ಖಾಲಿ ಬಿಂದಿಗೆ ಹಿಡಿದು, ಕಪ್ಪು ಪಟ್ಟಿ ಧರಿಸಿ ತಮಿಳುನಾಡಿಗೆ ನೀರು ಬಿಡಲು ವಿರೋಧ

ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ ಪ್ರತಿಭಟನೆ ನಡೆಯಿತು.
ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ ಪ್ರತಿಭಟನೆ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಕಾವೇರಿ ಅಚ್ಚುಕಟ್ಟು ಭಾಗದ ಸಮಸ್ಯೆ ಬಗ್ಗೆ ವಾಸ್ತವ ಸಂಗತಿ ಮಂಡಿಸಿಲ್ಲ
  • ನಗರಗಳು ಮತ್ತು ಗ್ರಾಮಗಳ ಕುಡಿಯುವ ನೀರಿನ ಅಭಾವವನ್ನು ನೀಗಿಸುವುದು ಕಷ್ಟ ಸಾಧ್ಯವಾಗಲಿದೆ

ಮೈಸೂರು:

ತಮಿಳುನಾಡಿಗೆ 15 ದಿನಗಳ ಕಾಲ 3500 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ (ಸಿಡಬ್ಲುೃಆರ್‌ಸಿ) ಆದೇಶ ನೀಡಿರುವುದರ ವಿರುದ್ಧ ನಗರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ಕಾವೇರಿ ನೀರು ನಿರ್ವಹಣಾ ಮಂಡಳಿ ನೀಡಿರುವ ಆದೇಶ ಮರು ಪರಿಶೀಲನೆ ಮಾಡುವಂತೆ ಒತ್ತಾಯಿಸಿ, ರಸ್ತೆ ಸಂಚಾರ ತಡೆ, ಉರುಳುಸೇವೆ, ಧರಣಿ ನಡೆಸುವ ಮೂಲಕ ವಿರೋಧ ವ್ಯಕ್ತಪಡಿಸಲಾಯಿತು.
ಮೈಸೂರು-ನಂಜನಗೂಡು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಕಬ್ಬು ಬೆಳೆಗಾರ ಸಂಘದ ಪದಾಧಿಕಾರಿಗಳು, ನೀರು ಬಿಡುವಂತೆ ನೀಡಿರುವ ತೀರ್ಪನ್ನು ಮರು ಪರಿಶೀಲಿಸಬೇಕು, ಅದಕ್ಕಾಗಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ನೀರು ನಿರ್ವಹಣಾ ಮಂಡಳಿ ಮುಂದೆ ರಾಜ್ಯದ ನೀರಾವರಿ ಸಚಿವ ರಾಮಲಿಂಗಾರೆಡ್ಡಿ ಅವರು, ಕಾವೇರಿ ಅಚ್ಚುಕಟ್ಟು ಭಾಗದ ಸಮಸ್ಯೆ ಬಗ್ಗೆ ವಾಸ್ತವ ಸಂಗತಿ ಮಂಡಿಸಿಲ್ಲ. ಇವರ ನಿರ್ಲಕ್ಷತನ ನೀರು ಬಿಡುವಂತೆ ಆದೇಶ ಬರಲು ಕಾರಣವಾಯಿತು ಎಂದು ದೂರಿದರು.
ಕೂಡಲೇ ಕಾವೇರಿ ಪ್ರಾಧಿಕಾರದ ಮುಂದೆ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ನೀರು ಬಿಡಬಾರದು, ನೀರು ಬಿಟ್ಟರೆ ಕಾವೇರಿ ಕೊಳ್ಳದ ರೈತರು, ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದೇವೆ. ಸಚಿವ ಎಂ.ಬಿ.ಪಾಟೀಲ್ ಅವರು ನೀರು ಬಿಡಬೇಕಾಗುತ್ತದೆ ಎಂದು ಲಘುವಾಗಿ ಹೇಳುತ್ತಿದ್ದಾರೆ. ಕಾವೇರಿ ವಿಚಾರದಲ್ಲಿ ಗಂಭೀರವಾಗಿ ವರ್ತಿಸಬೇಕು, ರಾಜ್ಯದ ರೈತರ ಪರ ನಿಲ್ಲಬೇಕು ಎಂದು ಹೇಳಿದರು.
ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿಯಲ್ಲಿ ಪ್ರಸ್ತುತ ಇರುವ ನೀರು ನಮ್ಮ ರಾಜ್ಯದ ಕುಡಿಯುವ ನೀರಿನ ಅಗತ್ಯತೆಗೆ, ಬೆಳೆದು ನಿಂತ ರೈತರ ಬೆಳೆಗಳ ರಕ್ಷಣೆಗೆ ಬೇಕಿದೆ. ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಕಾವೇರಿ ನೀರನ್ನೇ ನೆಚ್ಚಿಕೊಂಡಿರುವ ನಗರಗಳು ಮತ್ತು ಗ್ರಾಮಗಳ ಕುಡಿಯುವ ನೀರಿನ ಅಭಾವವನ್ನು ನೀಗಿಸುವುದು ಕಷ್ಟ ಸಾಧ್ಯವಾಗಲಿದೆ ಎಂದರು.
ಆಗಸ್ಟ್‌ನಲ್ಲೂ ಮಳೆ ಕಡಿಮೆ ಬರಲಿದೆ ಎಂದು ವರದಿಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಜನರ ಕುಡಿಯುವ ನೀರು ಮತ್ತು ರೈತರ ಬೆಳೆದು ನಿಂತ ಬೆಳೆಗಳ ಹಿತಾಸಕ್ತಿ ಬಲಿ ಕೊಟ್ಟು ನೀರು ಹರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕಬಿನಿ ಕಾವೇರಿ ನಮ್ಮದು, ಬಿಡಬೇಡಿ ಬಿಡಬೇಡಿ, ನೀರು ಬಿಡಬೇಡಿ, ಕಾವೇರಿ ನಮ್ಮ ತಾಯಿ ಕಾವೇರಿ ಉಳಿಸಿ ಎಂದು ಘೋಷಣೆ ಕೂಗುತ್ತಾ ಕೈಯಲ್ಲಿ ಖಾಲಿ ಬಿಂದಿಗೆ ಹಿಡಿದು ಕೈ-ಹಣೆಗೆ ಕಪ್ಪುಪಟ್ಟಿ ಧರಿಸಿ ರಸ್ತೆ ಸಂಚಾರ ತಡೆ ನಡೆಸಿದರು. ಕೆಲಕಾಲ ನಂಜನಗೂಡು ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮಾರ್ಬಳ್ಳಿ ನೀಲಕಂಠಪ್ಪ, ವರಕೋಡು ನಾಗೇಶ್, ಲಕ್ಷ್ಮೀಪುರ ವೆಂಕಟೇಶ್, ಕೆ.ಜಿ.ಗುರುಸ್ವಾಮಿ, ಕುರುಬೂರು ಸಿದ್ದೇಶ್, ಪಿ.ಪರಶಿವಮೂರ್ತಿ, ಕಾಟೂರು ನಾಗೇಶ್, ಅಂಬಳೆ ಮಂಜುನಾಥ್, ವಾಜಮಂಗಲ ಮಹಾದೇವ, ಜಯರಾಮು, ಶಿವಣ್ಣ, ಮಹೇಶ್, ಮಿಲಿಟರಿ ಕುಮಾರ್, ನಂಜುಂಡಸ್ವಾಮಿ, ರಂಗರಾಜು, ಪ್ರಭಾಕರ್, ಉಮೇಶ್, ಬಾಲು, ಸತೀಶ್, ಗಿರಿಯಣ್ಣ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net