ಶ್ರೀ ರಾಮಕೃಷ್ಣ ಆಶ್ರಮದ ಶತಮಾನೋತ್ಸವ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸ್ವಾಮಿ ಗೌತಮಾನಂದಜಿ ಮಹಾರಾಜ್, ಸ್ವಾಮಿ ಮುಕ್ತಿದಾನಂದ, ಶಾಂತಾತ್ಮಾನಂದ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ , ಮಾಜಿ ಉಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು
ಮೈಸೂರು: ಸ್ವಾಮಿ ವಿವೇಕಾನಂದರ ಅನೇಕ ಆಯಾಮಗಳ ಪೈಕಿ ‘ಹಿಂದು ಧರ್ಮ ಮತ್ತು ರಾಷ್ಟ್ರೀಯತೆ ಎರಡೂ ಒಂದೇ’ ಎನ್ನುವುದು ಈಗ ಪ್ರಸ್ತುತ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಶತಮಾನೋತ್ಸವ ಅಂಗವಾಗಿ ವಿವೇಕಾನಂದ ಸಭಾಂಣದಲ್ಲಿ ಸೋಮವಾರ ಆಯೋಜಿಸಿದ್ದ ‘ಸಮರ್ಪಣಾ ಸಮಾವೇಶ’ ಭಗವಾನ್ ಶ್ರೀ ರಾಮಕೃಷ್ಣರಿಗೆ ನೂರು ವರ್ಷಗಳ ಸತತ ಸೇವೆಯ ಸಾಂಕೇತಿಕ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಇಡೀ ಜಗತ್ತಿನಲ್ಲಿ ಬಹಳ ಗೊಂದಲ ಸೃಷ್ಟಿಯಾಗಿದೆ. ಮಾನವನ ಮನಸ್ಸು ಬಹಳ ಕಲ್ಮಶವಾಗಿದೆ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿಲ್ಲ. ನಾಲ್ಕು ಜನರಿಗೆ ಒಳ್ಳೆಯದು ಮಾಡುವ ಭಾವನೆಯೂ ಇಲ್ಲ. ಧರ್ಮ ಎಲ್ಲರನ್ನು ಒಂದು ಮಾಡಬೇಕು. ಆದರೆ ಧರ್ಮವೇ ಎಲ್ಲರನ್ನು ಬೇರೆ ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸ್ವಾಮಿ ವಿವೇಕಾನಂದರು ಧರ್ಮ ಎಂದರೆ ಏನು ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ. ಮುಖ್ಯವಾಗಿ ಹಿಂದು ಧರ್ಮದ ಬಗ್ಗೆ ಸ್ಪಷ್ಟವಾದ ಪರಿಕಲ್ಪನೆ ಇದೆ. ಈ ಸಂಬಂಧ ಅನೇಕ ಆಯಾಮ ನೀಡಿದ್ದಾರೆ. ಈ ಪೈಕಿ ಹಿಂದು ಧರ್ಮ ಮತ್ತು ರಾಷ್ಟ್ರೀಯತೆ ಎರಡೂ ಒಂದೇ ಎನ್ನುವುದು ಪ್ರಸ್ತುತ ಮುಖ್ಯವಾಗುತ್ತದೆ ಎಂದರು.
ಹಿಂದು ಧರ್ಮದಲ್ಲಿ ಹುಟ್ಟಿ ನೆಲ ಮತ್ತು ಭೂಮಿತಾಯಿಯನ್ನು ಪೂಜಿಸುತ್ತೇವೆ. ನಾವು ಬದುಕಿರುವುದೇ ತಾಯಿ ಗರ್ಭದಿಂದ, ಭೂತಾಯಿಂದ ಎಂದು ತಿಳಿದಿದ್ದೇವೆ. ಈ ನಂಬಿಕೆಯಿಂದ ನಮ್ಮ ರಾಷ್ಟ್ರೀಯತೆ ಮತ್ತು ಧರ್ಮ ಎರಡೂ ಒಂದಾಗುತ್ತದೆ. ಧರ್ಮ ಅರ್ಥವಾದವರಿಗೆ ಮಾತ್ರ ಹಿಂದು ಧರ್ಮ ಮತ್ತು ಭಾರತೀಯತೆ ಎರಡು ಒಂದೇ ಎಂದು ತಿಳಿಯುತ್ತದೆ ಎಂದರು.
ಭಾರತೀಯರಾದ ನಾವೆಲ್ಲರೂ ಬುದ್ಧಿವಂತ, ಜ್ಞಾನವಂತರಾಗಿದ್ದೇವೆ. ಆದರೆ ನಮ್ಮ ಚರಿತ್ರೆಗೆ ಅನೇಕ ಅಡ್ಡಿ ಎದುರಾಗಿದೆ. ಬೇರೆ ದೇಶದ ಚರಿತ್ರೆಯಲ್ಲಿ ಯಾವುದೇ ಅಡ್ಡಿಗಳಿಲ್ಲ. ಆ ದೇಶದ ಮೇಲೆ ದಾಳಿಯಾದರೂ ಅಲ್ಲಿನ ಧರ್ಮ ಮತ್ತು ಸಂಸ್ಕೃತಿ ಬದಲಾಗಲಿಲ್ಲ. ವಿಶ್ವದ ಮಹಾಯುದ್ಧಗಳಲ್ಲೂ ಯಾವುದೇ ದೇಶದ ಧರ್ಮ ಮತ್ತು ಸಂಸ್ಕೃತಿಗೆ ಹಾನಿಯಾಗಲಿಲ್ಲ. ಆದರೆ ಭಾರತದ ಮೇಲೆ ಮಾತ್ರ ದಾಳಿ ನಡೆಯಲಿಲ್ಲ. ನಮ್ಮ ಸಂಸ್ಕೃತಿ, ನಮ್ಮ ಧರ್ಮದ ಮೇಲೂ ದಾಳಿ ನಡೆದಿದೆ. ಹಿಂದು ಧರ್ಮ ವಿಶ್ವದ ಸನಾತನ ಧರ್ಮವಾಗಿದ್ದು, ಬೆಳೆಯಲು ಬಿಟ್ಟರೆ ಇಡೀ ವಿಶ್ವದಲ್ಲಿ ವ್ಯಾಪಿಸುತ್ತದೆ ಎಂದು ನಮ್ಮ ಮೇಲೆ ದಾಳಿಯಾಗಿದೆ ಎಂದರು.
ಸ್ವಾಮಿ ವಿವೇಕಾನಂದರಂತಹ ನೂರಾರು ಸಂತರು ನಮ್ಮ ದೇಶವನ್ನು ಉಳಿಸಿದ್ದಾರೆ. ಅದಕ್ಕಾಗಿ ಇಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಕ ಚಳವಳಿ ಹೆಚ್ಚಾಗಿದೆ. ಇಷ್ಟು ಪ್ರಮಾಣದ ಆಧ್ಯಾತ್ಮಿಕ ಚಳವಳಿಯನ್ನು ನಾವು ಯಾವುದೇ ದೇಶದಲ್ಲೂ ನೋಡಲು ಸಾಧ್ಯವಿಲ್ಲ. ಇದರ ಹಿಂದೆ ನಮ್ಮ ಅಸ್ತಿತ್ವವನ್ನು ಉಳಿಸುವ ಕೆಲಸವಿದೆ. ಈ ಹಿನ್ನೆಲೆಯಲ್ಲಿ ರಾಮಕೃಷ್ಣ ಆಶ್ರಮ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವ ಜತೆಗೆ ಚರಿತ್ರೆ ಬಗ್ಗೆಯೂ ತಿಳಿಸಿದೆ. ಆಶ್ರಮದ ಸಾಧನೆಯನ್ನು ಶಬ್ದದಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದರು.
ಸ್ವಾಮಿ ವಿವೇಕಾನಂದರ ವ್ಯಕ್ತಿತ್ವವನ್ನು ಯುಗಕ್ಕೆ ಒಂದು ಬಾರಿ ನೋಡಬಹುದು. ಅವರು ಎಲ್ಲದಕ್ಕೂ ಉತ್ತರವಾಗಿದ್ದರು. ಅವರು ಸಣ್ಣ ವಯಸ್ಸಿನಲ್ಲೇ ದೊಡ್ಡ ವಿಚಾರ ತಿಳಿಸಿದ್ದಾರೆ. ಅವರ ವಿಚಾರಧಾರೆಯ ಈ ಆಶ್ರಮ ಮೈಸೂರಿನಲ್ಲಿ ನೂರು ವರ್ಷ ಸೇವೆ ಸಲ್ಲಿಸಿರುವುದು ಶ್ಲಾಘನೀಯ ಎಂದರು.
ದೇಶಕಟ್ಟಲು ಮೋದಿ ಜತೆ ನಿಲ್ಲಬೇಕು
ಪ್ರಧಾನಿ ನರೇಂದ್ರ ಮೋದಿ ಕಂಡಿರುವ ವಿಕಸಿತ ಭಾರತದ ಕನಸನ್ನು ನನಸು ಮಾಡುವ ವಿದ್ಯಾ ಶಾಲೆ ರಾಮಕೃಷ್ಣ ಆಶ್ರಮವಾಗಿದೆ. ಮೋದಿ ಅವರ ದೂರದೃಷ್ಟಿಯಲ್ಲಿ ಸ್ವಾಮಿ ವಿವೇಕಾನಂದ, ಪರಮಹಂಸರ ಆದರ್ಶ ಇದೆ. ದೇಶಕಟ್ಟುವ ಸಲುವಾಗಿ ನಾವೆಲ್ಲರೂ ಅವರ ಜತೆ ನಿಲ್ಲಬೇಕು. ‘2047ಕ್ಕೆ ಪ್ರಧಾನಿ ಮೋದಿ ಇರುತ್ತಾರಾ’ ಎಂದು ಒಬ್ಬ ಮಹಾನ್ ನಾಯಕ ಪ್ರಶ್ನೆ ಮಾಡಿದ್ದಾರೆ. 2047ಕ್ಕೆ ಮೋದಿ ಮತ್ತು ನಾವು ಇರುವುದಿಲ್ಲ, ಪ್ರಶ್ನೆ ಕೇಳಿದವರೂ ಇರುವುದಿಲ್ಲ. ಆದರೆ ದೇಶ ಇರುತ್ತದೆ. ಆದ್ದರಿಂದ ದೇಶಕಟ್ಟುವ ಕೆಲಸದಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಾತನಾಡಿ, ಸ್ವಾಮಿ ಸಿದ್ದೇಶ್ವರಾನಂದಜೀ ಅವರ ಸತತ ಪ್ರಯತ್ನ ಹಾಗೂ ಅವಿರತ ಶ್ರಮದಿಂದ 1925ರಲ್ಲಿ ಸ್ಥಾಪನೆಯಾದ ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ ಈಗ ಶತಮಾನೋತ್ಸವದ ಸಂಭ್ರಮದಲ್ಲಿದೆ. ಯುವಕರನ್ನು ಸತ್ಪ್ರಜೆಗಳನ್ನಾಗಿ ರೂಪಿಸಿ ನಾಡು ಕಟ್ಟುವ ಕಾರ್ಯಕ್ಕೆ ಉತ್ತೇಜಿಸುವ ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ಶ್ರೀರಾಮಕೃಷ್ಣ ಪರಮಹಂಸರ ಮೌಲ್ಯಗಳೇ ಶ್ರೀರಾಮಕೃಷ್ಣ ಆಶ್ರಮದ ಬುನಾದಿ. ಮುಕ್ತ ಶಿಕ್ಷಣ, ವಯಸ್ಕರ ಶಿಕ್ಷಣ, ಜೈಲು ಕೈದಿಗಳಿಗೆ ಮೌಲ್ಯ ಶಿಕ್ಷಣ, ಪರಿಸರ ಸಂರಕ್ಷಣೆ, ಗ್ರಾಮೀಣಾಭಿವೃದ್ಧಿಯಂತಹ ಹಲವು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿರುವ ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ ಹೆಮ್ಮೆ. ಶತಮಾನದ ನಡಿಗೆಯಲ್ಲಿ ಸಾವಿರಾರು ಮಕ್ಕಳ ಬಾಳಲ್ಲಿ ವಿದ್ಯಾಬೆಳಕು ಹರಿಸಿದ ಮಹೋನ್ನತ ಸೇವಾ ಕೇಂದ್ರವಾಗಿದೆ. ದೇಶದ ಅನೇಕ ಸ್ವಾಮೀಜಿಗಳನ್ನು ರೂಪಿಸಿದೆ ಎಂದರು.
ಸುತ್ತೂರು ಮಠ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸ್ವಾಮಿ ಗೌತಮಾನಂದಜಿ ಮಹಾರಾಜ್, ಸ್ವಾಮಿ ಮುಕ್ತಿದಾನಂದ, ಸ್ವಾಮಿ ಶಾಂತಾತ್ಮಾನಂದ, ವಕೀಲ ಶ್ರೀನಿವಾಸಮೂರ್ತಿ ಇತರರಿದ್ದರು.
"
ಇಂದು ನಮ್ಮಂತಹ ಸನ್ಯಾಸಿಗಳು ಅಮೆರಿಕ ಸೇರಿ ವಿದೇಶಗಳಿಗೆ ಹೋದಾಗ ಗೌರವ ಸಿಗುತ್ತಿರುವುದಕ್ಕೆ ಸ್ವಾಮಿ ವಿವೇಕಾನಂದರು ಕಾರಣ. ಅಂದು ತಾವು ಕಷ್ಟಗಳನ್ನು ಅನುಭವಿಸಿ ಭಾರತಕ್ಕೆ ಮರು ಚರಿತ್ರೆ ನೀಡಿದರು. ಅಮೆರಿಕಗೆ ಹೋಗಿ ನಮ್ಮ ದೇಶದ ಚರಿತ್ರೆಯನ್ನು ಸರಿಯಾದ ರೀತಿ ನೋಡುವಂತೆ ಕಣ್ಣು ತೆರೆಸಿದರು. ಅಂತಹ ಮಹಾತ್ಮ ಹಾಗೂ ರಾಮಕೃಷ್ಣ ಪರಮಹಂಸರ ದಿವ್ಯದೃಷ್ಟಿಯಿಂದ ಪ್ರಾರಂಭವಾದ ಮೈಸೂರು ಶ್ರೀ ರಾಮಕೃಷ್ಣ ಆಶ್ರಮಕ್ಕೆ ನೂರು ವರ್ಷ ತುಂಬಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರನ್ನು ನಾಡಿಗೆ ನೀಡಿದ ಕೀರ್ತಿ ಆಶ್ರಮಕ್ಕೆ ಸಲ್ಲುತ್ತದೆ. ಬೇರೆ ಬೇರೆ ಪರಂಪರೆ, ಬೇರೆ ಬೇರೆ ವ್ಯವಸ್ಥೆಯಲ್ಲಿ ಸನ್ಯಾಸಿಗಳಾಗಿದ್ದರೂ ಅವರೆಲ್ಲ ಮೂಲದಲ್ಲಿ ಸ್ವಾಮಿ ವಿವೇಕಾನಂದರಿಗೆ, ರಾಮಕೃಷ್ಣರಿಗೆ ಒಂದು ರೀತಿ ಋಣಿಗಳಾಗಿದ್ದಾರೆ.
"
ರಾಮಕೃಷ್ಣ ಆಶ್ರಮದಲ್ಲಿ ಏನೆಲ್ಲ ಸೇವಾ ಕಾರ್ಯಗಳು ನಡೆಯುತ್ತಿದೆಯೋ ಅವುಗಳನ್ನು ಮೊದಲ ದಿನದಿಂದ ಪ್ರಾರಂಭಿಸಿದ ಕೀರ್ತಿ ಸ್ವಾಮಿ ಸಿದ್ದೇಶ್ವರಾನಂದ ಅವರಿಗೆ ಸಲ್ಲುತ್ತದೆ. ರಾಮಾಯಣವನ್ನು ದರ್ಶನವಾಗಿ ಮಾಡಿದ್ದು ಕುವೆಂಪು. ಅದಕ್ಕೆ ಕಾರಣವಾಗಿದ್ದು ಮೈಸೂರು ರಾಮಕೃಷ್ಣ ಆಶ್ರಮ ಎನ್ನುವುದು ಮರೆಯಲಾಗದ ಸಂಗತಿ. ಮೈಸೂರಿನ ಈ ಆಶ್ರಮ ಇಂದು ಎಲ್ಲ ರೀತಿಯಲ್ಲೂ ಬೆಳೆದಿದೆ. ಸ್ವಾಮಿ ವಿವೇಕಾನಂದರು ಅಮೆರಿಕಗೆ ಹೋಗಿ ದೇಶದ ಕೀರ್ತಿಯನ್ನು ಜಗತ್ತಿಗೆ ತಿಳಿಸಲು ಮೈಸೂರು ಹಾಗೂ ಚಾಮರಾಜ ಒಡೆಯರ್ ಕೂಡ ಕಾರಣ. ವಿವೇಕಾನಂದರು ಅಮೆರಿಕದಲ್ಲಿ ಮಾಡಿದ ಭಾಷಣದಿಂದ ಇಡೀ ಜಗತ್ತಿನ ಕಣ್ಣು ತೆರೆಸಿತು.