ತ.ನಾಡಿಗೆ ನೀರು ಹರಿಸುವಲ್ಲಿ ಎಚ್‌ಡಿಕೆ, ಜೋಶಿ ಪಾತ್ರ ಇದೆ: ಎಂ.ಲಕ್ಷ್ಮಣ್ ಆರೋಪ
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪ
ಸಿಡಬ್ಲುೃಎಂಎ ಮೇಲೆ ಎಚ್‌ಡಿಕೆ, ಜೋಶಿ ಪ್ರಭಾವ: -
ಎಚ್.ಡಿ.ಕುಮಾರಸ್ವಾಮಿ ಹಾಗೂ ಪ್ರಲ್ಹಾದ ಜೋಶಿ ಪಾತ್ರ ಇದೆ
ತ.ನಾಡಿಗೆ ನೀರು ಬಿಡುವ ವಿಚಾರದಲ್ಲಿ ಧ್ವನಿಯೆತ್ತದ ಸಚಿವದ್ವಯರು
ಮೈಸೂರು:
ತಮಿಳುನಾಡಿಗೆ ನೀರು ಹರಿಸಬೇಕೆಂಬ ವಿಚಾರದಲ್ಲಿ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಪ್ರಲ್ಹಾದ ಜೋಶಿ ಪಾತ್ರ ಇದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ರಾಜ್ಯ ಸರ್ಕಾರಕ್ಕೆ ತೊಂದರೆ ಕೊಡಬೇಕೆಂಬ ಉದ್ದೇಶದಿಂದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲುೃಎಂಎ) ಮೇಲೆ ಈ ಉಭಯ ಸಚಿವದ್ವಯರು ಪ್ರಭಾವ ಬೀರುತ್ತಿದ್ದಾರೆ. ಪ್ರಾಧಿಕಾರ ಕೇಂದ್ರ ಸರ್ಕಾರದ ಹಿಡಿತದಲ್ಲಿದ್ದು, ಅದರ ಅಣತಿಯಂತೆ ತಮಿಳುನಾಡಿಗೆ ನೀರು ಬಿಡಲು ರಾಜ್ಯಕ್ಕೆ ಆದೇಶ ಕೊಟ್ಟಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಕಾವೇರಿ ಜಲ ವಿಷಯದಲ್ಲಿ ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ ಏಕೆ ಧ್ವನಿಯೆತ್ತುತ್ತಿಲ್ಲ ಎಂದೂ ಪ್ರಶ್ನಿಸಿದರು.
ಕುಡಿಯುವ ಉದ್ದೇಶಕ್ಕೆಂದು ಸಂಗ್ರಹಿಸಿಕೊಂಡಿರುವ ನೀರನ್ನು ತಮಿಳುನಾಡಿನವರ ಕೃಷಿ ಬೆಳೆಗಾಗಿ ಹರಿಸುವಂತೆ ಕೇಳುತ್ತಿರುವುದು ಮೂರ್ಖತನದ ಪರಮಾವಧಿಯಲ್ಲವೇ? ಎಂದು ಗುಡುಗಿದರು.
ಕೆಆರ್‌ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳ ವಾಸ್ತವ ಸ್ಥಿತಿಯನ್ನು ಸಮರ್ಥವಾಗಿ ಮನವರಿಕೆ ಮಾಡಿಕೊಡುವಲ್ಲಿ ತಜ್ಞರ ಸಮಿತಿಯು ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಡ್ಯಾಂಗಳಲ್ಲಿರುವ ‘ಡೆಡ್‌ಸ್ಟೋರೆಜ್’ ನೀರನ್ನೂ ಪರಿಗಣಿಸಲಾಗುತ್ತಿದೆ. ಡೆಡ್‌ಸ್ಟೋರೆಜ್ ಬಿಟ್ಟರೆ ನಮ್ಮಲ್ಲಿ ಈಗ ಇರುವುದು 66 ಟಿಎಂಸಿ ನೀರು ಮಾತ್ರ. ಇದನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು, ಕೊಡಗು, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಏಪ್ರಿಲ್‌ನಿಂದ ಈವರೆಗೆ ಬಿದ್ದ ಮಳೆಯನ್ನು ಆಧರಿಸಿ ಎಲ್ಲ ಕಡೆಯೂ ಮಳೆಯಾಗಿದೆ ಎಂದು ಪರಿಗಣಿಸಲಾಗಿದೆ. ಇದರಿಂದಾಗಿ ರಾಜ್ಯಕ್ಕೆ ಸಮಸ್ಯೆಯಾಗುತ್ತಿದೆ. ಯಾವುದೋ ಒಂದು ಕಡೆ ಬಿದ್ದ ಮಳೆಯಿಂದ ಜಲಾಶಯಗಳು ಭರ್ತಿಯಾಗಲ್ಲ. ಈ ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಡಬೇಕಿದೆ ಎಂದು ಹೇಳಿದರು.
ನಾವು ಉಳಿಸಿಕೊಂಡಿರುವ ನಮ್ಮ ಪಾಲಿನ ನೀರನ್ನು ತಮಿಳುನಾಡಿನವರು ಕೇಳುತ್ತಿದ್ದಾರೆ, ಇದು ಸರಿಯಲ್ಲ. ಏಪ್ರಿಲ್‌ನಿಂದ ಇಲ್ಲಿಯವರೆಗೆ ಆಗಿರುವ ಮಳೆಯಲ್ಲಿ ಎಷ್ಟು ಪ್ರಮಾಣದಲ್ಲಿ ನೀರು ಹಂಚಿಕೆ ಆಗಬೇಕು ಎಂಬುದನ್ನು ನಮ್ಮ ತಜ್ಞರ ತಂಡದವರು ಮನವರಿಕೆ ಮಾಡಿಕೊಡಬೇಕು. 45 ಟಿಎಂಸಿ ಅಡಿ ನೀರು ಕುಡಿಯುವ ಉದ್ದೇಶಕ್ಕೆಂದೇ ಬೇಕು. ಈ ಅಂಶಗಳನ್ನೆಲ್ಲ ಸುಪ್ರೀಂಕೋರ್ಟ್‌ನಲ್ಲಿ ಪರಿಣಾಮಕಾರಿಯಾಗಿ ಮಂಡಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಎಂಎಲ್‌ಸಿ ಎಚ್.ವಿಶ್ವನಾಥ್ ಬಾಯಿಚಪಲಕ್ಕೆ ಮಾತನಾಡುತ್ತಿದ್ದು. ಘನತೆಗೆ ತಕ್ಕುದಾಗಿ ಮಾತನಾಡದಿರುವುದು ದುರಂತದ ಸಂಗತಿ. ಡಾ.ಯತೀಂದ್ರ ಮಂತ್ರಿಯಾಗಿದ್ದನ್ನು ಸಹಿಸದೇ ಆರೋಪ ಮಾಡುತ್ತಿದ್ದಾರೆ. ಯತೀಂದ್ರ ಯಾವುದರಲ್ಲಿ ಕಡಿಮೆ ಇದ್ದಾರೆ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.
ತನ್ವೀರ್‌ಸೇಠ್, ಡಾ.ಎಚ್.ಸಿ.ಮಹದೇವಪ್ಪ, ಕೆ. ವೆಂಕಟೇಶ್ ಅವರನ್ನು ಸಚಿವರಾಗಿ ಮಾಡಬೇಕು ಎಂಬುದು ನಮ್ಮ ಒತ್ತಾಯವಾಗಿತ್ತು. ಆದರೆ, ಹೈಕಮಾಂಡ್ ಮಾಡಲಿಲ್ಲ. ಆದಾಗ್ಯೂ, ನಮ್ಮ ಪಕ್ಷದ ಉಸಾಬರಿ ನಿಮಗೆ ಏಕೆ ಎಂದು ಎಂದು ವಿಶ್ವನಾಥ್ ವಿರುದ್ಧ ಹರಿಹಾಯ್ದರು
ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿಗಳಾದ ಎಂ.ಶಿವಣ್ಣ, ಹೇಮಂತ್ ಇದ್ದರು.