ಪಠ್ಯದಲ್ಲಿ ಆದಿವಾಸಿಗಳ ಭಾಷೆ ಸೇರಿಸಿ

 ನಗರದಲ್ಲಿ ಆಯೋಜಿಸಿದ್ದ ಜನ ಜಾತೀಯ ಗೌರವ ದಿನ ಹಾಗೂ ಭಾಷೆ, ಸಂಸ್ಕೃತಿ ಮತ್ತು ಜ್ಞಾನ ಪದ್ಧತಿಗಳು ಕುರಿತಾದ ರಾಷ್ಟ್ರೀಯ ವಿಚಾರಗೋಷ್ಠಿಯನ್ನು  ಸಿಐಐಎಲ್ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್ ಉದ್ಘಾಟಿಸಿದರು. ಡಾ.ಸಿ.ಮಾದೇಗೌಡ,  ಪ್ರೊ.ಪಿ.ಆರ್.ಧರ್ಮೇಶ್ ಫರ್ನಾಂಡೀಸ್,  ಡಾ.ಸುಜೋಯ್ ಸರ್ಕಾರ್ ಇನ್ನಿತರರಿದ್ದರು.
ನಗರದಲ್ಲಿ ಆಯೋಜಿಸಿದ್ದ ಜನ ಜಾತೀಯ ಗೌರವ ದಿನ ಹಾಗೂ ಭಾಷೆ, ಸಂಸ್ಕೃತಿ ಮತ್ತು ಜ್ಞಾನ ಪದ್ಧತಿಗಳು ಕುರಿತಾದ ರಾಷ್ಟ್ರೀಯ ವಿಚಾರಗೋಷ್ಠಿಯನ್ನು ಸಿಐಐಎಲ್ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್ ಉದ್ಘಾಟಿಸಿದರು. ಡಾ.ಸಿ.ಮಾದೇಗೌಡ, ಪ್ರೊ.ಪಿ.ಆರ್.ಧರ್ಮೇಶ್ ಫರ್ನಾಂಡೀಸ್, ಡಾ.ಸುಜೋಯ್ ಸರ್ಕಾರ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕನಿಷ್ಠ 1ರಿಂದ 5ನೇ ತರಗತಿವರೆಗೆ ಆದಿವಾಸಿಗಳ ಪಠ್ಯ ಅಳವಡಿಸಿ
  • ಕಳೆದುಕೊಳ್ಳುತ್ತಿದೆ ಆದಿವಾಸಿ ಸಂಸ್ಕೃತಿ, ಆಚಾರ-ವಿಚಾರಗಳು
  • ಪರಿಸರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆದಿವಾಸಿಗಳ ಜ್ಞಾನ ಬಳಕೆ ಮಾಡಿಕೊಳ್ಳಿ
ಮೈಸೂರು: ಆದಿವಾಸಿಗಳ ಸಾಂಪ್ರದಾಯಿಕ ಭಾಷೆ ಮರೆಯಾಗುತ್ತಿದೆ. ಆದ್ದರಿಂದ ರಾಜ್ಯದ ಶಾಲಾ ಶಿಕ್ಷಣದಲ್ಲಿ ಆದಿವಾಸಿಗಳ ಭಾಷೆ ಬಗ್ಗೆ ಪಠ್ಯದಲ್ಲಿ ಸೇರಿಸಬೇಕು ಎಂದು ಬಿಳಿಗಿರಿರಂಗನ ಬೆಟ್ಟದ ಏಟ್ರಿ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಡಾ.ಸಿ.ಮಾದೇಗೌಡ ಹೇಳಿದರು.
ನಗರದ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥಾನ(ಸಿಐಐಎಲ್)ದಲ್ಲಿ ಗುರುವಾರ ಆಯೋಜಿಸಿದ್ದ ಜನ ಜಾತೀಯ ಗೌರವ ದಿನ ಹಾಗೂ ಭಾಷೆ, ಸಂಸ್ಕೃತಿ ಮತ್ತು ಜ್ಞಾನ ಪದ್ಧತಿಗಳು ಕುರಿತ ರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಆದಿವಾಸಿಗಳ ಭಾಷೆ, ಸಂಸ್ಕೃತಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ. ಆದರೆ ಎಲ್ಲರ ಧ್ಯೇಯ ಅರಣ್ಯ, ಪರಿಸರ ಸಂರಕ್ಷಣೆಯಾಗಿದೆ. ಈ ಪರಂಪರೆ ಮುಂದಿನ ಪೀಳಿಗೆಗೆ ತಲುಪಲು ಕನಿಷ್ಠ 1ರಿಂದ 5ನೇ ತರಗತಿವರೆಗೆ ಆದಿವಾಸಿಗಳ ಪಠ್ಯವನ್ನು ಅಳವಡಿಸಬೇಕು. ಆದಿವಾಸಿಗಳ ಭಾಷೆಗೆ ಲಿಪಿ ಇಲ್ಲ. ಕನ್ನಡ ಭಾಷೆಯಲ್ಲೇ ಪಠ್ಯ ರಚಿಸಿ ಅಳವಡಿಸುವ ಕೆಲಸ ಮಾಡಬೇಕಿದ್ದು, ಸಿಐಐಎಲ್ ಭಾಷಾ ವಿದ್ವಾಂಸರು, ಸಂಶೋಧಕರು ಗಮನಹರಿಸಬೇಕು ಎಂದರು.
ಆದಿವಾಸಿಗಳ ಮಕ್ಕಳು ಔಪಚಾರಿಕ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಕಾಡಿನ ವಾತಾವರಣ ಬಿಟ್ಟು, ನಗರ ಪ್ರದೇಶದಲ್ಲಿ ಕಲಿಯಬೇಕಾಗಿರುವುದರಿಂದ ತಮ್ಮ ಭಾಷೆ ಮರೆತು ಬಿಡುತ್ತಿದ್ದಾರೆ. ತಮ್ಮ ಭಾಷೆ ಮಾತನಾಡಿದರೆ ಎಲ್ಲಿ ತಪ್ಪು ತಿಳಿದುಕೊಳ್ಳುತ್ತಾರೋ ಎಂಬ ಕೀಳರಿಮೆಯಿಂದ ಮಾತನಾಡಲ್ಲ. ಇದರ ಫಲವಾಗಿ ಸಾಂಪ್ರದಾಯಿಕ ಭಾಷೆ ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಆಧುನಿಕತೆ, ಅಭಿವೃದ್ಧಿ ಭರಾಟೆಯಲ್ಲಿ ಆದಿವಾಸಿ ಸಂಸ್ಕೃತಿ, ಆಚಾರ-ವಿಚಾರಗಳು ಕಳೆದುಹೋಗುತ್ತಿದೆ. ಹುಲಿ ಯೋಜನೆ, ಹವಾಮಾನ ಬದಲಾವಣೆ, ಮಳೆ ಋತುವಿನ ಪರಿವರ್ತನೆ ಹೀಗೆ ಅನೇಕ ಬದಲಾವಣೆ, ಆಧುನಿಕತೆಯಿಂದ ಆದಿವಾಸಿಗಳು ಅನೇಕ ಸವಾಲು, ತೊಂದರೆ ಅನುಭವಿಸುತ್ತಿದ್ದಾರೆ. ಅರಣ್ಯ ಪ್ರವಾಸೋದ್ಯಮ ಹೆಸರಿನಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಾಗಿ ಅರಣ್ಯ ಮೇಲೆ, ಆದಿವಾಸಿಗಳ ಮೇಲೆ ಒತ್ತಡ ಹೆಚ್ಚಾಗಿದೆ. ಈ ಎಲ್ಲದರ ಕುರಿತು ಸಿಐಐಎಲ್ ವತಿಯಿಂದ ಅಧ್ಯಯನ ಮಾಡಬೇಕು ಎಂದು ಕೋರಿದರು.
ಪರಿಸರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆದಿವಾಸಿಗಳ ಜ್ಞಾನ ಬಳಕೆ ಮಾಡಿಕೊಳ್ಳಬೇಕು. ಆದಿವಾಸಿಗಳು ಸಾವಿರಾರು ವರ್ಷಗಳಿಂದ ಕಾಡಿನಲ್ಲೇ ವಾಸುತ್ತಿದ್ದಾರೆ. ಅರಣ್ಯದೊಂದಿಗೆ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಅವರಿಗೆ ಅರಣ್ಯ, ಪರಿಸರ ಕುರಿತು ಆಳವಾದ ಜ್ಞಾನ, ಸಂಪೂರ್ಣ ಮಾಹಿತಿ ಇದೆ. ದತ್ತಾಂಶಗಳು ಗೊತ್ತಿರುತ್ತದೆ. ಸರ್ಕಾರಗಳು ಯೋಜನೆ, ಕಾಯ್ದೆ ಮಾಡುವಾಗ ಕೆಲ ಸರ್ಕಾರೇತರ ಸಂಸ್ಥೆಗಳ ವರದಿಗಳ ಮೇಲೆ ಅವಲಂಬಿತರಾಗದೆ, ನೆಲದ ಮಕ್ಕಳ ದನಿಯನ್ನು ಆಲಿಸಬೇಕು. ಸ್ಥಳೀಯತೆ ಬಗ್ಗೆ ಅವರಿಗೆ ಇರುವ ಅರಿವು, ಜ್ಞಾನ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಅರಣ್ಯದ ವಿಚಾರದಲ್ಲಿ ಕಾನೂನು, ಕಾಯ್ದೆಗಳನ್ನು ರೂಪಿಸಿದಾಗ ಮೊದಲು ಸಂತ್ರಸ್ತರಾಗುವುದು ಸ್ಥಳೀಯ ಆದಿವಾಸಿಗಳೇ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರಿಂದ ಅನೇಕ ತೊಂದರೆಗಳಿದ್ದವು. ಈಗಲೂ ಸಮಸ್ಯೆಗಳು ತಪ್ಪಿಲ್ಲ. ಹುಲಿ ಯೋಜನೆ, ಅಭಯಾರಣ್ಯ, ಸಂರಕ್ಷಿತ ಪ್ರದೇಶ, ಕಾಡಿನ ಅಭಿವೃದ್ಧಿ ಹೆಸರಿನಲ್ಲಿ ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಪರಂಪರಾನುಗತವಾಗಿ ಬಂದಿರುವ ಕಿರು ಅರಣ್ಯ ಉತ್ಪನ್ನ ಸಂಗ್ರಹಿಸಲು ಅವಕಾಶವನ್ನೂ ಕೊಡುವುದಿಲ್ಲ. ಸರಿಯಾಗಿ ಪುನರ್ವಸತಿ ಕಲ್ಪಿಸಿಕೊಡುವುದಿಲ್ಲ. ಮೂಲಸೌಕರ್ಯ ಒದಗಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ಸುಮಾರು 58 ಹುಲಿ ಸಂರಕ್ಷಿತ ಅರಣ್ಯ ಧಾಮಗಳು ಇವೆ. ಇವುಗಳನ್ನು ರಚನೆ ಮಾಡುವ ಸಲುವಾಗಿ 65 ಸಾವಿರ ಆದಿವಾಸಿ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿದೆ. ಸರ್ಕಾರಗಳು, ಪರಿಸರ ತಜ್ಞರು ಎನಿಸಿಕೊಂಡಿರುವವರೂ ವನ್ಯಪ್ರಾಣಿಗಳು, ಕಾಡಿನ ಮರ ಗಮನಿಸುತ್ತಾರೆ.
ತಲೆಮಾರುಗಳಿಂದ ಕಾಡಿನಲ್ಲೇ ವಾಸ ಮಾಡಿಕೊಂಡು ಬಂದು, ಈಗ ಅನಿವಾರ್ಯವಾಗಿ ಹೊರಗೆ ಬಂದು ಜೀವನ ನಡೆಸಬೇಕಾಗಿರುವ ಆದಿವಾಸಿ ಕುಟುಂಬಗಳ ಸ್ಥಿತಿಯನ್ನು ಗಮನಿಸುವವರು ಯಾರು? ಬಿಳಿಗಿರಿರಂಗನ ಬೆಟ್ಟ ಪ್ರದೇಶವನ್ನು 2011ರಲ್ಲಿ ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಲಾಯಿತು. ಆಗ 25 ಹುಲಿಗಳು ಇದ್ದವು. ಪ್ರಸ್ತುತ 68 ಹುಲಿಗಳಿವೆ. ಆದರೆ ಇದಕ್ಕಾಗಿ 12 ಸಾವಿರ ಜನ ಆದಿವಾಸಿಗಳು ಸಂತ್ರಸ್ತರಾಗಿದ್ದಾರೆ. ಇವರ ಬಗ್ಗೆ ಕಳಕಳಿಯನ್ನು ವ್ಯಕ್ತಪಡಿಸುವವರು ಯಾರು? ಎಂದು ಪ್ರಶ್ನಿಸಿದರು.

ಅರಣ್ಯವಾಸಿಗಳು ಪರಿಸರಕ್ಕೆ ಮಾರಕವಾಗಿಲ್ಲ

ಆದಿವಾಸಿಗಳು ಎಂದೂ ಪರಿಸರಕ್ಕೆ ಮಾರಕವಾಗಿಲ್ಲ. ಅವರೂ ಯಾವಾಗಲೂ ಪರಿಸರ ಸಂರಕ್ಷರು. ಶತಮಾನಗಳಿಂದ ಅರಣ್ಯ, ವನ್ಯಜೀವಿಗಳ ಜತೆ ಸಹಜೀವನ ನಡೆಸುತ್ತಾ ಬಂದಿದ್ದಾರೆ. ಅವರಿಗೆ ಹುಲಿಯ ವರ್ತನೆ ಬಗ್ಗೆ ಅರಿವು ಇದೆ. ಆನೆಯ ಗುಣ ಸ್ವಭಾವಗಳು ಗೊತ್ತಿದೆ. ಎಲ್ಲ ವನ್ಯಜೀವಿಗಳ ಬಗ್ಗೆ ಆಳವಾಗಿ ತಿಳಿದುಕೊಂಡಿರುತ್ತಾರೆ. ಇದು ಅವರಿಗೆ ವಂಶವಾಹಿಯಾಗಿ ಬಂದಿರುವ ಬಳುವಳಿಯಾಗಿದೆ. ಕಾಡಿನ ಪೂರ್ಣ ಚಿತ್ರಣ ಅವರ ತಲೆಯಲ್ಲಿ ಅಚ್ಚು ಒತ್ತಿರುತ್ತದೆ. ಹೀಗಾಗಿ ಅವರು ಪ್ರಕೃತಿಯೊಂದಿಗೆ ಬದುಕಲು ಸಾಧ್ಯವಾಗಿದೆ ಎಂದರು
ಪ್ರಕೃತಿಯನ್ನೇ ದೇವರು ಎಂದು ಪೂಜಿಸುತ್ತಾರೆ.
ನಗರ ಪ್ರದೇಶದವರಂತೆ ಬೆಳೆ ಬಾಳುವ ಮರಗಳನ್ನು ಬಳಸಿಕೊಂಡು ಐಷಾರಾಮಿ ಮನೆಗಳಲ್ಲಿ ಆದಿವಾಸಿಗಳು ವಾಸ ಮಾಡಲ್ಲ. ಅಗತ್ಯವಿರುವಷ್ಟು ಜಾಗದಲ್ಲಿ ಪ್ರಕೃತಿಯಲ್ಲಿ ದೊರಕುವ ವಸ್ತು ಬಳಸಿಕೊಂಡು ಮನೆ ನಿರ್ಮಿಸಿಕೊಂಡು ಜೀವನ ಮಾಡುತ್ತಾರೆ. ಇಂತಹ ಸಂಸ್ಕೃತಿ ಇರುವ ಆದಿವಾಸಿ ಸಮುದಾಯಕ್ಕೆ ದೊರೆಯಬೇಕಾದ ಮಾನ್ಯತೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಿಐಐಎಲ್ ಉಪ ನಿರ್ದೇಶಕ ಪ್ರೊ.ಪಿ.ಆರ್.ಧರ್ಮೇಶ್ ಫರ್ನಾಂಡೀಸ್, ಕಾರ್ಯಕ್ರಮ ಸಂಯೋಜಕ ಡಾ. ಸುಜೋಯ್ ಸರ್ಕಾರ್ ಇದ್ದರು.

ಸೋಲಿಗ ವಿಶ್ವಕೋಶ ಸಿದ್ಧ

ಸೋಲಿಗ ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿದ ವಿಶ್ವಕೋಶ, ಕಲಿಕಾ ಸಾಮಗ್ರಿ ಸಿದ್ಧಪಡಿಸಲಾಗಿದೆ. ಜತೆಗೆ, ದೃಶ್ಯ ದಾಖಲೀಕರಣದೊಂದಿಗೆ ಅವರ ಜ್ಞಾನ ಸಂರಕ್ಷಣೆ ಮಾಡಲಾಗುತ್ತಿದೆ ಎಂದು ಸಿಐಐಎಲ್ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್ ತಿಳಿಸಿದರು.
ದೇಶದ 120 ಆದಿವಾಸಿ ಭಾಷೆಗಳ ಕುರಿತು ಅಧ್ಯಯನ ಮಾಡಲಾಗುತ್ತಿದೆ. ಇವುಗಳು ಯಾವೂ ಬೇರೆಯಲ್ಲ. ಇವುಗಳು ರಾಷ್ಟ್ರೀಯ ಪಾರಂಪರಿಕ ಭಾಷೆಗಳು. ಎಲ್ಲ ಮಾತೃಭಾಷೆಗಳು ಉಳಿಯಬೇಕಿದೆ. ಇವುಗಳಲ್ಲಿ ಭಾರತೀಯ ಜ್ಞಾನ ಅಡಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net