ಜಯದೇವ ಆಸ್ಪತ್ರೆಯ ಹೆಚ್ಚುವರಿ ಕಟ್ಟಡಕ್ಕೆ ಒಂದು ತಿಂಗಳಲ್ಲಿ ಶಂಕುಸ್ಥಾಪನೆ: ನಿರ್ದೇಶಕ ಡಾ.ಬಿ.ದಿನೇಶ್ ಮಾಹಿತಿ

ಡಾ.ಬಿ.ದಿನೇಶ್
ಡಾ.ಬಿ.ದಿನೇಶ್
Published on

ಪ್ರಮುಖ ಮುಖ್ಯಾಂಶಗಳು

  • ಹೃದಯ ರೋಗಿಗಳು ಪ್ರತಿ 3 ತಿಂಗಳಿಗೊಮ್ಮೆ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು
  • ಯುವಕರಲ್ಲಿ ಹೆಚ್ಚಾಗಿ ಹೃದಯಾಘಾತವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ
ಮೈಸೂರು:ಜಯದೇವ ಹೃದ್ರೋಗ ಸಂಸ್ಥೆಯಿಂದ ಚಾಮರಾಜನಗರ ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ವಾರಕ್ಕೊಮ್ಮೆ ಚಾಮರಾಜನಗರದ ಸಾರ್ವಜನಿಕರಿಗೆ ಹೃದಯ ತಪಾಸಣೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಬಿ.ದಿನೇಶ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿನಾಡು ಚಾಮರಾಜನಗರದಲ್ಲಿ ಸಣ್ಣ ಹೃದ್ರೋಗ ಘಟಕವನ್ನು ಆರಂಭ ಮಾಡಿ ಪ್ರತಿ ಸೋಮವಾರ ಅಥವಾ ಬುಧವಾರ ಹೃದಯ ಸಮಸ್ಯೆ ಇರುವವರಿಗೆ ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆತಂದು ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಹೃದಯಾಘಾತದ ಬಗ್ಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು. ಉತ್ತರ ಭಾರತದಲ್ಲಿ ಬಿಸಿಲಿನ ದಗೆಗೆ ಶರೀರದಲ್ಲಿ ನೀರಿನ ಕೊರತೆ ಉಂಟಾಗಿ ಬೇರೆ ಬೇರೆ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಆದ್ದರಿಂದ ಹೃದಯ ರೋಗಿಗಳು ಪ್ರತಿ 3 ತಿಂಗಳಿಗೊಮ್ಮೆ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯುವಕರಲ್ಲಿ ಹೆಚ್ಚಾಗಿ ಹೃದಯಾಘಾತವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಯುವಕರು ಮದ್ಯಪಾನ, ಧೂಮಪಾನ, ಮಾದಕವಸ್ತುಗಳ ಸೇವನೆ ತ್ಯಜಿಸಿ ಉತ್ತಮವಾದ ಆರೋಗ್ಯ ಶೈಲಿ ಅಳವಡಿಸಿಕೊಳ್ಳಬೇಕು. ವ್ಯಾಯಾಮ, ವಾಕಿಂಗ್ ಮಾಡಬೇಕು. ಮನೆ ಆಹಾರ, ಸೊಪ್ಪು, ಕಾಳು, ತರಕಾರಿಗಳನ್ನು ಹೆಚ್ಚಾಗಿ ಉಪಯೋಗಿಸಬೇಕು. ಬೇಕರಿ ತಿಂಡಿಗಳನ್ನು ತಿನ್ನಬಾರದು ಎಂದು ತಿಳಿಸಿದರು.
40 ವರ್ಷ ಮೇಲ್ಪಟ್ಟವರು ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆಗ ಮಾತ್ರ ಉತ್ತಮವಾದ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಬೆಂಗಳೂರಿನ ಗೋವಿಂದರಾಜನಗರ, ಚರಕ ಆಸ್ಪತ್ರೆಗಳಲ್ಲಿಯೂ 3 ತಿಂಗಳಲ್ಲಿ ಜಯದೇವ ಹೃದ್ರೋಗ ಘಟಕ ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ಮೈಸೂರಿನಲ್ಲಿ 200 ಹಾಸಿಗೆ ಹೆಚ್ಚುವರಿ ಕಟ್ಟಡಕ್ಕೆ ಒಂದು ತಿಂಗಳಲ್ಲಿ ಶಂಕುಸ್ಥಾಪನೆ ಮಾಡಲಾಗುವುದು. ಸೆಪ್ಟೆಂಬರ್‌ನಲ್ಲಿ ಹುಬ್ಬಳ್ಳಿಯಲ್ಲಿ 437 ಹಾಸಿಗೆ ಸಾಮರ್ಥ್ಯದ ಹೃದ್ರೋಗ ಆಸ್ಪತ್ರೆ ಸಾರ್ವಜನಿಕರ ಸೇವೆಗೆ ಸಿದ್ಧವಾಗುತ್ತಿದೆ ಎಂದು ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net