ಸಹಬಾಳ್ವೆ ಧಕ್ಕೆತಂದ ಭೋಗ ಜೀವನ: ಚಿಂತಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ

  ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ಬಾ ಕುವೆಂಪು ದರ್ಶನಕೆ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಡಾ.ಚಂದ್ರಶೇಖರ ಕಂಬಾರ, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ,  ಟಿ.ಮುರಳೀಧರ್ ಭಾಗವತ್, ಎಸ್.ಕೆ.ಸಂಜಯ್, ಡಾ.ಟಿ.ವಿಜಯಲಕ್ಷ್ಮೀ ಮುರಳೀಧರ್, ಡಾ.ಬಿ.ಆರ್.ಜಯಕುಮಾರಿ ಇನ್ನಿತರರಿದ್ದರು.
ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ಬಾ ಕುವೆಂಪು ದರ್ಶನಕೆ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಡಾ.ಚಂದ್ರಶೇಖರ ಕಂಬಾರ, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಟಿ.ಮುರಳೀಧರ್ ಭಾಗವತ್, ಎಸ್.ಕೆ.ಸಂಜಯ್, ಡಾ.ಟಿ.ವಿಜಯಲಕ್ಷ್ಮೀ ಮುರಳೀಧರ್, ಡಾ.ಬಿ.ಆರ್.ಜಯಕುಮಾರಿ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುವೆಂಪು ವಿಚಾರಧಾರೆ ಕುರಿತು ವಿಚಾರ ಸಂಕಿರಣ
  • ಸಂದಿಗ್ಧ ಕಾಲದಲ್ಲಿ ಕುವೆಂಪು ಅವರ ‘ಆತ್ಮ ಸಂಯಮ’ ಮತ್ತು ‘ನಿರಂಕುಶಮತಿ’ ಪರಿಕಲ್ಪನೆಯೇ ಉತ್ತರ
  • ಆತ್ಮ ಸಂಯಮವಾದರೆ ಮನಸ್ಸಿನ ನಿಗ್ರಹ
ಮೈಸೂರು: ಭೋಗ ಸಂಸ್ಕೃತಿಯಲ್ಲಿ ಕಳೆದುಹೋಗಿರುವ ಈಗಿನ ಸಮಾಜದ ಸಮಸ್ಯೆಗಳಿಗೆ ಕುವೆಂಪು ವಿಚಾರಧಾರೆಯಲ್ಲಿ ಉತ್ತರ ಕಂಡುಕೊಳ್ಳಬೇಕಿದೆ ಎಂದು ಚಿಂತಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.
ಅಭಿನವ ಪ್ರಕಾಶನ, ಎಸ್‌ಟಿಜಿ ಸಮೂಹ ಶಿಕ್ಷಣ ಸಂಸ್ಥೆ, ವಿಸ್ಮಯ ಅಡ್ವರ್ಟೈಸರ್ಸ್ ಸಹಯೋಗದಲ್ಲಿ ವಿಜಯಲಕ್ಷ್ಮೀಪುರಂನ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ‘ಕನ್ನಡ ವಿವೇಕ ಪರಂಪರೆ ಮತ್ತು ಕುವೆಂಪು’ ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಅಗತ್ಯಕ್ಕಿಂತ ಹೆಚ್ಚು ದುಡ್ಡ ಸಂಪಾದನೆಯ ಹಪಾಹಪಿ ಜಾಸ್ತಿಯಾಗಿದೆ. ರಾರಾಜಿಸುತ್ತಿರುವ ಭೋಗ ಸಂಸ್ಕೃತಿಯಿಂದಲೇ ದುರಾಸೆ, ಸ್ವಾರ್ಥ ಸಮಾಜ ಸೃಷ್ಟಿಯಾಗುತ್ತಿದ್ದು, ಸಹಬಾಳ್ವೆಯೇ ಧ್ವಂಸವಾಗುತ್ತಿದೆ. ಇಂತಹ ಸಂದಿಗ್ಧ ಕಾಲದಲ್ಲಿ ಕುವೆಂಪು ಅವರ ‘ಆತ್ಮ ಸಂಯಮ’ ಮತ್ತು ‘ನಿರಂಕುಶಮತಿ’ ಪರಿಕಲ್ಪನೆಯೇ ಉತ್ತರವಾಗಿದೆ ಎಂದರು.
ಆತ್ಮ ಸಂಯಮವಾದರೆ ಮನಸ್ಸಿನ ನಿಗ್ರಹವಾಗಲಿದೆ. ಇದು ಇಲ್ಲದಿದ್ದರೆ ಭೋಗ ಸಂಸ್ಕೃತಿಯಿಂದ ತಪ್ಪಿಸಿಕೊಳ್ಳದೆ ಅದಕ್ಕೆ ಬಲಿಯಾಗಬೇಕಾಗುತ್ತದೆ. ಆತ್ಮ ಸಂಯಮದಿಂದ ನೆಮ್ಮದಿ, ಸಮಾಧಾನ ಬದುಕು ಸಾಧ್ಯ ಎಂದರು.
ಕುವೆಂಪು ಅವರು ಯುವಕರು ನಿರಂಕುಶಮತಿಗಳಾಗಬೇಕು ಎಂದು ಕರೆ ನೀಡಿದ್ದರು. ನಿರಂಕುಶಮತಿತ್ವ ಎಂದರೆ ಯಾವುದೇ ಬಾಹ್ಯ ಒತ್ತಡ, ಮೂಢನಂಬಿಕೆ, ಹಳೇ ರೂಢಿಗಳಿಗೆ ತಲೆಬಾಗದೆ ಸ್ವಾತಂತ್ರೃವಾಗಿ ಆಲೋಚಿಸುವುದು. ಆದರೆ ಈ ಸ್ವಾತಂತ್ರ್ಯವು ಉದ್ಧಟತನವಾಗಿರಬಾರದು. ಅದು ಸಂಯಮ ಪೂರ್ಣವಾದ ಬುದ್ಧಿ ಸ್ವಾತಂತ್ರ್ಯ ಆಗಿರಬೇಕು. ಆಂತರಿಕ ಶಿಸ್ತು ಮತ್ತು ವಿವೇಚನೆಯೇ ಆತ್ಮ ಸಂಯಮವಾಗಿರಬೇಕು ಎಂದರು.
ಪ್ರಸಕ್ತ ಸಾಮಾಜಿಕ ಸಮಸ್ಯೆಗಳಿಗೆ ಕುವೆಂಪು ಅವರ ಚಿಂತನೆಯಲ್ಲಿ ಉತ್ತರವನ್ನು ಶೋಧಿಸಬೇಕಿದೆ. ಅವರ ಸಾಹಿತ್ಯವನ್ನು ಅಧ್ಯಯನ ಮಾಡಬೇಕಿದೆ. ಇದರೊಂದಿಗೆ ಅವರ ಆಲೋಚನೆ, ಚಿಂತನೆಯನ್ನು ಈಗಿನ ಕಾಲಕ್ಕೆ ಹೊಂದಿಸಿಕೊಳ್ಳಬೇಕಿದೆ. ಜನಪರವಾಗಿರುವ ಅವರ ವಿಚಾರವನ್ನು ಸಮಕಾಲೀನಗೊಳಿಸಬೇಕಿದೆ ಎಂದರು.
ಸೃಜನಶೀಲತೆ ಎಂದೂ ಪ್ರಭುತ್ವಕ್ಕೆ ಶರಣಾಗಲ್ಲ. ಅದನ್ನು ಮತ್ತೆ ಪಡೆದುಕೊಳ್ಳಬೇಕಿದೆ. ಇಲ್ಲವಾದರೆ ಜಡತ್ವ ಸಮಾಜ ನಿರ್ಮಾಣವಾಗಿ ಕ್ರೌರ್ಯ ಹೆಚ್ಚಾಗುತ್ತದೆ. ಈಗಾಗಲೇ ಇಂತಹ ಅಹಿತಕರ ಘಟನೆಗಳು ವಿಜೃಂಭಿಸುತ್ತಿವೆ. ಜಡತ್ವ ಸಮಾಜವನ್ನು ಸೃಜನಶೀಲತೆಯಿಂದ ಬದಲಾವಣೆ ಸಾಧ್ಯ. ಅದಕ್ಕಾಗಿ ಸಾಹಿತ್ಯ, ಕಲೆಯನ್ನು ರಚಿಸಬೇಕಿಲ್ಲ. ಮನಸ್ಸು, ಚಿಂತನೆಯನ್ನು ಸೃಜನಶೀಲವಾಗಿ ಇಟ್ಟುಕೊಂಡರೆ ಸಾಕು. ಇದಕ್ಕೆ ಕುವೆಂಪು ಅವರ ಬದುಕೇ ಸಾಕ್ಷಿ ಎಂದರು.

ಕಥೆ ಹೇಳಿ ಸಂತೋಷ ಹಂಚಿಕೊಳ್ಳಿ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಮಾತನಾಡಿ, ಭಾರತವು ಕಥೆ ಹೇಳುವುದರಲ್ಲಿ, ಕಟ್ಟುವುದರಲ್ಲಿ, ವಿಸ್ತರಿಸುವುದರಲ್ಲಿ ಅತ್ಯಂತ ಮಹತ್ವವಾದಂತಹ ಒಂದು ಸಾಧನೆ ಮಾಡಿದೆ ಎಂದರು.
ಭಾರತದಲ್ಲಿದ್ದಂತಹ ಕಥೆಗಳಿಗೂ ಪ್ರಪಂಚದ ಯಾವ ಭಾಷೆಯಲ್ಲೂ ಇಲ್ಲ. ಎಲ್ಲ ಜಾನಪದ ಕಥೆಗಳ ಮಾದರಿ ನಮ್ಮ ದೇಶದಲ್ಲಿ. ಇಲ್ಲಿ ಇದ್ದಷ್ಟು ಬೇರೆ ಎಲ್ಲೂ ಸಿಗುವುದಿಲ್ಲ. ರಾಮಾಯಣ, ಮಹಾಭಾರತ ಕೂಡ ಜಾನಪದ ಕಥೆಗಳು. ಅವುಗಳನ್ನು ಬೆಳೆದು ದೊಡ್ಡ ಕಥೆಗಳಾಗಿವೆ. ಹಾಗೆ ಇಂತಹ ದೊಡ್ಡ ಕಥೆಗಳು ಎಲ್ಲ ಭಾಷೆಯಲ್ಲೂ ಇದ್ದಾವೆ. ಐದು ವಾಕ್ಯಗಳಲ್ಲಿ ಮುಗಿಸುವ ಕಥೆಗಳೂ ಇವೆ ಎಂದರು.
ದೇಶದಲ್ಲಿ ಕಥೆಗಳು ಗೊತ್ತಿಲ್ಲದ ಮಕ್ಕಳು ಇರಲು ಸಾಧ್ಯವಿಲ್ಲ. ಅಂತಹ ಅದ್ಭುತವಾದಂತಹ ಪ್ರಪಂಚ ನಮ್ಮದು. ಅವರಿಗೆ ಕಥೆ ಹೇಳಿ. ಆ ಸಂತೋಷ ಹಂಚಿಕೊಳ್ಳಿ ಎಂದು ಸಭಿಕರಿಗೆ ಹೇಳಿದರು.
ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಈಗ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಕುವೆಂಪು ಚಿಂತನೆಯಿಂದ ಬದಲಾವಣೆ ತರಬೇಕಿದೆ ಎಂದರು.
ರಾಜಕಾರಣಿಗಳ ಮಾತಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಲ್ಲ. ಇದಕ್ಕೆ ಸ್ವಾರ್ಥ, ರಾಜಕೀಯ ಲಾಭದ ದುರುದ್ದೇಶ ಇರುತ್ತದೆ ಎಂಬ ಕಾರಣವೂ ಇದೆ. ಇದು ಉತ್ಪ್ರೇಕ್ಷೆಯಲ್ಲ. ಇದು ನಿಜ ಕೂಡ. ಆದರೆ, ಸಾಹಿತಿಗಳ ಮಾತಿಗೆ ಈಗಲೂ ಗೌರವ ಇದೆ. ದಾರಿ ತಪ್ಪುತ್ತಿರುವ ಯುವ ಜನರನ್ನು ಸಾಹಿತಿಗಳು, ಸಾಹಿತ್ಯವನ್ನು ಪರಿಚಯಿಸುವ ಮೂಲಕ ಸರಿದಾರಿಗೆ ತರಬೇಕಿದೆ ಎಂದರು.
‘ಬಾ ಕುವೆಂಪು ದರ್ಶನಕೆ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಬೆಳ್ಳಿರಥದಲ್ಲಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕೃತಿ ಇರಿಸಿದ ಮೆರವಣಿಗೆ ವಿವಿಧ ರಸ್ತೆಗಳಲ್ಲಿ ಸಾಗಿ ಗಮನ ಸೆಳೆಯಿತು. ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಮುರಳೀಧರ್ ಭಾಗವತ್, ಖಜಾಂಚಿ ಎಸ್.ಕೆ.ಸಂಜಯ್, ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮೀ ಮುರಳೀಧರ್, ಮಹಾಜನ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಆರ್.ಜಯಕುಮಾರಿ, ಕನ್ನಡ ಪ್ರಾಧ್ಯಾಪಕ ಡಾ. ಎಚ್.ಆರ್. ತಿಮ್ಮೇಗೌಡ, ಕಾರ್ಯನಿರ್ವಹಣಾಧಿಕಾರಿ ಡಾ. ಎಸ್.ಆರ್. ರಮೇಶ್ ಇನ್ನಿತರರಿದ್ದರು.
ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕುವೆಂಪು ಪ್ರತಿಮೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಪುಷ್ಪ ನಮನ ಸಲ್ಲಿಸಿದರು. ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ,  ಟಿ.ಮುರಳೀಧರ್ ಭಾಗವತ್, ಎಸ್.ಕೆ.ಸಂಜಯ್, ಡಾ.ಟಿ.ವಿಜಯಲಕ್ಷ್ಮೀ ಮುರಳೀಧರ್, ಡಾ.ಬಿ.ಆರ್.ಜಯಕುಮಾರಿ ಇನ್ನಿತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net