ಶಿಕ್ಷಕರ ಕೊರತೆ ಇದ್ದರೂ ಉತ್ತಮ ಫಲಿತಾಂಶ ಹೇಗೆ ಸಾಧ್ಯ?

 ಎಚ್.ವಿಶ್ವನಾಥ್
ಎಚ್.ವಿಶ್ವನಾಥ್
Published on
ರಾಜ್ಯದ ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೂ ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ.94 ರಷ್ಟು ಬರುಲು ಹೇಗೆ ಸಾಧ್ಯವಾಯಿತು? ರಾಜ್ಯದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.
ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ತೋರಿಸಲು ಹೋಗಿ ಶಿಕ್ಷಣದ ಗುಣಮಟ್ಟ ಹಾಳು ಮಾಡಿದ್ದಾರೆ. ಆಂತರಿಕ ಮೌಲ್ಯ ಮಾಪನದ ವೇಳೆ ಎಲ್ಲರಿಗೂ 20ಕ್ಕೆ 20 ಅಂಕಗಳನ್ನು ನೀಡಿದ್ದಾರೆ. ಇನ್ನು ಉಳಿದ 80 ಮಾರ್ಕ್ಸ್‌ನಲ್ಲಿ 13 ನಂಬರ್ ಪಡೆದರೂ ಪಾಸಾಗುತ್ತಾರೆ. ಇದು ಪಿಯುಸಿ ತರಗತಿಯಿಂದ ಕಾಲೇಜು ಬಿಡುವವರ ಸಂಖ್ಯೆ ಹೆಚ್ಚಾಗುವಂತೆ ಮಾಡುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕಾಪಿ ಹೊಡೆಸಲು ಸಿಸಿ ಟಿವಿ ಕ್ಯಾಮರಾಗಳನ್ನು ಹಲವೆಡೆ ಆಫ್ ಮಾಡಿಸಿದ್ದರು. ಇದೇ ರೀತಿ ಅಕ್ರಮ ನಡೆದಿದ್ದು, ಮೌಲ್ಯಮಾಪನದಲ್ಲಿ ಧಾರಾಳವಾಗಿ ಅಂಕ ನೀಡಲು ಮೌಖಿಕ ಸೂಚನೆ ನೀಡಲಾಗಿತ್ತು. ಹೀಗಾಗಿ ಎಲ್ಲರನ್ನೂ ಪಾಸು ಮಾಡಲಾಗಿದೆ. ಇದು ಪಾಲಕರಿಗೆ, ವಿದ್ಯಾರ್ಥಿಗಳಿಗೆ ಸಂತಸ ತರಿಸಿದೆ. ಆದರೆ, ಈ ರೀತಿ ಶೈಕ್ಷಣಿಕ ಗುಣಮಟ್ಟಕ್ಕೆ ಅಡ್ಡಿ ಎದುರಾಗುತ್ತಿರುವುದು ಅನೇಕ ಶಿಕ್ಷಕರಿಗೂ ಆತಂಕವುಂಟು ಮಾಡಿದೆ ಎಂದರು.
ರಾಜ್ಯದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಯಾದಗಿರಿ ಜಿಲ್ಲೆಯಲ್ಲಿ ಶೇ.41, ಬಳ್ಳಾರಿ ಶೇ.31, ಬೀದರ್ ಶೇ.21 ಶಿಕ್ಷಕರ ಕೊರತೆ ಇದೆ. ಹೀಗೆ ಎಲ್ಲ ಜಿಲ್ಲೆಗಳಲ್ಲೂ ಶಿಕ್ಷಕರ ಕೊರತೆ ಇದೆ. ಆದರೂ ದಾಖಲೆ ಫಲಿತಾಂಶ ಬಂದಿದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಶುಕ್ರವಾರ ಹಂಚಿಕೆ ಮಾಡಿದ್ದು ಮೀಸಲಾತಿಯೇ ಎಂದು ಪ್ರಶ್ನೆ ಮಾಡಿದ ಅವರು, ಒಳಮೀಸಲಾತಿ ಹಂಚಿಕೆಯಲ್ಲಿ ಶೋಷಿತ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದು ಆರೋಪ ಮಾಡಿದರು.
ಸಚಿವ ಎಚ್.ಸಿ.ಮಹದೇವಪ್ಪ ಶೋಷಿತ ಸಮುದಾಯಕ್ಕೆ ಮಾರಕ. ದೇವರಾಜ ಅರಸರು ಏನೇನು ಕೊಡುಗೆ ಕೊಟ್ಟಿದ್ದಾರೋ ಅವನ್ನೆಲ್ಲಾ ಕುಲಗೆಡಿಸಿ ಹೋಗುತ್ತಿದ್ದಾರೆ. 5 ಕೆಜಿ ಅಕ್ಕಿ, ಹೆಣ್ಮಕ್ಕಳಿಗೆ 2 ಸಾವಿರ ರೂ. ಕೊಟ್ಟಿರುವುದೇ ಇವರ ಸಾಧನೆ ಎಂದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಯುಸಿ ಫೇಲ್. ಅವನನ್ನು ಶಿಕ್ಷಣ ಸಚಿವನನ್ನಾಗಿ ಮಾಡಿದ್ದಾರೆ. ಈ ಮಾತನ್ನು ಆತನ ಅಣ್ಣ ಕುಮಾರ ಬಂಗಾರಪ್ಪನವರೇ ಹೇಳಿದ್ದರು. ಇಂತಹ ಶಿಕ್ಷಣ ಸಚಿವನನ್ನು ಇಟ್ಟುಕೊಂಡು ರಾಜ್ಯದ ಗತಿ ಏನಾಗಬೇಕು? ಹಿಂದಿ ಭಾಷೆಗೂ ಗ್ರೇಡ್ ಬದಲು ಅಂಕಗಳನ್ನೇ ಕೊಡುವಂತೆ ನ್ಯಾಯಾಲಯ ಹೇಳಿದೆ. ಕೋರ್ಟ್ ಛೀಮಾರಿ ಹಾಕಿದ ಎರಡೇ ದಿನಕ್ಕೆ ಫಲಿತಾಂಶ ಪ್ರಕಟವಾಯಿತು. ಹಾಗಾದರೆ ಮಾರ್ಕ್ಸ್ ಎರಡೇ ದಿನಗಳಲ್ಲಿ ಹೇಗೆ ಕೊಡಲಾಗಿದೆ? ಎಂದು ಟೀಕಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net