ಮುಡಾದ ಉಳಿದ 300 ಅಕ್ರಮ ನಿವೇಶನಗಳನ್ನೂ ರದ್ದು ಪಡಿಸಿ : ಬಿಜೆಪಿ ನಗರ ವಕ್ತಾರ ಎಂ.ಎ. ಮೋಹನ್ ಆಗ್ರಹ

ಬಿಜೆಪಿ ಮೈಸೂರು ನಗರ ವಕ್ತಾರ ಮೋಹನ್ ಗುರುವಾರ ಸುದ್ದಿಗೋಷ್ಠಿ ನಡೆಸಿದರು.
ಬಿಜೆಪಿ ಮೈಸೂರು ನಗರ ವಕ್ತಾರ ಮೋಹನ್ ಗುರುವಾರ ಸುದ್ದಿಗೋಷ್ಠಿ ನಡೆಸಿದರು.
Published on

ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಶೇ.50:50 ಅನುಪಾತದಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 1100 ನಿವೇಶನಗಳ ಹಂಚಿಕೆ ರದ್ದುಪಡಿಸಿ 2 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಉಳಿಸಿರುವುದು ಸ್ವಾಗತಾರ್ಹ. ಆದರೆ, ಉಳಿದ 300 ನಿವೇಶನಗಳ ಹಂಚಿಕೆಯನ್ನೂ ಸಹ ರದ್ದುಪಡಿಸಬೇಕು ಎಂದು ಬಿಜೆಪಿ ನಗರ ವಕ್ತಾರ ಎಂ.ಎ. ಮೋಹನ್ ಆಗ್ರಹಿಸಿದ್ದಾರೆ.

ಮುಡಾ ಹಗರಣ ಬಯಲಿಗೆ ಬಂದ ತಕ್ಷಣ ಕೆಲವರನ್ನು ಬಚಾವ್ ಮಾಡಲು ಅಂದಿನ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ದಿಢೀರಾಗಿ ನಗರಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಹಲವು ಮಹತ್ವದ ಕಡತಗಳನ್ನು ಮುಡಾ ಕಚೇರಿಯಿಂದ ಬೆಂಗಳೂರಿಗೆ ಕೊಂಡೊಯ್ದರು. ಹೀಗಾಗಿ ಕಡತಗಳು ಇಲ್ಲದ ಹಿನ್ನೆಲೆಯಲ್ಲಿ ಈಗಿನ ನಗರಾಭಿವೃದ್ಧಿ ಸಚಿವ 1,100 ನಿವೇಶನಗಳನ್ನು ಮಾತ್ರ ರದ್ದು ಪಡಿಸಿ ಆದೇಶ ಹೊರಡಿಸಿದ್ದಾರೆ. ಉಳಿದ 300 ನಿವೇಶನಗಳ ಅಕ್ರಮಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ದಾಖಲೆ ಇದ್ದು, ಈ ದಾಖಲೆಯನ್ನು ಸಚಿವರಿಗೆ ನೀಡುತ್ತೇವೆ. ದಾಖಲೆಗಳನ್ನು ಪರಿಶೀಲಿಸಿ ನಿವೇಶನಗಳನ್ನು ರದ್ದುಗೊಳಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಈ ಹಿಂದೆ ಬಡಾವಣೆ ನಿರ್ಮಾಣ ಸಂದರ್ಭ ಭೂ ಸ್ವಾಧೀನ ಪ್ರಕ್ರಿಯೆ ನಂತರ ರೈತರಿಗೆ ಪರಿಹಾರ ನೀಡಲಾಗುತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಪರಿಹಾರದ ಬದಲು ಶೇ.50 ರಷ್ಟು ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ರೈತರಿಗೆ ನೀಡಲಾಗುತ್ತಿದೆ. ಆದರೆ, ಈ ಹಿಂದೆ ಪರಿಹಾರ ಪಡೆದ ಕೆಲವರು ಪರಿಹಾರ ಪಡೆದ ಮಾಹಿತಿಯನ್ನು ಮರೆ ಮಾಚಿ ಶೇ.50 ರಷ್ಟು ನಿವೇಶನವನ್ನು ಅಕ್ರಮವಾಗಿ ಪಡೆದುಕೊಂಡರು. ಈ ಹಗರಣದ ರೂವಾರಿ ಮುಡಾದ ಮಾಜಿ ಆಯುಕ್ತ ನಟೇಶ್. ಅವರನ್ನು ಕೂಡಲೇ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಮೌಲ್ಯದ ಪ್ರಕಾರ ಒಟ್ಟು 2 ಸಾವಿರ ಕೋಟಿ ಮೌಲ್ಯದ ಆಸ್ತಿ ಉಳಿಸಿದಂತಾಗಿದೆ. ಇದರ ಮಾರುಕಟ್ಟೆ ಮೌಲ್ಯ 9 ರಿಂದ 10 ಸಾವಿರ ಕೋಟಿ ರೂ.ಗಳಾಗಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ದೇವನೂರು ಬಡಾವಣೆ ನಿರ್ಮಾಣಕ್ಕೆ ತಮ್ಮ ಭೂಮಿ ಕಳೆದುಕೊಂಡರು. ಅವರಿಗೆ ಅದೇ ಬಡಾವಣೆಯಲ್ಲಿ ನಿವೇಶನಗಳನ್ನು ನೀಡಬೇಕಿತ್ತು. ಆದರೆ, ಅತಿ ಹೆಚ್ಚು ಬೆಲೆಬಾಳುವ ವಿಜಯನಗರ 4ನೇ ಹಂತದಲ್ಲಿ ಅವರಿಗೆ ನಿವೇಶನಗಳನ್ನು ಅಕ್ರಮವಾಗಿ ನೀಡಲಾಯಿತು. ನಮ್ಮ ಹೋರಾಟದ ಫಲವಾಗಿ ಅವರು ನಿವೇಶನಗಳನ್ನು ವಾಪಾಸ್ ನೀಡಿದರು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net