ಇದರ ಪರಿಣಾಮ ರೈತರು ಕೇಂದ್ರಕ್ಕೆ ತಂದ ರಾಗಿಯನ್ನು ಮಾರಾಟ ಮಾಡಲು 2-3 ದಿನಗಳ ಕಾಲ ರಸ್ತೆಬದಿಯಲ್ಲೇ ಸಂಸಾರ ಹೂಡುವ ಪರಿಸ್ಥಿತಿ ಬಂದೊದಗಿದೆ. ಫೆ.10ರಂದು ನಗರದ ಎಪಿಎಂಸಿ ಆವರಣದಲ್ಲಿ ಹಾಗೂ ರತ್ನಪುರಿಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಕೇಂದ್ರ ಸ್ಥಾಪಿಸಿದ್ದು, ಎಪಿಎಂಸಿ ಕೇಂದ್ರದ ಖರೀದಿ ಕೇಂದ್ರದಲ್ಲಿ ಒಟ್ಟು ರಾಗಿ ಮಾರಾಟಕ್ಕೆ 5021 ರೈತರು ನೋಂದಾಯಿಸಿಕೊಂಡಿದ್ದಾರೆ. ಅಂತೆಯೇ 1ಲಕ್ಷದ 25 ಸಾವಿರದ 102 ಕ್ವಿಂಟಾಲ್ ರಾಗಿಯನ್ನು ಮಾರಾಟ ಮಾಡಬೇಕಿದೆ. ರತ್ನಪುರಿ ಖರೀದಿ ಕೇಂದ್ರದಲ್ಲಿ 231 ರೈತರು ನೋಂದಾಯಿಸಿಕೊಂಡಿದ್ದು, 5,742 ಕ್ವಿಂಟಾಲ್ ರಾಗಿ ಮಾರಾಟ ಮಾಡಲಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಕ್ವಿಂಟಾಲ್ ರಾಗಿಗೆ 4,886 ರೂ.ಗಳ ಬೆಂಬಲ ಬೆಲೆ ಹಾಗೂ ಭತ್ತಕ್ಕೆ 2369 ರೂ.ಗಳ ಬೆಲೆ ನಿಗದಿಪಡಿಸಲಾಗಿದೆ.