ಮೃತರಿಗೂ ಒಲಿದ ಗೃಹಲಕ್ಷ್ಮಿ !

 ಗೃಹಲಕ್ಷ್ಮಿಯೋಜನೆ
ಗೃಹಲಕ್ಷ್ಮಿಯೋಜನೆ
Published on

ಪ್ರಮುಖ ಮುಖ್ಯಾಂಶಗಳು

  • 5,851ನಿಧನರಾದವರಿಗೆ 6.35 ಕೋಟಿ ರೂ. ಸಂದಾಯ
  • ಬ್ಯಾಂಕ್ ಖಾತೆಯಿಂದ ವಾಪಸಾತಿ ಪ್ರಕ್ರಿಯೆ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲೊಂದಾದ ಗೃಹಲಕ್ಷ್ಮಿಯೋಜನೆಯ ಹಣ ಮೃತ ಫಲಾನುಭವಿಗಳಿಗೂ ಸಂದಾಯವಾಗಿದ್ದು, ಜಿಲ್ಲೆಯಲ್ಲಿ ಇದನ್ನು ವಾಪಸ್ ಪಡೆದುಕೊಳ್ಳಲು ಕ್ರಮ ತೆಗೆದುಕೊಳ್ಳಲಾಗಿದೆ.
ಈ ಯೋಜನೆಯಡಿ ನೋಂದಣಿಯಾಗಿ ಮರಣ ಹೊಂದಿದ ಫಲಾನುಭವಿಗಳ ಸಂಖ್ಯೆ ಜಿಲ್ಲೆಯಲ್ಲಿ 13,437ರಷ್ಟಿದೆ. ಈ ಪೈಕಿ ಮರಣ ಹೊಂದಿದ ನಂತರ ಧನ ಸಹಾಯ ಪಾವತಿಸಲಾಗಿರುವ ಫಲಾನುಭವಿಗಳ ಸಂಖ್ಯೆ 5,851ರಷ್ಟಾಗಿರುವುದು ಆಘಾತಕಾರಿ.
ಮೃತ ಫಲಾನುಭವಿಗಳಿಗೆ 31,773 ಕಂತುಗಳ ಹಣ ವಾಪತಿಯಾಗಿದೆ. ತಿಂಗಳಿಗೆ 2000 ರೂಪಾಯಿಯಂತೆ ಇಷ್ಟು ಕಂತಿಗೆ 6.35 ಕೋಟಿ ರೂ.ಮೃತ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಿದೆ. ಇದನ್ನು ಇದೀಗ ಪತ್ತೆ ಹಚ್ಚಲಾಗಿದೆ. ಈ ಹಣವನ್ನು ವಾಪಸ್ ಪಡೆಯಲು ತೀರ್ಮಾನ ಮಾಡಲಾಗಿದೆ.

ಎರಡೂವರೆ ವರ್ಷದಿಂದಲೂ ಹಣ ವರ್ಗಾವಣೆ: 

ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ರೂ.ಹಣ ನೀಡಲಾಗುತ್ತಿದೆ. ಇದು 2023ರ ಜೂನ್ 6ರಿಂದಲೇ ಜಾರಿಗೆ ಬಂದಿದೆ.
 ಈ ಯೋಜನೆಯಡಿ ಆಹಾರ ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್, ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯರು ಈ ಯೋಜನೆಯ ಅರ್ಹ ಫಲಾನುಭವಿಗಳು. 2023ರ ಜುಲೈ 18ರಿಂದ ಲಿಂಗತ್ವ ಅಲ್ಪಸಂಖ್ಯಾತರಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಎರಡುವರೆ ವರ್ಷದಿಂದಲೂ ಫಲಾನುಭವಿಗಳ ಗೃಹಲಕ್ಷ್ಮಿಹಣ ಒಲಿದಿದೆ.

ಹಣದ ಅಪವ್ಯಯವೇ ಸರಿ:

ನೋಂದಣಿಯಾದ ಅರ್ಹ ಫಲಾನುಭವಿಯ ಖಾತೆಗೆ ಹಣವನ್ನು ಡಿಬಿಟಿ ಮೂಲಕ ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಈ ಯೋಜನೆ ಈಗಲೂ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ. 
ಹೀಗೆ ನೋಂದಣಿಯಾದ ಬಳಿಕ ಫಲಾನುಭವಿಗಳು ಮೃತಪಟ್ಟಿದ್ದಾರೆ. ಆದಾಗ್ಯೂ, ಅವರಿಗೆ ಪ್ರತಿ ತಿಂಗಳು 2 ಸಾವಿರ ರೂ.ಸಂದಾಯವಾಗುವುದು ಸ್ಥಗಿತಗೊಂಡಿಲ್ಲ. ಇದು ಸರ್ಕಾರಿ ಹಣದ ಅಪವ್ಯಯವೇ ಸರಿ. ಇದಕ್ಕೆ ಇನ್ನೂ ತಡೆ ಬಿದ್ದಿಲ್ಲ ಎಂಬುದೇ ಆಶ್ಚರ್ಯ...! 

ಸಮೀಕ್ಷೆ ಮೂಲಕ ಪತ್ತೆ:

ಈ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಿ ಅಂತಹ ಬ್ಯಾಂಕ್ ಖಾತೆಗಳನ್ನು ಪತ್ತೆ ಮಾಡಲಾಗಿದೆ. ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರವು, ಹಣವನ್ನು ವಾಪಸ್ ಪಡೆಯಲು ತೀರ್ಮಾನಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಕುರಿತು ಬ್ಯಾಂಕ್ ಅಧಿಕಾರಿಗಳೊಂದಿಗೆ ಸಂಪರ್ಕ ಮಾಡಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಯೋಜನೆಯ ಫಲಾನುಭವಿಗಳು ಮೃತಪಟ್ಟ ಪ್ರಕರಣಗಳಲ್ಲಿ ಕುಟುಂಬದವರು ಮಾಹಿತಿ ನೀಡದ್ದರಿಂದ ಅವರ ಖಾತೆಗೆ ಜಮೆ ಆಗಿದೆ. ಆ ಹಣ ಹಿಂಪಡೆಯುವ ಪ್ರಕ್ರಿಯೆ ನಡೆದಿದ್ದು, ಜಿಲ್ಲೆಯಲ್ಲಿ ಅಂದಾಜು 10 ಲಕ್ಷ ರೂ. ಹಣವನ್ನು ಬ್ಯಾಂಕ್ ಖಾತೆಯಿಂದ ವಾಪಸ್ ಪಡೆದುಕೊಳ್ಳಲಾಗಿದೆ. ಫಲಾನುಭವಿಗಳು ಜೀವಿತ ಪ್ರಮಾಣ ಪತ್ರ ಸಲ್ಲಿಸುವುದನ್ನು ಕಡ್ಡಾಯಗೊಳಿಸಲು ಸರ್ಕಾರ ಸಹ ಮುಂದಾಗಿದೆ.

ನಿರಂತರವಾಗಿ ಪರಿಶೀಲನೆ ನಡೆಯಲಿ:

ದೈಹಿಕವಾಗಿ ಅಶಕ್ತ ಫಲಾನುಭವಿಗಳು ಬ್ಯಾಂಕ್‌ಗೆ ಅಲೆದಾಡುವುದು ಕಷ್ಟ ಎಂದು ಖಾತೆ ನಿರ್ವಹಣೆ ಹೊಣೆಯನ್ನು ಕುಟುಂಬದವರು ಪಡೆದಿರುತ್ತಾರೆ. ಫಲಾನುಭವಿಯ ಎಟಿಎಂ ಕಾರ್ಡ್ ಕೂಡ ಇರುತ್ತದೆ. ಅಂತಹವರು ಮೃತರ ಖಾತೆಗಳಿಂದಲೂ ಗೃಹಲಕ್ಷ್ಮಿ ಹಣ ನಗದೀಕರಣ ಮಾಡಿಕೊಂಡಿರುವ ಬಹಳಷ್ಟು ಉದಾಹರಣೆಗಳು ಇದೀಗ ಪತ್ತೆಯಾಗುತ್ತಿವೆ.
 ಹೀಗಾಗಿ, ಫಲಾನುಭವಿಗಳ ಪೈಕಿ ಮರಣ ಹೊಂದಿರುವವರ ಮಾಹಿತಿಗಳು ಕಾಲಕಾಲಕ್ಕೆ ನಿರಂತರವಾಗಿ ಪರಿಶೀಲನಾ ಪ್ರಕ್ರಿಯೆ ನಡೆಯಬೇಕು. ಹಾಗೆ ಮಾಡಿದರೆ ಮಾತ್ರ ನಿಧನ ಹೊಂದಿರುವ ಫಲಾನುಭವಿಗಳಿಗೆ ಆರ್ಥಿಕವಾಗಿ ನೀಡುತ್ತಿರುವ ಧನಸಹಾಯ ತಪ್ಪಿಸಲು ಸಾಧ್ಯವಾಗಲಿದೆ. 

ಬಳಕೆ ಆಗಿರುವ ಹಣದ ಕಥೆ ಏನು?

ಫಲಾನುಭವಿ ನಿಧನರಾಗಿದ್ದರೂ ಅವರ ಬ್ಯಾಂಕ್ ಖಾತೆಯಿಂದ ಕೆಲ ತಿಂಗಳು ಹಣ ನಗದೀಕರಿಸಲಾಗಿದೆ. ಸೂಚನೆ ನೀಡಿದ ಪರಿಣಾಮ ಕೆಲವರು ಮರು ಪಾವತಿಸಿದ್ದಾರೆ.
ಆದರೆ, ಕೆಲವರು ಹಣ ನಗದೀಕರಿಸಿಕೊಂಡು ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ವಸೂಲಾತಿ ಕುರಿತು ರಾಜ್ಯ ಸರ್ಕಾರದಿಂದ ಇನ್ನೂ ಯಾವುದೇ ತೀರ್ಮಾನವೂ ಆಗಿಲ್ಲ. ಸ್ಪಷ್ಟ ನಿರ್ದೇಶನವನ್ನೂ ಇನ್ನೂ ಕೊಟ್ಟಿಲ್ಲ.

ಹಣ ವಾಪಸ್ ಹೇಗೆ? 

ಗೃಹಲಕ್ಷ್ಮಿಯೋಜನೆಯ ಫಲಾನುಭವಿ ಮೃತಪಟ್ಟ ಮಾಹಿತಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ (ಸಿಡಿಪಿಒ) ನೀಡುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ನಿರ್ದೇಶಿಸಲಾಗಿದೆ. ಇದನ್ನು ಪರಿಶೀಲಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಆಯಾ ಬ್ಯಾಂಕ್‌ಗಳಿಗೆ ಮಾಹಿತಿ ನೀಡುತ್ತಾರೆ. ಪ್ರತಿ ತಿಂಗಳು ಫಲಾನುಭವಿಗಳ ಪಟ್ಟಿ ಪರಿಶೀಲಿಸಿ ಮೃತರ ಖಾತೆಗೆ ಹಣ ಜಮೆ ಆಗದಂತೆ ಎಚ್ಚರ ವಹಿಸಲು ಬ್ಯಾಂಕ್‌ಗಳಿಗೆ ನಿರ್ದೇಶಿಸಲಾಗುತ್ತಿದೆ. ಜಮೆ ಆಗಿರುವ ಹಣವನ್ನು ಹಿಂಪಡೆಯುವ ಅಧಿಕಾರವನ್ನು ಸರ್ಕಾರ ಬ್ಯಾಂಕ್‌ಗಳಿಗೆ ಕೊಟ್ಟಿದೆ.

ಮೃತರಿಗೆ ಪಾವತಿಗೆ ಬೀಳಲಿ ತಡೆ:

ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಜಿಲ್ಲೆಯಲ್ಲಿ 6,73,050 ಆಗಿದೆ. ಜನವರಿ ವರೆಗೆ ಮಹಿಳೆಯರ ಖಾತೆಗೆ 2,000 ರೂಪಾಯಿಯಂತೆ ಬರೋಬ್ಬರಿ 3,096 ಕೋಟಿ ರೂ. ಡಿ.ಬಿ.ಟಿ ಮೂಲಕ ಸಂದಾಯ ಮಾಡಲಾಗಿದೆ. 
ಈ ಪೈಕಿ ಯೋಜನೆಯಡಿ ಪಾವತಿಯಾಗುವ ಮೊತ್ತವು ಮರಣ ಹೊಂದಿರುವ ಫಲಾನುಭವಿಗಳಿಗೆ ಕೆಲವು ಕಡೆ ಪಾವತಿಯಾಗುತ್ತಿದೆ. ಇದನ್ನು ತಡೆಗಟ್ಟುವುದು ಅಗತ್ಯವಾಗಿದೆ. ಈ ಮೂಲಕ ತೆರಿಗೆ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ. ಇತರ ಅರ್ಹ ಫಲಾನುಭವಿಗಳಿಗೆ ವಿತರಿಸಲು ಅನುಕೂಲ ಆಗಬೇಕು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ
"

ಫಲಾನುಭವಿಗಳ ಮರಣದ ಬಳಿಕವೂ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ. ಅವರ ಕುಟುಂಬದವರು ಅರಿವಿಲ್ಲದೆ ಎಟಿಎಂ ಮೂಲಕ ಹಣವನ್ನು ನಗದೀಕರಣ ಮಾಡಿಕೊಂಡಿದ್ದಾರೆ. ಚೆಕ್ ಸೇರಿದಂತೆ ಬೇರೆ ಮೂಲಗಳಿಂದ ಇದು ಕಷ್ಟಕರ. ಹೀಗೆ ನಗದೀಕರಣ ಮಾಡಿಕೊಂಡಿರುವ ಹಣವನ್ನು ವಾಪಸ್ ಪಡೆದುಕೊಳ್ಳಲಾಗುತ್ತದೆ. ಬಳಿಕವೇ ಆ ಕುಟುಂಬದ ಇತರ ಮಹಿಳಾ ಸದಸ್ಯರಿಗೆ ಗೃಹಲಕ್ಷ್ಮಿಯೋಜನೆ ಹಣ ಸಂದಾಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net