ಬಿಎ, ಬಿಎಸ್ಸಿ ಕಲಿಯಲು ಜೆನ್ ಜೀ ಪೀಳಿಗೆ ನಿರಾಸಕ್ತಿ

ವಿದ್ಯಾರ್ಥಿಗಳು
ವಿದ್ಯಾರ್ಥಿಗಳು
Published on

ಪ್ರಮುಖ ಮುಖ್ಯಾಂಶಗಳು

  • ಬಿ.ಕಾಂ.ಗೆ ಒಲವು
  • ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರವೇಶಾತಿ ಕುಸಿತ
  • ದಾಖಲಾತಿ ಸಹ ಕಡಿಮೆ
ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಸಾಂಪ್ರದಾಯಿಕ ಪದವಿ ಕೋರ್ಸ್‌ಗಳ (ಬಿ.ಎ., ಬಿ.ಕಾಂ., ಬಿ.ಎಸ್ಸಿ) ಕಲಿಕೆಗೆ ಜೆನ್ ಜೀ ತಲೆಮಾರಿನವರು ಆಸಕ್ತಿ ತೋರುತ್ತಿಲ್ಲ. ಬದಲಿಗೆ ವೃತ್ತಿಶಿಕ್ಷಣ ಕೋರ್ಸ್‌ಗಳತ್ತ ಒಲವು ತೋರುತ್ತಿದ್ದಾರೆ...!
ಎಐ ಕಾಲದಲ್ಲಿರುವ ಯುವ ಸಮೂಹದ ಈ ನಿರಾಸಕ್ತಿಯಿಂದಾಗಿಯೇ ಈ ಕೋರ್ಸ್‌ಗಳಿಗೆ ಬೇಡಿಕೆ ಕಡಿಮೆಯಾಗಿದ್ದು, ಇದರಿಂದಾಗಿ ಜಿಲ್ಲೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜುಗಳಲ್ಲಿ ವರ್ಷದಿಂದ ವರ್ಷಕ್ಕೆ ಪ್ರವೇಶಾತಿ ಕುಸಿಯುತ್ತಿದೆ. ಇದುವೇ ಚಿಂತಿಗೀಡು ಮಾಡಿದೆ...!
ಪದವಿ ಕಾಲೇಜುಗಳಲ್ಲಿ ಮಾನವಿಕ ವಿಷಯ ಬೋಧಿಸುವ ಕಲಾ, ವಾಣಿಜ್ಯ ಮತ್ತು ವಿಜ್ಞಾನದ ಕುರಿತು ಬುನಾದಿ ಹಂತದಲ್ಲಿ ಉನ್ನತ ಶಿಕ್ಷಣ ಶುರುವಾಗುತ್ತದೆ. ಆದರೀಗ ಅವುಗಳ ಅಡಿಪಾಯವೇ ಅಲ್ಲಾಡುತ್ತಿದೆ. 
ಮೂಲ ವಿಷಯವನ್ನು ಓದಲು ನವ ತಲೆಮಾರಿನ ವಿದ್ಯಾರ್ಥಿಗಳು ಒಲವು ತೋರುತ್ತಿಲ್ಲ. ಇದರಿಂದ ಈ ಕೋರ್ಸ್‌ಗಳು ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿವೆ. ಭವಿಷ್ಯದಲ್ಲಿ ಬಿ.ಎ., ಬಿ.ಕಾಂ, ಬಿ.ಎಸ್ಸಿನಲ್ಲಿ ಬೋಧಿಸುವ ಕೆಲ ವಿಷಯಗಳ ಕೋರ್ಸ್‌ಗಳನ್ನೇ ಮುಚ್ಚುವ ಸ್ಥಿತಿ ಎದುರಾದರೂ ಅಚ್ಚರಿ ಇಲ್ಲ.

ಸೊರಗಿದ ಪದವಿ ಕಾಲೇಜುಗಳು:

ಉನ್ನತ ಶಿಕ್ಷಣಕ್ಕೆ ರಾಜ್ಯದಲ್ಲೇ ಮುಖ್ಯ ತಾಣವಾಗಿರುವ ಮೈಸೂರು ಜಿಲ್ಲೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ವಿದ್ಯಾರ್ಥಿಗಳ ಅಭಾವದಿಂದ ಸೊರಗುತ್ತಿವೆ. ದಾಖಲಾತಿ ಸಹ ಕಡಿಮೆಯಾಗುತ್ತಿದೆ. 
2026-27ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕ ಪದವಿಯ ಮೊದಲ ವರ್ಷಕ್ಕೆ ಈವರೆಗೆ 7,816 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಂಡಿದ್ದಾರೆ. ಕಳೆದ ವರ್ಷ 8,085 ವಿದ್ಯಾರ್ಥಿಗಳು ದಾಖಲಾಗಿದ್ದರು. ಅದಕ್ಕಿಂತ ಹಿಂದಿನ 2024-25ರಲ್ಲಿ 9031, 2023-24ನೇ ಸಾಲಿನಲ್ಲಿ 9,072 ವಿದ್ಯಾರ್ಥಿಗಳು ಮೊದಲ ವರ್ಷಕ್ಕೆ ಪ್ರವೇಶಾತಿಯಾಗಿದ್ದರು. ಈ ಅಂಕಿ ಅಂಶಗಳ ಮೇಲೆ ಗಮನಿಸಿದರೆ ವರ್ಷದಿಂದ ವರ್ಷಕ್ಕೆ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿರುವುದು ಗೋಚರವಾಗುತ್ತಿದೆ.

ಅಕ್ಕಪಕ್ಕದ ಜಿಲ್ಲೆಗಳಲ್ಲೂ ಇದೇ ಸ್ಥಿತಿ:

ಇದೇ ಸ್ಥಿತಿಗತಿಯಲ್ಲಿ ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಯಲ್ಲಿರುವ ಸರ್ಕಾರಿ ಪದವಿ ಕಾಲೇಜುಗಳು ಹೊಯ್ದಡುತ್ತಿವೆ. ಈ ಯಾವ ಜಿಲ್ಲೆಗಳಲ್ಲೂ ಪ್ರವೇಶಾತಿ ಸಂಖ್ಯೆ ಸುಧಾರಣೆಯಾಗುತ್ತಿಲ್ಲ. ಬದಲಿಗೆ ಕಡಿಮೆಯಾಗುತ್ತಲೇ ಸಾಗಿದೆ. 
ಕಾಲೇಜು ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳಲ್ಲಿರುವ 75 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರಸಕ್ತ 2026-27ನೇ ಸಾಲಿನಲ್ಲಿ ಈ ವರೆಗೆ 14,438 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕಡಿಮೆಯೇ. ಹಿಂದಿನ ಸಾಲಿನಲ್ಲಿ 16,296, 2024-25ರಲ್ಲಿ 17,620 ಮತ್ತು 2023-24ನೇ ಸಾಲಿನಲ್ಲಿ 18,445 ವಿದ್ಯಾರ್ಥಿಗಳು ಮೊದಲ ವರ್ಷಕ್ಕೆ ದಾಖಲಾಗಿದ್ದರು.

ವಿದ್ಯಾರ್ಥಿಗಳು ಏಕೆ ಬರುತ್ತಿಲ್ಲ?

ಸಾಂಪ್ರದಾಯಿಕ ಕೋರ್ಸ್‌ಗಳ ಕಲಿಕೆಗೆ ಸರ್ಕಾರಿ ಪದವಿ ಕಾಲೇಜುಗಳಿಗೆ ವಿದ್ಯಾರ್ಥಿಗಳು ಏಕೆ ಬರುತ್ತಿಲ್ಲ? ಎಂಬ ಪ್ರಶ್ನೆಗೆ ಉತ್ತಮ ಹುಡುಕಬೇಕಿದೆ. ಹಿಂದಿನಂತೆ ಕಲಾ, ವಾಣಿಜ್ಯ, ವಿಜ್ಞಾನದಲ್ಲಿ ಕ್ರಮವಾಗಿ ಬಿಎ. ಬಿ.ಕಾಂ., ಬಿ.ಎಸ್ಸಿ ಓದುವುದು ಈಗಿನ ವಿದ್ಯಾರ್ಥಿಗಳಿಗೆ ಮೊದಲ ಆಯ್ಕೆಯಲ್ಲ.
 ಅದು ಎರಡನೇ ಆಯ್ಕೆ. ಬೇರೆ ಕಡೆ ಸೀಟು ಸಿಗದಿದ್ದರೆ ಮಾತ್ರ ಇತ್ತ ಬರುವುದು ಹೆಚ್ಚು. ವೈದ್ಯಕೀಯ, ಇಂಜಿನಿಯರಿಂಗ್ ಕಡೆಗೆ ಮೊದಲು ಗಮನ ಕೊಡುತ್ತಾರೆ. ಇದರೀಗ ಪ್ಯಾರಾ ಮೆಡಿಕಲ್ ಕೋರ್ಸ್‌ಗಳು ಸಹ ಆಕರ್ಷಿಸುತ್ತಿವೆ. ಇದರೊಂದಿಗೆ ಇದೀಗ ಅಲೈಡ್ ಹೆಲ್ತ್ ಸೈನ್ಸ್ ಸೇರಿಕೊಂಡಿದೆ.
ವೈದ್ಯರು, ದಾದಿಯರೊಂದಿಗೆ ಕೆಲಸ ಮಾಡುವ ಹಾಗೂ ರೋಗಗಳ ತಡೆಗಟ್ಟುವಿಕೆ, ರೋಗನಿರ್ಣಯ, ಚಿಕಿತ್ಸೆ ಮತ್ತು ಪುನಶ್ಚೇತನದಲ್ಲಿ ಸಹಾಯ ಮಾಡುವ ಆರೋಗ್ಯ ಸೇವಾ ವೃತ್ತಿಗಳ ವಿಭಾಗವಾಗಿರುವ ಇದರಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಯುವ ಜನರು ಇಷ್ಟಪಡುತ್ತಿದ್ದಾರೆ. ಅದಕ್ಕಾಗಿ ರೇಡಿಯಾಲಜಿ, ಮೆಡಿಕಲ್ ಲ್ಯಾಬ್ ತಂತ್ರಜ್ಞಾನ, ತುರ್ತು ಚಿಕಿತ್ಸೆಯಂತಹ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿರುವ ಆಲೈಡ್ ಹೆಲ್ತ್ ಸೈನ್ಸ್ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಹೊಸ ಆಯ್ಕೆಯಾಗಿವೆ. ಇದರಲ್ಲಿ ವಿಪುಲ ಉದ್ಯೋಗಾವಕಾಶವೇ ಇದಕ್ಕೆ ಕಾರಣ. ಜತೆಗೆ, ನರ್ಸಿಂಗ್, ಇತರ ಆರೋಗ್ಯ ಸಂಬಂಧಿತ ಕೋರ್ಸ್‌ಗಳ ಕಲಿಕೆಗೂ ವಿದ್ಯಾರ್ಥಿಗಳು ಒಲವು ತೋರುತ್ತಿದ್ದಾರೆ.
ಜತೆಗೆ, ಕಾನೂನು ಕೋರ್ಸ್‌ಗಳ ಕಡೆಗೆ ವಿದ್ಯಾರ್ಥಿಗಳ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಶೇಕಡಾವಾರು ಕಡಿಮೆಯಾಗಲು ಇದು ಸಹ ಕಾರಣವಾಗಿದೆ. ಜತೆಗೆ, ಅನೇಕ ಇಂಜಿನಿಯರಿಂಗ್ ಕಾಲೇಜುಗಳು ಬಿ.ಸಿ.ಎ. ಮತ್ತು ಬಿ.ಬಿ.ಎ.ನಂತಹ ವೃತ್ತಿಪರ ಕೋರ್ಸ್‌ಗಳನ್ನೂ ಪ್ರಾರಂಭಿಸಿವೆ. ಉತ್ತಮ ಮೂಲಸೌಕರ್ಯ, ಗುಣಮಟ್ಟ ಬೋಧನಾ ವ್ಯವಸ್ಥೆಯಿಂದ ಕೂಡಿರುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ಕೋರ್ಸ್‌ಗಳನ್ನು ಕಲಿಯಲು ವಿದ್ಯಾರ್ಥಿಗಳು ಮುಗಿಬೀಳುತ್ತಿದ್ದಾರೆ. ಇದು ಸಹ ಸರ್ಕಾರಿ ಪದವಿ ಕಾಲೇಜುಗಳಿಗೆ ಬಲವಾಗಿ ಪೆಟ್ಟುಕೊಟ್ಟಿದೆ.

ವಿದ್ಯಾರ್ಥಿಗಳ ಸೆಳೆಯಲು ಕಸರತ್ತು:

ಸರ್ಕಾರಿ ಪದವಿ ಕಾಲೇಜುಗಳತ್ತ ವಿದ್ಯಾರ್ಥಿಗಳನ್ನು ಸೆಳೆಯಲು ಕಾಲೇಜು ಶಿಕ್ಷಣ ಇಲಾಖೆ ಸಹ ಕಸರತ್ತು ಮಾಡುತ್ತಿದೆ. ಈ ಶೈಕ್ಷಣಿಕ ವರ್ಷದಿಂದ ಬಿ.ಸಿ.ಎ., ಬಿ.ಕಾಂನಂತಹ ಹೆಚ್ಚಿನ ಬೇಡಿಕೆಯ ಕೋರ್ಸ್‌ಗಳಿಗೆ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಕಡಿಮೆ ಬೇಡಿಕೆಯಿರುವ ಕೋರ್ಸ್‌ಗಳಿಗೆ ಸೀಟುಗಳನ್ನು ಅದಕ್ಕೆ ಅನುಗುಣವಾಗಿ ಕಡಿಮೆ ಮಾಡಿದೆ. ಜತೆಗೆ, ಬಿ.ಕಾಂ. ಅಪ್ರೆಂಟಿಸ್‌ಶಿಪ್ ಎಂಬೆಡೆಡ್ ಪದವಿ ಕಾರ್ಯಕ್ರಮ (ಎಇಡಿಪಿ) ಎಂಬ ಹೊಸ ಕೋರ್ಸ್ ಪರಿಚಯಿಸಿದೆ. ಇದರಲ್ಲಿ ವಿದ್ಯಾರ್ಥಿಗಳು ತಮ್ಮ ಪದವಿಯೊಂದಿಗೆ ಉದ್ಯಮದಲ್ಲಿ 1 ವರ್ಷದ ಪೂರ್ಣ ಪ್ರಾಯೋಗಿಕ ತರಬೇತಿ ಪಡೆದುಕೊಳ್ಳಲಿದ್ದು, ಇದು ನೈಜ ಕೆಲಸದ ಅನುಭವ ಮತ್ತು ಉತ್ತಮ ಉದ್ಯೋಗಾವಕಾಶ ಪಡೆಯಲು ಸಹಾಯವಾಗಲಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಡಿ.ಎಸ್.ಪ್ರತಿಮಾ ತಿಳಿಸಿದ್ದಾರೆ.

ಒಟ್ಟಾರೆ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಕುಸಿತ: 

ಸರ್ಕಾರಿ ಪದವಿ ಕಾಲೇಜುಗಳ ಒಟ್ಟಾರೆ ವಿದ್ಯಾರ್ಥಿಗಳ ಸಂಖ್ಯೆಯೂ ಕುಸಿಯುತ್ತಿದೆ. ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 21,818ರಷ್ಟಿತ್ತು. 2024-25ರಲ್ಲಿ 23,003, 2023-24ರಲ್ಲಿ 24,584 ವಿದ್ಯಾರ್ಥಿಗಳಿದ್ದರು. ಪ್ರಸ್ತಕ ಸಾಲಿನಲ್ಲಿ 2ನೇ ಮತ್ತು 3ನೇ ವರ್ಷದ ಪ್ರವೇಶ ಪ್ರಕ್ರಿಯೆ ಚಾಲ್ತಿಯಲ್ಲಿದೆ. 

ಕಳೆಗುಂದಿದ ಕಲಾ(ಬಿಎ) ವಿಭಾಗ

ಹೆಚ್ಚಿನ ಉದ್ಯೋಗ ಅವಕಾಶ ಇರುವ ವಾಣಿಜ್ಯ ವಿಷಯದ ಬಿ.ಕಾಂ.ಗೆ ಈಗಲೂ ಬೇಡಿಕೆ ಇದೆ. ಆದರೆ, ಇತಿಹಾಸ, ಸಮಾಜಶಾಸ್ತ್ರ, ರಾಜಶಾಸ್ತ್ರ, ಭೂಗೋಳಶಾಸ್ತ್ರದಂತಹ ಮಾನವಿಕ ವಿಷಯಗಳನ್ನು ಬೋಧಿಸುವ ಕಲಾ (ಬಿಎ) ವಿಭಾಗದತ್ತ ವಿದ್ಯಾರ್ಥಿಗಳು ಅಭಿರುಚಿ ಇಲ್ಲವಾಗಿದ್ದು, ಗ್ರಾಮಾಂತರ ಪ್ರದೇಶದ, ಕನ್ನಡ ಮಾಧ್ಯಮದಲ್ಲಿ ಓದಿದವರು, ಇಂಗ್ಲಿಷ್ ಭಾಷೆ ಕಬ್ಬಿಣದ ಕಡಲೆಯಾಗಿರುವ ವಿದ್ಯಾರ್ಥಿಗಳು ಈಗಲೂ ಕಲಾ ವಿಭಾಗಕ್ಕೆ ಸೇರುತ್ತಿದ್ದಾರೆ. 
ಆದರೆ, ಆಂಗ್ಲ ಮಾಧ್ಯಮದವರು ಕಲಾ ವಿಭಾಗ ಎಂದರೆ ಸಾಕು ಮೂಗು ಮುರಿಯುತ್ತಾರೆ. ಮೂಲ ವಿಜ್ಞಾನ ಬೋಧಿಸುವ ಬಿ.ಎಸ್ಸಿ ಕೋರ್ಸ್‌ಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಬರುತ್ತಿಲ್ಲ. ಮೂಲವಿಜ್ಞಾನಕ್ಕಿಂತ ಇಂಜಿನಿಯರಿಂಗ್ ಹೋಗಲು ಇಷ್ಟಪಡುತ್ತಿದ್ದಾರೆ ಎಂದು ಅಧ್ಯಾಪಕರೊಬ್ಬರು ತಿಳಿಸಿದರು.

ಜಿಲ್ಲೆಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರವೇಶಾತಿ ವಿವರ

ವರ್ಷ ವಿದ್ಯಾರ್ಥಿಗಳ ಸಂಖ್ಯೆ
2026-27 7,816
2025-26 8,085
2024-23 9,031
2023-24 9,072
------------------

ಜಿಲ್ಲೆಯಲ್ಲಿ ಸರ್ಕಾರಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳ ವಿವರ

ವರ್ಷ ವಿದ್ಯಾರ್ಥಿಗಳ ಸಂಖ್ಯೆ
2025-26 21,818
2024-25 23,003
2023-24 24,584
"

ಕೆಲ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದರಲ್ಲೂ ಕಲಾ ವಿಭಾಗದಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿಗಳು ಮುಂದೆ ಬರುತ್ತಿಲ್ಲ. ಇದರಿಂದಾಗಿ ಪ್ರವೇಶಾತಿ ಕಡಿಮೆಯಾಗುತ್ತಿದೆ. ಅದಕ್ಕಾಗಿ ಬೇಡಿಕೆ ಇರುವ ಕೋರ್ಸ್‌ಗಳ ಸೀಟುಗಳ ಸಂಖ್ಯೆ ಹೆಚ್ಚಿಸಿ, ಕಡಿಮೆ ಬೇಡಿಕೆಯಿರುವ ಕೋರ್ಸ್‌ಗಳ ಸೀಟುಗಳನ್ನು ಕಡಿಮೆ ಮಾಡಲಾಗಿದೆ. ಉದ್ಯೋಗಾವಕಾಶ ಕಲ್ಪಿಸಲು ಬಿ.ಕಾಂ. ಅಪ್ರೆಂಟಿಸ್‌ಷಿಪ್ ಎಂಬೆಡೆಡ್ ಪದವಿ ಕಾರ್ಯಕ್ರಮ(ಎಇಡಿಪಿ ) ಈ ಸಲ ಪರಿಚಯಿಸಲಾಗಿದೆ.

— ಡಾ.ಡಿ.ಎಸ್.ಪ್ರತಿಮಾ, ಜಂಟಿ ನಿರ್ದೇಶಕಿ, ಕಾಲೇಜು ಶಿಕ್ಷಣ ಇಲಾಖೆ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net