ನೀರಿನ ತೆರಿಗೆ ಸಂಗ್ರಹ, ಬಾಕಿ ಶ್ವೇತಪತ್ರ ಹೊರಡಿಸಿ : ಮಾಜಿ ಮೇಯರ್ ಶಿವಕುಮಾರ್ ಆಗ್ರಹ

shivakumar
shivakumar
Published on
ನೀರಿನ ತೆರಿಗೆ ಹೆಚ್ಚಿಸಿರುವ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮೊದಲು ನಗರದ ನೀರಿನ ತೆರಿಗೆಯ ಸಂಗ್ರಹ ಮತ್ತು ಬಾಕಿ ಸಂಬಂಧಪಟ್ಟ ಸಮಗ್ರ ಮಾಹಿತಿಯುಳ್ಳ ಶ್ವೇತಪತ್ರ ಹೊರಡಿಸಬೇಕು ಎಂದು ಮಾಜಿ ಮೇಯರ್ ಶಿವಕುಮಾರ್ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ನೀರಿನ ಸಂಪರ್ಕ ಶುಲ್ಕವನ್ನು ಶೇ.30 ಮತ್ತು ಒಳಚರಂಡಿ ಶುಲ್ಕವನ್ನು ಶೇ.10ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಿದ್ದು, ಸದರಿ ಆದೇಶವೂ ಏ.1ರಿಂದಲೇ ಜಾರಿಯಾಗಿದೆ. ಇದು ಜಾಗತಿಕ ಬಿಕ್ಕಟ್ಟು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಲುಗಿರುವ ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.
ನಗರಕ್ಕೆ ಯಾವ ಮೂಲಗಳಿಂದ ಎಷ್ಟು ಎಂಎಲ್‌ಡಿ ನೀರು ಪೂರೈಕೆ ಆಗುತ್ತಿದೆ. ಇದಕ್ಕೆ ಪ್ರತಿಯಾಗಿ ಸಾರ್ವಜನಿಕರಿಂದ ಎಷ್ಟು ಕೋಟಿ ರೂ. ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ಎಷ್ಟು ಕೋಟಿ ರೂ. ನೀರಿನ ತೆರಿಗೆ ಬಾಕಿ ಇದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಶ್ವೇತ ಪತ್ರದ ಮೂಲಕ ನಗರದ ನಿವಾಸಿಗಳ ಮುಂದೆ ಇಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ನಗರಾಭಿವೃದ್ಧಿ ಅಧಿನಿಯಗಳ ಅನ್ವಯ ಪ್ರತಿ 3 ವರ್ಷಗಳಿಗೊಮ್ಮೆ ನೀರಿನ ದರ ಪರಿಷ್ಕರಣೆಗೆ ಅವಕಾಶ ಕಲ್ಪಿಸಲಾಗಿದೆ. 14 ವರ್ಷಗಳ ನಂತರ ನೀರನ ದರ ಏರಿಕೆ ಮಾಡಲಾಗಿದೆ ಎಂದು ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಅವರು ಪತ್ರಿಕಾ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಪ್ರಕ್ಷುಬ್ಧ ಬೆಳವಣಿಗೆಯಿಂದ ಅಡುಗೆ ಅನಿಲ ಸಿಗುತ್ತಿಲ್ಲ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಮತ್ತಷ್ಟು ಹೆಚ್ಚಾಗುವ ಪರಿಸ್ಥಿತಿ ಇದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಗರ ಪಾಲಿಕೆ ನೀರಿನ ತೆರಿಗೆ ಮತ್ತು ಒಳಚರಂಡಿ ಸೆಸ್ ಹೆಚ್ಚಳ ಮಾಡುವ ಮೂಲಕ ಸಾರ್ವಜನಿಕರಿಗೆ ಮತ್ತಷ್ಟು ಹೊರೆ ಹೇರಿದೆ. ಪ್ರತಿ ತಿಂಗಳ ಕನಿಷ್ಠ ದರವನ್ನು 125 ರೂ.ಗಳಿಂದ 163ಕ್ಕೆ ಏರಿಕೆ ಮಾಡಲಾಗಿದೆ. 25 ಸಾವಿರ ಲೀಟರ್‌ವರೆಗೆ ಪ್ರತಿ ಸಾವಿರ ಲೀಟರ್ ನೀರಿಗೆ 5 ರೂ. ತೆರಿಗೆ ಇತ್ತು. ಅದನ್ನು 6.50 ರೂ.ಗಳಿಗೆ ಏರಿಸಲಾಗಿದೆ. 50 ಸಾವಿರ ಲೀಟರ್‌ವರೆಗೆ ಪ್ರತಿ ಲೀಟರ್‌ಗೆ 8 ರೂ. ಇದ್ದ ದರವನ್ನು 10 ರೂ.ಗಳಿಗೆ, 75 ಸಾವಿರ ಲೀಟರ್‌ವರೆಗೆ 12ರಿಂದ 15 ರೂ.ಗಳಿಗೆ, 1 ಲಕ್ಷ ಲೀಟರ್‌ವರೆಗೆ 16ರಿಂದ 20 ರೂ.ಗಳಿಗೆ ಹಾಗೂ 1 ಲಕ್ಷ ಲೀಟರ್ ಮೇಲ್ಪಟ್ಟು ಪ್ರತಿ ಲೀಟರ್‌ಗೆ 20ರಿಂದ 25 ರೂ.ಗಳಿಗೆ ಏರಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ನಗರದ ಕೆಲವು ಭಾಗದ ನಿವಾಸಿಗಳು ಮಾತ್ರ ನೀರಿನ ಶುಲ್ಕ ಕಟ್ಟುತ್ತಿದ್ದಾರೆ. ಮತ್ತೊಂದು ಭಾಗದ ಜನ ವಾಟರ್ ಮೀಟರ್ ಹಾಕಿಸಿಕೊಂಡಿಲ್ಲ, ಹಾಕಿದ್ದ ಮೀಟರ್‌ಗಳಿಗೂ ಬೈಪಾಸ್ ಮಾಡಿಕೊಂಡಿದ್ದಾರೆ. ವರ್ಷಾನುಗಟ್ಟಲೇ ತೆರಿಗೆ ಕಟ್ಟಿಲ್ಲ. ತೆರಿಗೆ ಕಟ್ಟುವವರು ಕಟ್ಟುತ್ತಲೇ ಇರುತ್ತಾರೆ. ಕಟ್ಟದೇ ಇರುವವರ ಮೇಲೆ ಪಾಲಿಕೆ ಆಯುಕ್ತರು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.
ನಗರ ಪಾಲಿಕೆ ಮಾಜಿ ಸದಸ್ಯರಾದ ಸುಬ್ಬಯ್ಯ, ರಂಗಸ್ವಾಮಿ, ಸಾತ್ವಿಕ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net