ಮೂರು ತಿಂಗಳಿಗೊಮ್ಮೆ ಕುಂದುಕೊರತೆ ಕಡ್ಡಾಯ

ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಪ ವಿಭಾಗಾಧಿಕಾರಿ ಕಾವ್ಯಾರಾಣಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿದರು.  ನಿಸರ್ಗ ಪ್ರಿಯಾ, ಶ್ರೀನಿವಾಸ್, ಡಾ.ಶಶಿಧರ್,ಎಚ್.ಪಿ.ಮಧು, ಡಾ.ವಿಕ್ರಂ ಇದ್ದರು.
ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಪ ವಿಭಾಗಾಧಿಕಾರಿ ಕಾವ್ಯಾರಾಣಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿದರು. ನಿಸರ್ಗ ಪ್ರಿಯಾ, ಶ್ರೀನಿವಾಸ್, ಡಾ.ಶಶಿಧರ್,ಎಚ್.ಪಿ.ಮಧು, ಡಾ.ವಿಕ್ರಂ ಇದ್ದರು.
Published on
ಪಿರಿಯಾಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ತುರ್ತು ಕೆಲಸಗಳನ್ನು ಶೀಘ್ರದಲ್ಲಿ ಬಗೆಹರಿಸಿಕೊಳ್ಳುವುದು ಆಸ್ಪತ್ರೆಯ ಆಡಳಿತ ಮಂಡಳಿ ಕರ್ತವ್ಯ ಎಂದು ಉಪ ವಿಭಾಗಾಧಿಕಾರಿ ಕಾವ್ಯಾರಾಣಿ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಆಯೋಜಿಸಿದ್ದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಆಸ್ಪತ್ರೆಯ ಕುಂದು ಕೊರತೆ ಆಲಿಸಿ ಮಾತನಾಡಿದ ಅವರು, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಸಮಸ್ಯೆಗಳು ಕೇಳಿಬರುತ್ತಿದ್ದು ಶೀಘ್ರದಲ್ಲಿ ಕಾರ್ಯ ಯೋಜನೆ ಕೈಗೊಳ್ಳಿ ಎಂದು ಸಲಹೆ ನೀಡಿದರು.
ಆರೋಗ್ಯ ರಕ್ಷಾ ಸಮಿತಿಯ ಸಭೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಿ ಆಸ್ಪತ್ರೆಯ ಕುಂದುಕೊರತೆ ಬಗೆಹರಿಸಬೇಕು. ಆಸ್ಪತ್ರೆ ಶವಾಗಾರಕ್ಕೆ ಸರಬರಾಜುಗುತ್ತಿರುವ ನೀರಿನ ಪೈಪ್ ದುರಸ್ತಿಗೊಳಿಸಿ ಸಾರ್ವಜನಿಕರು ಕುಳಿತುಕೊಳ್ಳಲು ಕಲ್ಲಿನ ಬೆಂಚ್ ಅಳವಡಿಸಲು ತ್ವರಿತ ಕ್ರಮ ವಹಿಸಬೇಕು. ಕೆಪಿಟಿಪಿ ನಿಯಾಮಾನುಸಾರ ಔಷಧ, ಪರಿಕರ, ಕ್ಷ-ಕಿರಣ ಫಿಲ್ಮ್, ವೈದ್ಯಕೀಯ ಉಪಕರಣ ಸೇರಿದಂತೆ ಕಚೇರಿಯ ವಿವಿಧ ವಿಭಾಗಗಳಿಗೆ ಅವಶ್ಯಕತೆ ಇರುವ ಸ್ಥಳಗಳಿಗೆ ರೋಟೇಟಿಂಗ್ ಚೇರ್ ಅಳವಡಿಸಬೇಕು ಎಂದು ಸಲಹೆ ನೀಡಿದರು.
ಆಸ್ಪತ್ರೆಯ ಕಾಂಪೌಂಡ್‌ನೊಳಗೆ ರೋಗಿಗಳು, ಸಾರ್ವಜನಿಕರು ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುವುದನ್ನು ತಡೆಗಟ್ಟಬೇಕು. ಆಸ್ಪತ್ರೆ ಮುಂಭಾಗವಿರುವ ಆಟೋರಿಕ್ಷಾ ನಿಲ್ದಾಣವನ್ನು ಸ್ಥಳಾಂತರಗೊಳಿಸಿ ತುರ್ತುವಾಹನ ನಿಲುಗಡೆಗೆ ಹಾಗೂ ಆಸ್ಪತ್ರೆಗೆ ಬರುವ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ವಾಹನಗಳ ನಿಲುಗಡೆಗೆ ಪಾರ್ಕಿಂಗ್ ಸೂಚನಾ ಫಲಕ ಅಳವಡಿಸಿ ಆಸ್ಪತ್ರೆ ಮುಖ್ಯದ್ವಾರದಲ್ಲಿ ವಾಹನಗಳನ್ನು ನಿಲ್ಲಿಸದಂತೆ ಚೈನ್ ಬ್ಯಾರಿಕೇಡ್ ನಿರ್ಮಿಸಬೇಕು. ಆಸ್ಪತ್ರೆ ಮುಖ್ಯ ಗೇಟ್ ಬಳಿ ಇಂಟರ್‌ಲಾಕ್ ಅಳವಡಿಸಿ ನೀರಿನ ಟ್ಯಾಂಕ್, ಸಂಪನ್ನು ಶುಚಿಗೊಳಿಸಿ ಸ್ವಚ್ಛತೆ ಕಾಪಾಡಬೇಕು ಎಂದು ಸಲಹೆ ನೀಡಿದರು.
ಕೆಟ್ಟಿದ್ದ ಆಸ್ಪತ್ರೆಯ ಟ್ರಾನ್ಸ್‌ಫಾರ್ಮರ್ ಅನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ತುರ್ತಾಗಿ ದುರಸ್ತಿಗೊಳಿಸಿದ್ದು, 250 ಕೆವಿಯ ಹೊಸ ಟ್ರಾನ್ಸ್‌ಫಾರ್ಮರ್ ಹಾಗೂ ಕೇಬಲ್ ಸೆಟ್ ಅಳವಡಿಸಲು ಈಗ ಸಾಕಷ್ಟು ಫಂಡ್ ಇಲ್ಲದ ಕಾರಣ ಮುಂದಿನ ಆರೋಗ್ಯ ರಕ್ಷಾ ಸಭೆಯೊಳಗೆ ಬಗೆಹರಿಸುವತ್ತ ಗಮನ ಹರಿಸಲಾಗುವುದು ಎಂದರು.
ತಹಸೀಲ್ದಾರ್ ನಿಸರ್ಗ ಪ್ರಿಯಾ ಮಾತನಾಡಿ, ತುರ್ತು ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆಯಾಗದಂತೆ ಎಚ್ಚರ ವಹಿಸವೇಕು. ಜನರೇಟರ್ ಸರಿಯಿಲ್ಲದಿದ್ದರೆ ರಾತ್ರಿವೇಳೆ ದೊಡ್ಡ ಸಮಸ್ಯೆಯಾಗುತ್ತದೆ. ಆ ಕಾರಣದಿಂದ ಯಾವುದೇ ಸಮಸ್ಯೆ ಬಾರದಂತೆ ಸಿಎಸ್‌ಆರ್ ಫಂಢ್ ಅನುಮೋದನೆಗೆ ಸಂಬಂಧಪಟ್ಟವರ ಜತೆ ಮಾತನಾಡಿ ತ್ವರಿತವಾಗಿ ಕೆಲಸ ಮುಗಿಸಬೇಕು ಎಂದು ಸೆಸ್ಕ್ ಎಇ ಶಶಿಕುಮಾರ್‌ಗೆ ಸೂಚಿಸಿದರು.
ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶಶಿಧರ್ ಮಾತನಾಡಿ, ತುರ್ತು ವಾಹನ, ಎಲೆಕ್ಟ್ರಿಕಲ್, ಫ್ಲಂಬಿಂಗ್, ಶೌಚಗೃಹ, ಸಿಸಿ ಟಿವಿ, ವಾಷಿಂಗ್ ಮಷಿನ್,ಕಮೋಡ್ ಸೇರಿದಂತೆ ಇತರ ದುರಸ್ತಿ ಕಾರ್ಯಕ್ಕೆ ಶೀಘ್ರ ಅನುಮೋದನೆ ನೀಡುವಂತೆ ಮನವಿ ಮಾಡಿದರು.
ಸಭೆಯಲ್ಲಿ ಟಿಎಚ್‌ಒ ಡಾ.ಶ್ರೀನಿವಾಸ್, ರಕ್ಷಾ ಸಮಿತಿ ಖಜಾಂಚಿ ಡಾ.ವಿಕ್ರಂ, ಪುರಸಭೆ ಮುಖ್ಯಾಧಿಕಾರಿ ಎಚ್.ಪಿ.ಮಧು, ಲೋಕೋಪಯೋಗಿ ಇಲಾಖೆ ಎಇಇ ಯೋಗಾನಂದ, ಸಾರ್ವಜನಿಕ ಆಸ್ಪತ್ರೆಯ ವ್ಯವಸ್ಥಾಪಕಿ ತೆಲ್ಸಿಯ, ಸಿಬ್ಬಂದಿ ನವೀನ್‌ಕುಮಾರ್, ಗೀತಾ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net