ಬೈಲುಕುಪ್ಪೆ: ಗಿರಗೂರು ಗ್ರಾಮ ಠಾಣಾ ಜಾಗವನ್ನು ತೆರವುಗೊಳಿಸುವಂತೆ ಆಗ್ರಹಿಸಿ ದಲಿತ ಮುಖಂಡರು ಪಿರಿಯಾಪಟ್ಟಣ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುನಿಲ್‌ಕುಮಾರ್‌ಗೆ ಸೋಮವಾರ ಕೊಪ್ಪ ಗ್ರಾಪಂ ಆವರಣದಲ್ಲಿ ಮನವಿ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಂಚಾಲಕ ಐಲಾಪುರ ರಾಮು ಮಾತನಾಡಿ, ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿರಗೂರು ಗ್ರಾಮ ಠಾಣಾ ಜಾಗ ಸರ್ವೇ ನಂಬರ್ 30ರಲ್ಲಿ 9 ಎಕರೆ 9 ಗುಂಟೆ ಜಾಗ ಈಗಾಗಲೇ ನ್ಯಾಯಾಲಯದ ಆದೇಶದ ಮೇರೆಗೆ ಗ್ರಾಮ ಪಂಚಾಯಿತಿ ವಶದಲ್ಲಿದ್ದು, ಇದಕ್ಕೆ ಸಂಬಂಧಿಸಿದಂತೆ ಇ- ಸ್ವತ್ತು ಸಹ ಆಗಿರುತ್ತದೆ. ತಾವು ಪರಿಶೀಲಿಸಿ ಆದಷ್ಟು ಬೇಗ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಾಪಂ ಇಒ ಸುನಿಲ್ ಕುಮಾರ್, ನ್ಯಾಯಾಲಯದ ಆದೇಶದಂತೆ ಗ್ರಾಮ ಪಂಚಾಯಿತಿಯಲ್ಲಿ ಈ ಜಾಗಕ್ಕೆ ಸಂಬಂಧಿಸಿದಂತೆ ಇ ಸ್ವತ್ತು ಮಾಡುವಂತೆ ಆದೇಶಿಸಿ ಅದರ ಕಾಪಿ ಪಡೆದುಕೊಂಡಿರುತ್ತೇನೆ. ತಾಲೂಕಿನ ಶಾಸಕರಾದ ಕೆ. ವೆಂಕಟೇಶ್ ಅವರು ಸಹ ಇದರ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿಸಿ ಪೊಲೀಸ್ ಇಲಾಖೆ ಸಹಕಾರದಲ್ಲಿ ಮತ್ತೊಮ್ಮೆ ಡ್ರೋನ್ ಸರ್ವೇ ಮಾಡಿಸಿ ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮಠಾಣಾ ಜಾಗ ತೆರವುಗೊಳಿಸುವಂತೆ ಒತ್ತಾಯಿಸಿ ದಲಿತ ಮುಖಂಡರು ಸೋಮವಾರ ತಾಪಂ ಇಒಗೆ ಮನವಿ ಸಲ್ಲಿಸಿದರು. ಮುಖಂಡರಾದ ಐಲಪುರ ರಾಮು, ಮಲ್ಲಿಕಾರ್ಜುನ, ರಾಮಸ್ವಾಮಿ, ಶಿವಪ್ರಕಾಶ್, ಚೆನ್ನಪ್ಪ, ಸುರೇಶ್, ಇದ್ದರು.