ವಿದ್ಯಾರ್ಥಿ ದಿಸೆಯಲ್ಲಿ ಮೈಮರೆತರೆ ಭವಿಷ್ಯದಲ್ಲಿ ಸೋಲು ಕಟ್ಟಿಟ್ಟ ಬುತ್ತಿ:ಡಾ.ಶ್ವೇತಾ ಮಡಪ್ಪಾಡಿ

ಮೈಸೂರು ತಾಲೂಕು ದೇವಲಾಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಶ್ವೇತಾ ಮಡಪ್ಪಾಡಿ, ಮಹದೇವಸ್ವಾಮಿ. ಪ್ರೊ. ಶಿವಾನಂದ,ದೇವಿಕಾ ಇತರರು ಇದ್ದರು.
ಮೈಸೂರು ತಾಲೂಕು ದೇವಲಾಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಶ್ವೇತಾ ಮಡಪ್ಪಾಡಿ, ಮಹದೇವಸ್ವಾಮಿ. ಪ್ರೊ. ಶಿವಾನಂದ,ದೇವಿಕಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿ ಜೀವನದಲ್ಲಿ ಸಾಧ್ಯವಾದಷ್ಟು ಜ್ಞಾನವನ್ನು ನಮ್ಮದಾಗಿಸಿಕೊಳ್ಳಬೇಕು
  • ಕಾಲಹರಣ ಮಾಡದೆ ಕಲಿಕೆ ನಡೆಯಬೇಕಾದದ್ದೇ ವಿದ್ಯಾರ್ಥಿ ಬದುಕಿನಲ್ಲಿ
ಮೈಸೂರು:ವಿದ್ಯೆ ಕಲಿಯುವಲ್ಲಿ ವಿದ್ಯಾರ್ಥಿಗಳು ಮೈಮರೆತರೆ ಭವಿಷ್ಯದಲ್ಲಿ ಸೋಲಿನೊಂದಿಗೆ ಹೋರಾಡುತ್ತಲೇ ಬದುಕಬೇಕಾಗುತ್ತದೆ ಎಂದು ಧ್ವನಿ ಫೌಂಡೇಷನ್ ಮುಖ್ಯಸ್ಥೆ ಡಾ.ಶ್ವೇತಾ ಮಡಪ್ಪಾಡಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮೈಸೂರು ತಾಲೂಕು ದೇವಲಾಪುರದ ಜೆಎಸ್‌ಎಸ್ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಹಾಗೂ ಕ್ರೀಡಾ ವೇದಿಕೆ ಉದ್ಛಾಟಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಸಾಧ್ಯವಾದಷ್ಟು ಜ್ಞಾನವನ್ನು ನಮ್ಮದಾಗಿಸಿಕೊಳ್ಳಬೇಕು. ಕಾಲಹರಣ ಮಾಡದೆ ಕಲಿಕೆ ನಡೆಯಬೇಕಾದದ್ದೇ ವಿದ್ಯಾರ್ಥಿ ಬದುಕಿನಲ್ಲಿ. ಒಂದು ವೇಳೆ ಇಲ್ಲಿ ಮೈಮರೆತರೆ ಭವಿಷ್ಯದಲ್ಲಿ ಸೋಲಿನೊಂದಿಗೆ ಹೋರಾಡುತ್ತಲೇ ಬದುಕಬೇಕಾಗುತ್ತದೆ ಎಂದರು.
ಹಾಗಾಗಿ ವಿದ್ಯಾರ್ಥಿ ಬದುಕನ್ನು ವಿದ್ಯಾರ್ಜನೆಗಾಗಿ ಮಾತ್ರ ಮೀಸಲಿಡಬೇಕು. ಓದಿನ ಜತೆಗೆ ಸಂಗೀತ, ನೃತ್ಯ, ಸಾಹಿತ್ಯದ ಒಡನಾಟ ಇದ್ದಲ್ಲಿ ಬದುಕು ಭಿನ್ನ ಬಗೆಯ ಹೊರಳುವಿಕೆಯ ಕಡೆಗೆ ತೆರೆದುಕೊಳ್ಳುತ್ತದೆ. ಬದುಕನ್ನು ಸಮಾಜಮುಖಿಯಾಗಿ ಮುನ್ನುಗ್ಗಲು ಶಕ್ತಿ ನೀಡುತ್ತವೆ ಎಂದು ಹೇಳಿದರು.
ಯುವ ಸಮುದಾಯ ಈ ನಾಡಿನ ಶಕ್ತಿ. ಪ್ರಸ್ತುತದ ರಾಜಕೀಯ ಅಸ್ಥಿರತೆಯೊಳಗೆ ಯುವ ಸಮುದಾಯ ಹಲವು ಬಗೆಯ ಸವಾಲುಗಳನ್ನು ಎದುರಿಸುತ್ತಿದೆ. ಸರಿಯಾದ ಉದ್ಯೋಗದ ಅಭಾವ, ರಾಜಕೀಯ ಆಮಿಷ, ಸಾಮಾಜಿಕವಾಗಿ ಮುನ್ನಡೆಯುವುದಕ್ಕೆ ಬೇಕಾಗಿರುವ ಸರಿಯಾದ ಮಾರ್ಗದರ್ಶನಗಳ ಕೊರತೆಯಿಂದ ಯುವ ಸಮುದಾಯ ಹಲವು ಬಗೆಯ ಆತಂಕಗಳಿಗೆ ಒಳಗಾಗಿದೆ ಎಂದರು.
ಯುವಕರಿಗೆ ಹೊಸ ಭರವಸೆ ಹಾಗೂ ಸುಸ್ಥಿರ ಬದುಕಿಗೆ ಬೇಕಾದ ತಳಹದಿಯನ್ನು ಹಾಕಿಕೊಡದಿದ್ದರೆ ಸಾಮಾಜಿಕ ಅರಾಜಕತೆಯನ್ನು ಈ ದೇಶ ಎದುರಿಸಬೇಕಾಗಿ ಬರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ನಡುವೆ ವಿದ್ಯಾರ್ಥಿಗಳು ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕಿದೆ ಎಂದು ತಿಳಿಸಿದರು.
ಅಂಕಗಳೇ ಗಳಿಸಬೇಕು, ಎಲ್ಲದರಲ್ಲೂ ರ‌್ಯಾಂಕ್ ಬರಬೇಕೆಂಬುದು ಕೊನೆಯಲ್ಲ. ರ‌್ಯಾಂಕ್ ಬರದಿದ್ದರೂ ಬದುಕು ಚೆಂದವಾಗಿಸಿಕೊಳ್ಳುವುದನ್ನು ಕಲಿಯಬೇಕು. ನಮ್ಮನ್ನು ನಾವು ಮುಖ್ಯರನ್ನಾಗಿಸಿಕೊಳ್ಳುವುದನ್ನು ಕಲಿಯಬೇಕು ಎಂದರು.
ಹಳ್ಳಿ ವಿದ್ಯಾರ್ಥಿಗಳು ಆರ್ಥಿಕ ಒತ್ತಡದಿಂದಾಗಿ ಹೈಸ್ಕೂಲ್, ಪಿಯುಸಿ ಆದ ತಕ್ಷಣ ವಿದ್ಯಾಭ್ಯಾಸ ಕಡಿತಗೊಳಿಸುತ್ತಿರುವ ಕುರಿತು ಮಾಹಿತಿ ತಿಳಿದಿದೆ. ವಿದ್ಯೆಯಿದ್ದರೆ ಧೈರ್ಯವಿರುತ್ತದೆ. ಎಲ್ಲರೂ ವಿದ್ಯೆಯ ಮಹತ್ವ ಅರಿತು ನಡೆಯಬೇಕಾಗಿದೆ ಎಂದರು.
ಪ್ರಾಧ್ಯಾಪಕ ಮಹದೇವಸ್ವಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಾಂಶುಪಾಲ ಪ್ರೊ.ಶಿವಾನಂದ ಅಧ್ಯಕ್ಷತೆ ವಹಿಸಿದರು. ದೇವಿಕಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net