ಚುನಾವಣಾ ರಾಜಕಾರಣದಲ್ಲಿ ಇಲ್ಲದಿರಬಹುದು. ಅದರೆ, ಜನಸೇವೆಯಲ್ಲಿ ನಿರತನಾಗಿದ್ದೇನೆ : ಎಸ್.ಎ. ರಾಮದಾಸ್
ಜಿಲ್ಲಾ ಪತ್ರಿಕಾ ವಿತರಕರ ಸಂಘದ ವತಿಯಿಂದ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಎಸ್.ಎ. ರಾಮದಾಸ್, ಕೆ. ಶಿವಕುಮಾರ್, ಅಂಶಿ ಪ್ರಸನ್ನಕುಮಾರ್, ಕೆ. ದೀಪಕ್, ಸುರೇಶ್ ಹಾಗೂ ಇತರರು ಇದ್ದರು.
Published on:
Copied
Follow Us
ಮೈಸೂರು: ಚುನಾವಣಾ ರಾಜಕಾರಣದಲ್ಲಿ ನಾನು ಈಗ ಇಲ್ಲದಿರಬಹುದು. ಅದರೆ, ಜನಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಮಾಜಿ ಸಚಿವ ಎಸ್.ಎ. ರಾಮದಾಸ್ ಹೇಳಿದರು.
ಜಿಲ್ಲಾ ಪತ್ರಿಕಾ ವಿತರಕರ ಸಂಘದ ವತಿಯಿಂದ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ನನಗೆ ಟಿಕೆಟ್ ಕೈತಪ್ಪಿದ್ದರ ಬಗ್ಗೆ ಎಂದೂ ಚಿಂತೆ ಮಾಡಿಲ್ಲ. ‘ನಿಮಗೆ ಟಿಕೆಟ್ ನೀಡುತ್ತೇವೆ. ಒಂದು ಪೈಸೆಯನ್ನೂ ಖರ್ಚು ಮಾಡಬೇಡಿ, ನಿಮ್ನನ್ನು ಗೆಲ್ಲಿಸುತ್ತೇವೆ’ ಎಂದು ಪಕ್ಷವೊಂದರಿಂದ ನನಗೆ ಆಹ್ವಾನ ಬಂದಿತ್ತು. ಆದರೆ ಬಿಜೆಪಿ ಪಕ್ಷ ನನಗೆ ತಾಯಿ ಇದ್ದಂತೆ ಎಂದು ನಂಬಿದವನು ನಾನು. ಹಾಗಾಗಿ ಪಕ್ಷ ತೊರೆಯುವ ನಿರ್ಧಾರ ಮಾಡಲಿಲ್ಲ ಎಂದು ಹೇಳಿದರು.
ಅಧಿಕಾರ ಸಂದರ್ಭ ನಮ್ಮ ಸುತ್ತಮುತ್ತ ಸಾವಿರಾರು ಮಂದಿ ಇರುತ್ತಾರೆ. ಮರುದಿನ ಯಾರೂ ಇರುವುದಿಲ್ಲ. ಇದನ್ನು ಒಪ್ಪಿಕೊಳ್ಳಲು ಸಮಚಿತ್ತತೆ ಬೇಕು. ಇದನ್ನು ನಿಮ್ಮೆಲ್ಲರ ಪ್ರೀತಿ ಕಲಿಸಿದೆ ಎಂದರು.
ಈ ಹಿಂದೆ ಜನೌಷಧ ಕೇಂದ್ರ ತೆರೆದಾಗ ಔಷಧ ಕಂಪನಿಗಳು ಲಾಭಿ ಮಾಡಿದವು. ರಾಜ್ಯದ ವಿವಿಧೆಡೆ ನನ್ನ ವಿರುದ್ಧ ಪ್ರತಿಭಟನೆ ನಡೆಸಿದರು. ಆದರೆ ಎದೆಗುಂದಲಿಲ್ಲ. ಬಳಿಕ ಅದು ಎಷ್ಟು ಜನಪ್ರಿಯವಾಯಿತೆಂದರೆ ದೇಶದಾದ್ಯಂತ ಪ್ರಧಾನಮಂತ್ರಿ ಜನೌಷಧ ಕೇಂದ್ರವಾಗಿ ಸಾವಿರಾರು ಸಂಖ್ಯೆಯಲ್ಲಿ ಆರಂಭವಾದವು ಎಂದು ಹೇಳಿದರು.
ಮೊಟ್ಟ ಮೊದಲಿಗೆ ಮೈಸೂರಿನಲ್ಲಿ ಪತ್ರಿಕಾ ವಿತರಕರ ಸಂಘ ಆರಂಭವಾಯಿತು, ಈಗ 150ಕ್ಕೂ ಹೆಚ್ಚು ತಾಲೂಕುಗಳಲ್ಲಿ ಆರಂಭವಾಗಿವೆ. ಸ್ವನಿಧಿ ಯೋಜನೆಗೆ ಪತ್ರಿಕಾ ವಿತರಕರ ಹೆಸರನ್ನೂ ಸೇರ್ಪಡೆ ಮಾಡಲು ಶ್ರಮಿಸಿ ಯಶಸ್ವಿಯಾದೆ. 2 ಲಕ್ಷದವರೆಗೆ ವಿಮೆ ಸಹಾ ದೊರಕುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್ ಮಾತನಾಡಿ, ನಗರದಲ್ಲಿ ಪತ್ರಿಕಾ ವಿತರಕರಿಗೆ ಪತ್ರಿಕೆ ವಿಂಗಡಿಸಿಕೊಳ್ಳಲು ಸೂಕ್ತ ಜಾಗವಿಲ್ಲವೆಂಬ ಅರಿವು ಇದೆ. ಹೀಗಾಗಿ ನಗರದಲ್ಲಿನ ಎಲ್ಲ ಪತ್ರಿಕಾ ವಿತರಕರು ಸಹಮತ ವ್ಯಕ್ತಪಡಿಸಿದರೆ ಕಾಡಾ ಕಚೇರಿ ಆವರಣ, ನೀರಾವರಿ ಇಲಾಖೆ ಕಚೇರಿ ಬಳಿ ಸೂಕ್ತ ಆಶ್ರಯತಾಣ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಜಿಲ್ಲಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಸುರೇಶ್, ಪದಾಧಿಕಾರಿಗಳಾದ ಎನ್.ಕೆ. ಸುಂದರ್, ಜೆ. ಲೋಕೇಶ್, ನಾಗೇಶ್ ಮೂರ್ತಿ ಹಾಗೂ ಇತರರು ಇದ್ದರು.