ಮಾನಸಗಂಗೋತ್ರಿಯ ವ್ಯವಹಾರ ನಿರ್ವಹಣಾ ಅಧ್ಯಯನ ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ.ಎನ್. ಲೋಕನಾಥ್, ಪ್ರೊ.ಎನ್.ನಾಗರಾಜು, ಪ್ರೊ.ಆರ್ ಮಹೇಶ್, ಪ್ರೊ.ಡಿ ಆನಂದ್, ಪ್ರೊ.ಎಸ್.ಜೆ ಮಂಜುನಾಥ್, ಪ್ರೊ.ಅಮೂಲ್ಯ ಇದ್ದರು.
ಮೈಸೂರು: ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳುವತ್ತ ಗಮನ ನೀಡುವ ಅವಶ್ಯಕತೆಯಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್. ಲೋಕನಾಥ್ ತಿಳಿಸಿದರು.
ಮಾನಸಗಂಗೋತ್ರಿಯ ವ್ಯವಹಾರ ನಿರ್ವಹಣಾ ಅಧ್ಯಯನ ವಿಭಾಗದ ವತಿಯಿಂದ ರೂಸಾ 2.0 ಪ್ರಾಯೋಜಕತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಪೋರೇಟ್ ಕಾಂಪಿಟೆನ್ಸಿ ಬಿಲ್ಡಿಂಗ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇವತ್ತು ಸಾಕಷ್ಟು ವಿದ್ಯಾರ್ಥಿಗಳು ಭಾರತದಲ್ಲಿ ಉನ್ನತ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲಿ ಶೇ.40ರಷ್ಟು ವಿದ್ಯಾರ್ಥಿಗಳು ವ್ಯವಹಾರ ನಿರ್ವಹಣಾ ಅಧ್ಯಯನ(ಎಂಬಿಎ) ಪಡೆದುಕೊಳ್ಳುತಿದ್ದಾರೆ. ಭಾರತದಲ್ಲಿ ಎಂಬಿಎ ಶಿಕ್ಷಣ ಸಂಸ್ಥೆಗಳು ಸಾಕಷ್ಟಿದ್ದು, ವಿದೇಶಗಳಲ್ಲೂ ಸಾಕಷ್ಟು ಬೇಡಿಕೆಯಿದೆ ಅದನ್ನು ಸಮರ್ಥವಾಗಿ ಸದುಪಯೋಗಪಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಂಬಿಎ ವಿದ್ಯಾರ್ಥಿಗಳಿಗೆ ಸಾಕಷ್ಟು ಸ್ಪರ್ಧೆಗಳು ಏರ್ಪಾಡುತ್ತಿವೆ. ಇದರ ಮೂಲ ಎಲ್ಲವನ್ನು ಶೋಧಿಸುವ ಸಾಧ್ಯತೆಗಳು ವಿದ್ಯಾರ್ಥಿಗಳ ಮುಂದೆ ಇದೆ. ಇದನ್ನು ಸಾಕಾರಗೊಳಿಸಲು ಉತ್ತಮ ಕಲಿಕೆ, ಉತ್ತಮವಾಗಿ ಅರ್ಥೈಸಿಕೊಳ್ಳುವುದರಿಂದ ಮಾತ್ರ ಸಾಧ್ಯ. ಎಂಬಿಎ ಕೋರ್ಸ್ ಅತ್ಯುತ್ತಮವಾದದ್ದು. ಹಾಗಾಗಿ ಉತ್ತಮ ಸಾಮರ್ಥ್ಯವನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.
ಇವತ್ತು ಯಾವುದೇ ಕೌಶಲ್ಯವಿಲ್ಲದೇ ಕೇವಲ ಶಿಕ್ಷಣದಿಂದ ಉದ್ಯೋಗ ಪಡೆಯಲು ಸಾಧ್ಯವಿಲ್ಲ. ಬೇರೊಬ್ಬರಿಗಿಂತ ನಮ್ಮ ಸಾಮರ್ಥ್ಯ ವಿಭಿನ್ನವಾಗಿದ್ದರೆ ಮಾತ್ರ, ಅವಕಾಶಗಳು ಕೈಗೆಟಕುತ್ತವೆ. ಹಾಗಾಗಿ ಸ್ಪರ್ಧೆ, ಕೊಡುಗೆ, ವಿಭಿನ್ನ ಆಲೋಚನೆಯಿದ್ದಲ್ಲಿ ಮಾತ್ರ ನಮ್ಮ ಸಾಮರ್ಥ್ಯ ಉತ್ತಮವಾಗುತ್ತದೆ ಎಂದು ಸಲಹೆ ನೀಡಿದರು.
ಬದಲಾವಣೆಯತ್ತ ಸಾಗಬೇಕು: ಪ್ರಸ್ತುತ ಕ್ರಿಯಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಆಲೋಚಿಸಬೇಕು. ಪ್ರತಿಯೊಂದೂ ಬದಲಾವಣೆಯಾಗುತ್ತಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಬದಲಾವಣೆಯತ್ತ ಸಾಗಬೇಕು. ಹೊಸ ಹೊಸ ಕ್ರಿಯಾತ್ಮಕತೆಯನ್ನು ಅಳವಡಿಸಿಕೊಳ್ಳಬೇಕು. ಇದರ ಜತೆಗೆ ಸಕಾರಾತ್ಮಕ ಆಲೋಚನೆಗಳು ನಿಮ್ಮದಾಗಬೇಕು ಎಂದು ಪ್ರೊ.ಎನ್. ಲೋಕನಾಥ್ ಸಲಹೆ ನೀಡಿದರು.
ಸಾಮರ್ಥ್ಯ ವೃದ್ಧಿಸಿಕೊಳ್ಳಲು ಸಹಕಾರಿ:
ಮೈಸೂರು ವಿಶ್ವವಿದ್ಯಾಲಯ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜು ಮಾತನಾಡಿ, ಇವತ್ತು ಕಾರ್ಪೊರೇಟ್ ಕ್ಷೇತ್ರಕ್ಕೆ ಕಾಲೇಜುಗಳ ನಾಲ್ಕು ಗೋಡೆಗಳ ನಡುವೆ ಬೋಧಿಸುವ ಶಿಕ್ಷಣಕ್ಕಿಂತ, ವಿಭಿನ್ನವಾದ ಸಾಮರ್ಥ್ಯ, ಕೌಶಲಗಳ ಅಗತ್ಯವಿದೆ. ಇದರಿಂದ ಕಾರ್ಪೊರೇಟ್‌ನಲ್ಲಿ ಸುಸ್ಥಿರವಾಗಿ ಬದುಕಲು ಸಾಧ್ಯ. ಹಾಗಾಗಿ ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಿಸಿದರು.
ಬೀಮ್ಸ್ ಅಧ್ಯಕ್ಷ ಪ್ರೊ.ಆರ್ ಮಹೇಶ್, ಹಿರಿಯ ಪ್ರಾಧ್ಯಾಪಕರಾದ ಪ್ರೊ.ಡಿ ಆನಂದ್, ಪ್ರೊ.ಎಸ್.ಜೆ ಮಂಜುನಾಥ್, ಪ್ರೊ.ಅಮೂಲ್ಯ ಇದ್ದರು.