ಫ್ಲೈಓವರ್: ಮಾಸ್ಟರ್ ಪ್ಲಾನ್ ಉಲ್ಲಂಘನೆ

ಮೈಸೂರಿನಲ್ಲಿ ಫ್ಲೈ ಓವರ್ ನಿರ್ಮಾಣಕ್ಕಾಗಿ ನಡೆದಿರುವ ಮಣ್ಣಿನ ಪರೀಕ್ಷೆ
ಮೈಸೂರಿನಲ್ಲಿ ಫ್ಲೈ ಓವರ್ ನಿರ್ಮಾಣಕ್ಕಾಗಿ ನಡೆದಿರುವ ಮಣ್ಣಿನ ಪರೀಕ್ಷೆ
Published on

ಪ್ರಮುಖ ಮುಖ್ಯಾಂಶಗಳು

  • ಮಾರ್ಗಸೂಚಿ ಗಾಳಿಗೆ ತೂರಿದ ಸರ್ಕಾರ
  • ಮೇಲ್ಸೇತುವೆಯಿಂದ ಮೈಸೂರಿನ ಪಾರಂಪರೆಗೆ ಧಕ್ಕೆ
  • ಮೈಸೂರು-ನಂಜನಗೂಡು ಸ್ಥಳೀಯ ಮಹಾಯೋಜನೆಯಲ್ಲಿ ಮಾರ್ಗಸೂಚಿ ಉಲ್ಲಂಘನೆ
  • ಫ್ಲೈಓವರ್ ನಿರ್ಮಾಣ ಪ್ರಸ್ತಾವಕ್ಕೆ ಸಂಸದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಕ್ಷೇಪ

ಮಂಜುನಾಥ ತಿಮ್ಮಯ್ಯ ಮೈಸೂರು

ಪಾರಂಪರಿಕ ರಸ್ತೆಗಳಲ್ಲಿ ಜಾಹೀರಾತು ಫಲಕ ಹಾಕುವುದಕ್ಕೇ ಅವಕಾಶ ಇಲ್ಲ. ಅದು ಹೇಗೆ ಫ್ಲೈಓವರ್ ನಿರ್ಮಿಸುತ್ತಾರೆ..?
ಇಂತಹವೊಂದು ಪ್ರಶ್ನೆಯನ್ನು ಪಾರಂಪರಿಕ ತಜ್ಞರು, ಪ್ರಜ್ಞಾವಂತ ನಾಗರಿಕರು ಕೇಳುತ್ತಿದ್ದಾರೆ. ಇದು ಮೈಸೂರು ಮಾಸ್ಟರ್ ಪ್ಲಾನ್ ಸ್ಪಷ್ಟ ಉಲ್ಲಂಘನೆಯಾಗಿದೆ..!
ಮೈಸೂರು-ನಂಜನಗೂಡು ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನಾ(ಪರಿಷ್ಕೃತ-2) ವರದಿಯಲ್ಲಿ ಪಾರಂಪರಿಕ ರಸ್ತೆಯಲ್ಲಿ ಜಾಹೀರಾತು ಫಲಕ, ಹೋರ್ಡಿಂಗ್ಸ್ ಅಳವಡಿಕೆ ಮಾಡುವುದನ್ನೂ ನಿರ್ಬಂಧಿಸಲಾಗಿದೆ. ಇದೀಗ ಸರ್ಕಾರವೇ ಅದನ್ನು ಗಾಳಿಗೆ ತೂರುತ್ತಿದೆ.
ನಗರ ಬೆಳವಣಿಗೆಯನ್ನು ಆಧರಿಸಿ ಈ ಮಹಾಯೋಜನೆಯನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರ(ಹಿಂದೆ ಮುಡಾ) ರಚನೆ ಮಾಡಿದೆ. ಇದಕ್ಕೆ ಕೂಲಂಕಷವಾಗಿ ಪರಿಶೀಲಿಸಿ ಅಂತಿಮ ಅನುಮೋದನೆ ನೀಡಿ 2016ರ ಜನವರಿ 12ರಂದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಸರ್ಕಾರ ಸಹ ಅಧಿಸೂಚನೆ ಹೊರಡಿಸಿದೆ. ಸರ್ಕಾರವೇ ಅಂಗೀಕರಿಸುವ ಮಹಾಯೋಜನೆಯಲ್ಲಿ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಲು ಮುಂದಾಗಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.
ಪಾರಂಪರಿಕ ರಸ್ತೆಗಳಿಗೆ ಧಕ್ಕೆ 
ಪಾರಂಪರಿಕ ನಗರಿ ಮೈಸೂರಿಗೆ ಪಾರಂಪರಿಕ ರಸ್ತೆಗಳು ಹೆಗ್ಗುರುತಾಗಿವೆ. ಒಟ್ಟು 17 ಪಾರಂಪರಿಕ ರಸ್ತೆಗಳಿವೆ. ವಿಶಾಲವಾದ, ವಿಸ್ತಾರವಾದ, ಹಸಿರಿನಿಂದ ಕೂಡಿರುವ ಈ ರಸ್ತೆಗಳು ನಗರದ ಸೌಂದರ್ಯ ಹೆಚ್ಚಿಸಿವೆ. ಈ ರಸ್ತೆಯ ಉದ್ದಕ್ಕೂ ಇರುವ ಮರಗಳು ದಾರಿಹೋಕರಿಗೆ ನೆರಳಿನ ಆಸರೆ, ಪಕ್ಷಿಗಳಿಗೆ ನೆಲೆ ಕಲ್ಪಿಸಿ, ಹಸಿರಿನ ಹೊದಿಕೆಯಾಗಿವೆ. ಚರಿತ್ರೆ ಹೇಳುವ ಈ ರಸ್ತೆಗಳಿಗೂ ಇದೀಗ ಧಕ್ಕೆ ತರುವ ಕೆಲಸಗಳು ನಡೆದಿವೆ.
ನಗರದ ಪ್ರಮುಖ ಪಾರಂಪರಿಕ ರಸ್ತೆಗಳಾಗಿರುವ ವಿನೋಬಾ ರಸ್ತೆ ಮತ್ತು ಜೆಎಲ್‌ಬಿ ರಸ್ತೆಯಲ್ಲಿ ಫ್ಲೈಓವರ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಜನಾಭಿಪ್ರಾಯವನ್ನೇ ಪಡೆಯದೇ ಈ ಮಾರ್ಗದಲ್ಲಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಪಾರಂಪರಿಕ ಸಮಿತಿಯ ಅನುಮತಿ ಸಹ ಪಡೆದಿಲ್ಲ. ಆದಾಗ್ಯೂ, ಈ ಕುರಿತು ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಣ್ಣು ಪರೀಕ್ಷೆ ಸಹ ಮಾಡಲಾಗುತ್ತಿದೆ.
ವಿನೋಬಾ ರಸ್ತೆಯಲ್ಲಿ ಫ್ಲೈ ಓವರ್ ನಿರ್ಮಿಸಿದರೆ ಬದಿಯಲ್ಲಿರುವ ನೂರಾರು ಮರಗಳ ಹನನ ಆಗಲಿದೆ. ಜೆಎಲ್‌ಬಿ ರಸ್ತೆಯ ಇದೇ ಕಥೆಯಾಗಲಿದೆ. 
ಆದ್ದರಿಂದ ಆ ಮಾರ್ಗದಲ್ಲಿ ಇದನ್ನು ನಿರ್ಮಿಸಬಾರದು. ಅಭಿವೃದ್ಧಿ ನೆಪದಲ್ಲಿ ಮೈಸೂರಿನ ಸೌಂದರ್ಯ ಹಾಳುಗೆಡವಬಾರದು. ಪಾರಂಪರಿಕ ರಸ್ತೆಗಳನ್ನು ಯಥಾಸ್ಥಿತಿ ಉಳಿಸಿಕೊಂಡು ಪಾರಂಪರಿಕ ನಗರದ ಗುರುತನ್ನು ಉಳಿಸಿಕೊಳ್ಳಬೇಕು ಎಂದು ಸಾರ್ವಜನಿಕರ, ಪರಿಸರವಾದಿಗಳ, ಪಾರಂಪರಿಕ ತಜ್ಞರ ಒತ್ತಾಯವಾಗಿದೆ.

ಸಂಸದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರೋಧ

ನಗರದೊಳಗೆ ಎರಡು ಫ್ಲೈಓವರ್ ನಿರ್ಮಾಣ ಪ್ರಸ್ತಾವಕ್ಕೆ ಸಂಸದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೇಲ್ಸೇತುವೆ ನಿರ್ಮಾಣ ಪ್ರಸ್ತಾವನೆ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನೂ ಕೈಗೊಂಡಿದ್ದಾರೆ. ‘ಮೈಸೂರು ಮೈಸೂರಾಗಿರಿ’ ಎಂಬ ಶೀರ್ಷಿಕೆಯಡಿ ಇದು ನಡೆಯುತ್ತಿದೆ. ಇದರಲ್ಲಿ ‘ಯಾವುದೇ ಅಭಿವೃದ್ಧಿಯು ಈ ಮನೋಭಾವಕ್ಕೆ ಅನುಗುಣವಾಗಿರಬೇಕು. ನಮ್ಮ ಪ್ರೀತಿಯ ನಗರದ ನಿಜವಾದ ಪಾರಂಪರಿಕತೆಯನ್ನು ಕಾಪಾಡಬೇಕು. 
ನಾವು ಮತ್ತೊಂದು ಕಾಂಕ್ರಿಟ್ ಕಾಡನ್ನು ಹುಡುಕುತ್ತಿಲ್ಲ. ನಾವು ಸುಸ್ಥಿರ ಮೈಸೂರು, ಅದರ ಪೂರಕವಾಗಿ ಬೆಳೆಯುವ ನಗರವನ್ನು ಹುಡುಕುತ್ತಿದ್ದೇವೆ’ ಎಂದು ಅಭಿಯಾನದಲ್ಲಿ ಈ ಉಲ್ಲೇಖಿಸಲಾಗಿದೆ. ಈ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಯುವ ಜನರು, ಪ್ರಜಾವಂತರು ಈ ಪೋಸ್ಟ್ ಅನ್ನು ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಹುತೇಕರು ಫ್ಲೈಓವರ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಮಧ್ಯಭಾಗದಲ್ಲಿ ಬೇಡ, ಹೊರಭಾಗದಲ್ಲಿ ಮಾಡಿ
ನಗರದಲ್ಲಿ ಮಧ್ಯಭಾಗದಲ್ಲಿ ಫ್ಲೈಓವರ್ ಬೇಡ. ನಗರದ ಹೊರಭಾಗದಲ್ಲಿ ಅಗತ್ಯ ಇರುವ ಕಡೆ ಇದು ನಿರ್ಮಾಣವಾಗಲಿ. ಮೈಸೂರು ಬೆಂಗಳೂರಿನಷ್ಟು ಬೆಳೆದಿಲ್ಲ. ರಜೆ, ವಾರಾಂತ್ಯದಲ್ಲಿ ಹೊರತುಪಡಿಸಿದರೆ ಅಂತಹ ವಾಹನಗಳ ದಟ್ಟಣೆಯೂ ಇಲ್ಲ. ಆದ್ದರಿಂದ ಮೇಲ್ಸೇತುವೆ ಸೂಕ್ತವಲ್ಲ.
 ನಗರ ಹೊರಭಾಗದಲ್ಲಿ ರಿಂಗ್‌ರೋಡ್ ಜಂಕ್ಷನ್‌ಗಳಲ್ಲಿ ಇದು ಅಗತ್ಯವಾಗಿದೆ. ಮೈಸೂರು- ಬೆಂಗಳೂರು ಹೆದ್ದಾರಿ ಸಂಪರ್ಕಿಸುವ ಮಣಿಪಾಲ್ ಆಸ್ಪತ್ರೆಯ ಜಂಕ್ಷನ್, ನಂಜನಗೂಡು ರಸ್ತೆ ಸಂಪರ್ಕಿಸುವ ಬಂಡಿಪಾಳ್ಯ ಜಂಕ್ಷನ್, ತಿ.ನರಸೀಪುರ ರಸ್ತೆ ಸಂಪರ್ಕಿಸುವ ಜಂಕ್ಷನ್‌ಗಳಲ್ಲಿ ಇದು ಅಗತ್ಯ ಇದೆ. ಅಲ್ಲಿ ಇದನ್ನು ಕಾರ್ಯರೂಪಕ್ಕೆ ತರಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.
ಹಳೇ ಪ್ರದೇಶವನ್ನೂ ಯಥಾಸ್ಥಿತಿ ಉಳಿಸಿ:
ಲಂಡನ್ ಮಾದರಿಯಲ್ಲಿ ಪಾರಂಪರಿಕತೆ ಉಳಿಸಿಕೊಳ್ಳಬೇಕು. ಪುರಾತನ ಕುರುಹುಗಳು, ಅರಮನೆ, ರಸ್ತೆಗಳು, ಸ್ಮಾರಕಗಳು ಹಾಗೆ ಉಳಿಸಿಕೊಂಡು ಹೊಸ ಕಟ್ಟಡ ನಿರ್ಮಾಣಕ್ಕೆ ನಿರ್ಬಂಧಿಸಬೇಕು. ಇದನ್ನು ಹೊರತುಪಡಿಸಿದ ಹೊರ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯಲಿ. ಒಂದೇ ಊರಿನಲ್ಲಿ ಆಧುನಿಕತೆ, ಪಾರಂಪರಿಕತೆ ಎರಡು ಸಂಸ್ಕೃತಿ ಮೇಳೈಸಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
"

ನಗರದೊಳಗೆ ಎರಡು ಫ್ಲೈಓವರ್ ನಿರ್ಮಾಣ ಪ್ರಸ್ತಾವಕ್ಕೆ ನಮ್ಮ ವಿರೋಧವಿದೆ. ಅಭಿವೃದ್ಧಿ ನೆಪದಲ್ಲಿ ಮೈಸೂರಿನ ಸೌಂದರ್ಯ ಹಾಳು ಮಾಡಬಾರದು. ಪಾರಂಪರಿಕ ನಗರದ ಗುರುತನ್ನು ಉಳಿಸಿಕೊಳ್ಳಬೇಕು. ವಿರೋಧದ ನಡುವೆ ಫ್ಲೈಓವರ್ ಕಾಮಗಾರಿ ಕೈಗೆತ್ತಿಕೊಂಡರೆ ಜನರ ಸಹಕಾರದೊಂದಿಗೆ ಕಾನೂನಾತ್ಮಕ ಹೋರಾಟ ರೂಪಿಸಲಾಗುವುದು.

"

ಪಾರಂಪರಿಕ ರಸ್ತೆಗಳಲ್ಲಿ ಫ್ಲೈಓವರ್ ನಿರ್ಮಾಣದ ಮೂಲಕ ಮೈಸೂರು-ನಂಜನಗೂಡು ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾ ಯೋಜನಾ(ಪರಿಷ್ಕೃತ-2) ವರದಿಯ ಮಾರ್ಗಸೂಚಿಯನ್ನೇ ಉಲ್ಲಂಘಿಸಲಾಗಿದೆ. ಈ ರಸ್ತೆಗಳಲ್ಲಿ ಜಾಹೀರಾತು ಫಲಕ ಹಾಕಲು ಅವಕಾಶ ಇಲ್ಲ. ಅಂತಹದಲ್ಲಿ ಇವರು ಮೇಲ್ಸೇತುವೆ ನಿರ್ಮಿಸಿಲು ಹೊರಟಿದ್ದಾರೆ. ಇವರಿಗೆ ಏನು ಹೇಳಬೇಕು? ಜಿಲ್ಲಾ ಪಾರಂಪರಿಕ ಸಮಿತಿಯ ಅನುಮತಿ ಸಹ ಪಡೆದುಕೊಂಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net