ನಗರದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ‘ಕರ್ನಾಟಕದ ನೆರೆಯ ರಾಜ್ಯಗಳಲ್ಲಿ ಬುಡಕಟ್ಟು ಜನರ ಕಲ್ಯಾಣ ಕಾರ್ಯಕ್ರಮಗಳ ಕುರಿತು ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮೈವಿವಿ ಹಿರಿಯ ಪ್ರಾಧ್ಯಾಪಕ ಪ್ರೊ.ಡಿ. ಆನಂದ್ ಉದ್ಘಾಟಿಸಿದರು.ಸಿ.ಶಿವಕುಮಾರ್, ಎಚ್.ಎಸ್. ಗಿರಿಜಾಂಬ, ಡಾ.ಮೋಹನ್‌ಕುಮಾರ್ ಇನ್ನಿತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮೈಸೂರು ವಿವಿ ಬಿ.ಎನ್.ಬಹದ್ದೂರ್ ನಿರ್ವಹಣ ವಿಜ್ಞಾನ ಸಂಸ್ಥೆಯ ಹಿರಿಯ ಪ್ರಾಧ್ಯಾಪಕ ಪ್ರೊ.ಡಿ.ಆನಂದ್ ಸಲಹೆ
ಕರ್ನಾಟಕದ ನೆರೆಯ ರಾಜ್ಯಗಳಲ್ಲಿ ಬುಡಕಟ್ಟು ಜನರ ಕಲ್ಯಾಣ ಕಾರ್ಯಕ್ರಮ
ಮೈಸೂರು: ಬುಡಕಟ್ಟು ಜನರ ಸಬಲೀಕರಣಕ್ಕೆ ಶಿಕ್ಷಣ, ಆರೋಗ್ಯ, ಆರ್ಥಿಕತೆ, ಸಾಮಾಜಿಕ ಯೋಜನೆಗಳನ್ನು ರೂಪಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಬಿ.ಎನ್.ಬಹದ್ದೂರ್ ನಿರ್ವಹಣ ವಿಜ್ಞಾನ ಸಂಸ್ಥೆಯ ಹಿರಿಯ ಪ್ರಾಧ್ಯಾಪಕ ಪ್ರೊ.ಡಿ.ಆನಂದ್ ತಿಳಿಸಿದರು.
ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಕರ್ನಾಟಕ ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕರ್ನಾಟಕದ ನೆರೆಯ ರಾಜ್ಯಗಳಲ್ಲಿ ಬುಡಕಟ್ಟು ಜನರ ಕಲ್ಯಾಣ ಕಾರ್ಯಕ್ರಮ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕೇರಳ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡುಗಳಲ್ಲಿ ಬುಡಕಟ್ಟು ಜನರಿಗೆ ವಿಶೇಷ ಕಾರ್ಯಕ್ರಮ ರೂಪಿಸಿವೆ. ರಾಜ್ಯ ಸರ್ಕಾರ ಎಸ್‌ಇಪಿ, ಟಿಎಸ್‌ಪಿ ಯೋಜನೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮ ರೂಪಿಸಿದೆ. ಆದರೆ, ಎಲ್ಲ ರಾಜ್ಯಗಳು ಒಟ್ಟಿಗೆ ಸೇರಿ ಯೋಜನೆಗಳನ್ನು ರೂಪಿಸಬೇಕು ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿಯೂ ಬುಡಕಟ್ಟು ಜನರ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದರು. ಕೇರಳ ಬಡತನ ನಿರ್ಮೂಲನೆ, ಸಾಕ್ಷರತೆಯಲ್ಲಿ ನಂ.1 ರಾಜ್ಯವಾಗಿದೆ. ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರ ಪ್ರಗತಿ ಹಾಗೂ ಸ್ವಾವಲಂಬನೆಗೆ ಅನುಕೂಲ ಮಾಡಿಕೊಟ್ಟಿದೆ. ಪ್ರಗತಿಯ ಹೆಸರಿನಲ್ಲಿ ಬುಡಕಟ್ಟು ಜನರ ಶೋಷಣೆ ಆಗಬಾರದು, ಬುಡಕಟ್ಟು ಜನರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬುಡಕಟ್ಟು ಜನರ ಅಭಿವೃದ್ಧಿಗೆ ಮಾಡುವ ಯೋಜನೆಗಳು ನೇರವಾಗಿ ಫಲಾನುಭವಿಗೆ ತಲುಪುವಂತೆ ಮಾಡಿದಾಗ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ ಎಂದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಸಂಶೋಧನಾಧಿಕಾರಿ ಸಿ.ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಬುಡಕಟ್ಟು ಜನರ ಅಭಿವೃದ್ಧಿಗೆ ಎಸ್‌ಇಪಿ, ಟಿಎಸ್‌ಪಿ ಯೋಜನೆಗಳು ಅದ್ಭುತವಾದ ಮೈಲಿಗಲ್ಲಾಗಿವೆ. ರಾಜ್ಯದಲ್ಲಿ 12 ಏಕಲವ್ಯ ವಸತಿ ಶಾಲೆಗಳಿವೆ. ಅದಲ್ಲದೇ ಮುರಾರ್ಜಿ ವಸತಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಿವೆ. ತಾಲೂಕಿಗೊಂದು ಆದಿವಾಸಿ ಭವನಗಳಿವೆ. ಆದಿವಾಸಿ ಯುವಕರಿಗೆ ಉದ್ಯೋಗ ನೀಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ ಎಂದರು
ಹಾಡಿಗಳಲ್ಲಿ ಮದ್ಯಪಾನ ನಿಷೇಧಿಸಬೇಕು, ಬುಡಕಟ್ಟು ಮಕ್ಕಳನ್ನು ನೇರವಾಗಿ ಶಾಲಾ-ಕಾಲೇಜಿಗೆ ದಾಖಲಿಸಬೇಕು. ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ವಿದ್ಯಾವಂತ ಬುಡಕಟ್ಟು ಜನರು ಸರ್ಕಾರದ ಯೋಜನೆಗಳನ್ನು ತಿಳಿದುಕೊಂಡು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಎಚ್.ಎಸ್.ಗಿರಿಜಾಂಬ ಮಾತನಾಡಿ, ಸಂಶೋಧಕರು ಸರ್ಕಾರದ ಯೋಜನೆಗಳು ಬುಡಕಟ್ಟು ಸಮುದಾಯಕ್ಕೆ ತಲುಪುತ್ತಿದೆಯೇ ಎಂಬುದರ ಬಗ್ಗೆ ಅಧ್ಯಯನ ಮಾಡಬೇಕು.
ನಮ್ಮ ಸಂಶೋಧನಾ ಸಂಸ್ಥೆಯಿಂದಲೂ ಕೇರಳ ರಾಜ್ಯಕ್ಕೆ ಅಧ್ಯಯನಕ್ಕೆ ಹೋಗಿದ್ದೆವು. ಬೇರೆ ರಾಜ್ಯದ ಕಲ್ಯಾಣ ಯೋಜನೆಗಳನ್ನು ನಮ್ಮ ರಾಜ್ಯದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆಯೇ ಎಂಬ ಬಗ್ಗೆ ಚರ್ಚೆಯಾಗಬೇಕು. ನಮ್ಮ ಬುಡಕಟ್ಟು ಜನರಿಗೆ ಬೇರೆ ರಾಜ್ಯದ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿ ಅವರ ಅಭಿಪ್ರಾಯಗಳನ್ನು ತಿಳಿಸಬೇಕು ಎಂದರು.
ವಿಚಾರಸಂಕಿರಣದಲ್ಲಿ ಡಾ.ಮೋಹನ್‌ಕುಮಾರ್, ಡಾ. ಕಲಾವತಿ, ಪ್ರಸನ್ನಕುಮಾರ್, ರವಿಕುಮಾರ್, ಬಿ.ಆರ್.ಮಂಜುನಾಥ್, ಕೆ.ರಮೇಶ್, ಲೆಕ್ಕಾಧಿಕಾರಿ ಬಿ.ಆರ್.ಭವ್ಯಾ, ಅಧೀಕ್ಷಕಿ ಎಂ.ವಿ.ನಾಗರತ್ನ, ನಾಗೇಂದ್ರ ಹೆಬ್ಬಾರ್, ವಿಜಯ್‌ಕುಮಾರ್ ಇದ್ದರು.