ಕೌಶಲಾಭಿವೃದ್ಧಿ ಯೋಜನೆ ರೂಪಿಸುವುದು ಅಗತ್ಯ:ಡಾ.ಕೆ.ಜಿ.ಬಸವಕುಮಾರ್ ಅಭಿಮತ

ಜೆಎಸ್‌ಎಸ್ ಪಾಲಿಟೆಕ್ನಿಕ್ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ.ಕೆ.ಜಿ.ಬಸವಕುಮಾರ್, ಎಂ.ಎನ್.ಮುರಳೀಧರ, ಟಿ.ಕೆ.ಮಹೇಂದ್ರ, ಬಿ.ಶಿವಶಂಕರ್, ಡಾ.ಕೆ.ಎಸ್.ಭಕ್ತವತ್ಸಲ ಇತರರಿದ್ದರು.
ಜೆಎಸ್‌ಎಸ್ ಪಾಲಿಟೆಕ್ನಿಕ್ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ.ಕೆ.ಜಿ.ಬಸವಕುಮಾರ್, ಎಂ.ಎನ್.ಮುರಳೀಧರ, ಟಿ.ಕೆ.ಮಹೇಂದ್ರ, ಬಿ.ಶಿವಶಂಕರ್, ಡಾ.ಕೆ.ಎಸ್.ಭಕ್ತವತ್ಸಲ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪೂರ್ಣಗೊಳಿಸುವ ವೇಳೆಗೆ ಕೈಗಾರಿಕಾ ಕ್ಷೇತ್ರಕ್ಕೆ ಸಿದ್ಧರಾಗಿರುವ ತಾಂತ್ರಿಕ ಪರಿಣಿತರಾಗಬೇಕು
  • ಕಡಿಮೆ ಹೂಡಿಕೆ ಮತ್ತು ಲಭ್ಯವಿರುವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕೌಶಲಾಭಿವೃದ್ಧಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬೇಕು
ಮೈಸೂರು:ಪರಿಸರ ಸಂರಕ್ಷಣೆ ಮತ್ತು ವಿದ್ಯಾರ್ಥಿಗಳ ಕೌಶಲಾಭಿವೃದ್ಧಿ ಎರಡನ್ನೂ ಸಮಾನವಾಗಿ ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಡಾ.ಕೆ.ಜಿ.ಬಸವಕುಮಾರ್ ಹೇಳಿದರು.
ಜೆಎಸ್‌ಎಸ್ ಪಾಲಿಟೆಕ್ನಿಕ್, ಇನೋವೇಷನ್ ಸೆಲ್‌ನಿಂದ ಕಾಲೇಜಿನಲ್ಲಿ ಆಯೋಜಿಸಿದ್ದ ಸುಸ್ಥಿರತೆ ಮತ್ತು ಹಸಿರು ತಂತ್ರಜ್ಞಾನಗಳಿಗಾಗಿ ಮಿತವ್ಯಯ ಇಂಜಿನಿಯರಿಂಗ್ ವಿಷಯ ಕುರಿತ ‘ರಾಷ್ಟ್ರೀಯ ಸಮ್ಮೇಳನ- 2026’ನಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೌಶಲ ವೃದ್ಧಿಸಿಕೊಳ್ಳಬೇಕು, ಕೈಗಾರಿಕಾ ಕ್ಷೇತ್ರಕ್ಕೆ ಸಿದ್ಧರಾಗಿರುವ ಜ್ಞಾನ ವೃತ್ತಿಪರರಾಗಿ ರೂಪುಗೊಳ್ಳಬೇಕು. ಅದಕ್ಕೆ ತಕ್ಕಂತೆ ವಿಚಾರ ಸಂಕಿರಣ, ಕಾರ್ಯಾಗಾರದಲ್ಲಿ ಭಾಗವಹಿಸುವ ಮೂಲಕ ತಜ್ಞರ ತಿಳಿಸಿಕೊಡುವ ವಿಷಯವನ್ನು ತಿಳಿಯಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪೂರ್ಣಗೊಳಿಸುವ ವೇಳೆಗೆ ಕೈಗಾರಿಕಾ ಕ್ಷೇತ್ರಕ್ಕೆ ಸಿದ್ಧರಾಗಿರುವ ತಾಂತ್ರಿಕ ಪರಿಣಿತರಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಎಂ.ಎನ್.ಮುರಳೀಧರ ಮಾತನಾಡಿ, ಕಡಿಮೆ ಹೂಡಿಕೆ ಮತ್ತು ಲಭ್ಯವಿರುವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕೌಶಲಾಭಿವೃದ್ಧಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬೇಕು ಎಂದರು.
ತಾಂತ್ರಿಕ ಶಿಕ್ಷಣ ಮತ್ತು ಕೌಶಲ ವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ವಿವಿಧ ಇಲಾಖೆಗಳು ಜಾರಿಗೊಳಿಸುತ್ತಿರುವ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತು ಮಾಹಿತಿ ತಿಳಿದುಕೊಳ್ಳಬೇಕು. ಇದರಿಂದ ತಾಂತ್ರಿಕ ವಿದ್ಯಾರ್ಥಿಗಳ ಭವಿಷ್ಯವನ್ನು ಉದ್ಯೋಗೋನ್ಮುಖ ಹಾಗೂ ಕೈಗಾರಿಕಾ ಅಗತ್ಯಗಳಿಗೆ ಹೊಂದುವಂತೆ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿವೆ ಎಂದು ತಿಳಿಸಿದರು.
ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಉಪನ್ಯಾಸಕ ಟಿ.ಕೆ.ಮಹೇಂದ್ರ ಮಾತನಾಡಿ, ಮಿತವ್ಯಯ ಇಂಜಿನಿಯರಿಂಗ್ ತಂತ್ರಜ್ಞಾನವು ಪ್ರಸ್ತುತ ತಾಂತ್ರಿಕ ಬೆಳವಣಿಗೆಯ ದಿಕ್ಕನ್ನು ಪ್ರತಿಬಿಂಬಿಸುತ್ತದೆ. ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಆರೋಗ್ಯಕರ ಪರಿಸರವನ್ನು ಸೃಷ್ಟಿಸಿ ಅದನ್ನು ರಕ್ಷಿಸಲು ತಂತ್ರಜ್ಞಾನವನ್ನು ಸುಸ್ಥಿರವಾಗಿ ಬಳಸುವ ಅಗತ್ಯವಿದೆ ಎಂದರು.
ಎಐ ಯುಗದಲ್ಲಿ ಮಿತವ್ಯಯ ಇಂಜಿನಿಯರಿಂಗ್ ಅನ್ನು ಅಳವಡಿಸಿಕೊಳ್ಳುವ ಮೂಲಕ ತಾಂತ್ರಿಕ ಸಾಮರ್ಥ್ಯ ಸುಧಾರಿಸುವ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದರು.
ಎಸ್‌ಜೆಸಿಇ-ಸ್ಟೆಪ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಶಿವಶಂಕರ್ ಮಾತನಾಡಿ, ಪರಿಸರ ಸ್ನೇಹಿ ಮತ್ತು ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಿತವ್ಯಯಿ ಇಂಜಿನಿಯರಿಂಗ್ ತಂತ್ರಗಳ ಪಾತ್ರ ಮಹತ್ವದ್ದು. ಕೃತಕ ಬುದ್ಧಿಮತ್ತೆ (ಎಐ) ವ್ಯವಸ್ಥೆಗಳು ಮತ್ತು ದತ್ತಾಂಶ ಕೇಂದ್ರಗಳು ಹೆಚ್ಚಿನ ಪ್ರಮಾಣದ ದತ್ತಾಂಶ ಮತ್ತು ಶಕ್ತಿಯನ್ನು ಬಳಸುತ್ತಿರುವುದರಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಪರಿಣಾಮವನ್ನು ಕಡಿಮೆಗೊಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಡಾ.ಕೆ.ಎಸ್.ಭಕ್ತವತ್ಸಲ ಮಾತನಾಡಿ, ತಾಂತ್ರಿಕ ಕ್ಷೇತ್ರದಲ್ಲಿ ನಿರಂತರವಾಗಿ ಆಗುತ್ತಿರುವ ಬದಲಾವಣೆಗಳಿಗೆ ತೆರೆದ ಮನಸ್ಸಿನಿಂದ ಸ್ಪಂದಿಸಿ, ತಮ್ಮ ಶೈಕ್ಷಣಿಕ ಜ್ಞಾನ ಮತ್ತು ಪ್ರಾಯೋಗಿಕ ಕೌಶಲಗಳನ್ನು ನಿರಂತರವಾಗಿ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಉದ್ಯೋಗಾಧಾರಿತ ಹಾಗೂ ಕೌಶಲಾಧಾರಿತ ವೃತ್ತಿಜೀವನವನ್ನು ಗುರಿಯಾಗಿಸಿಕೊಂಡು, ಹೊಸ ತಂತ್ರಜ್ಞಾನಗಳನ್ನು ಕಲಿಯುವ ಆಸಕ್ತಿ ಬೆಳೆಸಿಕೊಳ್ಳಬೇಕು. ಕೌಶಲಗಳು ದೇಶದ ಅಭಿವೃದ್ಧಿಗೂ ಹಾಗೂ ಅವರ ವೈಯಕ್ತಿಕ ವೃತ್ತಿಜೀವನದ ಬೆಳವಣಿಗೆಗೂ ಸಹಕಾರಿಯಾಗಲಿವೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net