ದಲಿತ ಕುಟುಂಬಕ್ಕೆ ದಲಿತರಿಂದಲೇ ಬಹಿಷ್ಕಾರ

ಹುಣಸೂರು ನಗರದ ಡಿವೈಎಸ್‌ಪಿ ಕಚೇರಿಯಲ್ಲಿ ಆಯೋಜಿಸಿದ್ದ ಎಸ್ಸಿ ಎಸ್ಟಿ ಸಭೆಯಲ್ಲಿ ಡಿವೈಎಸ್‌ಪಿ ರವಿ ಮುಖಂಡರಿಂದ ಸಮಸ್ಯೆಗಳನ್ನು ಆಲಿಸಿದರು. ಇನ್ಸ್‌ಪೆಕ್ಟರ್‌ಗಳಾದ ಮುನಿಯಪ್ಪ, ಧರ್ಮರಾಜ್, ಗೋವಿಂದರಾಜು, ಚಿಕ್ಕನಾಯಕ, ಗಂಗಾಧರ್ ಇತರರಿದ್ದರು.
ಹುಣಸೂರು ನಗರದ ಡಿವೈಎಸ್‌ಪಿ ಕಚೇರಿಯಲ್ಲಿ ಆಯೋಜಿಸಿದ್ದ ಎಸ್ಸಿ ಎಸ್ಟಿ ಸಭೆಯಲ್ಲಿ ಡಿವೈಎಸ್‌ಪಿ ರವಿ ಮುಖಂಡರಿಂದ ಸಮಸ್ಯೆಗಳನ್ನು ಆಲಿಸಿದರು. ಇನ್ಸ್‌ಪೆಕ್ಟರ್‌ಗಳಾದ ಮುನಿಯಪ್ಪ, ಧರ್ಮರಾಜ್, ಗೋವಿಂದರಾಜು, ಚಿಕ್ಕನಾಯಕ, ಗಂಗಾಧರ್ ಇತರರಿದ್ದರು.
Published on
ಹುಣಸೂರು: ದಲಿತ ಕುಟುಂಬಕ್ಕೆ ದಲಿತರಿಂದಲೇ ಬಹಿಷ್ಕಾರ ಹಾಕಿದ್ದಾರೆ, ಹುಣಸೂರಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಬಾಲಕಿಯರ ಕೈಯಲ್ಲಿ ಗಾಂಜಾ ಇದೆ, ದಯವಿಟ್ಟು ಬಡ ಹೆಣ್ಣು ಮಕ್ಕಳನ್ನು ಉಳಿಸಿ ಸರ್...
ಹುಣಸೂರು ನಗರದ ಪೊಲೀಸ್ ಉಪ ಅಧೀಕ್ಷಕರ (ಡಿವೈಎಸ್‌ಪಿ)ಕಚೇರಿಯಲ್ಲಿ ಶನಿವಾರ ಡಿವೈಎಸ್‌ಪಿ ರವಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಹುಣಸೂರು ಉಪವಿಭಾಗ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಭೆಯಲ್ಲಿ ದಲಿತ ಮುಖಂಡರು ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಸರಗೂರು ತಾಲೂಕಿನ ಇಟ್ನಾ ಗ್ರಾಮದ ದಲಿತ ಮುಖಂಡ ಇಟ್ನಾ ರಾಜಣ್ಣ ಮಾತನಾಡಿ, ತಾಲೂಕಿನ ಮಠದಕಟ್ಟೆ ಗ್ರಾಮದಲ್ಲಿ ದಲಿತರೇ ವಾಸಿಸುತ್ತಿದ್ದು, ಗ್ರಾಮದಲ್ಲಿ ನಂಜುಂಡಯ್ಯ ಸೇರಿದಂತೆ ಮೂರು ದಲಿತ ಕುಟುಂಬಗಳನ್ನು ದಲಿತ ಕುಟುಂಬಗಳೇ ಬಹಿಷ್ಕಾರ ಹಾಕಿವೆ. ಗೃಹಪ್ರವೇಶ ಇನ್ನಿತರ ಯಾವುದೇ ಶುಭ ಅಥವಾ ಅಥವಾ ಅಶುಭ ಕಾರ್ಯಗಳಿಗೆ ಈ ಮನೆಗಳಿಗೆ ಇತರ ದಲಿತರು ಬರುತ್ತಿಲ್ಲ, ಇವರಿಗೆ ಆಹ್ವಾನವೂ ಇಲ್ಲ. ಈ ಕುಟುಂಬಗಳು ಮಾಡಿರುವ ತಪ್ಪೇನು ಎನ್ನುವುದೇ ಅರ್ಥವಾಗುತ್ತಿಲ್ಲ, ದಯವಿಟ್ಟು ನ್ಯಾಯ ಕೊಡಿಸಿ ಎಂದರು.
ಚಿಕ್ಕಮ್ಮತಾಯಿ ಬೆಟ್ಟದ ಬಳಿ ಬಾರ್: ಎಚ್.ಡಿ.ಕೋಟೆ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಿಕ್ಕಮ್ಮತಾಯಿ ಬೆಟ್ಟದ ಬಳಿ ಸರ್ಕಾರ ಮದ್ಯದಂಗಡಿ ತೆರೆಯಲು ಉದ್ದೇಶಿಸಿದೆ ಎನ್ನುವ ಮಾಹಿತಿಯಿದ್ದು, ಇದು ಖಂಡನೀಯ. ಈ ದೇವಾಲಯಕ್ಕೆ ಸಾವಿರಾರು ಮಂದಿ ಬರುತ್ತಿದ್ದಾರೆ. ದೇವಾಲಯವಿರುವ ಪ್ರದೇಶ ಅರಣ್ಯಪ್ರದೇಶ ಮತ್ತು ಗಿರಿಜನರು ವಾಸಿಸುವ ಸ್ಥಳವಾಗಿದೆ. ಹರಕೆ ಹೊತ್ತವರು ಮಾಂಸಾಹಾರ ಭಕ್ಷೃಗಳನ್ನು ಮಾಡಿ ಹರಕೆ ತೀರಿಸುತ್ತಿದ್ದಾರೆ. ಇಲ್ಲಿ ಮದ್ಯದಂಗಡಿಯೂ ಅವಕಾಶ ನೀಡಿದಲ್ಲಿ ಇಡೀ ಪರಿಸರ ಕಲುಷಿತಗೊಳ್ಳಲಿದ್ದು, ತಾಲೂಕು ಆಡಳಿತ ತನ್ನ ನಿರ್ಧಾರವನ್ನು ಹಿಂಪಡೆಯಲಿ ಎಂದು ಆಗ್ರಹಿಸಿದರು.
ಸಭೆಯಲ್ಲಿ ಎಲ್ಲ ತಾಲೂಕಿನ ಮುಖಂಡರು ಉಪವಿಭಾಗ ವ್ಯಾಪ್ತಿಯ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ಸಾಗಿದ್ದು, ಅಬಕಾರ ಇಲಾಖೆ ಕೈಕಟ್ಟಿ ಕುಳಿತಿದೆ ಎಂದು ಆರೋಪಿಸಿದರು.
ಆದಿಜಾಂಬವ ಸಂಘದ ಅಧ್ಯಕ್ಷ ಶಿವಣ್ಣ ಮಾತನಾಡಿ, ಹುಣಸೂರು ತಾಲೂಕಿನ ಹೆಮ್ಮಿಗೆ ಕಾಲನಿ, ಬೀರತಮ್ಮನಹಳ್ಳೀ ಕಾಲನಿ ಮತ್ತು ಗಾಣಿಗಕಟ್ಟೆ ಗ್ರಾಮಗಳಿಗೆ ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿಯ(ಗಡಿಗ್ರಾಮ) ಮದ್ಯದಂಗಡಿಯಿಂದ ಮದ್ಯ ಸರಬರಾಜಾಗುತ್ತಿದೆ ಎಂದು ಆರೋಪಿಸಿದರೆ, ರತ್ನಪುರಿ ಪುಟ್ಟಸ್ವಾಮಿ ಮಾತನಾಡಿ, ರತ್ನಪುರಿ ಗ್ರಾಮದಲ್ಲಿ ಬೆಳಗ್ಗೆ 4 ಗಂಟೆಗೆ ಮದ್ಯ ಮಾರಾಟ ಆರಂಭಿಸಿರುತ್ತಾರೆ ಎಂದರು. ಬಿಳಿಕೆರೆ ಚೌಡಪ್ಪ ಮಾತನಾಡಿ, ಅಬಕಾರಿ ಇಲಾಖೆ ಅಕ್ರಮ ಮದ್ಯ ಮಾರಾಟ ತಡೆಯಲು ಎಲ್ಲೆಲ್ಲಿ ದಾಳಿ ನಡಸಿ ಕ್ರಮವಹಿಸಿದೆ ಎನ್ನುವ ಅಂಕಿ ಅಂಶಗಳನ್ನು ನೀಡಲಿ ಎಂದು ಆಗ್ರಹಿಸಿದರು.
ಕಟ್ಟೆಮಳಲವಾಡಿ ಗ್ರಾಮದ ಶ್ರೀಧರ್ ಮಾತನಾಡಿ, ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ, ಗಾಂಜಾ ಮಾರಾಟದಿಂದಾಗಿ ಯುವಜನತೆ ಬದುಕು ಕಳೆದುಕೊಳ್ಳುತ್ತಿದ್ದಾರೆ. ಪಾಲಕರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಪರಿತಪಿಸುತ್ತಿದ್ದಾರೆ ಎಂದು ಅವಲತ್ತುಕೊಂಡರು. ರೇಣುಕಾ ಮಾತನಾಡಿ, ಹುಣಸೂರು ನಗರದ ಬನ್ನಿಬೀದಿ, ಐಕೆ ಕಲ್ಯಾಣ ಮಂಟಪ ರಸ್ತೆ, ಮಾರುತಿ ಬಡಾವಣೆಯ ಕೆಲ ಸ್ಥಳಗಳಲ್ಲಿ ಬೆಳ್ಳಂಬೆಳಗ್ಗೆ ಯುವಕರು ಕಾರಿನಲ್ಲಿ ಕುಳಿತು ಗಾಂಜಾ ಸೇವಿಸುತ್ತಿರುತ್ತಾರೆ, ದಯವಿಟ್ಟು ಕ್ರಮವಹಿಸಿ ಎಂದು ಕೋರಿದರು.
ಬಾಲಕಿಯರ ಕೈಯಲ್ಲಿ ಗಾಂಜಾ: ಮಹಿಳಾ ದಲಿತ ಸಂಘಟನೆ ಜಿಲ್ಲಾ ಸಂಚಾಲಕಿ ಕಟ್ಟೆಮಳಲವಾಡಿ ಮಹದೇವಮ್ಮ ಮಾತನಾಡಿ, ಕಟ್ಟೆಮಳಲವಾಡಿ ಗ್ರಾಮದಲ್ಲಿ 12-13 ವರ್ಷದ ಬಾಲಕಿಯರು ಗಾಂಜಾ ಸೇವನೆ ಮಾಡುತ್ತಿದ್ದಾರೆ. ತಂಬಾಕು ಬ್ಯಾರನ್ ಇರುವ ಒಂಟಿ ಮನೆಗಳ ಬಳಿ ತೆರಳಿ ಸೇವಿಸುತ್ತಿದ್ದಾರೆ. ತಾಲೂಕಿನಲ್ಲಿ ಬಾಲ್ಯವಿವಾಹ ಪ್ರಕರಣ ಹೆಚ್ಚಾಗುತ್ತಿದ್ದು, ಅಪ್ರಾಪ್ತರ ವಯಸ್ಸು ಹೆಚ್ಚಿಸಿಕೊಳ್ಳಲು ಆಧಾರ್ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಿಕೊಡುವ ದಂಧೆ ಅವ್ಯಾಹತವಾಗಿ ನಡೆದಿದೆ. ಗ್ರಾಮಾಂತರ ಠಾಣೆಗೆ ಈಗಾಗಲೇ ಮಾಹಿತಿ ನೀಡಿದ್ದೇನೆ, ಕ್ರಮವಹಿಸಿ ಎಂದು ಒತ್ತಾಯಿಸಿದರು.
ಫ್ಲೆಕ್ಸ್ ಹಾವಳಿ ತಡೆಯಿರಿ: ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಮಾತನಾಡಿ, ಉಪವಿಭಾಗ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಅಳವಡಿಕೆಯ ಅನಾಹುತಗಳು ಆಗುವ ಮೊದಲು ಎಚ್ಚರ ವಹಿಸಬೇಕಿದೆ. ನಿರ್ದಿಷ್ಟ ಸ್ಥಳ ಮತ್ತು ರೀತಿ ನೀತಿಯನ್ನು ಅನುಸರಿಸುವುದು ಕಡ್ಡಾಯಗೊಳಿಸಿ. ಅಸ್ಪಶ್ಯತೆ ನಿವಾರಣೆಗೆ ಹೋಬಳಿ ಮಟ್ಟದಿಂದ ಆರಂಭಿಸಿ ತಾಲೂಕು ಮಟ್ಟದವರೆಗೆ ಎಲ್ಲರನ್ನೊಳಗೊಂಡು ಅಸ್ಪಶ್ಯತಾ ಅರಿವು ಕಾರ್ಯಕ್ರಮ ಆಯೋಜಿಸಬೇಕಿದೆ ಎಂದು ಆಗ್ರಹಿಸಿದರು.
ಕಿರಂಗೂರು ಸ್ವಾಮಿ ಮಾತನಾಡಿ, ಹನಗೋಡು ಹೋಬಳಿ ಕೇಂದ್ರದಲ್ಲಿ ಸ್ಥಾಪಿಸಲಾಗಿದ್ದ ತಾತ್ಕಾಲಿಕ ಪೊಲೀಸ್ ಚೌಕಿಯನ್ನು ಸ್ಥಳಾಭಾವದಿಂದಾಗಿ ತೆರವುಗೊಳಿಸಲಾಗಿದ್ದು, ಶೀಘ್ರ ಸ್ಥಾಪಿಸಬೇಕು ಹಾಗೂ ಕಾಲೇಜುಗಳು ತೆರೆಯುವ ವೇಳೆ ಪೊಲೀಸ್ ಬೀಟ್ ನಡೆಸುವ ಮೂಲಕ ಪುಂಡರಿಗೆ ಕಡಿವಾಣ ಹಾಕಲು ಕೋರಿದರು.
ಕೊಳಗಟ್ಟ ಕೃಷ್ಣ ಮಾತನಾಡಿ, ಹುಣಸೂರು ತಾಲೂಕಿನ ಮನುಗನಹಳ್ಳಿ ಗ್ರಾಪಂ ವ್ಯಾಪ್ತಿಯ ಮನುಗನಹಳ್ಳಿ ಗೇಟ್ ಸಮೀಪ 20ಕ್ಕೂ ಹೆಚ್ಚು ಪೌರಕಾರ್ಮಿಕರ ಕುಟುಂಬಗಳು ಕಳೆದ 25 ವರ್ಷಗಳಿಂದ ಜೋಪಡಿಯಲ್ಲಿ ವಾಸಿಸುತ್ತಿದ್ದು, ಅವರಿಗೆ ಗ್ರಾಪಂ ವತಿಯಿಂದ ನಿವೇಶನ ಹಕ್ಕುಪತ್ರ ನೀಡಿ ವಸತಿ ಕಲ್ಪಿಸಬೇಕೆಂದು ಆಗ್ರಹಿಸಿದರು.
ಎಚ್.ಡಿ.ಕೋಟೆ ತಾಲೂಕಿನ ಪ್ರಸಾದ್ ಮಾತನಾಡಿ, ತಾಲೂಕಿನಲ್ಲಿ ಕೇರಳ ಲಾಟರಿ ಮತ್ತು ಇಸ್ಪೀಟ್ ದಂಧೆ ಅವ್ಯಾಹತವಾಗಿ ನಡೆದಿದ್ದು, ಎರಡೂ ಅಕ್ರಮಗಳನ್ನು ನಿಷೇಧಿಸಲು ಕ್ರಮವಹಿಸಲು ಕೋರಿದರು.
ಸಭೆಯಲ್ಲಿ ಅತ್ತಿಕುಪ್ಪೆ ರಾಮಕೃಷ್ಣ, ಕಟ್ಟೆಮಳಲವಾಡಿ ದೇವರಾಜ್, ಕಿರಿಜಾಜಿ ಗಜೇಂದ್ರ, ಮುತ್ತುರಾಯನಹೊಸಳ್ಳಿಯ ಶಿವಾನಂದ್, ಸೋಮನಹಳ್ಳಿ ರುಕ್ಮಿಣಿ, ಪಿರಿಯಾಪಟ್ಟಣ ಗಿರೀಶ್, ಎಚ್.ಡಿ.ಕೋಟೆ ಶಿವರಾಜ್, ಇನ್ಸ್‌ಪೆಕ್ಟರ್‌ಗಳಾದ ಟಿ.ಎಂ.ಪುನೀತ್, ಸಂತೋಷ್ ಕಶ್ಯಪ್, ಮುನಿಯಪ್ಪ, ಗೋವಿಂದರಾಜು, ಚಿಕ್ಕನಾಯಕ, ಚಂದ್ರಹಾಸನಾಯಕ, ಕಿರಣ್, ಅಬಕಾರಿ ಇಲಾಖೆ ಇನ್‌ಸ್ಪೆಕ್ಟರ್ ಧರ್ಮರಾಜ್, ಪರಿಶಿಷ್ವ ವರ್ಗಗಳ ಕಲ್ಯಾಣ ಇಲಾಖೆ ಗಂಗಾಧರ್, ವಿ.ಪ್ರಸಾದ್, ಶಿವಣ್ಣ ಇದ್ದರು.
ಬಂಟಿಂಗ್ಸ್, ಬ್ಯಾನರ್ ನಿಷೇಧ: ಹುಣಸೂರು ನಗರದ ಸಂವಿಧಾನ ವೃತ್ತದ ಕಂಬಕ್ಕೆ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಬಂಟಿಂಗ್ಸ್, ಬ್ಯಾನರ್ ಮತ್ತು ದೀಪಾಲಂಕಾರ ಮಾಡುತ್ತಿದ್ದು, ಸಂವಿಧಾನಕ್ಕೆ ಅಪಚಾರವಾಗಿದೆ ಎಂದು ಸದಸ್ಯರು ಆಕ್ಷೇಪಿಸಿದಾಗ, ಇನ್ನು ಮುಂದೆ ಯಾವುದೇ ರಾಜಕೀಯ ಪಕ್ಷವಾಗಲಿ, ಸಂಘಟನೆಗಳಾಗಲಿ ಬಂಟಿಂಗ್ಸ್, ಬ್ಯಾನರ್, ದೀಪಾಲಂಕಾರಗಳನ್ನು ಅಳವಡಿಸುವುದನ್ನು ನಿಷೇಧಿಸಲಾಗಿದೆ ಎಂದು ಡಿವೈಎಸ್‌ಪಿ ರವಿ ತಿಳಿಸಿದರು.
ಕ್ಯಾಂಟೀನ್ ತೆರೆಯಿರಿ: ಹುಣಸೂರು ಡಿವೈಎಸ್‌ಪಿ ಕಚೇರಿ ಆವರಣದಲ್ಲಿ ಈ ಹಿಂದೆ ಎಸ್‌ಪಿ ರವಿಚನ್ನಣ್ಣನವರ್ ಅಧಿಕಾರಾವಧಿಯಲ್ಲಿ ಸ್ಥಾಪಿಸಿದ್ದ ಜನಸ್ನೇಹಿ ಕ್ಯಾಂಟೀನ್ ಬಡಜನರಿಗೆ ಅನುಕೂಲವಾಗಿತ್ತು. ಇದೀಗ ಅದನ್ನು ಮುಚ್ಚಲಾಗಿದೆ. ದಲ್ಲಾಳಿಗಳ ಅಡ್ಡೆಯಾಗಿದೆ ಎಂದು ಇಲಾಖೆ ಅದನ್ನು ತೆರವುಗೊಳಿಸಿದೆ. ಆದರೆ ಕ್ಯಾಂಟೀನ್‌ನಿಂದ ಬಡಜನರಿಗೆ, ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು ಎಂದು ಸಭೆಯಲ್ಲಿ ಎಲ್ಲರೂ ಒತ್ತಾಯಿಸಿದಾಗ, ಡಿವೈಎಸ್‌ಪಿ ರವಿ ಉತ್ತರಿಸಿ, ಕ್ಯಾಂಟೀನ್ ದಲ್ಲಾಳಿಗಳ ಅಡ್ಡೆಯಾಗಿ ಪರಿವರ್ತಿತವಾಗಿತ್ತು. ಇಲ್ಲಿ ದಲ್ಲಾಳಿಗಳಿಗೆ ಅವಕಾಶ ನೀಡಲಾಗುವುದಿಲ್ಲ. ಆದರೂ ಸಭೆ ಅಭಿಪ್ರಾಯದಂತೆ ಈ ಕುರಿತು ಪರಿಶೀಲಿಸುವುದಾಗಿ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net