ಬನ್ನೂರಿನ ಫುಟ್ಬಾಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಮ್ಯಾರಾಥಾನ್ ಓಟದಲ್ಲಿ ವಿಜೇತರಾದವರಿಗೆ ಮಹೇಂದ್ರ ಸಿಂಗ್ ಕಾಳಪ್ಪ ಬಹುಮಾನ ವಿತರಿಸಿದರು. ಪುರಸಭಾ ಮುಖ್ಯಾಧಿಕಾರಿ ಕೆ.ಸತೀಶ್, ನಸೀಮಾ ಅಂಜುಂ, ಡಾ.ರಾಜೀವ್ ಇತರರು ಇದ್ದರು.
ಬನ್ನೂರು: ಪೌರಕಾರ್ಮಿಕರಿಗೆ ಸಹಕಾರ ನೀಡುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಿದರೆ ಊರುಗಳನ್ನು ಸುಂದರಗೊಳಿಸಬಹುದು ಎಂದು ಸಮಾಜ ಸೇವಕ ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ ತಿಳಿಸಿದರು.
ಪಟ್ಟಣದ ಫುಟ್ಬಾಲ್ ಮೈದಾನದಲ್ಲಿ ಬನ್ನೂರು ಪುರಸಭೆ, ರೋಟರಿ ಸಂಸ್ಥೆ ಹಾಗೂ ಲಯನ್ಸ್ ಗ್ರೀನ್ ಲ್ಯಾಂಡ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛ ಬನ್ನೂರಿಗಾಗಿ ಮ್ಯಾರಥಾನ್ ಓಟ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಮ್ಯಾರಥಾನ್ ಓಟ ಅರ್ಥಪೂರ್ಣವಾದದ್ದು. ಇದರ ಮೂಲಕ ನಾವೆಲ್ಲರೂ ಸ್ವಚ್ಛತೆಯ ಕಡೆಗೆ ಮುಖ ಮಾಡುವ ಪ್ರತಿಜ್ಞೆ ಸ್ವೀಕರಿಸೋಣ ಎಂದು ತಿಳಿಸಿದರು.
ಪುರಸಭೆಯ ಮುಖ್ಯಾಧಿಕಾರಿ ಕೆ.ಸತೀಶ್ ಮಾತನಾಡಿ, ಕಸವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಪ್ಪಿಸಬೇಕು. ಮೊದಲು ನಾವು ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದರೆ ನಮ್ಮ ಮಕ್ಕಳು ನಮ್ಮನ್ನು ಅನುಕರಿಸುತ್ತಾರೆ ಎಂದು ತಿಳಿಸಿದರು.
ಬನ್ನೂರು ಫುಟ್ಬಾಲ್ ಮೈದಾನದಿಂದ ಆರಂಭವಾದ ಓಟವು ಸಂತೇಮಾಳದ ಮೂಲಕ ಬಿಜಿಎಸ್ ಸರ್ಕಲ್ ಬಳಸಿ ಮೈದಾನಕ್ಕೆ ಹಿಂದಿರುಗಿತು. ಓಟದಲ್ಲಿ ಕುರುಬೂರಿನ ದೊರೆಸ್ವಾಮಿ ಪ್ರಥಮ ಸ್ಥಾನದೊಂದಿಗೆ 3 ಸಾವಿರ ರೂ. ನಗದು ಬಹುಮಾನ, ಟ್ರೋಫಿಯನ್ನು ಪಡೆದರೆ, ದ್ವಿತೀಯ ಬಹುಮಾನವನ್ನು ಮಧುಚಂದ್ರ ಪಡೆದರು. ಲಿಖಿತ್ 3ನೇ ಸ್ಥಾನ ಗಳಿಸಿದರು.
ಪರಿಸರ ಅಭಿಯಂತರ ನಸೀಮಾ ಅಂಜುಂ, ಬಸವರಾಜು, ಆರೋಗ್ಯಾಧಿಕಾರಿ ಪ್ರೇಮಾ, ಸುಭಾಷ್, ಕಾಂತರಾಜು, ಆಗಾಜ್, ರೋಟರಿ ಅಧ್ಯಕ್ಷ ಡಾ. ರಾಜೀವ್, ಮುರಳಿ, ಅತ್ತಹಳ್ಳಿ ಕೆಂಪೇಗೌಡ, ಪ್ರಸನ್ನ, ಶಿವಕುಮಾರ್, ನಂಜುಂಡ ಸೇರಿದಂತೆ ಇತರರು ಇದ್ದರು.