ಮೈಸೂರು: ಬಿಜೆಪಿ ವರಿಷ್ಠರು ರಾಷ್ಟ್ರ ರಾಜಕಾರಣದಿಂದ ಹೊರಹಾಕಿರುವ ಮಾಜಿ ಸಂಸದ ಪ್ರತಾಪ್ ಸಿಂಹ ರಾಜ್ಯ ರಾಜಕಾರಣಕ್ಕೆ ಯೋಗ್ಯರೇ? ಇವರ ಅವಶ್ಯಕತೆ ಇದೆಯೇ? ಎಂದು ಬಿಜೆಪಿ ಮುಖಂಡ ಮೈ.ಕಾ.ಪ್ರೇಮ್‌ಕುಮಾರ್ ಪ್ರಶ್ನಿಸಿದರು.
ಲೋಕಸಭೆ ಚುನಾವಣೆಯಲ್ಲಿ ತಮಗೆ ಏಕೆ ಟಿಕೆಟ್ ಕೈ ತಪ್ಪಿತು? ವಿಧಾನಸಭಾ ಚುನಾವಣೆಗೆ ನಿಮಗೆ ಟಿಕೆಟ್ ಕೊಡುವವರು ಯಾರು? ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ರಾಜ್ಯ ರಾಜಕಾರಣಕ್ಕೆ ಬರುವ ಸಲುವಾಗಿಯೇ ನನಗೆ ಲೋಕಸಭಾ ಟಿಕೆಟ್ ನೀಡಿಲ್ಲ ಎಂದು ಪ್ರತಾಪ್ ಸಿಂಹ ಎಲ್ಲ ಕಡೆ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಬಿಜೆಪಿ ಹೈಕಮಾಂಡ್ ಆಗಲಿ, ಹಿರಿಯ ನಾಯಕರಾಗಲಿ ಎಲ್ಲಿ ಹೇಳಿದ್ದಾರೆ? ಅಂತಹ ವರದಿ ಎಲ್ಲಿದೆ? ಎಂದು ಪ್ರಶ್ನಿಸಿದರು.
ಚಾಮರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ತಾವೇ ಬಹಿರಂಗವಾಗಿ ಘೋಷಿಸಿಕೊಂಡಿದ್ದಾರೆ.
ಹೀಗೆ ಘೋಷಿಸಿಕೊಳ್ಳಲು ಪಕ್ಷದಲ್ಲಿ ಅವಕಾಶ ಇದೆಯೇ? ಸ್ವಘೋಷಿತ ಅಭ್ಯರ್ಥಿ ಪ್ರತಾಪ್ ಸಿಂಹ ತಮ್ಮ ಘೋಷಣೆಗೆ ಹೈಕಮಾಂಡ್ ಬೆಂಬಲ ಇದೆ ಎನ್ನುವುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
ತಮ್ಮ ಕಚೇರಿಗೆ ಬಂದಂತಹ ಪಕ್ಷದ ಕಾರ್ಯಕರ್ತರನ್ನು ಅವಮಾನಿಸಿದ್ದೀರಿ. ಇದೀಗ ಕಾರ್ಯಕರ್ತರ ನೆನಪಾಯಿತೇ?
ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಚುನಾವಣೆಗೆ ಸ್ಪರ್ಧಿಸಲು ತಮಗೆ ಆಹ್ವಾನ ಬರುತ್ತಿದೆ ಎಂದು ಹೇಳಿಕೊಳ್ಳುವ ಪ್ರತಾಪ್ ಸಿಂಹ ಅವರು ಒಕ್ಕಲಿಗರ ಪ್ರಾಬಲ್ಯವಿರುವ ಚಾಮರಾಜ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ? ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ಠೇವಣಿ ಕಳೆದುಕೊಳ್ಳುತ್ತೇನೆ ಎನ್ನುವ ಭಯವೇ? ಎಂದು ಜರಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರ ಪ್ರಚಾರಕ್ಕೆ ಪ್ರತಾಪ್ ಸಿಂಹ ಅಸಹಕಾರ ತೋರಿಸಿದ್ದರು. ಸಂಸತ್ ಅಧಿವೇಶನದ ವೇಳೆಯಲ್ಲಿ ಇವರು ನೀಡಿದ ಪಾಸ್ ಬಳಸಿಕೊಂಡು ಯುವಕರು ಸ್ಮೋಕ್ ಬಾಂಬ್ ಸಿಡಿಸಿದರು.
ಆ ಪ್ರಕರಣ ಏನಾಯಿತು? ‘ಕತ್ತಲೆ ಜಗತ್ತು’ ಪುಸ್ತಕ ವಿರುದ್ಧ ತಡೆಯಾಜ್ಞೆ ಏಕೆ ತಂದಿದ್ದಾರೆ? ಹೊರಜಗತ್ತಿಗೆ ಗೊತ್ತಾಗಬಾರದಂತಹ ಯಾವ ವಿಷಯ ಅದರಲ್ಲಿತ್ತು? ಬಹಿರಂಗ ಚರ್ಚೆಯ ಮುಖಾಂತರವೇ ಅದನ್ನು ಎದುರಿಸಬಹುದಿತ್ತಲ್ಲವೇ? ಎಂದು ಹರಿಹಾಯ್ದರು. ಬಿಜೆಪಿಯ ಕುಂಬಾರಕೊಪ್ಪಲು ಕುಮಾರಗೌಡ ಇದ್ದರು.