ಬನ್ನೂರು: ಪಟ್ಟಣದ ಸಮೀಪದ ಯಾಚೇನಹಳ್ಳಿ ಗ್ರಾಮದ ರೈತ ಕ್ಯಾತೇಗೌಡರ ಮನೆಯಲ್ಲಿ ವಿದ್ಯುತ್‌ಶಾರ್ಟ್ ಸರ್ಕ್ಯೂಟ್‌ನಿಂದ ಮನೆ ಭಾಗಶಃ ಬೆಂಕಿಗೆ ಆಹುತಿಯಾಗಿದ್ದು, ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿದ್ದು, ಮನೆಯಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯಾಚೇನಹಳ್ಳಿ ಗ್ರಾಮದಲ್ಲಿ ಗುರುವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ ಎಂದು ಸೆಸ್ಕ್ ಪತ್ರಿಕೆಗಳ ಮುಖೇನ ಜನರಿಗೆ ಮಾಹಿತಿ ನೀಡಿತ್ತು. ಗುರುವಾರ ರಾತ್ರಿ ವಿದ್ಯುತ್ ಪೂರೈಸಿದ್ದರು. ಈ ವೇಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಕ್ಯಾತೇಗೌಡರರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡು ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಬೆಂಕಿಗೆ ಆಹುತಿಯಾಗಿ, ಮನೆಯಿಂದ ಈಚೆಗೆ ಬರಲಾರದೆ ಕುಟುಂಬದವರು ಕಿರುಚಾಡಲು ಆರಂಭಿಸಿದ್ದಾರೆ. ಕೊನೆಗೆ ನೆರೆಹೊರೆಯವರ ಸಹಾಯದಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿ ಹೊರಗೆ ಬಂದಿದ್ದಾರೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ಗೆ ಇಲಾಖೆಯ ನಿರ್ಲಕ್ಷ್ಯವೇ ಪ್ರಮುಖ ಕಾರಣ. ಅಕ್ಕಪಕ್ಕದ ಮನೆಯ ಟಿವಿ, ಬಲ್ಬ್‌ಗಳು ಕೂಡ ಹಾನಿಯಾಗಿವೆ. ಆಗಿರುವ ನಷ್ಟವನ್ನು ಇಲಾಖೆಯ ಅಧಿಕಾರಿಗಳೇ ಭರಿಸಬೇಕಾಗುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.