್ದರೆ ಸಿಎಂ ಆಗಲು ಸಾಧ್ಯ: ಸಿಎಂ ಸಿದ್ದರಾಮಯ್ಯ
ವರುಣ ಕ್ಷೇತ್ರದ ಪಿಲ್ಲಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಆದಿಶಕ್ತಿ ದಂಡಿಮಾರಮ್ಮ ದೇವಾಲಯದ ಪ್ರತಿಷ್ಠಾಪನೆ ಹಾಗೂ ಕುಂಭ ಕಳಶದ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಡಿ.ತಿಮ್ಮಯ್ಯ, ಕೆ.ಶಿವಕುಮಾರ್, ಡಾ.ಪುಷ್ಪ ಅಮರನಾಥ್ ಇನ್ನಿತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ
ಅಧಿಕಾರ ಬಲಾಢ್ಯರ ಕೈಯಲ್ಲಿ ಇರಬಾರದು.
ಅಧಿಕಾರ ಎಲ್ಲರನ್ನು ಪ್ರೀತಿಸುವವರು, ಎಲ್ಲರನ್ನು ಸಮಾನವಾಗಿ ಕಾಣುವವರ ಕೈಯಲ್ಲಿ ಇರಬೇಕು
ದೇವರು ದೇಗುಲಗಳಲ್ಲಿ ಇರುತ್ತಾರೆಂಬುದು ನಮ್ಮ ನಂಬಿಕೆ. ದೇವರ ಆರಾಧನೆಯಿಂದ ಒಳಿತಾಗುತ್ತದೆ ಎಂಬ ನಂಬಿಕೆಯನ್ನು ನಾನು ವಿರೋಧಿಸುವುದಿಲ್ಲ.
ಮೈಸೂರು: ಜನರ ಆಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ. ಸಮಾಜದ ಬಡವರು ಹಾಗೂ ಅಶಕ್ತರಿಗೆ ಶಕ್ತಿ ತುಂಬುವುದೇ ನನ್ನ ಕಾಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರು ತಾಲೂಕಿನ ವರುಣ ಕ್ಷೇತ್ರದ ಪಿಲ್ಲಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಆದಿಶಕ್ತ್ಯಾತ್ಮಕ ದಂಡಿಮಾರಮ್ಮ ದೇವಾಲಯದ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ಕುಂಭಕಳಶದ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಧಿಕಾರ ಬಲಾಢ್ಯರ ಕೈಯಲ್ಲಿ ಇರಬಾರದು. ಅಧಿಕಾರ ಎಲ್ಲರನ್ನು ಪ್ರೀತಿಸುವವರು, ಎಲ್ಲರನ್ನು ಸಮಾನವಾಗಿ ಕಾಣುವವರ ಕೈಯಲ್ಲಿ ಇರಬೇಕು ಎಂದು ಸೂಚ್ಯವಾಗಿ ಹೇಳಿದರು.
ದೇವರು ದೇಗುಲಗಳಲ್ಲಿ ಇರುತ್ತಾರೆಂಬುದು ನಮ್ಮ ನಂಬಿಕೆ. ದೇವರ ಆರಾಧನೆಯಿಂದ ಒಳಿತಾಗುತ್ತದೆ ಎಂಬ ನಂಬಿಕೆಯನ್ನು ನಾನು ವಿರೋಧಿಸುವುದಿಲ್ಲ. ಆದರೆ, ದೇವರು ಎಲ್ಲೆಡೆಯೂ ಇದ್ದಾನೆ ಎಂದು ನಾನು ನಂಬುವವನು ಮತ್ತು ಆಚರಿಸುವವನು ಎಂದರು.
ಕಷ್ಟ ಬಂದಾಗ ಮಾತ್ರ ದೇವರನ್ನು ಪ್ರಾರ್ಥಿಸಲು ಹೋಗಬೇಡಿ. ಎಲ್ಲ ಕಾಲದಲ್ಲೂ ದೇವರನ್ನು ಪ್ರಾರ್ಥಿಸಿ, ಪ್ರೀತಿಸಿ. ದೇವಸ್ಥಾನ ಮಾಡಿದರೆ ಮಾತ್ರ ದೇವರು ಒಲಿಯುವುದಿಲ್ಲ. ನಮ್ಮೊಳಗೆ ದೇವರು ಇದ್ದಾನೆ. ಇನ್ನೊಬ್ಬರಿಗೂ ಒಳ್ಳೆಯದಾಗಲಿ, ನಂಗೂ ಒಳ್ಳೆಯದಾಗಲಿ ಎಂದಾಗ ಮಾತ್ರ ದೇವರು ಒಲಿಯುತ್ತಾನೆ ಎಂದು ಹೇಳಿದರು.
ಹಳೇ ದಿನಗಳನ್ನು ಸ್ಮರಿಸಿಕೊಂಡ ಸಿಎಂ ಅವರು, 1978ರಲ್ಲಿ ತಾಲೂಕು ಅಭಿವೃದ್ಧಿ ಮಂಡಳಿಯ ಪ್ರಥಮ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಇಲ್ಲಿನ ಜನರ ಆಶೀರ್ವಾದ ನನಗೆ ದೊರೆತಿತ್ತು. ನಂತರ ವಿಧಾನಸಭಾ ಚುನಾವಣೆಯಲ್ಲಿ ಜನರ ಸಹಕಾರ ದೊರೆಯಿತು.
ಮೈಸೂರು ತಾಲೂಕಿನ ಚಾಮುಂಡೇಶ್ವರಿ ಹಾಗೂ ವರುಣ ಕ್ಷೇತ್ರದ ಜನರ ಆಶೀರ್ವಾದದಿಂದ ಈವರೆಗೆ 8 ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದು, ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ. ಜನರ ಆಶೀರ್ವಾದವಿದ್ದರೆ ಮಾತ್ರ ಸಿಎಂ ಆಗಲು ಸಾಧ್ಯ ಎಂದು ಸ್ಮರಿಸಿದರು
ಪಿಲ್ಲಹಳ್ಳಿ ಜನರ ಪ್ರೀತಿಯಿಂದಾಗಿ ಇಲ್ಲಿನ ದೇವಸ್ಥಾನದ ಉದ್ಘಾಟನೆಗೆ ಆಗಮಿಸಿದ್ದು, 1978ರಿಂದ ಇಂದಿನವರೆಗೂ ಹಾಗೂ ಮುಂದೆಯೂ ಈ ಭಾಗದ ಜನರ ಸಹಕಾರ ದೊರೆಯುವ ವಿಶ್ವಾಸವಿದೆ ಎಂದರು.
ಸಮಾಜದ ಅಸಮಾನತೆ ಕಡಿಮೆಯಾಗಬೇಕು. ಸಮಾನತೆಯ ಸ್ಥಾಪಿಸುವ ಉದ್ದೇಶವನ್ನು ಸರ್ಕಾರದ ಎಲ್ಲ ಯೋಜನೆಗಳು ಹೊಂದಿವೆ. ಸಮಾಜದ ಎಲ್ಲ ಜಾತಿ ಧರ್ಮ, ವರ್ಗಗಳಿಗೆ ಆರ್ಥಿಕ ಸಾಮಾಜಿಕ ಶಕ್ತಿ ದೊರೆಯಬೇಕು. ಲಿಂಗ ತಾರತಮ್ಯ ಹೋಗಲಾಡಿಸಿ, ಮಹಿಳೆಯರಿಗೆ ಶಕ್ತಿ ತುಂಬಲು ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಸಮಾಜದ ಬಡವರು, ಅಶಕ್ತರಿಗೆ ಶಕ್ತಿ ತುಂಬುವುದೇ ನನ್ನ ಉದ್ದೇಶ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯಗಳು ದೊರೆತಾಗ ಮಾತ್ರ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯ ಎಂದರು.
ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಡಿ.ತಿಮ್ಮಯ್ಯ, ಕೆ.ಶಿವಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
ತಂಬಿಟ್ಟು ತಿನ್ನುವುದೇ ಮಜಾ
ನಮ್ಮ ಊರಿನಲ್ಲೂ ದಂಡಿನ ಮಾರಮ್ಮನ ದೇವಸ್ಥಾನ ಇದೆ. ನಾವು ಚಿಕ್ಕವರಿದ್ದಾಗ ದೇವಸ್ಥಾನಕ್ಕೆ ತಂಬಿಟ್ಟಿನ ಆರತಿ ತೆಗೆದುಕೊಂಡು ಹೋಗುತ್ತಿದ್ದೆವು. ಆಗ ತಂಬಿಟ್ಟು ತಿನ್ನುವುದೇ ಮಜಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು.
ನಮಗೆ ಆಗ ಹಳ್ಳಿಗಾಡಿನಲ್ಲಿ ಸಿಗುತ್ತಿದ್ದ ಸಿಹಿ ತಿನಿಸುಗಳೆಂದರೆ ತಂಬಿಟ್ಟು ಹಾಗೂ ಕೊಬ್ಬರಿ ಮಿಠಾಯಿ ಮಾತ್ರ. ನಾನು ಚಿಕ್ಕವನಿದ್ದಾಗಿನಿಂದಲೂ ದಂಡಿನಮಾರಮ್ಮ ದೇವಸ್ಥಾನಕ್ಕೆ ಹೋಗುತ್ತಿದ್ದೆ ಎಂದು ಸ್ಮರಿಸಿಕೊಂಡರು.
ಎಲ್ಲರಿಗೂ ಒಳಿತು ಬಯಸುವುದೇ ಮುಖ್ಯ. ಯಾವೊಂದು ಧರ್ಮ ಜಾತಿಗಳು ಪ್ರೀತಿಯನ್ನು ಬೋಧಿಸುತ್ತದೆಯೇ ಹೊರತು ದ್ವೇಷಿಸುವುದನ್ನು ಬೋಧಿಸುವುದಿಲ್ಲ ಎಂದರು.