ಹುಣಸೂರು ತಾಲೂಕು ಉದ್ದೂರು ಗ್ರಾಪಂನ ನೂತನ ಕಚೇರಿಯನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಶಾಸಕ ಜಿ.ಡಿ.ಹರೀಶ್‌ಗೌಡ, ಗ್ರಾಪಂ ಅಧ್ಯಕ್ಷ ಶಿವಕುಮಾರ್, ಗಣೇಶ್ ಕುಮಾರಸ್ವಾಮಿ, ಕಾಂಗರಾಜು, ಸತೀಶ್ ಪಾಪಣ್ಣ ಇದ್ದರು.
ಹುಣಸೂರು:ತಾಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳ ನೂತನ ಕಟ್ಟಡವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಶಾಸಕ ಜಿ.ಡಿಹರೀಶ್‌ಗೌಡ ಉದ್ಘಾಟಿಸಿದರು.
ತಾಲೂಕಿನ ಉದ್ದೂರು ಗ್ರಾಪಂ, ಮರದೂರು, ಜಾಬಗೆರೆ ಮತ್ತು ಹೆಗ್ಗಂದೂರು ಗ್ರಾಪಂಗಳ ತಲಾ 18 ಲಕ್ಷ ರೂ.ವೆಚ್ಚದಡಿ ನಿರ್ಮಿಸಿರುವ ಕಟ್ಟಡಗಳನ್ನು ಭಾನುವಾರ ಸಾರ್ವಜನಿಕ ಸೇವೆಗೆ ಸಮರ್ಪಿಸಲಾಯಿತು.
ಉದ್ದೂರು ಗ್ರಾಪಂ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಗ್ರಾಮೀಣ ಭಾಗದ ಅಭಿವೃದ್ಧಿಗೆ ಗ್ರಾಪಂಗಳೇ ಮೂಲ ಅಡಿಪಾಯವಾಗಿದೆ. ಗ್ರಾಪಂ ಪ್ರತಿನಿಧಿಗಳು ತಮ್ಮ ವ್ಯಾಪ್ತಿಯಲ್ಲಿ ಸರ್ಕಾರದ ಎಲ್ಲ ಯೋಜನೆಗಳ ಸಮಗ್ರ ಜಾರಿ ಮಾಡುವತ್ತ ಜವಾಬ್ದಾರಿ ನಿರ್ವಹಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಪರಿಕಲ್ಪನೆ 2047ರೊಳಗೆ ಸಾಕಾರಗೊಳ್ಳುವ ನಿಟ್ಟಿನಲ್ಲಿ ಹತ್ತು ಹಲವು ದೂರಗಾಮಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಗ್ರಾಪಂ ಮಟ್ಟದಲ್ಲಿ ಪ್ರಾಮಾಣಿಕ ಮತ್ತು ಪಾರದರ್ಶಕ ಸೇವೆಯನ್ನು ನೀವು ಜನರಿಗೆ ನೀಡಬೇಕಿದೆ. ಪಂಚಾಯಿತಿಗಳ ಡಿಜಿಟಲೀಕರಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಉದ್ದೂರು ಗ್ರಾಪಂ ವ್ಯಾಪ್ತಿಯಲ್ಲಿ ಈಗಾಗಲೇ 3 ರಸ್ತೆಗಳ ಅಭಿವೃದ್ಧಿಗೆ ಶಾಸಕರ ಅನುದಾನದಡಿ ಕಾಮಗಾರಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಗ್ರಾಪಂ ಕಚೇರಿಗಳು ಸ್ವಯಂ ಆಡಳಿತಕ್ಕೆ ಅಗತ್ಯವಿದ್ದು, ಆರೋಗ್ಯಕರ ಚರ್ಚೆಗಳ ಮೂಲಕ ಗ್ರಾಮದ ಅಭಿವೃದ್ಧಿಗೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವತ್ತ ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.
ಬಿಜೆಪಿ ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಗಣೇಶ್ ಕುಮಾರಸ್ವಾಮಿ, ತಾಲೂಕು ಅಧ್ಯಕ್ಷ ಕಾಂತರಾಜ್, ನಗರಾಧ್ಯಕ್ಷ ನಾರಾಯಣ್, ಗ್ರಾಪಂ ಅಧ್ಯಕ್ಷ ಶಿವಕುಮಾರ್, ಸತೀಶ್ ಪಾಪಣ್ಣ, ಹರವೆ ಶ್ರೀಧರ್, ಪ್ರೇಮಕುಮಾರ್, ರಂಜಿತಾ ಚಿಕ್ಕಮಾದು, ಇಒ ಕೆ.ಹೊಂಗಯ್ಯ, ಗ್ರಾಪಂ ಸದಸ್ಯರು, ಗ್ರಾಮದ ಮುಖಂಡರಿದ್ದರು.
ಸಿಎಂ ಕುರ್ಚಿಗಾಗಿ ಹಗ್ಗ ಜಗ್ಗಾಟ
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ‘ವಿಜಯವಾಣಿ’ಯೊಂದಿಗೆ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಕುರ್ಚಿಗಾಗಿ ಹಗ್ಗ ಜಗ್ಗಾಟ ಹೆಚ್ಚಾಗಿದ್ದು, ಆಡಳಿತ ಕವಲುದಾರಿಯಲ್ಲಿದೆ. ಬ್ರೇಕ್‌ಫಾಸ್ಟ್ ಸಭೆ ಸಮಸ್ಯೆಯನ್ನು ಪರಿಹರಿಸಿಲ್ಲ. ಬದಲಾಗಿ ಇನ್ನಷ್ಟು ಬಿಗಡಾಯಿಸಿದೆ ಎಂದು ಟೀಕಿಸಿದರು.
ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಮೇಲ್ನೋಟಕ್ಕೆ ಒಂದಾಗಿದ್ದೇವೆಂದು ತೋರ್ಪಡಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿ ಈಗಾಗಲೇ ಎರಡು ಬಣಗಳು ಕ್ರಿಯಾಶೀಲವಾಗಿವೆ. 140 ಬೃಹತ್ ಬಹುಮತ ನೀಡಿದ ಮತದಾರರನ್ನು ಅಪಮಾನಿಸಲಾಗುತ್ತಿದೆ. ಜನರ ನಿರೀಕ್ಷೆ ಹುಸಿಯಾಗುತ್ತಿದ್ದು, ಭ್ರಮನಿರಸನರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.