ಪೌರಕಾರ್ಮಿಕರಿಗೆ ನಿವೇಶನ ನೀಡಿ ಸೂರು ಕಲ್ಪಿಸಿ

 ಹುಣಸೂರು ನಗರದ ಉಪ ವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸದಸ್ಯ ಲಕ್ಷ್ಮಣ್ ಮಾತನಾಡಿದರು. ಎಸಿ ಮಂಜುನಾಥ್, ತಹಸೀಲ್ದಾರ್ ಜೆ.ಮಂಜುನಾಥ್, ಇಒ ಕೆ.ಹೊಂಗಯ್ಯ ಇದ್ದರು.
ಹುಣಸೂರು ನಗರದ ಉಪ ವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸದಸ್ಯ ಲಕ್ಷ್ಮಣ್ ಮಾತನಾಡಿದರು. ಎಸಿ ಮಂಜುನಾಥ್, ತಹಸೀಲ್ದಾರ್ ಜೆ.ಮಂಜುನಾಥ್, ಇಒ ಕೆ.ಹೊಂಗಯ್ಯ ಇದ್ದರು.
Published on
ಹುಣಸೂರು: ಹುಣಸೂರು ನಗರ ವ್ಯಾಪ್ತಿಯ ಸರ್ವೇ ನಂ.73/1ರಲ್ಲಿ ಸರ್ಕಾರಿ ಭೂಮಿಯಿದ್ದು, ಅಲ್ಲಿ ಪೌರಕಾರ್ಮಿಕರಿಗೆ ನಿವೇಶನ ನೀಡಿ ಸೂರು ಕಲ್ಪಿಸಬೇಕೆಂದು ಸಫಾಯಿ ಕರ್ಮಚಾರಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು ಒತ್ತಾಯಿಸಿದರು.
ನಗರದ ಉಪ ವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಫಾಯಿ ಕರ್ಮಚಾರಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ ಸದಸ್ಯೆ ನಾಗವೇಣಿ, ತಾಲೂಕಿನಲ್ಲಿ 43 ಪೌರಕಾರ್ಮಿಕ ಕುಟುಂಬಗಳಿಗೆ ಶಾಶ್ವತ ಸೂರಿಲ್ಲ. ಒಂದೇ ಗುಡಿಸಲಿನಲ್ಲಿ 2-3 ಕುಟುಂಬಗಳು ಪ್ರಾಣಿಗಳಿಗಿಂತಲೂ ಕಡೆಯಾಗಿ ಬದುಕುತ್ತಿದ್ದಾರೆ. ಇಡೀ ಊರನ್ನೇ ಶುಚಿಗೊಳಿಸುವ ಪೌರಕಾರ್ಮಿಕ ಕುಟುಂಬಗಳ ವೈಯಕ್ತಿಕ ಬದುಕು ಹೀನಾಯವಾಗಿದೆ. ಸರ್ವೇ ನಂ.75ರಲ್ಲಿ ಎರಡು ಎಕರೆ ಭೂಮಿಯಿದೆ ಎಂದು ಮಾಹಿತಿ ನೀಡಲಾಗಿತ್ತು. ಆದರೆ ಅದು ಹಿಡುವಳಿದಾರರ ಭೂಮಿಯೆಂದು ಕಂದಾಯ ಇಲಾಖೆ ಸ್ಪಷ್ಟಪಡಿಸಿದೆ. ಹಾಗಾಗಿ ಸರ್ವೇ ನಂ.73/1ರಲ್ಲಿ ಅಗತ್ಯ ಭೂಮಿಯಿದ್ದು, ಅದನ್ನು ನಗರಸಭೆ ವಶಕ್ಕೆ ಪಡೆದು ಪೌರಕಾರ್ಮಿಕರಿಗೆ ನೀಡಬೇಕೆಂದು ಒತ್ತಾಯಿಸಿದರು.
ಉಪ ವಿಭಾಗಾಧಿಕಾರಿ ಮಂಜುನಾಥ್ ಸಭೆಯಲ್ಲಿದ್ದ ತಹಸೀಲ್ದಾರ್ ಮತ್ತು ನಗರಸಭೆ ಪೌರಾಯುಕ್ತರಿಗೆ ಸ್ಥಳ ಪರಿಶೀಲಿಸಿ ದಾಖಲೆಗಳನ್ನು ತಿಳಿದು ಮುಂದುವರಿಯಲು ಸೂಚಿಸಿದರು.
96 ಲಕ್ಷ ರೂ.ವ್ಯಯಿಸಿಲ್ಲ: ಸದಸ್ಯ ಲಕ್ಷ್ಮಣ್ ಮಾತನಾಡಿ, ಹುಣಸೂರು ನಗರಸಭೆಯ 2016-17ರಲ್ಲಿ ನಗರೋತ್ಥಾನ ಯೋಜನೆಯಡಿ 96 ಲಕ್ಷ ರೂ.ಗಳ ಸಹಾಯಧನವನ್ನು ಪೌರಕಾರ್ಮಿಕರ ವಸತಿ ಉದ್ದೇಶಕ್ಕೆ ಮೀಸಲಿರಿಸಲಾಗಿದೆ. ಆದರೆ ಅದು ಇಂದಿಗೂ ಬಳಕೆಯಾಗಿಲ್ಲ. ವಸತಿಹೀನರಿಗೆ ಈ ಹಣವನ್ನು ಬಳಸಿ ನಿವೇಶನ ಹಂಚಿರಿ ಎಂದು ಕೋರಿದಾಗ, ಇದು ನಿವೇಶನರಹಿತ ಕುಟುಂಬಗಳು ನಿವೇಶನ ಖರೀದಿಸಿದಲ್ಲಿ ಅವರಿಗೆ ಸಹಾಯಧನವಾಗಿ ತಲಾ 3 ಲಕ್ಷ ರೂ.ಗಳನ್ನು ನೀಡಲಾಗುವುದು. ಆದರೆ ಈ ಹಣ ಒಟ್ಟಾಗಿ ಬಳಸಿಕೊಳ್ಳಲು ಕೆಲವು ಪ್ರಯತ್ನಗಳನ್ನು ನಡೆಸಿದ್ದರೂ ಸಫಲವಾಗಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಗಮನಹರಿಸಲಾಗುವುದು ಎಂದು ಪೌರಾಯುಕ್ತೆ ಕೆ.ಮಾನಸ ತಿಳಿಸಿದರು.
ಗೃಹಭಾಗ್ಯ ಹಣ ಏರಿಕೆ: ಸದಸ್ಯ ಲಕ್ಷ್ಮಣ್ ಮಾತನಾಡಿ, ರಾಜ್ಯ ಸರ್ಕಾರ ಪೌರಕಾರ್ಮಿಕರಿಗೆ ವಸತಿ ಯೋಜನೆಯಾಗಿ ಗೃಹಭಾಗ್ಯ ಯೋಜನೆಯಡಿ ನೀಡುತ್ತಿದ್ದ 7.5 ಲಕ್ಷ ರೂ.ಗಳನ್ನು 15 ಲಕ್ಷ ರೂ.ಗೆ ಏರಿಸಿದೆ. ಅದರಂತೆ ಎಷ್ಟು ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಶ್ನಿಸಿದಾಗ, ಸರ್ಕಾರ ಸಹಾಯಧನ ಏರಿಕೆ ಮಾಡಿರುವ ಕುರಿತು ತಮಗೆ ಈವರೆಗೆ ಯಾವುದೇ ಆದೇಶ ಬಂದಿಲ್ಲವೆಂದು ಪೌರಾಯುಕ್ತರು ತಿಳಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣಾಧಿಕಾರಿ ಭರತ್‌ಕುಮಾರ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೆ.ಹೊಂಗಯ್ಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net