ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ

 ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ‘ಬುಡಕಟ್ಟು ಪ್ರದೇಶಗಳಲ್ಲಿ ಪರಿಸರಸ್ನೇಹಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವುದು ಹಾಗೂ ಸಂರಕ್ಷಣೆ-ಆರ್ಥಿಕ ಬೆಳವಣಿಗೆ ಸಮತೋಲನ’ ಕುರಿತು ಆಯೋಜಿಸಿದ್ದ ಕಾರ್ಯಾಗಾರ
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ‘ಬುಡಕಟ್ಟು ಪ್ರದೇಶಗಳಲ್ಲಿ ಪರಿಸರಸ್ನೇಹಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವುದು ಹಾಗೂ ಸಂರಕ್ಷಣೆ-ಆರ್ಥಿಕ ಬೆಳವಣಿಗೆ ಸಮತೋಲನ’ ಕುರಿತು ಆಯೋಜಿಸಿದ್ದ ಕಾರ್ಯಾಗಾರ
Published on

ಪ್ರಮುಖ ಮುಖ್ಯಾಂಶಗಳು

  • ಕಾರ್ಯಾಗಾರದಲ್ಲಿ ಡಾ.ಎಸ್.ಪಿ.ಪದ್ಮ ಪ್ರಸಾದ್ ಹೇಳಿಕೆ
  • ರ್ನಾಟಕದಲ್ಲಿ ಸುಮಾರು 50 ಬುಡಕಟ್ಟು ಪಂಗಡಗಳಿವೆ. ಕರ್ನಾಟಕದ ಜನಸಂಖ್ಯೆಗೆ ಶೇ.7ರಷ್ಟು ಬುಡಕಟ್ಟು
ಮೈಸೂರು: ಕಾಡಿನ ಮೂಲ ಹಕ್ಕುದಾರರಾದ ಬುಡಕಟ್ಟು ಜನರನ್ನು ಸುಧಾರಣೆಯ ನೆಪದಲ್ಲಿ ಒಕ್ಕಲೆಬ್ಬಿಸಿ ಮ್ಯೂಸಿಯಂನ ಚಿತ್ರಗಳನ್ನಾಗಿ ಮಾಡಬಾರದು ಎಂದು ರಾಜ್ಯ ಪ್ರವಾಸೋದ್ಯಮ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಪಿ.ಪದ್ಮ ಪ್ರಸಾದ್ ತಿಳಿಸಿದರು. 
ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಕರ್ನಾಟಕ ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಕೇರ್ಗಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ‘ಬುಡಕಟ್ಟು ಪ್ರದೇಶಗಳಲ್ಲಿ ಪರಿಸರಸ್ನೇಹಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವುದು ಹಾಗೂ ಸಂರಕ್ಷಣೆ-ಆರ್ಥಿಕ ಬೆಳವಣಿಗೆ ಸಮತೋಲನ’ ಕುರಿತು ಗುರುವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಭಾರತದಲ್ಲಿ 700 ಬುಡಕಟ್ಟು ಜನಾಂಗಗಳಿವೆ. ಕರ್ನಾಟಕದಲ್ಲಿ ಸುಮಾರು 50 ಬುಡಕಟ್ಟು ಪಂಗಡಗಳಿವೆ. ಕರ್ನಾಟಕದ ಜನಸಂಖ್ಯೆಗೆ ಶೇ.7ರಷ್ಟು ಬುಡಕಟ್ಟು ಜನರಿದ್ದಾರೆ. 
ಬುಡಕಟ್ಟು ಜನರು ಇರುವ ರೀತಿಯಲ್ಲೆ ಬಿಟ್ಟು ಅವರಿಗೆ ವಿದ್ಯಾಭ್ಯಾಸ, ಆರೋಗ್ಯ, ಸಂಪರ್ಕ ಸಾಧನ ಒದಗಿಸಿಕೊಡಬೇಕು. ಅಭಿವೃದ್ಧಿ ಹೇಗೆ ಎನ್ನುವುದನ್ನು ಅವರಿಂದ ನಾವು ಕಲಿಯಬೇಕು. ಆದರೆ ಅಭಿವೃದ್ಧಿಯನ್ನು ಅವರಿಗೆ ನಾವು ಹೇಳಿಕೊಡುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಬುಡಕಟ್ಟು ಜನರಿಗೆ ಅಪೂರ್ವವಾದ ಜ್ಞಾನವಿದ್ದು, ಗಿಡಗಳು, ಬೀಜಗಳು, ಕಾಡು, ಪ್ರಾಣಿಗಳ ಬಗ್ಗೆ ಅರಣ್ಯ ಇಲಾಖೆ ಹಾಗೂ ತೋಟಗಾರಿಕಾ ಇಲಾಖಾ ಅಧಿಕಾರಿಗಳಿಗಿಂತ ಹೆಚ್ಚಿಗೆ ತಿಳಿದುಕೊಂಡಿದ್ದಾರೆ ಎಂದರು. 
ಕುವೆಂಪು ವಿಶ್ವವಿದ್ಯಾಲಯದ ಪ್ರೊ.ಚಂದ್ರಶೇಖರ ಮಾತನಾಡಿ, ನಮಗೆ ಪ್ರವಾಸದ ಕಲ್ಪನೆಯೇ ಇರಲಿಲ್ಲ. ನಾವು ಹಿಂದೆ ಜಾತ್ರೆ, ಮದುವೆ, ನೆಂಟರ ಮನೆಗಳಿಗೆ ಹೋಗುತ್ತಿದ್ದೆವು. ಅದೇ ನಮಗೆ ಪ್ರವಾಸವಾಗುತ್ತಿತ್ತು. ನಮ್ಮ ಆರೋಗ್ಯವು ಪರಿಸರದ ಮೇಲೆ ಅವಲಂಬಿತವಾಗಿದೆ.
 ಬುಡಕಟ್ಟು ಜನರ ನೆಮ್ಮದಿ, ಆಸ್ತಿ, ಜೀವನವನ್ನು ನಾವು ಕಸಿದುಕೊಳ್ಳುತ್ತಿದ್ದೇವೆಯೇ? ಶೋಷಣೆ ಮಾಡುತ್ತಿದ್ದೇವೆಯೇ? ಎಂದು ಚಿಂತಿಸಬೇಕಾಗಿದೆ. ಪರಿಸರ ರಕ್ಷಣೆ ಮಾಡಿಕೊಂಡು ಬುಡಕಟ್ಟು ಜನರನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲು ಚರ್ಚೆಗಳು ನಡೆಯಬೇಕಿದೆ ಎಂದರು. 
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಎಚ್.ಎಸ್.ಗಿರಿಜಾಂಬ ಮಾತನಾಡಿ, ಬುಡಕಟ್ಟು ಸಮುದಾಯದ ಯಾವುದಾದರೊಂದು ಹಾಡಿಯನ್ನು ತೆಗೆದುಕೊಂಡು ಮಾದರಿ ಹಾಡಿಯನ್ನಾಗಿಮಾಡಬೇಕು. ಅಲ್ಲಿಗೆ ಬಂದು ಜನರು ಬುಡಕಟ್ಟು ಜನರ ಆಚಾರ-ವಿಚಾರ, ಸಂಸ್ಕೃತಿಯನ್ನು ಕಲಿತು ಬರಬೇಕು ಎನ್ನುವುದು ಆಲೋಚನೆ ಇದೆ.
 ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ನಗರದಿಂದ ಜನರನ್ನು ಬಸ್ಸಿನಲ್ಲಿ ಕರೆದುಕೊಂಡು ಹೋಗಿ ಅವರ  ಜೀವನಶೈಲಿಯನ್ನು ಅವರಿಗೆ ಧಕ್ಕೆ ಆಗದಂತೆ ಅವರನ್ನೇ ಒಳಗೊಂಡು ಅವರೇ ಇತರ ಜನರಿಗೆ ಅವರ ಜೀವನ ಶೈಲಿ ಪರಿಚಯಿಸುವ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದರು.
ಬುಡಕಟ್ಟು ಜನರು ಪರಿಸರವನ್ನು ಬಿಟ್ಟು ಬರಲು ಇಷ್ಟಪಡುವುದಿಲ್ಲ. ಅವರಿಗೆ ಧಕ್ಕೆಯಾಗದ ರೀತಿಯಲ್ಲಿ ಪರಿಸರಸ್ನೇಹಿ ಪ್ರವಾಸವನ್ನು ಅಭಿವೃದ್ಧಿ ಪಡಿಸಲು ಸಲಹೆ ತಿಳಿಸಬೇಕು. ಬುಡಕಟ್ಟು ಸಮುದಾಯದವರಿಗೆ ಪರಿಸರ ಸ್ನೇಹಿ ಪ್ರವಾಸದಿಂದ ಅವರ ಆರ್ಥಿಕ ಜೀವನ ಸುಸ್ಥಿರದೆಡೆಗೆ ಹೋಗುವ ಕಡೆಗೆ ಚರ್ಚೆಗಳು ನಡೆಯಲಿ ಎಂದರು. 
 ಲೆಕ್ಕಾಧಿಕಾರಿ ಬಿ.ಆರ್.ಭವ್ಯಾ, ಅಧೀಕ್ಷಕಿ ಎಂ.ವಿ.ನಾಗರತ್ನಾ, ಡಾ.ಕೆ.ವಿ.ಕೃಷ್ಣಮೂರ್ತಿ, ಡಾ.ಕಲಾವತಿ, ಡಾ.ಬಿ.ಆರ್.ಮಂಜುನಾಥ್, ಡಾ.ಮೋಹನ್‌ಕುಮಾರ್, ಡಾ.ದಿನೇಶ್, ಡಾ.ರವಿಕುಮಾರ್, ರಮೇಶ್, ಸಿ.ಕೆ.ಗಂಗಾಧರ ಇತರರು ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net