ಬುಡಕಟ್ಟು ಭಾಷೆ ನಶಿಸಿದರೆ ಸಂಸ್ಕೃತಿಗೆ ಪೆಟ್ಟು:ಸಚಿವ ಟಿ.ರಘುಮೂರ್ತಿ ಕಳವಳ

 ಬುಡಕಟ್ಟು ಭಾಷೆಗಳು ಮತ್ತು ವಸ್ತು ಸಂಗ್ರಾಲಯಗಳ ಕುರಿತ ರಾಷ್ಟ್ರೀಯ ಸಮ್ಮೇಳನ
ಬುಡಕಟ್ಟು ಭಾಷೆಗಳು ಮತ್ತು ವಸ್ತು ಸಂಗ್ರಾಲಯಗಳ ಕುರಿತ ರಾಷ್ಟ್ರೀಯ ಸಮ್ಮೇಳನ
Published on

ಪ್ರಮುಖ ಮುಖ್ಯಾಂಶಗಳು

  • ಆಧುನೀಕತೆ, ತಂತ್ರಜ್ಞಾನಕ್ಕೆ ಸಿಲುಕಿ ಬುಡಕಟ್ಟು ಭಾಷೆ, ಸಂಸ್ಕೃತಿ, ಪರಂಪರೆಯೂ ಸಂಕಷ್ಟಕ್ಕೆ ಸಿಲುಕಿದೆ
  • ಪ್ರತಿಯೊಂದು ಬುಡಕಟ್ಟು ಭಾಷೆಯ ಸ್ಥಿತಿಗತಿಯನ್ನು ವೈಜ್ಞಾನಿಕವಾಗಿ ಗುರುತಿಸಿ ಸಂಶೋಧನಾ ಕಾರ್ಯ ನಡೆಯಬೇಕು

ಮೈಸೂರು:

ಬುಡಕಟ್ಟು ಭಾಷೆಗಳು ನಶಿಸಿದರೆ ಕೇವಲ ಭಾಷೆಯಷ್ಟೇ ಅಲ್ಲದೆ, ಸಮುದಾಯದ ಸಂಸ್ಕೃತಿ, ಪರಂಪರೆ ಹಾಗೂ ಪಾರಂಪರಿಕ ಜ್ಞಾನವೂ ನಷ್ಟವಾಗುತ್ತದೆ ಎಂದು ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಟಿ.ರಘುಮೂರ್ತಿ ಎಚ್ಚರಿಸಿದರು.

ನಗರದಲ್ಲಿ ಮೂರು ದಿನಗಳವರೆಗೆ ಆಯೋಜಿಸಿರುವ ಬುಡಕಟ್ಟು ಭಾಷೆಗಳು ಮತ್ತು ವಸ್ತು ಸಂಗ್ರಾಲಯಗಳ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಆಧುನೀಕತೆ, ತಂತ್ರಜ್ಞಾನಕ್ಕೆ ಸಿಲುಕಿ ಬುಡಕಟ್ಟು ಭಾಷೆ, ಸಂಸ್ಕೃತಿ, ಪರಂಪರೆಯೂ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಬುಡಕಟ್ಟು ಭಾಷೆಗಳ ದಾಖಲಾತಿ, ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಬುಡಕಟ್ಟು ಭಾಷೆಗಳ ಜೀವಂತಿಕೆ, ಮಾತನಾಡುವವರ ಸಂಖ್ಯೆ, ಭೌಗೋಳಿಕ ವ್ಯಾಪ್ತಿ, ಪೀಳಿಗೆಯಿಂದ ಪೀಳಿಗೆಗೆ ಭಾಷೆಯ ವರ್ಗಾವಣೆ, ಶಿಕ್ಷಣದಲ್ಲಿ ಭಾಷೆಯ ಬಳಕೆ, ಲಿಖಿತ ಸಂಪನ್ಮೂಲಗಳು, ಡಿಜಿಟಲ್ ಸಂಪನ್ಮೂಲಗಳು ಹಾಗೂ ಈಗಾಗಲೇ ನಡೆದಿರುವ ದಾಖಲಾತಿಯ ಸ್ಥಿತಿಗತಿಗಳನ್ನು ಒಳಗೊಂಡ ಸಮಗ್ರ ಭಾಷಾ ಪ್ರೊಫೈಲ್ ರೂಪಿಸುವ ಅಗತ್ಯವಿದೆ ಎಂದರು.
ಬುಡಕಟ್ಟು ಭಾಷೆಗಳ ಸಂರಕ್ಷಣೆ ಮತ್ತು ಪುನರುಜ್ಜೀವನದ ಉದ್ದೇಶದಿಂದ ರಾಷ್ಟ್ರೀಯ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿರುವ ಸಂಶೋಧನಾ ಕಾರ್ಯಗಳು ಅಭಿನಂದನಾರ್ಹವಾಗಿವೆ. ಪ್ರತಿಯೊಂದು ಬುಡಕಟ್ಟು ಭಾಷೆಯ ಸ್ಥಿತಿಗತಿಯನ್ನು ವೈಜ್ಞಾನಿಕವಾಗಿ ಗುರುತಿಸಿ, ಅದರ ಆಧಾರದ ಮೇಲೆ ಸಂರಕ್ಷಣೆ, ಪುನರುಜ್ಜೀವನ ಮತ್ತು ಅಭಿವೃದ್ಧಿಗೆ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಿದರೆ ಹೆಚ್ಚಿನ ಪರಿಣಾಮ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net