ರೈತರ ಬದುಕು ಹಸನಾಗಿಸುವ ಯೋಜನೆ ಕೈಗೊಳ್ಳಿ: ಶಾಸಕ ಜಿ.ಟಿ.ದೇವೇಗೌಡ ಸಲಹೆ
ನಗರದಲ್ಲಿ ಆಯೋಜಿಸಿದ್ದ ಮೈಸೂರು ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮಕ್ಕೆ ಜಿ.ಟಿ.ದೇವೇಗೌಡ ಚಾಲನೆ ನೀಡಿದರು. ಎಚ್.ವಿ.ರಾಜೀವ್, ಬಿ.ಎನ್.ಸದಾನಂದ, ಸಿದ್ದೇಗೌಡ, ಕೆ.ಉಮಾಶಂಕರ್, ಎ.ಟಿ.ಸೋಮಶೇಖರ್, ಎಚ್.ಎಸ್.ಪ್ರಶಾಂತ್ ತಾತಾಚಾರ್, ಎ.ಶಿವಗಾಮಿ, ಮಲ್ಲಣ್ಣ, ಜಿ.ವಿ.ಗುರುರಾಜ್, ಡಾ.ಶಂಕರ್ ಬಲ್ಲೇನಹಳ್ಳಿ, ಬಿ.ಜಯಕರ ಶೆಟ್ಟಿ ಇಂದ್ರಾಳಿ, ಕೆ.ಎಸ್.ನವೀನ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪತ್ತಿನ ಸಹಕಾರ ಸಂಘಗಳು ಎಂದರೆ ಈಗ ಸಾಲ ನೀಡಿ, ವಸೂಲಿಗೆ ಸೀಮಿತವಾಗಿವೆ
ಸಹಕಾರ ಸಂಘಗಳಿಗೆ ಯಾವುದೇ ವ್ಯಾಪ್ತಿ, ಮಿತಿ ಇಲ್ಲದೆ ರೈತಪರ ಕಾರ್ಯಕ್ರಮ ಹಮ್ಮಿಕೊಳ್ಳಬಹುದು
ಮೈಸೂರು:ರೈತರ ಬದುಕು ಹಸನಾಗಿಸುವ ಯೋಜನೆಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಮ್ಮಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಶಾಸಕ ಜಿ.ಟಿ.ದೇವೇಗೌಡ, ಸಂಘಗಳ ಸಿಇಒಗಳಿಗೆ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಮೈಸೂರು ಜಿಲ್ಲಾ ಸಹಕಾರ ಒಕ್ಕೂಟ, ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಮೈಸೂರು ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪತ್ತಿನ ಸಹಕಾರ ಸಂಘಗಳು ಎಂದರೆ ಈಗ 50 ಜನರಿಗೆ ಸಾಲ ನೀಡುವುದು, ಸಾಲ ವಸೂಲಿ ಮಾಡುವುದು, ನವೀಕರಣ ಮಾಡುವುದಕ್ಕೆ ಸೀಮಿತವಾಗಿದೆ. ಆದರೆ ಸಹಕಾರ ಸಂಘಗಳಿಗೆ ಯಾವುದೇ ವ್ಯಾಪ್ತಿ, ಮಿತಿ ಇಲ್ಲ. ರೈತರ ಬದುಕು ಅಸನಾಗಿಸುವ ಎಲ್ಲ ಯೋಜನೆಗಳನ್ನು ಕೈಗೊಳ್ಳಲು ವಿಫುಲ ಅವಕಾಶ ಇರುವ ಕ್ಷೇತ್ರವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಶಿರಸಿಯ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಜನರಿಗೆ ಅನುಕೂಲವಾಗುವ ಎಲ್ಲ ಕ್ಷೇತ್ರಗಳಲ್ಲಿಯೂ ಸಹಾಯ ಮಾಡುತ್ತಾ ಬಂದು ಉತ್ತಮ ಸಹಕಾರ ಸಂಘ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂದು ಗುಂಡುಪಿನ್ನಿನಿಂದ ಹಿಡಿದು ಮದುವೆಗೆ ಬೇಕಾದ ಪೆಂಡಾಲ್ ವರೆಗೂ ಜನರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದೆ. ಇದರಿಂದ ಜನರಿಗೆ ಒಂದೇ ಸೂರಿನಡಿ ತಮಗೆ ಬೇಕಾದ ವಸ್ತುಗಳು ದೊರೆಯುವ ಜತೆಗೆ ಸಂಘಕ್ಕೂ ಆದಾಯ ಬರುತ್ತಿದೆ ಎಂದರು.
ಇಂತಹ ಪ್ರಯತ್ನವನ್ನು ನಮ್ಮ ಜಿಲ್ಲೆಯ ಒಂದೇ ಒಂದು ಪತ್ತಿನ ಸಹಕಾರ ಸಂಘ ಮಾಡದೆ ಇರುವುದು ಬೇಸರದ ಸಂಗತಿ. ಒಂದು ಸಂಘವನ್ನು ಅಭಿವೃದ್ಧಿಯತ್ತ ಕೊಂಡೋಯ್ಯುವಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾತ್ರ ಬಹುಮುಖ್ಯವಾಗಿದೆ. ಹಿಂದೆ ಗ್ರಾಮೀಣ ಜನರ ಆರ್ಥಿಕ ಬಲವರ್ಧನೆಗೆ ಇದ್ದ ಗುಡಿ ಕೈಗಾರಿಕೆಗಳು ಕಾಣೆಯಾಗುತ್ತಿದೆ. ಇಂತಹ ಉದ್ಯಮವನ್ನು ಗುರುತಿಸಿ ಹಣಕಾಸು ನೆರವು ನೀಡುವ ಮೂಲಕ ಜನರ ಆರ್ಥಿಕತೆಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದರು.
ಪತ್ತಿನ ಸಹಕಾರ ಸಂಘಗಳಲ್ಲಿ ಸರಿಯಾಗಿ ಜನರಿಗೆ ಸಾಲಸೌಲಭ್ಯ ದೊರೆಯದೆ ಇರುವುದರಿಂದ ಖಾಸಗಿ ಬ್ಯಾಂಕ್, ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಹೆಚ್ಚಿನ ಬಡ್ಡಿಗೆ ಸಾಲ ಪಡೆಯುವಂತಾಗಿದೆ. ಸರಿಯಾಗ ಮಳೆ, ಬೆಳೆ ಅಗದೆ, ಬೆಳೆಗೆ ಸರಿಯಾದ ಬೆಲೆಯೂ ಸಿಗದೆ ರೈತ ನರಳಾಟ ನಡೆಸುತ್ತಿದ್ದಾನೆ. ಆದ್ದರಿಂದ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಎಲ್ಲ ನೆರವು ನೀಡಬೇಕು. ಪ್ರೀತಿ, ವಿಶ್ವಾಸದಿಂದ ಸಂಘವನ್ನು ರಾಜಕೀಯ ಬೆರೆಸದೆ ಕಟ್ಟಿ ಬೆಳಸಬೇಕು ಎಂದು ಸಲಹೆ ನೀಡಿದರು.
ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಎಚ್.ವಿ.ರಾಜೀವ್ ಮಾತನಾಡಿ, ಪತ್ತಿನ ಸಹಕಾರ ಸಂಘಗಳು ರೈತರಿಗೆ ಆರ್ಥಿಕ ಬಲ ನೀಡುವ ಮೂಲಕ ಸ್ವಾವಲಂಭಿಯಾಗಿ ಬದುಕುವಂತೆ ಮಾಡಬೇಕು. ಇದರ ಮೂಲಕ ಗ್ರಾಮೀಣ ಜನರ ಸಬಲೀಕರಣಕ್ಕೆ ಶ್ರಮಿಸಬೇಕು ಎಂದು ತಿಳಿಸಿದರು.
ರೈತ ಇಂದು ದಿನನಿತ್ಯ ಆತಂಕದಲ್ಲಿಯೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದಿನ ವಾತಾವರಣದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಹೆಚ್ಚಾಗುತ್ತಿದೆ. ಒಂದು ವೇಳೆ ಉತ್ತಮ ಬೆಳೆ ಬೆಳೆದರೂ ಸೂಕ್ತ ಬೆಲೆ ಸಿಗದೆ ಜೀವನವೆಲ್ಲಾ ಕಷ್ಟದಲ್ಲಿಯೇ ಬದುಕು ಸವೆಸುವೆಂತಾಗಿದೆ. ಇಂತಹ ರೈತರ ಬದುಕಿಗೆ ಪತ್ತಿನ ಸಹಕಾರ ಸಂಘಗಳು ಆಧಾರವಾಗಿ ನಿಲ್ಲಬೇಕಿದೆ. ಬೆನ್ನುಲೆಬಾಗಿ ನಿಂತರೇ ದೇಶದ ಆರ್ಥಿಕತೆಯೂ ಸುಭದ್ರವಾಗುತ್ತದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ದೇಶದ ಸುಭದ್ರ ಆರ್ಥಿಕತೆಯ ಅಡಿಪಾಯವಾಗಿರುವ ಸಹಕಾರ ಸಂಘಗಳಿಗಾಗಿಯೇ ಸರ್ಕಾರ ಪ್ರತ್ಯೇಕ ಸಚಿವಾಲಯವನ್ನು ಕೇಂದ್ರಮಟ್ಟದಲ್ಲಿಯೂ ರಚಿಸಲಾಗಿದೆ. ಇದರಿಂದ ಸಹಕಾರ ಕ್ಷೇತ್ರವನ್ನು ಸುಭದ್ರಗೊಳಿಸಲು ಹಲವಾರು ಕಾಯಿದೆ, ಕೆಲ ಕಾಯಿದೆಗಳಿಗೆ ತಿದ್ದುಪಡಿಯನ್ನು ತರಲಾಗಿದೆ. ಇವುಗಳ ಬಗ್ಗೆ ಸರಿಯಾಗಿ ಮಾಹಿತಿ ಪಡೆದು ಅದರಂತೆ ಕಾರ್ಯನಿರ್ವಹಿಸಬೇಕು. ಅದಕ್ಕೆ ಇಂತಹ ತರಬೇತಿಗಳು ಅಗತ್ಯ ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್.ನವೀನ್ ಮಾತನಾಡಿ, ಪತ್ತಿನ ಸಹಕಾರ ಸಂಘಗಳನ್ನು ಡಿಜಿಟಲೀಕರಣ ಮಾಡುವ ಕಾರ್ಯ ಮಾಡಲಾಗುತ್ತಿದೆ. ಈ ಮೂಲಕ ಎಲ್ಲ ಸಹಕಾರ ಸಂಘಗಳನ್ನು ಒಂದೇ ಜಾಲದಲ್ಲಿ ತರಲಾಗುವುದು. ಅಲ್ಲದೇ ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಗ್ರಾಮ ಒನ್ ಮಾದರಿಯಂತೆ ಪತ್ತಿನ ಸಹಕಾರ ಸಂಘಗಳಲ್ಲಿಯೂ ಜನರಿಗೆ ನೆರವಾಗುವಂತೆ ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಬಿ.ಎನ್.ಸದಾನಂದ, ನಿರ್ದೇಶಕರಾದ ಸಿದ್ದೇಗೌಡ, ಕೆ.ಉಮಾಶಂಕರ್, ಎ.ಟಿ.ಸೋಮಶೇಖರ್, ಎಚ್.ಎಸ್.ಪ್ರಶಾಂತ್ ತಾತಾಚಾರ್, ಎ.ಶಿವಗಾಮಿ, ಮಲ್ಲಣ್ಣ, ಜಿ.ವಿ.ಗುರುರಾಜ್, ಎಂಸಿಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಶಂಕರ್ ಬಲ್ಲೇನಹಳ್ಳಿ , ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಸಿಇಒ ಹಾಗೂ ಪ್ರಾಂಶುಪಾಲ ಡಾ.ಎಂ.ವಿಶ್ವೇಶ್ವರಯ್ಯ ಇತರರು ಇದ್ದರು.