ಆಲಸ್ಯ ತ್ಯಜಿಸಿ ತಪಸ್ಸಿನಂತೆ ಓದುವುದು ಅವಶ್ಯ

ನಗರದ ಜ್ಞಾನಬುತ್ತಿ ಸಂಸ್ಥೆಯಲ್ಲಿ ಆಯೋಜಿಸಿದ್ದ ತರಬೇತಿ ಶಿಬಿರದ ಸಮಾರೋಪದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಪ್ರೊ.ಎಂ.ಕೃಷ್ಣೇಗೌಡ, ಪ್ರೊ. ನಿರಂಜನವಾನಳ್ಳಿ, ಡಾ.ಎನ್.ಎನ್.ಪ್ರಹ್ಲಾದ್,  ಪ್ರೊ.ಆರ್.ಎನ್.ಪದ್ಮನಾಭ, ಡಾ.ದಿಲೀಪ್ ನರಸಯ್ಯ, ಪ್ರೊ. ವಿ. ಜಯಪ್ರಕಾಶ್ ಇತರರಿದ್ದರು.
ನಗರದ ಜ್ಞಾನಬುತ್ತಿ ಸಂಸ್ಥೆಯಲ್ಲಿ ಆಯೋಜಿಸಿದ್ದ ತರಬೇತಿ ಶಿಬಿರದ ಸಮಾರೋಪದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಪ್ರೊ.ಎಂ.ಕೃಷ್ಣೇಗೌಡ, ಪ್ರೊ. ನಿರಂಜನವಾನಳ್ಳಿ, ಡಾ.ಎನ್.ಎನ್.ಪ್ರಹ್ಲಾದ್, ಪ್ರೊ.ಆರ್.ಎನ್.ಪದ್ಮನಾಭ, ಡಾ.ದಿಲೀಪ್ ನರಸಯ್ಯ, ಪ್ರೊ. ವಿ. ಜಯಪ್ರಕಾಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಕೃಷ್ಣೇಗೌಡ ಅಭಿಪ್ರಾಯ
  • ಉಚಿತ ತರಬೇತಿ ಶಿಬಿರದ ಸಮಾರೋಪ

ಮೈಸೂರು: 

ಸಾಂಪ್ರದಾಯಿಕ ಪದವಿ ಓದಿದವರಲ್ಲಿ ಕ್ರಿಯಾಶೀಲಯಿಲ್ಲದೆ ಬಹುತೇಕರು ಸೋಮಾರಿಗಳಾಗಿದ್ದಾರೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಕೃಷ್ಣೇಗೌಡ ಕಳವಳ ವ್ಯಕ್ತಪಡಿಸಿದರು.

ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಆವರಣದಲ್ಲಿರುವ ಜ್ಞಾನಬುತ್ತಿ ಸಂಸ್ಥೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳ ಉಚಿತ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
ವಿಶ್ವವಿದ್ಯಾಲಯಗಳಲ್ಲಿನ ಸಾಂಪ್ರದಾಯಿಕ ಪದವಿ ಓದಿದವರಲ್ಲಿ ಕ್ರಿಯಾಶೀಲಯಿಲ್ಲದೆ ಬಹುತೇಕರು ಸೋಮಾರಿಗಳಾಗಿದ್ದಾರೆ. ತಾಸುಗಟ್ಟಲೆ ಹಠಹಿಡಿದು ತಪಸ್ಸಿನಂತೆ ಓದುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ. ಆದರೆ, ಆಲಸ್ಯ ಮತ್ತು ಸೋಮಾರಿತನ ಹೊದ್ದು ಮಲಗಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದರು.
ವಿಶ್ವವಿದ್ಯಾಲಯಗಳು ಇಂತಹವರನ್ನೇ ಸಾಕುವ ದುಸ್ಥಿತಿಗೆ ತಲುಪಿವೆ. ಪದವಿಯ ಅಂಕಗಳು ಈಗ ಉದ್ಯೋಗಕ್ಕೆ ಮಾನದಂಡವಾಗಿ ಉಳಿದಿಲ್ಲ. ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆಯಷ್ಟೇ ಆಗಿವೆ. ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನದಿಂದ ಸಾಮಾನ್ಯ ವಿದ್ಯಾರ್ಥಿಗಳು ಅಸಾಧ್ಯವಾದುದನ್ನು ಸಾಧಿಸಬಹುದು ಎಂದರು.
ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ನೈತಿಕತೆ ಕುಸಿಯುತ್ತಿದೆ. ಯುವಜನರಲ್ಲಿ ಕೌಶಲದ ಕೊರತೆಯಿದೆ. ಕೌಶಲಾಧಾರಿತ ಕೆಲಸ ಮಾಡಲು ಜನ ಸಿಗದೆ, ಈಶಾನ್ಯ ರಾಜ್ಯಗಳಿಂದ ಜನ ಇಲ್ಲಿಗೆ ಬರುತ್ತಿದ್ದಾರೆ ಎಂದು ವಿಷಾದಿಸಿದರು.
ವಿಶ್ರಾಂತ ಕುಲಪತಿ ಪ್ರೊ. ನಿರಂಜನ ವಾನಳ್ಳಿ ಮಾತನಾಡಿ, ವಾಣಿಜ್ಯ ಜಗತ್ತಿನಲ್ಲಿ ಎಲ್ಲರೂ ಲಾಭವನ್ನೇ ನೋಡುತ್ತಿರುವಾಗ, ಜ್ಞಾನಬುತ್ತಿ ಸಂಸ್ಥೆ ಕಳೆದ ನಾಲ್ಕು ದಶಕಗಳಿಂದ ಮಾಡುತ್ತಿರುವ ನಿಸ್ವಾರ್ಥ ಸೇವೆ ಅನನ್ಯವಾದುದು. ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಲು ಕೆ-ಸೆಟ್ ಮತ್ತು ಯುಜಿಸಿ-ನೆಟ್ ಅರ್ಹತಾ ಪ್ರಮಾಣಪತ್ರ ಅಗತ್ಯ ಎಂದು ಯುಜಿಸಿ ನಿಯಮಾವಳಿ ಮಾಡಿದೆ. 
ಇದರಿಂದ ಅಧ್ಯಾಪಕರ ಕಾರ್ಯದಕ್ಷತೆ ಶಿಕ್ಷಣದ ಗುಣಮಟ್ಟ ಹೆಚ್ಚಾಗಲು ಕಾರಣವಾಗಿದೆ. ಆದ್ದರಿಂದ ಸ್ನಾತಕ ಪದವಿಗೆ ಸೇರುವ ಸಮಯದಲ್ಲಿಯೇ ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳ ತಯಾರಿಯಲ್ಲಿ ತೊಡಗಬೇಕು ಎಂದರು.
 ಶಿಕ್ಷಣ ತಜ್ಞ ಡಾ.ಎನ್.ಎನ್.ಪ್ರಹ್ಲಾದ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ಎನ್.ಪದ್ಮನಾಭ, ಡಾ.ದಿಲೀಪ್ ನರಸಯ್ಯ, ಪ್ರೊ.ವಿ.ಜಯಪ್ರಕಾಶ್, ಯು.ಎಂ. ಶರದ್ ರಾವ್, ಎಂ.ರಾಜೀವ್ ಶರ್ಮಾ, ಪ್ರಾಂಶುಪಾಲ ಮಹದೇವ ನಾಯಕ್, ಉಪ ಪ್ರಾಂಶುಪಾಲ ಎನ್.ಎಸ್.ಪಶುಪತಿ, ಡಾ.ಕೃ.ಪ.ಗಣೇಶ, ಡಾ. ಶೈಲೇಶ್ ರಾಜೇ ಅರಸ್, ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಎಚ್.ಬಾಲಕೃಷ್ಣ, ಸಂಯೋಜಕರಾದ ಪ್ರೊ. ಕಿರಣ್ ಕೌಶಿಕ್, ಕೆ.ವೈ. ನಾಗೇಂದ್ರ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net