ಸೈಬರ್ ವಂಚನೆಗೆ ಹೊಸ ಹಾದಿ ಹಿಡಿದ ವಂಚಕರು : ಮೈಸೂರಿನಲ್ಲಿ 1.96 ಲಕ್ಷ ರೂ.ವಂಚನೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮೈಸೂರು: ಇದುವರೆಗೆ ಮೊಬೈಲ್ ಕರೆ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಲಿಂಕ್ ಕಳುಹಿಸಿ ಜನರನ್ನು ವಂಚಿಸುತ್ತಿದ್ದ ಸೈಬರ್ ವಂಚಕರು ಇದೀಗ ನೇರವಾಗಿ ಜನರನ್ನು ಭೇಟಿಯಾಗಿ ವಂಚನೆ ಮಾಡಲು ಪ್ರಾರಂಭಿಸಿದ್ದು, ಈ ವಂಚಕರ ಜಾಲಕ್ಕೆ ಸಿಲುಕಿ ನಗರದಲ್ಲಿ ಇಬ್ಬರು ವ್ಯಕ್ತಿಗಳೂ 1.96 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಆಲನಹಳ್ಳಿ ಬಡಾವಣೆಯ ಟಿ. ಮುತ್ತಪ್ಪ ಅವರು ನಗರದ ಪೆಟ್ರೋಲ್ ಬಂಕ್‌ವೊಂದರಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಮೇ 25 ರಂದು ಇವರ ಪೆಟ್ರೋಲ್ ಬಂಕ್‌ಗೆ ಆಗಮಿಸಿದ ಇಬ್ಬರು ಅಪರಿಚಿತ ವ್ಯಕ್ತಿಗಳು ನನ್ನ ಸ್ನೇಹಿತನ ತಂದೆಗೆ ಹುಷಾರಿಲ್ಲದ ಕಾರಣ ತುರ್ತಾಗಿ ನಗದು ಹಣ ಬೇಕಾಗಿದ್ದು, ನಿಮ್ಮ ಖಾತೆಗೆ ನನ್ನ ಸ್ನೇಹಿತನ ಬ್ಯಾಂಕ್ ಖಾತೆಯಿಂದ ಹಣ ಹಾಕಿಸಲಾಗುವುದು ಎಂದು ಹೇಳಿದರು.
ಇವರ ಮಾತು ನಂಬಿದ ಮುತ್ತಪ್ಪ ಅವರು ಮಾನವೀಯತೆ ದೃಷ್ಟಿಯಿಂದ ಪೆಟ್ರೋಲ್ ಬಂಕ್ ಕ್ಯಾಶಿಯರ್ ಮೂಲಕ 98 ಸಾವಿರ ರೂ.ಗಳನ್ನು ನೀಡಿದರು. ಈ ಸಂದರ್ಭ ಪೆಟ್ರೋಲ್ ಬಂಕ್ ಕ್ಯಾಶಿಯರ್ ಖಾತೆಗೆ ಫೋನ್ ಪೇ ಮೂಲಕ 98 ಸಾವಿರ ರೂ. ಜಮೆ ಆಯಿತು. ಮೇ 26 ರಂದು ಮತ್ತಿಬ್ಬರು ಅಪರಿಚಿತ ಅದೇ ಪೆಟ್ರೋಲ್ ಬಂಕ್‌ಗೆ ಆಗಮಿಸಿ ನನ್ನ ತಂದೆಗೆ ಹುಷಾರಿಲ್ಲದ ಕಾರಣ ತುರ್ತಾಗಿ ನಗದು ಹಣ ಬೇಕಾಗಿದೆ ಎಂದು ಕೇಳಿಕೊಂಡರು. ಈ ಸಂದರ್ಭ ಮುತ್ತಪ್ಪ ಅವರು ತಮ್ಮ ಸ್ನೇಹಿತ ಮೂಲಕ ಹಣ ಕೊಡಿಸಿದರು. ಬಳಿಕ ಅವರ ಸ್ನೇಹಿತನ ಖಾತೆಗೆ 98 ಸಾವಿರ ರೂ.ಜಮೆಯಾಯಿತು. ಅದೇ ದಿನ ಮುತ್ತಪ್ಪ ಅವರ ಸ್ನೇಹಿತನ ಖಾತೆಯನ್ನು ಸೈಬರ್ ವಂಚನೆಯ ಆರೋಪದಡಿ ದೆಹಲಿಯ ಸೈಬರ್ ಕ್ರೈಂ ಪೊಲೀಸರು ಲೀನ್ ಮಾಡಿ ಒಟ್ಟು 95,237 ರೂ.ಗಳನ್ನು ಲೀನ್ ಮಾಡಿದರು. ಮೇ 27 ರಂದು ಪೆಟ್ರೋಲ್ ಬಂಕ್ ಕ್ಯಾಶಿಯರ್ ಖಾತೆಯಿಂದ 15 ಸಾವಿರ ರೂ. ಕಡಿತವಾಗಿದೆ. ಈ ಕುರಿತು ಶನಿವಾರ ನಾಲ್ವರು ಅಪರಿಚಿತರ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net