ಕನ್ನಡ ಭಾಷೆಗೆ ಜಿ.ಎಸ್.ಶಿವರುದ್ರಪ್ಪ ಕೊಡುಗೆ ಅನನ್ಯ: ಬಿ.ಬಾಲಕೃಷ್ಣಯ್ಯ ಬಣ್ಣನೆ

ನಗರದ ವಿಜಯವಿಠಲ ಶಾಲೆಯಲ್ಲಿ ಆಯೋಜಿಸಿದ್ದ ಜಿ.ಎಸ್. ಶಿವರುದ್ರಪ್ಪ ಅವರ ಕವಿ ಕಾವ್ಯ ನಮನ ಕಾರ್ಯಕ್ರಮದಲ್ಲಿ ಬಿ. ಬಾಲಕೃಷ್ಣಯ್ಯ, ಎಚ್.ಸತ್ಯಪ್ರಸಾದ್, ಮಯೂರಲಕ್ಷ್ಮಿ,  ಅನ್ನಪೂರ್ಣ ರಾವ್, ವಿದ್ಯಾರ್ಥಿಗಳು ಇದ್ದರು.
ನಗರದ ವಿಜಯವಿಠಲ ಶಾಲೆಯಲ್ಲಿ ಆಯೋಜಿಸಿದ್ದ ಜಿ.ಎಸ್. ಶಿವರುದ್ರಪ್ಪ ಅವರ ಕವಿ ಕಾವ್ಯ ನಮನ ಕಾರ್ಯಕ್ರಮದಲ್ಲಿ ಬಿ. ಬಾಲಕೃಷ್ಣಯ್ಯ, ಎಚ್.ಸತ್ಯಪ್ರಸಾದ್, ಮಯೂರಲಕ್ಷ್ಮಿ, ಅನ್ನಪೂರ್ಣ ರಾವ್, ವಿದ್ಯಾರ್ಥಿಗಳು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿವರುದ್ರಪ್ಪ ಅವರ ಸಾಹಿತ್ಯ, ಕಾವ್ಯ ಮತ್ತು ಕನ್ನಡ ಭಾಷೆಗೆ ಸಲ್ಲಿಸಿದ ಅಮೂಲ್ಯ ಕೊಡುಗೆ ಅನನ್ಯ
  • ಸಾಹಿತ್ಯಾಧ್ಯಯನವು ಏಕಾಗ್ರತೆಯನ್ನು ಹೆಚ್ಚಿಸಿ ಸಾಧನೆಗೆ ಪ್ರೇರಣೆ ನೀಡುತ್ತದೆ

ಮೈಸೂರು:

ಮಹಾನ್ ಕವಿ, ವಿಮರ್ಶಕ ಮತ್ತು ಚಿಂತಕರಾಗಿದ್ದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಕೃತಿಗಳು ಮಾನವೀಯ ಮೌಲ್ಯಗಳು, ಪ್ರಕೃತಿ ಪ್ರೇಮ, ದೇಶಭಕ್ತಿ ಮತ್ತು ಜೀವನದ ತಾತ್ವಿಕತೆಯನ್ನು ಪ್ರತಿಬಿಂಬಿಸುತ್ತವೆ ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿ ಬಿ.ಬಾಲಕೃಷ್ಣಯ್ಯ ಬಣ್ಣಿಸಿದರು.

ನಗರದ ವಿಜಯ ವಿಠಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿ.ಎಸ್.ಶಿವರುದ್ರಪ್ಪ ಕವಿ ಕಾವ್ಯ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಲೋಕದ ಅಪ್ರತಿಮ ಕವಿ, ರಾಷ್ಟ್ರ ಕವಿ ಜಿ.ಎಸ್. ಶಿವರುದ್ರಪ್ಪ ಅವರ ಸಾಹಿತ್ಯ, ಕಾವ್ಯ ಮತ್ತು ಕನ್ನಡ ಭಾಷೆಗೆ ಸಲ್ಲಿಸಿದ ಅಮೂಲ್ಯ ಕೊಡುಗೆ ಅನನ್ಯ. ಸಮನ್ವಯ ಕವಿ ಎಂದು ಖ್ಯಾತರಾಗಿದ್ದ ಅವರು ಹಲವಾರು ಗೇಯಗುಣ ಸಂಪನ್ನವಾದ ಭಾವಗೀತೆಗಳನ್ನು ರಚಿಸಿ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಆ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.
ಜಿ.ಎಸ್.ಎಸ್. ಅವರು ಕುವೆಂಪು ಅವರ ಮಾರ್ಗದರ್ಶನದಲ್ಲಿ ಸೌಂದರ್ಯ ಸಮೀಕ್ಷೆ ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದರು. ಅವರ ಸಾಹಿತ್ಯ ಇಂದಿನ ಯುವಜನತೆಗೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಮಾತನಾಡಿ, ಕವಿಗಳು ತಮ್ಮ ಕೃತಿಗಳ ಮೂಲಕ ಎಲ್ಲ ಕಾಲಕ್ಕೂ ಜೀವಂತರಾಗಿರುತ್ತಾರೆ. ಸಾಹಿತ್ಯಾಧ್ಯಯನವು ಏಕಾಗ್ರತೆಯನ್ನು ಹೆಚ್ಚಿಸಿ ಸಾಧನೆಗೆ ಪ್ರೇರಣೆ ನೀಡುತ್ತದೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಜಿಎಸ್‌ಎಸ್ ವಿರಚಿತ ಭಾವಗೀತೆಗಳನ್ನು ವಿದ್ಯಾರ್ಥಿನಿಯರು ಶುಶ್ರಾವ್ಯವಾಗಿ ಹಾಡಿದರು. ಉಪನ್ಯಾಸಕರಾದ ಮಯೂರಲಕ್ಷ್ಮಿ, ಅನ್ನಪೂರ್ಣ ರಾವ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net