ಮೈಸೂರು: ಜಾಥಾ, ಧಾರ್ಮಿಕ ಪ್ರವಚನ, ವಿಶೇಷ ಪ್ರಾರ್ಥನೆ ಹೀಗೆ ಸಾಂಸ್ಕೃತಿಕ ನಗರಿ ಮೈಸೂರಿನಾದ್ಯಂತ ಬುಧವಾರ ಭಕ್ತಿ-ಭಾವದ ಗುರು ಪೂರ್ಣಿಮೆ ಆಚರಣೆ ನಡೆಯಿತು.
ಬಾಬಾಸಾಹೇಬ್ ಬಿ.ಆರ್.ಅಂಬೇಡ್ಕರ್ ಸ್ನೇಹ ಸೌಹಾರ್ದ ಸಂಘ ಮತ್ತು ಬೋಧಿಸತ್ವ ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಟ್ರಸ್ಟ್ ಸಹಯೋಗದಲ್ಲಿ ಬೆಳಗ್ಗೆ 7ಕ್ಕೆ ಸಿದ್ಧಾರ್ಥನಗರದ ಬುದ್ಧ ವೃತ್ತದಲ್ಲಿ ಉರಿಲಿಂಗಿಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯದೊಂದಿಗೆ ಜಾಥಾ ಆಯೋಜಿಸಲಾಗಿತ್ತು.
ಭಗವಾನ್ ಬುದ್ಧ ವೃತ್ತದಲ್ಲಿ ಬ್ರಾಸ್ ಸಂಘದ ಕಲಾವೃಂದದಿಂದ ಬುದ್ಧ ಮತ್ತು ಬಾಬಾ ಸಾಹೇಬರ ಗೀತಗಾಯನ, ಬುದ್ಧರ ಕಥಾ ಪ್ರವಚನ ನಡೆಯಿತು.
ನಗರದ ಅಗ್ರಹಾರ, ಚಾಮರಾಜ ಜೋಡಿ ರಸ್ತೆ, ಮಂಡಿ ಮೊಹಲ್ಲಾದ ದತ್ತಾತ್ರೇಯ ದೇವಾಲಯದಲ್ಲಿ ಶುದ್ಧೀಕರಣ ಪುಣ್ಯಾಹವಾಚನ, ಗುರುಪೂರ್ಣಿಮೆ ನಡೆಯಿತು. ವಿವಿಧ ಶಿರಡಿ ಸಾಯಿಬಾಬಾ ಮಂದಿರಗಳಲ್ಲೂ ಗುರುಪೂರ್ಣಿಮೆ ಸ್ಮರಣಾ ಕಾರ್ಯಕ್ರಮ ಜರುಗಿತು.
ತಾಳ್ಮೆ ಇದ್ದಲ್ಲಿ ಜೀವನದಲ್ಲಿ ಯಶಸ್ಸು ಸಾಧ್ಯ
ಮೈಸೂರಿನ ಮಾನಸ ಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ವತಿಯಿಂದ ಬುಧವಾರ ಧಮ್ಮಚಕ್ಕ ಪವತ್ತನ ದಿನಾಚರಣೆ ಅಂಗವಾಗಿ ಸಂವಾದ ನಡೆಯಿತು.
ವಿದ್ಯಾರ್ಥಿ ಮನುಗೋಪಾಲ್ ಮಾತನಾಡಿ, ಬುದ್ಧನಂತೆ ನಾವೆಲ್ಲರೂ ಸಹ ಸಹನೆ, ತಾಳ್ಮೆಯನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಯಾವುದೇ ಸಂಘರ್ಷಗಳಿಲ್ಲದೆ ಬದುಕಬಹುದು. ತಾಳ್ಮೆ ಇಲ್ಲದಿದ್ದರೆ ನಮ್ಮಲ್ಲಿ ಗೊಂದಲ ಉಂಟಾಗುತ್ತದೆ. ಇದರಿಂದ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಆಗದೆ ವಿಚಲಿತರಾಗಿ ಜೀವಿಸಬೇಕಾಗುತ್ತದೆ. ತಾಳ್ಮೆಯಿದ್ದರೆ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರ ಕುಮಾರ್, ಹಿರಿಯ ಪ್ರಾಧ್ಯಾಪಕ ಪ್ರೊ.ಜೆ.ಸೋಮಶೇಖರ್, ಹರೀಶ್, ಆಶಾ, ಪರಿಮಳಾ, ನವೀನ್, ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.