ಸರ್ಕಾರಿ ಬಸ್‌ಗಳ ಅಪಘಾತ ಹೆಚ್ಚಳ

ಸರ್ಕಾರಿ ಬಸ್‌ಗಳ ಅಪಘಾತ
ಸರ್ಕಾರಿ ಬಸ್‌ಗಳ ಅಪಘಾತ
Published on

ಪ್ರಮುಖ ಮುಖ್ಯಾಂಶಗಳು

  • 3 ವರ್ಷದಲ್ಲಿ ಅವಘಡಕ್ಕೆ ಒಳಗಾಗಿರುವ ವಾಹನಗಳು 307
  • ಪ್ರಯಾಣಿಕರ ಸುರಕ್ಷತೆ ಮೊದಲ ಆದ್ಯತೆ ಇರಲಿ
  • ಸರ್ಕಾರಿ ಬಸ್‌ಗಳ ಅಪಘಾತದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ, ಮೈಸೂರು ಜಿಲ್ಲೆ ರಾಜ್ಯದಲ್ಲೇ 2ನೇ ಸ್ಥಾನ

 ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಅತಿವೇಗದ ಹಾಗೂ ಅಜಾಗರೂಕತೆಯ ಚಾಲನೆಯಂದಾಗಿ ಸರ್ಕಾರಿ ಬಸ್‌ಗಳ ಅಪಘಾತ ಹೆಚ್ಚಾಗಿದ್ದು, ಇದು ಪ್ರಯಾಣಿಕರ ಸುರಕ್ಷತೆ ಕುರಿತು ಚಿಂತೆಗೀಡು ಮಾಡಿದೆ.
ಸರ್ಕಾರಿ ಬಸ್‌ಗಳ ಅಪಘಾತದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ, ಮೈಸೂರು ಜಿಲ್ಲೆ ರಾಜ್ಯದಲ್ಲೇ 2ನೇ ಸ್ಥಾನದಲ್ಲಿ ಇದೆ. ಇದು ಪ್ರತಿ ವರ್ಷ ಮೂರಂಕಿ ದಾಟುತ್ತಿದೆ. ಶಕ್ತಿ ಯೋಜನೆಯಿಂದಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದರಲ್ಲೂ ಮಹಿಳಾ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆ ಕುರಿತು ಹೆಚ್ಚಿನ ಗಮನ ಕೊಡಬೇಕಿದೆ.

ಅಪಘಾತ ಕಡಿಮೆಯಾಗುತ್ತಿಲ್ಲ: 

ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಕಳೆದ 3 ವರ್ಷದಲ್ಲಿ ಕೆಎಸ್‌ಆರ್‌ಟಿಸಿಯ 307 ಬಸ್‌ಗಳ ಅಪಘಾತಕ್ಕೆ ಒಳಗಾಗಿವೆ. ನಗರ ವಿಭಾಗಕ್ಕಿಂತ ಗ್ರಾಮಾಂತರ ವಿಭಾಗದ ಬಸ್‌ಗಳೇ ಹೆಚ್ಚು ಅಪಘಾತಕ್ಕೆ ಇಡಾಗಿವೆ.
ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ದೂರ ಊರುಗಳ ನಡುವೆ ಸಂಚಾರ ಮಾಡುವ ಬಸ್‌ಗಳಾಗಿವೆ. 2023ರಿಂದ ಮೂರು ವರ್ಷದಲ್ಲಿ ಜಿಲ್ಲೆಯಲ್ಲಿ ಗ್ರಾಮಾಂತರ ವಿಭಾಗದ 194 ಬಸ್‌ಗಳು, ನಗರ ವಿಭಾಗದ 113 ಬಸ್ ಅಪಘಾತದ ಸುಳಿಗೆ ಸಿಲುಕಿಕೊಂಡಿವೆ. ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ. 

ಖಾಸಗಿ ಬಸ್‌ಗಳ ಅಪಘಾತ ಕಡಿಮೆ:

ಖಾಸಗಿ ಬಸ್‌ಗಳ ಅಪಘಾತ ಸಂಖ್ಯೆ ಸರ್ಕಾರಿ ಬಸ್‌ಗಳಿಗಿಂತ ಕಡಿಮೆ ಇದೆ ಎಂಬುದೇ ಅಚ್ಚರಿ. ಕಳೆದ ಮೂರು ವರ್ಷದಲ್ಲಿ 146 ಖಾಸಗಿ ಬಸ್‌ಗಳು ಅಪಘಾತಕ್ಕೀಡಾಗಿವೆ. ಗ್ರಾಮಾಂತರ ಪ್ರದೇಶದಲ್ಲಿ 48 ಮತ್ತು ನಗರ ಪ್ರದೇಶದಲ್ಲಿ 22 ಖಾಸಗಿ ಬಸ್‌ಗಳು ಅಪಘಾತಕ್ಕೀಡಾಗಿವೆ. 

‘ಮದ್ಯ’ದಿಂದ ಅಪಘಾತವಾಗಿಲ್ಲ: 

ಮದ್ಯಸೇವಿಸಿ ವಾಹನ ಚಲಾಯಿಸಿ ಅಪಘಾತ ಸಂಭವಿಸಿದ ಪ್ರಕರಣವೊಂದು ದಾಖಲಾಗಿದೆ. ಇದು 2024ರಲ್ಲಿ ಘಟಿಸಿದೆ. ಉಳಿದಂತೆ ಕಳೆದ ಮೂರು ವರ್ಷದಲ್ಲಿ ಇಂತಹ ಪ್ರಕರಣಗಳು ಪುನರಾವರ್ತನೆಯಾಗಿಲ್ಲ. ಖಾಸಗಿ ಬಸ್‌ಗಳು ಈ ಕಾರಣಕ್ಕೆ ಅಪಘಾತವಾಗಿರುವ ವರದಿಯಾಗಿಲ್ಲ

895 ವಾಹನಗಳ ಸೇವೆ: 

ಮೈಸೂರು ನಗರ ವಿಭಾಗ ವ್ಯಾಪ್ತಿಯ ನಾಲ್ಕು ಡಿಪೋಗಳಲ್ಲಿರುವ 575 ಬಸ್‌ಗಳು ಕಾರ್ಯಾಚರಣೆಯಲ್ಲಿವೆ. ಅವುಗಳಲ್ಲಿ ನಂಜನಗೂಡು ಡಿಪೋಗೆ 25 ಬಸ್ ಸೇರಿವೆ. ಉಳಿದ 550 ಬಸ್‌ಗಳು ನಗರ ಪ್ರದೇಶ ಹಾಗೂ ಮೈಸೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಚರಿಸುತ್ತಿವೆ. ಕೆಎಸ್‌ಆರ್‌ಟಿಸಿ ಮೈಸೂರು ಗ್ರಾಮಾಂತರ ವಿಭಾಗದ ವ್ಯಾಪ್ತಿಯಲ್ಲಿ 320 ಬಸ್‌ಗಳು ಪ್ರಯಾಣಿಕರಿಗೆ ಸೇವೆ ನೀಡುತ್ತಿವೆ. ಈ ಪೈಕಿ ಮೈಸೂರು-ಬೆಂಗಳೂರು ಮಾರ್ಗದಲ್ಲಿ 114 ತಡೆರಹಿತ ಬಸ್‌ಗಳು ಸಂಚಾರ ಮಾಡುತ್ತಿವೆ. ಇದರಲ್ಲಿ 34 ರಾಜಹಂಸ, 32 ಹವಾನಿಯಂತ್ರಿತ ವೋಲ್ವೊ ಬಸ್‌ಗಳು, 48 ಸಾಮಾನ್ಯ ಬಸ್‌ಗಳು ಸಂಚಾರ ಮಾಡುತ್ತಿವೆ. 

 ಅರ್ಹ ತರಬೇತುದಾರರ ಕೊರತೆ: 

ಬಸ್ ಅಪಘಾತಗಳು ಕಡಿಮೆ ಆಗಬೇಕೆಂಬುದು ಎಲ್ಲರ ಆಶಯ. ಆದರೆ, ಈ ಅಪಘಾತಗಳು ಇತ್ತೀಚೆಗೆ ಹೆಚ್ಚಾಗುತ್ತಿರುವುದು ಅಧಿಕಾರಿಗಳಿಗಷ್ಟೇ ಅಲ್ಲದೆ ಸಾರ್ವಜನಿಕರನ್ನೂ ಸಮಸ್ಯೆಗೆ ಸಿಲುಕಿಸಿದೆ. ಚಾಲಕರಾಗಿ ಒಂದೆರಡು ವರ್ಷ ಅನುಭವ ಮಾತ್ರ ಇರುವವರನ್ನು ತರಬೇತುದಾರರನ್ನಾಗಿ ನೇಮಿಸಲಾಗಿದೆ. ಅರ್ಹ ತರಬೇತಿದಾರರ ಕೊರತೆಯೇ ದುರ್ಘಟನೆಗಳಿಗೆ ಕಾರಣ ಎಂದು ಬಸ್ ಚಾಲಕರೊಬ್ಬರು ತಿಳಿಸಿದರು.


ಅವಘಡಗಳಿಗೆ ಕಾರಣ ಏನು?

ಅತಿ ವೇಗದಿಂದ ಚಾಲನೆ ಮಾಡಬಾರದು, ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು, ಸಂಚಾರ ಸಂಜ್ಞೆಗಳನ್ನು ಸರಿಯಾಗಿ ಗಮನಿಸಬೇಕು. ಪ್ರಖರ ದೀಪ ಬಳಸಿ ವಾಹನ ಚಾಲನೆ ಮಾಡಬಾರದು, ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು, ಅವೈಜ್ಞಾನಿಕ ರಸ್ತೆ ಉಬ್ಬುಗಳು, ಹದಗೆಟ್ಟ ರಸ್ತೆಗಳು ಸಹ ಅಪಘಾತಗಳಿಗೆ ಕಾರಣವಾಗುತ್ತಿವೆ.


ಸುರಕ್ಷತೆಯಲ್ಲಿ ರಾಜಿ ಇಲ್ಲ:  

ಬಸ್‌ಗಳ ನಿರ್ವಹಣೆ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ನಿತ್ಯ ಚಾಲಕರಿಗೆ ಟ್ರೈನಿಂಗ್, ದೈನಂದಿನ ನಿರ್ವಹಣೆಯ ಜತೆಗೆ 15 ದಿನಗಳಿಗೊಮ್ಮೆ ವಾಹನದ ಪರಿಪೂರ್ಣ ನಿರ್ವಹಣೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಉತ್ತಮ ಸೇವಾನುಭವ, ಪರಿಣತಿ ಹೊಂದಿರುವವರನ್ನೇ ತರಬೇತಿಗೆ ನಿಯೋಜಿಸಲಾಗಿದೆ. ಬಸ್‌ಗಳನ್ನು ನಿತ್ಯ ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತದೆ. ಚಾಲಕರೂ ಕಾಳಜಿ ವಹಿಸುತ್ತಾರೆ. ಹೀಗಾಗಿ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಹೀಗಾಗಿ  ಚಾಲಕರಿಗೆ ಚಾಲನಾ ಟ್ರೈನಿಂಗ್ ನೀಡಲಾಗುತ್ತಿದೆ ಎಂದು ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ತಿಳಿಸಿದರು

ಚಾಲನಾ ತರಬೇತಿ: 

ಕಾಲಕಾಲಕ್ಕೆ ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ. ಸಂಚಾರ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಸಂಸ್ಥೆಯ ಸಿಬ್ಬಂದಿಗೆ ತಡೆಗಟ್ಟುವ ನಿಟ್ಟಿನಲ್ಲಿ ಸುರಕ್ಷಾ ಚಾಲನೆ ಹಾಗೂ ಸಂಚಾರ ನಿಯಮ ಪಾಲನೆ ಕುರಿತು ತರಬೇತಿ ನೀಡಲಾಗುತ್ತಿದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಪೊಲೀಸ್ ಅಧಿಕಾರಿ, ಸಾರಿಗೆ ಇಲಾಖಾ ಅಧಿಕಾರಿ ಹಾಗೂ ಸರ್ಕಾರಿ ವೈದ್ಯರು ಮತ್ತು ಸಂಬಂಧಿಸಿದ ಸಂಪನ್ಮೂಲ ಅಧಿಕಾರಿಗಳು ಕೆಎಸ್‌ಆರ್‌ಟಿಸಿ ಘಟಕಗಳಿಗೆ ಆಹ್ವಾನಿಸಿ ರಸ್ತೆ ಸುರಕ್ಷತಾ ಮಾಹೆಯ ಮಹತ್ವದ ಬಗ್ಗೆ ಹಾಗೂ ಸುರಕ್ಷತಾ ಚಾಲನಾ ಕೌಶಲದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

2360 ವಾಹನಗಳ ತಪಾಸಣೆ: 

ವಿವಿಧೆಡೆ ಸ್ಲೀಪರ್ ಮತ್ತು ಹವಾ ನಿಯಂತ್ರಿತ ಬಸ್ ಅಪಘಾತ ಸಂಭವಿಸಿ ಬೆಂಕಿ ಹೊತ್ತಿಕೊಂಡು ಜೀವ ಹಾನಿಯಾಗಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಾಹನಗಳ ಸುರಕ್ಷತೆ ಕುರಿತು 2,360 ವಾಹನಗಳನ್ನು ತಪಾಸಣೆ ಮಾಡಲಾಗಿದೆ. ಮೈಸೂರು ಗ್ರಾಮಾಂತರ ವಿಭಾಗದಲ್ಲಿ 717, ಮೈಸೂರು ನಗರ ವಿಭಾಗದಲ್ಲಿ 540 ವಾಹನಗಳನ್ನು ಪರಿಶೀಲನೆ ಮಾಡಲಾಗಿದೆ. ಜತೆಗೆ, ಖಾಸಗಿ ಬಸ್‌ಗಳು ಸೇರಿದಂತೆ 1103 ಪ್ರಯಾಣಿಕರ ವಾಹನಗಳನ್ನು ತಪಾಸಣೆ ಮಾಡಲಾಗಿದೆ.
ಬಸ್‌ಗಳಲ್ಲಿ ತುರ್ತು ನಿರ್ಗಮನ ವ್ಯವಸ್ಥೆ, ದೊಡ್ಡ ಗಾಜಿನ ಕಿಟಕಿಗಳನ್ನು ಒಡೆಯಲು ಸುತ್ತಿಗೆಗಳು, ಅಗ್ನಿಶಾಮಕ ವ್ಯವಸ್ಥೆ ಇರುವ ಕುರಿತು ವಾಹನಗಳ ನೋಂದಣಿ, ಅರ್ಹತಾ ಪತ್ರ ನವೀಕರಣ ಸಂದರ್ಭದಲ್ಲಿ ಮತ್ತು ವಾಹನಗಳ ತಪಾಸಣೆ ಸಮಯದಲ್ಲಿ ಪರಿಶೀಲಿಸಲಾಗಿದೆ. ಸರ್ಕಾರಿ ಬಸ್‌ಗಳನ್ನು ಕಾರ್ಯಾಚರಣೆಗೆ ನಿಯೋಜಿಸುವ ಮುನ್ನ ವಾಹನ ಪರಿವೀಕ್ಷಕರು, ಬಸ್‌ಗಳಲ್ಲಿ ಇರುವ ತುರ್ತು ವ್ಯವಸ್ಥೆಗಳ ಕುರಿತು ತಪಾಸಣೆಗೆ ಒಳಪಡಿಸಲಾಗಿದೆ.

ಅಪಘಾತಕ್ಕೆ ಒಳಗಾದ ಸರ್ಕಾರಿ ಬಸ್‌ಗಳ ಸಂಖ್ಯೆ

                       2023 2024 2025
ಮೈಸೂರು ನಗರ ಘಟಕ          30 40 43
ಮೈಸೂರು ಗ್ರಾಮಾಂತರ ಘಟಕ         82 34 78
ಒಟ್ಟು                             112 74 121
ಅಪಘಾತಕ್ಕೆ ಒಳಗಾದ ಖಾಸಗಿ ಬಸ್‌ಗಳ ಸಂಖ್ಯೆ
                             2023 2024 2025
ಮೈಸೂರು ನಗರ ಪೊಲೀಸ್ ವ್ಯಾಪ್ತಿ   5 12 8
ಎಸ್ ಪಿ ವ್ಯಾಪ್ತಿ                              15 12 21
ಒಟ್ಟು                              20 24 29
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net