ಮೈಸೂರು: ಹುಣಸೂರು ನಗರದ ಸ್ಕೈ ಗೋಲ್ಡ್ ಚಿನ್ನಾಭರಣ ಮಳಿಗೆಯಲ್ಲಿ ಚಿನ್ನಾಭರಣ ದೋಚಿದ್ದ ದರೋಡೆಕೋರರು ಆಭರಣಗಳನ್ನು ನೇಪಾಳಕ್ಕೆ ಸಾಗಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಹುಣಸೂರು ಚಿನ್ನಾಭರಣ ಮಳಿಗೆಯಲ್ಲಿ ಡಿ.28 ರಂದು 8 ಕೆ.ಜಿ.ಯ 10 ಕೋಟಿ ರೂ. ಬೆಲೆ ಬಾಳುವ ಚಿನ್ನಾಭರಣವನ್ನು ದರೋಡೆ ಮಾಡಲಾಗಿತ್ತು. ಈ ಸಂಬಂಧ ಆರೋಪಿಗಳಾದ ಬಿಹಾರ ರಾಜ್ಯದ ಬಾಗಲ್ಪುರ್ ಜಿಲ್ಲೆಯ ಪಂಕಜ್ ಕುಮಾರ್, ದರ್ಬಾಂಗ್ ಜಿಲ್ಲೆಯ ಹೃಷಿಕೇಶ್ ಸಿಂಗ್ ಅವರನ್ನು ಬಂಧಿಸಿ 12.5 ಗ್ರಾಂ ಚಿನ್ನ 92 ಸಾವಿರ ನಗದು ಮತ್ತು ಒಂದು ಬುಲೆಟ್ ಬೈಕ್‌ಅನ್ನು ವಶಕ್ಕೆ ಪಡೆಯಲಾಗಿತ್ತು.
ಚಿನ್ನಾಭರಣ ಕಳವು ಮಾಡಿದ ಈ ಆರೋಪಿಗಳು ಚಿನ್ನಾಭರಣವನ್ನು ಮತ್ತೊಬ್ಬ ಆರೋಪಿಗೆ ನೀಡಿದ್ದು, ಆತ ನೇಪಾಳದಲ್ಲಿ ಚಿನ್ನಾಭರಣ ಅಂಗಡಿಯೊಂದನ್ನು ಹೊಂದಿದ್ದಾನೆ ಎನ್ನಲಾಗಿದೆ. ಆತನ ಬಂಧನವಾದರೆ ಚಿನ್ನಾಭರಣ ನಿಖರವಾಗಿ ಎಲ್ಲಿಗೆ ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಸ್ಪಷ್ಟವಾಗಿ ಬಯಲಿಗೆ ಬರಲಿದೆ.
ದರೋಡೆಕೋರರನ್ನು ಪತ್ತೆ ಹಚ್ಚಲು ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಿದ್ದರು. ಆರೋಪಿಗಳು ಮೊಬೈಲ್ ಬಳಕೆ ಮಾಡುತ್ತಿರಲಿಲ್ಲ. ಆದರೆ, ದರೋಡೆ ನಡೆದ ಸಂದರ್ಭದಲ್ಲಿ ಆರೋಪಿಗಳ ಚಲನವಲನಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿ ದ್ದವು. ದೃಶ್ಯವನ್ನು ಜಾಡನ್ನು ಹಿಡಿದು ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರೂ ಚಿನ್ನಾಭರಣ ಸಂಪೂರ್ಣ ವಶಕ್ಕೆ ಪಡೆಯಲು ಆಗಿಲ್ಲ.
ಹುಣಸೂರು ಚಿನ್ನಾಭರಣ ಮಳಿಗೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳು ಮತ್ತೊಬ್ಬ ಆರೋಪಿಗೆ ಚಿನ್ನಾಭರಣವನ್ನು ನೀಡಿದ್ದಾರೆ. ಆತ ಚಿನ್ನಾಭರಣವನ್ನು ಎಲ್ಲಿಗೆ ಮಾರಾಟ ಮಾಡಿದ್ದಾನೆ ಎಂಬ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ. ಆತನ ಬಂಧನವಾದರೆ ಸ್ಪಷ್ಟ ಮಾಹಿತಿ ದೊರೆಯುತ್ತದೆ. ಚಿನ್ನಾಭರಣವನ್ನು ನೇಪಾಳಕ್ಕೆ ಮಾರಾಟ ಮಾಡಿರುವ ಕುರಿತು ಯಾವುದೇ ಮಾಹಿತಿ ಇಲ್ಲ.