ಹುಣಸೂರು ನಗರದ ವಿ.ಪಿ.ಬೋರೆ ಬಡಾವಣೆಯ ನಿವಾಸಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರಸಭೆ ಪೌರಾಯುಕ್ತೆ ಎಂ.ಮಾನಸಾ ಅವರಿಗೆ ಮನವಿ ಸಲ್ಲಿಸಿದರು. ನಿಂಗರಾಜ್ ಮಲ್ಲಾಡಿ, ಕೆಂಪರಾಜು, ಗಜೇಂದ್ರ, ತಾರಾ, ಸುಮಾ, ಶಿವಕುಮಾರ್ ಇತರರಿದ್ದರು.
Published on:
Copied
Follow Us
ಹುಣಸೂರು:
ನಗರದ ವಿ.ಪಿ.ಬೋರೆ ಬಡಾವಣೆಯ ಅರಸು ನಗರ ಬೀದಿಯಲ್ಲಿ ಕಲುಷಿತ ಕುಡಿಯುವ ನೀರು ಸರಬರಾಜಾಗುತ್ತಿದ್ದು ಶೀಘ್ರ ದುರಸ್ತಿಗೊಳಿಸಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಿವಾಸಿಗಳು ಮಂಗಳವಾರ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ನಿಂಗರಾಜ್ ಮಲ್ಲಾಡಿ ಮಾತನಾಡಿ, ವಿ.ಪಿ.ಬೋರೆಯ ಚಿನ್ನಮ್ಮ ಮತ್ತು ಸುಮೇರಾ ಬಾನುರ ಮನೆಯ ಬಳಿ ಹಲವು ತಿಂಗಳಿಂದ ಶೌಚಗೃಹ ಗುಂಡಿಯ ನೀರು ತುಂಬಿ ಚರಂಡಿಯಲ್ಲಿ ಹರಿಯುತ್ತಿದ್ದು, ಈ ಭಾಗದ ನಿವಾಸಿಗಳು ಕುಡಿಯುವ ನೀರಿಗೂ ಈ ಕಲುಷಿತ ನೀರು ಮಿಶ್ರಣವಾಗುತ್ತಿದೆ. ಇದರಿಂದ ಈ ಬೀದಿಯಲ್ಲಿ ವಾಸ ಮಾಡುವ ನಿವಾಸಿಗಳಿಗೆ ದುರ್ವಾಸನೆ ಬಂದು ಆರೋಗ್ಯ ಹದಗೆಡುತ್ತಿದೆ. ಹಲವರಿಗೆ ಕೆಮ್ಮು, ಜ್ವರ, ನೆಗಡಿ, ಶೀತ ಮುಂತಾದ ಕಾಯಿಲೆಗಳಿಂದ ಗುಣಮುಖರಾಗದೆ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದರಿಂದ ಸಾವು ನೋವುಗಳು ಆಗುವ ಸಂಭವವಿದೆ. ಆದ್ದರಿಂದ ನಗರಸಭೆ ಆಯುಕ್ತರು ಕೂಡಲೇ ಸ್ಥಳ ಪರಿಶೀಲಿಸಿ ಇನ್ನು ಎರಡು ದಿನಗಳ ಒಳಗಾಗಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದೆ ಹೋದಲ್ಲಿ ನೊಂದ ಬೀದಿಯ ನಿವಾಸಿಗಳೊಂದಿಗೆ ಉಗ್ರ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಡಾವಣೆ ನಿವಾಸಿ ಡಿ.ದೇವರಾಜ ಅರಸು ಮಹಿಳಾ ಅಭಿವೃದ್ಧಿ ಸಂಘದ ಕಾರ್ಯದರ್ಶಿ ನಾಗಲಕ್ಷ್ಮೀ ಮಾತನಾಡಿ, ಬೀದಿಯಲ್ಲಿ ಕಳೆದ 6 ತಿಂಗಳಿಂದ ಸಮಸ್ಯೆಯು ಗಂಭೀರವಾಗಿದ್ದು, ವಾಸ ಮಾಡಲು ಬಹಳ ಕಷ್ಟವಾಗುತ್ತಿದೆ. ಕಲುಷಿತ ನೀರಿನಿಂದಾಗಿ ಅನಾರೋಗ್ಯಪೀಡಿತರಾಗಿ ಬೀದಿಯ ನಿವಾಸಿಗಳು ಪ್ರತಿದಿನ ತಮ್ಮ ಮಕ್ಕಳು ಮರಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದೇ ಆಗಿದೆ. ಆದ್ದರಿಂದ ಈಗಲಾದರೂ ಸದರಿ ಅವ್ಯವಸ್ಥೆಯನ್ನು ಸರಿಪಡಿಸಿಕೊಡಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ನಗರಸಭಾ ಪೌರಾಯುಕ್ತೆ ಎಂ.ಮಾನಸಾ, ಕುಡಿಯುವ ನೀರು ಇಂಜಿನಿಯರ್ ಶಿವಕುಮಾರ್ ಅವರನ್ನು ಸ್ಥಳಕ್ಕೆ ಕರೆಯಿಸಿ ಕೂಡಲೇ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವಂತೆ ಸೂಚನೆ ನೀಡಿದರು. ಅಲ್ಲದೆ ಆ ಭಾಗದ ವಾಟರ್‌ಮನ್ ಸಂದೀಪ್ ಅವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದರು.