ರೋಗನಿರೋಧಕಗಳ ಪ್ರವರ್ಧಮಾನದಿಂದ ಆರೋಗ್ಯ ಸುಧಾರಣೆ: ಡಾ.ಶ್ರೀನಿವಾಸ ವಿ.ಕಾವೇರಿ ಅಭಿಮತ

ನಗರದ ಶಾರದಾವಿಲಾಸ ಫಾರ್ಮಸಿ ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಡಾ.ಶ್ರೀನಿವಾಸ ವಿ.ಕಾವೇರಿ ಉದ್ಘಾಟಿಸಿದರು. ಡಾ.ಹನುಮಂತಾಚಾರ್ ಜೋಶಿ, ಡಾ.ಪಿ.ಕೆ.ಕುಲಕರ್ಣಿ, ಶುಭಂಕರ ದಾಸ್ ಇತರರು ಇದ್ದರು.
ನಗರದ ಶಾರದಾವಿಲಾಸ ಫಾರ್ಮಸಿ ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಡಾ.ಶ್ರೀನಿವಾಸ ವಿ.ಕಾವೇರಿ ಉದ್ಘಾಟಿಸಿದರು. ಡಾ.ಹನುಮಂತಾಚಾರ್ ಜೋಶಿ, ಡಾ.ಪಿ.ಕೆ.ಕುಲಕರ್ಣಿ, ಶುಭಂಕರ ದಾಸ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿಂದಿನ ಕಾಲದಲ್ಲಿ ದೇಹದ ಒಳಗಿರುವ ಜೀವ ನಿರೋಧಕ ಶಕ್ತಿಗಳೇ ಸೋಂಕಿನ ಜತೆ ಹೋರಾಟ ಮಾಡಬೇಕಾಗಿತ್ತು
  • ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸಾವಿರಾರು ಜನರ ಪ್ರಾಣವನ್ನು ಉಳಿಸಲು ಆಂಟಿ ಬಾಡೀಸ್ ನೆರವಾಯಿತು
ಮೈಸೂರು:ಪ್ರತಿರೋಧಕಗಳು (ಆ್ಯಂಟಿ ಬಾಡೀಸ್) ಪ್ರವರ್ಧಮಾನಕ್ಕೆ ಬಂದ ಬಳಿಕ ಆರೋಗ್ಯ ಸುಧಾರಣೆಯೂ ಪರಿಣಾಮಕಾರಿಯಾಗಲು ಸಾಧ್ಯವಾಗಿದೆ ಎಂದು ಪ್ಯಾರಿಸ್‌ನ ಸೋರ್ಬೋರ್ನೆ ವಿಶ್ವವಿದ್ಯಾಲಯದ ಸಂಶೋಧನಾ ಸಿಎನ್‌ಆರ್‌ಎಸ್ ನಿರ್ದೇಶಕ ಡಾ.ಶ್ರೀನಿವಾಸ ವಿ.ಕಾವೇರಿ ಅಭಿಪ್ರಾಯಪಟ್ಟರು.
ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಔಷಧ ವಿಜ್ಞಾನ ಕಾಲೇಜು, ಬೆಂಗಳೂರಿನ ಟಿಎಸಿಟಿ ಸಹಯೋಗದಲ್ಲಿ ಕಾಲೇಜಿನ ಪ್ರೊ.ಎಸ್.ಚಿನ್ನಸ್ವಾಮಿ ಶೆಟ್ಟಿ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಶತಮಾನ ಕಳೆದರೂ ಇನ್ನೂ ಮುಂಚೂಣಿಯಲ್ಲಿ: ಪ್ರತಿರೋಧಕಗಳ ಪಯಣ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಲವು ದಶಕಗಳ ಹಿಂದೆ ಮಾನವನ ಆರೋಗ್ಯವನ್ನು ಸುಧಾರಣೆ ಮಾಡಲು ಆ್ಯಂಟಿ ಬಾಡೀಸ್ ವ್ಯವಸ್ಥೆ ಅಷ್ಟೊಂದು ಸಮರ್ಪಕವಾಗಿ ಇರಲಿಲ್ಲ. ಆಗಿನ ಕಾಲದಲ್ಲಿ ದೇಹದ ಒಳಗಿರುವ ಜೀವ ನಿರೋಧಕ ಶಕ್ತಿಗಳೇ ಸೋಂಕಿನ ಜತೆ ಹೋರಾಟ ಮಾಡಬೇಕಾಗಿತ್ತು. ಜತೆಗೆ ಬಾಹ್ಯ ಮೂಲದಿಂದ ಲಸಿಕೆಗಳನ್ನು ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಮುಂದುವರಿದಿರುವುದರಿಂದ ಮಾನವನ ದೇಹದ ಪ್ರತಿರೋಧಕ (ಆ್ಯಂಟಿ ಬಾಡೀಸ್) ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬಹುದಾಗಿದೆ ಎಂದು ಹೇಳಿದರು.
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸಾವಿರಾರು ಜನರ ಪ್ರಾಣವನ್ನು ಉಳಿಸಲು ಆಂಟಿ ಬಾಡೀಸ್ ನೆರವಾಯಿತು. ಪ್ರತಿರೋಧಕಗಳು (ಆ್ಯಂಟಿ ಬಾಡೀಸ್) ಪ್ರವರ್ಧಮಾನಕ್ಕೆ ಬಂದ ಬಳಿಕ ಆರೋಗ್ಯ ಸುಧಾರಣೆಯೂ ಪರಿಣಾಮಕಾರಿಯಾಗಿದೆ. ಅನುವಂಶಿಕ ಕಾರಣಗಳ ಸಮಸ್ಯೆಯೊಂದಿಗೆ ಜನಿಸಿದ ಮಕ್ಕಳಿಗೆ ಸಾಮಾನ್ಯ ಸೋಂಕುಗಳನ್ನೂ ಎದುರಿಸುವುದು ಕಷ್ಟವಾಗುತ್ತದೆ. ಇಂತಹ ಅನುವಂಶಿಕ ರೋಗಗಳಿಗೆ ಜೀನ್ ಥೆರಪಿ ಮತ್ತು ಇಮ್ಯುನೋಥೆರಪಿಯಂತಹ ಆಧುನಿಕ ಚಿಕಿತ್ಸೆಗಳು ಅಭಿವೃದ್ಧಿಯಲ್ಲಿವೆ ಎಂದು ಹೇಳಿದರು.
ಮಾನವ ದೇಹದ ರೋಗನಿರೋಧಕ ವ್ಯವಸ್ಥೆ ಸೋಂಕುಗಳನ್ನು ಎದುರಿಸಲು ನಿರಂತರವಾಗಿ ಕಾರ್ಯನಿರ್ವಹಿಸುವ ಸಂಕೀರ್ಣ ರಕ್ಷಣಾ ಜಾಲವಾಗಿದೆ. ಇದರ ಭಾಗವಾಗಿರುವ ಕಾಂಪ್ಲಿಮೆಂಟ್ ವ್ಯವಸ್ಥೆ, ಟಿ-ಲಿಂಫೋಸೈಟ್‌ಗಳು, ಬಿ-ಲಿಂಫೋಸೈಟ್‌ಗಳು, ಮ್ಯಾಕ್ರೋಫೇಜ್‌ಗಳು ಹಾಗೂ ನ್ಯೂಟ್ರೋಫಿಲ್‌ಗಳು ಪರಸ್ಪರ ಸಹಕಾರದಿಂದ ರೋಗಕಾರಕಗಳನ್ನು ಗುರುತಿಸಿ ನಾಶಪಡಿಸುತ್ತವೆ ಎಂದರು.
ಮನುಷ್ಯ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿರೋಧಕ ಅಂಶಗಳು ದಿನೇ ದಿನೆ ಕಡಿಮೆಯಾಗುತ್ತಿದ್ದು, ಇದಕ್ಕೆ ನಾವು ಸೇವಿಸುವ ಆಹಾರ ಮತ್ತು ದೈನಂದಿನ ಕಾರ್ಯಗಳು ಕಾರಣವಾಗಿವೆ. ಅತಿಯಾದ ಡಿಟರ್ಜೆಂಟು ಮತ್ತು ಹ್ಯಾಂಡ್‌ವಾಶ್‌ಗಳನ್ನು ಬಳಸುವುದರಿಂದ ನಮ್ಮ ದೇಹ ಸೋಂಕುಕಾರಕ ಕ್ರಿಮಿಗಳನ್ನು ಬೆಳೆಯಲು ಬಿಡುವುದಿಲ್ಲ. ಹಾಗಾಗಿ ಅವುಗಳಿಲ್ಲದೆ ಮನುಷ್ಯನ ದೇಹ ಅವಶ್ಯಕವಾದ ಪ್ರತಿರೋಧಕ ಅಂಶಗಳನ್ನು ಉತ್ಪತ್ತಿ ಮಾಡುತ್ತಿಲ್ಲ ಎಂದು ವಿವರಿಸಿದರು.
ಟಿಎಸಿಟಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಸುಭಾಂಕರ್ ಬಿಸ್ವಾಸ್ ಮಾತನಾಡಿ, ಯಾರೋ ಹೇಳಿದ ಮಾತು, ವಿಶ್ಲೇಷಣೆಗಳಿಗೆ ತೃಪ್ತರಾಗದೆ, ಪ್ರತಿಯೊಬ್ಬರೂ ಪ್ರಶ್ನಿಸುವುದನ್ನು ಕಲಿಯಬೇಕು. ನಿಮಗೆ ಉತ್ತರ ಸಿಗದಿದ್ದರೂ ಪರವಾಗಿಲ್ಲ ಪ್ರಶ್ನೆ ಕೇಳುವುದನ್ನು ಮಾತ್ರ ಮರೆಯಬೇಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಹನುಮಂತಾಚಾರ್ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಡೀನ್ ಡಾ.ಪಿ.ಕೆ.ಕುಲಕರ್ಣಿ, ಅಕಾಡೆಮಿಯ ಸೈನ್ಸ್ ಸಂಘಟನೆ ಕಾರ್ಯದರ್ಶಿ ಶುಭಂಕರ ದಾಸ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net