ವೇತನ ಹೆಚ್ಚಳಕ್ಕೆ ಆಗ್ರಹಿಸಿ ಬಿಸಿಯೂಟ ಸಿಬ್ಬಂದಿಯಿಂದ ಪ್ರತಿಭಟನೆ

 ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ಸಿಬ್ಬಂದಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಪಿ.ಎಸ್.ಸಂಧ್ಯಾ, ಕೆ.ವಿ.ಉಮಾ,  ರಾಜೇಶ್ವರಿ, ಮಹದೇವಮ್ಮ,  ಮಾಲಮ್ಮ, ಸೌಮ್ಯಾ, ಕಾಳಮ್ಮ, ಸವಿತಾ ಇನ್ನಿತರರಿದ್ದರು.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ಸಿಬ್ಬಂದಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಪಿ.ಎಸ್.ಸಂಧ್ಯಾ, ಕೆ.ವಿ.ಉಮಾ, ರಾಜೇಶ್ವರಿ, ಮಹದೇವಮ್ಮ, ಮಾಲಮ್ಮ, ಸೌಮ್ಯಾ, ಕಾಳಮ್ಮ, ಸವಿತಾ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಕ್ಷರ ದಾಸೋಹ ಕಾರ್ಮಿಕರ ಸಂಘದಿಂದ ಪ್ರತಿಭಟನೆ
  • ಗೌರವಧನ ಹೆಚ್ಚಳಕ್ಕೆ ಆಗ್ರಹ
ಮೈಸೂರು: ಬಿಸಿಯೂಟ ನೌಕರರ ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದಿಂದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು  ಮಧ್ಯಾಹ್ನ ಪ್ರತಿಭಟನೆ ನಡೆಯಿತು.
ಬಿಸಿಯೂಟ ಯೋಜನೆಗೆ ಬೆನ್ನೆಲುಬಾಗಿರುವವರು ಬಿಸಿಯೂಟ ಸಿಬ್ಬಂದಿ.  ಇವರು ಕಳೆದ 25 ವರ್ಷಗಳಿಂದ ಅತ್ಯಲ್ಪ ಗೌರವಧನಕ್ಕೆ ಕೆಲಸ ಮಾಡುತ್ತಿದ್ದಾರೆ. 
ಮಾಸಿಕವಾಗಿ 4600-4700 ರೂ.ಪಡೆಯುವ ಬಿಡಿಗಾಸು ಎರಡು ಮೂರು ತಿಂಗಳಿಗೊಮ್ಮೆ ಬಿಡುಗಡೆಯಾಗುತ್ತದೆ. ಈಗಿನ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಕುಟುಂಬ ನಿರ್ವಹಣೆಯೊಂದಿಗೆ ತಿಂಗಳ ಮನೆ ಬಾಡಿಗೆ, ಮಕ್ಕಳ ಶಿಕ್ಷಣ, ಅನಾರೋಗ್ಯಕ್ಕೆ  ಹಣ ಹೊಂದಿಸುವುದು ಕಷ್ಟಕರವಾಗಿದೆ ಎಂದು ಅಳಲು ತೊಡಿಕೊಂಡರು.
ಸಿಬ್ಬಂದಿಗೆ ಸೇವಾ ಹಿರಿತನದ ಭತ್ಯೆ ಇಲ್ಲ. ಕೆಲಸದ ನಿಯಮಾವಳಿ ಸ್ಪಷ್ಟ ನಿರ್ದೇಶನ ಇದ್ದರೂ ಶಾಲೆಗಳಲ್ಲಿ ಆಯಾಗಳ ತರಹ ‘ಡಿ’ ಗ್ರೂಪ್ ದರ್ಜೆ ನೌಕರರ ಕೆಲಸ ನೀಡಲಾಗುತ್ತಿದೆ. ಅಪೌಷ್ಟಿಕತೆ ನೀಗಿಸಲು ಬಿಸಿಯೂಟ ಯೋಜನೆ ನಿರಂತರವಾಗಿ ಬೇಕಾಗಿದೆ. 
ಆದ್ದರಿಂದ ಇವರನ್ನು ಸರ್ಕಾರಿ ನೌಕರನಾಗಿ ನೇಮಿಸಿಕೊಳ್ಳಬೇಕು. ಭವಿಷ್ಯದ ನಾಗರಿಕರನ್ನು ರೂಪಿಸುವ ಮಹತ್ತರ ಜವಾಬ್ದಾರಿ ಹೊಂದಿರುವ ಸಿಬ್ಬಂದಿಯ ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಭವಿಷ್ಯ ಮಂಕಾಗಿವೆ ಎಂದು ಹೇಳಿದರು.
ಇದೀಗ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಹೆಸರಿನಲ್ಲಿ ಸುಮಾರು 40 ಸಾವಿರ ಶಾಲೆ ವಿಲೀನಗೊಳಿಸುವ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಮುಂದಾಗಿದ್ದು  ಬಡ ರೈತ, ಕಾರ್ಮಿಕರ, ಜನಸಾಮಾನ್ಯರ ಮಕ್ಕಳ ಹಾಗೂ ಬಿಸಿಯೂಟ ಕಾರ್ಮಿಕರ ಭವಿಷ್ಯದ ಮೇಲೆ ತೂಗುಗತ್ತಿ ಇದೆ. ಈ ನೀತಿಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಬಿಸಿಯೂಟ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ, ಇಪಿಎಫ್, ಇಎಸ್‌ಐ, ಹತ್ತಿ ಬಟ್ಟೆಯ ಸಮವಸ್ತ್ರ, ಗುರುತಿನ ಚೀಟಿ, ಪಿಂಚಣಿ ಮುಂತಾದ ಸೌಲಭ್ಯ ನೀಡಬೇಕು. ರಾಜ್ಯದ ಕಾರ್ಮಿಕ ಇಲಾಖೆ ಎಲ್ಲ ದುಡಿಯುವ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆ ಜಾರಿಗೊಳಿಸಿದೆ. ಅದರಂತೆ ಸರ್ಕಾರಿ ಹಾಸ್ಟೆಲ್, ಅತಿಥಿ ಗೃಹ, ಮದುವೆ ಛತ್ರಗಳಲ್ಲಿ ಅಡುಗೆ ಕೆಲಸ ಮಾಡುವ ಅಡುಗೆಯವರಿಗೆ ಮತ್ತು ಸಹಾಯಕರಿಗೂ ಕನಿಷ್ಠ ವೇತನ ನಿಗದಿಗೊಳಿಸಿದೆ. 
ಆದರೆ, ಈ ಷೆಡ್ಯೂಲ್‌ನಲ್ಲಿ ಬಿಸಿಯೂಟ ಸಿಬ್ಬಂದಿಯನ್ನು  ಹೊರಗಿಡಲಾಗಿದೆ. ಬಿಸಿಯೂಟ ಕಾರ್ಮಿಕರನ್ನು ಕನಿಷ್ಠ ವೇತನ ಕಾಯ್ದೆಯ ಷೆಡ್ಯೂಲ್‌ನಲ್ಲಿ ಬರುವಂತೆ ಮಾಡಿ ಕನಿಷ್ಠ ವೇತನ ನೀಡಬೇಕು. ಈ ಬಾರಿಯ ಬಜೆಟ್‌ನಲ್ಲಿ ಬಿಸಿಯೂಟ ಕಾರ್ಮಿಕರಿಗೆ ಗೌರವ ಧನ ಹೆಚ್ಚಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಜೆಟ್‌ನಲ್ಲಿ ಬಿಸಿಯೂಟ ನೌಕರರ ಗೌರವಧನ ಹೆಚ್ಚಿಸಬೇಕು. ಬಿಸಿಯೂಟ ನೌಕರರ ಸೇವೆಯನ್ನು ಕಾಯಂಗೊಳಿಸಬೇಕು. ಮಾಸಿಕ ವೇತನವನ್ನು ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಕಾರ್ಮಿಕರ ಬ್ಯಾಂಕ್ ಖಾತೆಗೆ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿ ತಿಂಗಳು ವೇತನ ರಸೀದಿ ನೀಡಬೇಕು. ಸುರಕ್ಷಿತ ನಿವೃತ್ತಿ ಬದುಕು ಖಾತ್ರಿಪಡಿಸುವುದಕ್ಕಾಗಿ ನಿವೃತ್ತಿ ವೇತನಕ್ಕೆ ಒಳಪಡಿಸಿ, ಅಲ್ಲಿಯವರೆಗೆ 5 ಲಕ್ಷ ರೂ.ಇಡುಗಂಟು ನೀಡಬೇಕು. ಬಿಸಿಯೂಟ ಸಿಬ್ಬಂದಿಯನ್ನು ಜೀವ ವಿಮೆಗೆ ಒಳಪಡಿಸಿ ಇಲಾಖೆಯಿಂದ ಪ್ರೀಮಿಯಂ ಪಾವತಿಸಬೇಕು.ಬಿಸಿಯೂಟ ಸಿಬ್ಬಂದಿಗೆ 10 ತಿಂಗಳ ಬದಲಾಗಿ 12 ತಿಂಗಳು ಗೌರವಧನ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ರಾಜ್ಯ ಕಾರ್ಯದರ್ಶಿ ಪಿ.ಎಸ್.ಸಂಧ್ಯಾ, ನಗರ ಅಧ್ಯಕ್ಷೆ ಕೆ.ವಿ.ಉಮಾ, ರಾಜ್ಯ ಉಪಾಧ್ಯಕ್ಷೆರಾದ ರಾಜೇಶ್ವರಿ, ಮಹದೇವಮ್ಮ, ಜಿಲ್ಲಾ ಮುಖಂಡರಾದ ಮಾಲಮ್ಮ, ಸೌಮ್ಯಾ, ಕಾಳಮ್ಮ, ಸವಿತಾ, ಎಐಯುಟಿಯುಸಿ ಜಿಲ್ಲಾ ಸದಸ್ಯ ಶಿವಾನಂದ್ ಇನ್ನಿತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net