ಮಕ್ಕಳಿಗೆ ಶಿಕ್ಷಣ ಕೊಡಿಸಲು ಶ್ರಮಿಸಿದ ಗೋಪಾಲಸ್ವಾಮಿ ದಂಪತಿ: ಎಂ.ಎಸ್.ವಿಜಯಾಹರನ್ ಬಣ್ಣನೆ
ನಗರದಲ್ಲಿ ಸಂಸ್ಕೃತಿ ಪ್ರಕಾಶನದಿಂದ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿ.ವಿ.ಗೋಪಿನಾಥ್, ಡಾ.ಎ.ಎಸ್.ಚಂದ್ರಶೇಖರ್, ಎಂ.ಜಿ.ರಜನೀಕಾಂತ್, ಎನ್.ಆರ್.ಮಂಜುನಾಥ್, ಎಂ.ಎಸ್.ವಿಜಯಾಹರನ್, ಎನ್.ಕೇಶವಮೂರ್ತಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಕಾಶವಾಣಿ, ಶಿಶುವಿಹಾರ, ಗ್ರಾಮಗಳ ಅಭಿವೃದ್ಧಿ ಸೇರಿದಂತೆ ಇನ್ನಿತರ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದರು
ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಮಲಾ ಅವರು ತಮ್ಮ ಕರ್ತವ್ಯದ ಜತೆಗೆ ಮನೆ ನಿಭಾಯಿಸಿಕೊಂಡು ತಾವೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು
ಮೈಸೂರು:ಸಂಸ್ಕೃತಿ ಪ್ರಕಾಶನ ಹಾಗೂ ಡಾ.ಎಂ.ವಿ.ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಧೀಮಂತ ಮಹಿಳೆ ಕಮಲಾ ಗೋಪಾಲಸ್ವಾಮಿ’ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಅಕಾಶವಾಣಿ ನಿವೃತ್ತ ಉಪ ಮಹಾನಿರ್ದೇಶಕಿ ಎಂ.ಎಸ್.ವಿಜಯಾಹರನ್ ಮಾತನಾಡಿ, ಮಹಾರಾಜ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಗೋಪಾಲಸ್ವಾಮಿ ಅವರು ಅಕಾಶವಾಣಿ, ಶಿಶುವಿಹಾರ, ಗ್ರಾಮಗಳ ಅಭಿವೃದ್ಧಿ ಸೇರಿದಂತೆ ಇನ್ನಿತರ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಮಲಾ ಅವರು ತಮ್ಮ ಕರ್ತವ್ಯದ ಜತೆಗೆ ಮನೆ ನಿಭಾಯಿಸಿಕೊಂಡು ತಾವೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎಂದರು.
ತಮ್ಮ ಮನೆಯಲ್ಲಿ ಮಕ್ಕಳನ್ನು ಇರಿಸಿಕೊಂಡು ಅವರಿಗೆ ಶಿಕ್ಷಣ ಕೊಡಿಸುವಲ್ಲಿ ದಂಪತಿ ಶ್ರಮಿಸುತ್ತಿದ್ದರು. ಅಗಿನ ಕಾಲದಲ್ಲಿಯೇ ಸಂಪ್ರದಾಯದ ಜತೆಗೆ ಸಂಸ್ಕಾರವನ್ನು ಕಲಿಸುವ ಕೆಲಸ ಮಾಡಿದರು. ವಿಧವಾ ವಿವಾಹವನ್ನು ಪ್ರೋತ್ಸಾಹಿಸಿ ಅದನ್ನು ತಮ್ಮ ಸಂಬಂಧಿಕರಲ್ಲಿಯೇ ಮಾಡಿ ತೊರಿಸಿಕೊಟ್ಟವರು. ಇಂತಹ ನೂರಾರು ಕಾರ್ಯವನ್ನು ದಂಪತಿ ಮಾಡಿದ್ದರು ಎಂದು ಹೇಳಿದರು.
ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಗಳ ಸಂಯೋಜಕ ಎನ್.ಆರ್.ಮಂಜುನಾಥ್ ಮಾತನಾಡಿ, ದೂರದೃಷ್ಟಿಯಿಂದ ಗೋಪಾಲಸ್ವಾಮಿ, ಕಮಲಾ ಅವರು ಸ್ಥಾಪಿಸಿದ ಶಿಶುವಿಹಾರ ಇಂದು ನೂರು ವರ್ಷ ಪೂರೈಸಿದ್ದು, ಸದ್ಯದಲ್ಲಿಯೇ ಶತಮಾನೋತ್ಸವ ಆಚರಿಸಲಾಗುವುದು ಎಂದು ಹೇಳಿದರು.
ಆಕಾಶವಾಣಿಯನ್ನು ಸಮರ್ಥವಾಗಿ ಮುನ್ನಡೆಸಿದ ಗೋಪಾಲಸ್ವಾಮಿ ದಂಪತಿ, ಸಾಮಾಜಿಕ ಕಾರ್ಯಗಳು, ಗ್ರಾಮಗಳ ಅಭಿವೃದ್ಧಿ, ಮದ್ಯಪಾನದಿಂದ ಅಗುವ ಸಮಸ್ಯೆ ಸೇರಿದಂತೆ ಇನ್ನಿತರ ಸಮಾಜ ಸೇವೆಗಾಗಿ ಮೈಸೂರು ರಾಜರಿಂದ ಪ್ರಶಂಸೆ, ಮೆಚ್ಚುಗೆಯನ್ನು ಗಳಿಸಿದ್ದರು ಎಂದರು.
ಅನಾಥಾಲಯ ಸಂಸ್ಥೆ ಅಧ್ಯಕ್ಷ ಸಿ.ವಿ.ಗೋಪಿನಾಥ್ ಮಾತನಾಡಿ, ಉತ್ತರ ಭಾರತ ಜನರು ನಾಚಿಸುವಂತೆ ನಮ್ಮ ಕರ್ನಾಟಕ ಅದಲ್ಲೂ ಮೈಸೂರು ಭಾಗದ ಜನರು ಸಾಧನೆ ಮಾಡಿ ತೋರಿಸಿದ್ದಾರೆ. ಹಿಂದಿಯನ್ನು ಮೀರಿಸುವಂತಹ ಸಾಹಿತ್ಯ ನಮ್ಮ ಕನ್ನಡದಲ್ಲಿ ಮೂಡಿ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಕಾಶಕ ಸಂಸ್ಕೃತಿ ಸುಬ್ರಹ್ಮಣ್ಯ ಮಾತನಾಡಿ, ಮುಂದಿನ ದಿನಗಳಲ್ಲಿ ಗೋಪಾಲಸ್ವಾಮಿ ಅವರ ಕುರಿತ ಪುಸ್ತಕವನ್ನು ಹೊರತರಲಾಗುವುದು. ಕಮಲಾ ಅವರಂತೆ ಸಾಧನೆ ಮಾಡಿದ 100 ಜನರನ್ನು ಕುರಿತಾದ ಪುಸ್ತಕವನ್ನು ಹೊರತರಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಗೋಪಾಲಸ್ವಾಮಿ ಅವರ ಕುಟುಂಬದವರು ತಮ್ಮ ಅನಿಸಿಕೆ ಹಂಚಿಕೊಂಡರು. ಮೈಸೂರು ಅಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎನ್.ಕೇಶವಮೂರ್ತಿ, ಗೋಪಾಲಸ್ವಾಮಿ ಅವರ ಪುತ್ರ ಎಂ.ಜಿ. ರಜನೀಕಾಂತ್, ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಎಸ್. ಚಂದ್ರಶೇಖರ್ ಇತರರು ಇದ್ದರು.