ತುರ್ತು ಸಂದರ್ಭದಲ್ಲಿ ಪ್ರಾಣ ಉಳಿಸುವುದು ಹೇಗೆ?

ಮೈಸೂರಿನಲ್ಲಿ ಮಣಿಪಾಲ್ ಆಸ್ಪತ್ರೆಯಿಂದ ಜಾಗೃತಿ ಕಾರ್ಯಕ್ರಮ
ಮೈಸೂರಿನಲ್ಲಿ ಮಣಿಪಾಲ್ ಆಸ್ಪತ್ರೆಯಿಂದ ಜಾಗೃತಿ ಕಾರ್ಯಕ್ರಮ
Published on

ಪ್ರಮುಖ ಮುಖ್ಯಾಂಶಗಳು

  • ಮೈಸೂರಿನಲ್ಲಿ ಮಣಿಪಾಲ್ ಆಸ್ಪತ್ರೆಯಿಂದ ಜಾಗೃತಿ ಕಾರ್ಯಕ್ರಮ
ಮೈಸೂರು: ಹೃದಯಾಘಾತ, ಪಾರ್ಶ್ವವಾಯು (Stroke) ಅಥವಾ ಗಂಭೀರ ಅಪಘಾತಗಳಂತಹ ತುರ್ತು ಸಂದರ್ಭಗಳಲ್ಲಿ, ಮೊದಲ ಕೆಲವು ನಿಮಿಷಗಳು ರೋಗಿಯ ಜೀವ ಉಳಿಸಲು ಅತಿ ಮುಖ್ಯ. ಇಂತಹ ಸಮಯದಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮೈಸೂರಿನ ಮಣಿಪಾಲ್ ಆಸ್ಪತ್ರೆಯು, 2026ರ ಜನವರಿ 18 ಭಾನುವಾರದಂದು 'ತುರ್ತು ಪ್ರತಿಕ್ರಿಯೆ ಮತ್ತು ಮೂಲಭೂತ ಜೀವ ರಕ್ಷಣೆ (BLS)' ಕುರಿತು ಜಾಗೃತಿ ಕಾರ್ಯಕ್ರಮ ವನ್ನು ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ 110ಕ್ಕೂ ಹೆಚ್ಚು ಜನರು ಪಾಲ್ಗೊಂಡು, ತುರ್ತು ಚಿಕಿತ್ಸೆಯ ವಿಧಾನಗಳನ್ನು ಕುತೂಹಲದಿಂದ ಕಲಿತರು. ಸೀನಿಯರ್ ಕನ್ಸಲ್ಟೆಂಟ್ ನ್ಯೂರೋಸರ್ಜನ್ (ಸೆರೆಬ್ರೊವಾಸ್ಕುಲರ್ & ಎಂಡೋವಾಸ್ಕುಲರ್ ಸರ್ಜರಿ) ಡಾ. ಮಕ್ಸೂದ್ ಅಹಮದ್ ಎ.ಆರ್ ಮತ್ತು ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ಡಾ. ಶರತ್ ಬಾಬು ಎನ್. ಎಂ. ಮಾರ್ಗದರ್ಶನ ನೀಡಿದರು. ಆಸ್ಪತ್ರೆಯ ತುರ್ತು ಚಿಕಿತ್ಸಾ ತಜ್ಞರ ತಂಡದವರಾದ ಡಾ. ಸೈಯದ್ ಮುಶೀರುದ್ದೀನ್, ಡಾ. ಗೌತಮ್ ಚಂದ್ರ, ಡಾ. ರಾಯಲ ಸಗುಣ ದತ್ತ ಮತ್ತು ಡಾ. ಅಮೀನಾ ಹುಸ್ನಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತಜ್ಞ ವೈದ್ಯರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮವು, ತುರ್ತು ವೈದ್ಯಕೀಯ ಸೇವೆಗಳ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಯಶಸ್ವಿಯಾಗಿ ತಲುಪಿತು.
ಈ ಕಾರ್ಯಕ್ರಮದ ಮುಖ್ಯ ಉದ್ದೇಶವು ತುರ್ತು ಪರಿಸ್ಥಿತಿಯ ಪ್ರತಿಕ್ರಿಯೆಯ ಬಗ್ಗೆ ಜನರಲ್ಲಿರುವ ಗೊಂದಲಗಳನ್ನು ನಿವಾರಿಸುವುದಾಗಿತ್ತು. ಜೀವ ಉಳಿಸುವುದು ಕೇವಲ ವೈದ್ಯರ ಜವಾಬ್ದಾರಿಯಲ್ಲ; ಸರಿಯಾದ ಅರಿವು ಮತ್ತು ಆತ್ಮವಿಶ್ವಾಸವಿದ್ದರೆ, ವೈದ್ಯಕೀಯ ಸಹಾಯ ಸಿಗುವ ಮೊದಲು ಯಾರು ಬೇಕಾದರೂ ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂಬ ಶಕ್ತಿಯುತ ಸಂದೇಶವನ್ನು ಈ ಕಾರ್ಯಕ್ರಮವು ನೀಡಿತು.
“ಅನೇಕ ಜನರು ತುರ್ತು ಪರಿಸ್ಥಿತಿಗಳಲ್ಲಿ ಏನು ಮಾಡಬೇಕೆಂದು ತಿಳಿಯದೆ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡುತ್ತಾರೆ. 'FAST' ಸೂತ್ರವನ್ನು ಬಳಸಿಕೊಂಡು ಪಾರ್ಶ್ವವಾಯುವಿನ (Stroke) ಆರಂಭಿಕ ಲಕ್ಷಣಗಳನ್ನು ಗುರುತಿಸಿ: F – ಮುಖ ಸೊಟ್ಟಗಾಗುವುದು (Facial deviation), A – ಕೈಗಳಲ್ಲಿ ದೌರ್ಬಲ್ಯ (Arm weakness), S – ಮಾತನಾಡಲು ತೊಂದರೆ (Speech difficulty), T – ತುರ್ತು ಸೇವೆಗೆ ಕರೆ ಮಾಡುವ ಸಮಯ (Time to call). ತಕ್ಷಣದ ಚಿಕಿತ್ಸೆಯು ತೀವ್ರ ಅಂಗವೈಕಲ್ಯ ಮತ್ತು ಓಡಾಡಲು ಸಾಧ್ಯವಾಗದ ಸ್ಥಿತಿಯನ್ನು ತಡೆಯಬಹುದು," ಎಂದು ಡಾ. ಮಕ್ಸೂದ್ ಅಹಮದ್ ಎ. ಆರ್. ಈ ಕಾರ್ಯಕ್ರಮದಲ್ಲಿ ತಿಳಿಸಿದರು. 
“ಆಸ್ಪತ್ರೆಗಿಂತ ಹೊರಗಡೆ ಅಂದರೆ ಮನೆ, ಕಚೇರಿ ಅಥವಾ ಪ್ರಯಾಣದ ಸಮಯದಲ್ಲಿ ಹೃದಯಾಘಾತ ಸಂಭವಿಸುವ ಪ್ರಕರಣಗಳು ಹೆಚ್ಚುತ್ತಿವೆ. ಆ ಸಮಯದಲ್ಲಿ ಹತ್ತಿರ ಇರುವವರಿಗೆ ಪ್ರಾಥಮಿಕ ತುರ್ತು ಚಿಕಿತ್ಸೆಯ (Basic Life Support) ಅರಿವಿದ್ದರೆ ಮತ್ತು ಅವರು ಗಾಬರಿಯಾಗದೆ ಸಹಾಯ ಮಾಡಿದರೆ, ವೈದ್ಯರು  ಬರುವವರೆಗೂ ಅಥವಾ ಹೆಚ್ಚಿನ ವೈದ್ಯಕೀಯ ನೆರವು ಸಿಗುವವರೆಗೆ  ಆ ವ್ಯಕ್ತಿಯ ಪ್ರಾಣವನ್ನು ಉಳಿಸಲು ಸುಲಭವಾಗುತ್ತದೆ.” ಎಂದು ಡಾ. ಶರತ್ ಬಾಬು ಎನ್. ಎಂ. ವಿವರಿಸಿದರು.
ಆಸ್ಪತ್ರೆಯ ತುರ್ತು ಚಿಕಿತ್ಸಾ ತಜ್ಞರಾದ ಡಾ. ಸೈಯದ್ ಮುಶೀರುದ್ದೀನ್, ಡಾ. ಗೌತಮ್ ಚಂದ್ರ, ಡಾ. ರಾಯಲ ಸಗುಣ ದತ್ತ ಮತ್ತು ಡಾ. ಅಮೀನಾ ಹುಸ್ನಾ ಅವರು, ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೇಗೆ ಸಹಾಯ ಮಾಡಬೇಕು ಎನ್ನುವುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ಯಾರಾದರೂ ಪ್ರಜ್ಞೆ ತಪ್ಪಿ ಬಿದ್ದಾಗ ಅಥವಾ ಅಪಘಾತವಾದಾಗ ಗಾಬರಿಯಾಗದೆ ಏನು ಮಾಡಬೇಕು ಮತ್ತು ಸಿ.ಪಿ.ಆರ್ (CPR) ಮೂಲಕ ಹೃದಯದ ಬಡಿತ ನಿಂತಾಗ ಜೀವ ಉಳಿಸುವುದು ಹೇಗೆ ಎನ್ನುವುದನ್ನು ಎಲ್ಲರಿಗೂ ಕಲಿಸಿಕೊಟ್ಟರು.
ಈ ಕಾರ್ಯಕ್ರಮದ ವಿಶೇಷವೇನೆಂದರೆ, ವಿಷಯಗಳನ್ನು ಎಲ್ಲರಿಗೂ ಅರ್ಥವಾಗುವಂತೆ ಬಹಳ ಸುಲಭವಾಗಿ ಹೇಳಿಕೊಡಲಾಯಿತು. ಬಂದಿದ್ದ ಸಾರ್ವಜನಿಕರು ಆತ್ಮವಿಶ್ವಾಸದಿಂದ ಪ್ರಶ್ನೆಗಳನ್ನು ಕೇಳಿ, ಇಲ್ಲಿ ಕಲಿಸಿದ ವಿಧಾನಗಳನ್ನು ಪ್ರಾಯೋಗಿಕವಾಗಿ ಮಾಡಿ ನೋಡಿದರು. ನಮ್ಮ ದಿನನಿತ್ಯದ ಜೀವನದಲ್ಲಿ ಎದುರಾಗುವ ಘಟನೆಗಳನ್ನೇ ಉದಾಹರಣೆಯಾಗಿ ಇಟ್ಟುಕೊಂಡು ಈ ತರಬೇತಿಯನ್ನು ನೀಡಲಾಯಿತು. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಎಲ್ಲಾ ಭಾಗಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಈ ಸಭೆಯು "ಮುನ್ನೆಚ್ಚರಿಕೆ ಜೀವ ಉಳಿಸುತ್ತದೆ" ಎಂಬ ಸ್ಪಷ್ಟ ಸಂದೇಶದೊಂದಿಗೆ ಮುಕ್ತಾಯವಾಯಿತು. ತುರ್ತು ಸಂದರ್ಭಗಳನ್ನು ಎದುರಿಸಲು ಬೇಕಾದ ಅಗತ್ಯ ತರಬೇತಿಯನ್ನು ಜನರಿಗೆ ನೀಡುವ ಮೂಲಕ, ಮಣಿಪಾಲ್ ಆಸ್ಪತ್ರೆ ಮೈಸೂರು ತನ್ನ ಸೇವೆಯನ್ನು ಕೇವಲ ಆಸ್ಪತ್ರೆಗೆ ಸೀಮಿತಗೊಳಿಸದೆ ಮನೆ, ಕೆಲಸದ ಸ್ಥಳ ಮತ್ತು ಸಾರ್ವಜನಿಕ ಪ್ರದೇಶಗಳಿಗೂ ವಿಸ್ತರಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net