ಭಾರತೀಯ ಸೇನೆಯಿಂದ ನಿವೃತ್ತಿಯಾಗಿ ತಮ್ಮ ಹುಟ್ಟೂರಾದ ಹುಣಸೇಕೊಪ್ಪಲಿಗೆ ಆಗಮಿಸಿದ ನಿವೃತ್ತ ಯೋಧ ರೇವಣ್ಣ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ವಿದ್ಯಾಶಂಕರ್, ದೇವೇಗೌಡ ಇತರರು ಇದ್ದರು.
ಬೆಟ್ಟದಪುರ: ಭಾರತೀಯ ಸೇನೆಯ ಸೇವೆಯಿಂದ ನಿವೃತ್ತಿ ಹೊಂದಿದ್ದರೂ ಮುಂದಿನ ದಿನಗಳಲ್ಲಿ ಗ್ರಾಮೀಣ ಯುವಕರನ್ನು ಸೇನೆಗೆ ಸೇರಿಸುವುದಕ್ಕೆ ಸ್ವಯಂ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ನಿವೃತ್ತ ಯೋಧ ಎಚ್.ಎಸ್. ರೇವಣ್ಣ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಹುಣಸೇಕೊಪ್ಪಲು ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಭಾರತೀಯ ಸೇನೆಯಲ್ಲಿ ಸತತವಾಗಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿಹೊಂದಿ ಸ್ವಗ್ರಾಮಕ್ಕೆ ಬಂದಿದ್ದೇನೆ. ನಮ್ಮ ಗ್ರಾಮಸ್ಥರು ತುಂಬಾ ಪ್ರೀತಿಪೂರ್ವಕ ಸ್ವಾಗತಕ್ಕೆ ನಾನು ಸದಾ ಖುಣಿ. ನಾನು ಇಲ್ಲಿ ಇದ್ದುಕೊಂಡೇ ಸೇನೆಗೆ ಸೇರಲು ಆಸಕ್ತಿ ಹೊಂದಿರುವ ಯುವಕರಿಗೆ ಉಚಿತವಾಗಿ ತರಬೇತಿ ನೀಡುವ ಮೂಲಕ ಅವರ ಕನಸು ನನಸು ಮಾಡಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ಮುಖಂಡ ಸುರಗಳ್ಳಿ ವಿದ್ಯಾಶಂಕರ್ ಮಾತನಾಡಿ, ರೇವಣ್ಣ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಬಂದಿದ್ದಾರೆ. ನಮಗೆ ಇದು ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ಇವರನ್ನು ಆದರ್ಶವಾಗಿ ಇಟ್ಟುಕೊಂಡು ಯುವಕರು ಮತ್ತಷ್ಟು ಬೆಳೆಯಬೇಕು ಎಂದು ಸಲಹೆ ನೀಡಿದರು.
ಮುಖಂಡ ಎಚ್.ಎಸ್ ದೇವೇಗೌಡ ಮಾತನಾಡಿದರು. ಯೋಧನಿಗೆ ಗ್ರಾಮಸ್ಥರು ಅದ್ದೂರಿಯಾಗಿ ಸನ್ಮಾನಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಗೌರವಿಸಿದರು. ಗ್ರಾಮದ ಮುಖಂಡರಾದ ಷಣ್ಮುಖ, ಮಹದೇವ, ಪಾಪಣ್ಣ ಕುಮಾರ, ಲಕ್ಷ್ಮಣ, ಪ್ರಸನ್ನ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಇದ್ದರು.