ಕಬ್ಬಿನ ಬಾಕಿ ಹಣ ಕೊಡಿಸಲು ಆಗ್ರಹಿಸಿ ರೈತರ ಪ್ರತಿಭಟನೆ

 ಕಬ್ಬಿನ ಬಾಕಿ ಹಣವನ್ನು ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ ಕೊಡಿಸಬೇಕು ಎಂದು ಒತ್ತಾಯಿಸಿ ಕಬ್ಬು ಬೆಳೆಗಾರರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕಬ್ಬಿನ ಬಾಕಿ ಹಣವನ್ನು ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ ಕೊಡಿಸಬೇಕು ಎಂದು ಒತ್ತಾಯಿಸಿ ಕಬ್ಬು ಬೆಳೆಗಾರರು ನಗರದಲ್ಲಿ ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನೆ
  • ರೈತರ ಸಂಕಷ್ಟ ತಿಳಿಯದ ಬಣ್ಣಾರಿ ಸಕ್ಕರೆ ಕಾರ್ಖಾನೆಯು ರೈತರನ್ನು ನಿರಂತರ ಶೋಷಣೆ
ಮೈಸೂರು: ಕಬ್ಬಿನ ಬಾಕಿ ಹಣವನ್ನು ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ ಕೊಡಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
ರಾಜ್ಯ ಸರ್ಕಾರ ನಿಗದಿ ಮಾಡಿರುವ ಹೆಚ್ಚುವರಿ ಹಣ 100 ರೂ. ಕಬ್ಬು ಬೆಳೆಗಾರರಿಗೆ ಪಾವತಿ ಮಾಡಿಲ್ಲ ಎಂದು ಕಿಡಿಕಾರಿದ ನೂರಾರು ರೈತರು, ಜಿಲ್ಲಾಧಿಕಾರಿ ಕಚೇರಿ ಒಳಗೆ ನುಗ್ಗಲು ಯತ್ನಿಸಿದರು. ಇವರನ್ನು ತಡೆದ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಡಿಸಿ ಕಚೇರಿ ಬಳಿಗೆ ಬಿಡದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾರಿಕೇಡ್ ತಳ್ಳಿಕೊಂಡು ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ರೈತರ ಸಂಕಷ್ಟ ತಿಳಿಯದ ಬಣ್ಣಾರಿ ಸಕ್ಕರೆ ಕಾರ್ಖಾನೆಯು ರೈತರನ್ನು ನಿರಂತರ ಶೋಷಣೆ ಮಾಡುತ್ತಿದೆ. ಪ್ರತಿ ವರ್ಷ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡುತ್ತಲೇ ರೈತರನ್ನು ವಂಚಿಸುತ್ತದೆ. ಸಕ್ಕರೆ ಕಾರ್ಖಾನೆ ನಡೆಸುತ್ತಿರುವ ಬಣ್ಣಾರಿ ಕಾರ್ಖಾನೆ ಮಾಲೀಕರನ್ನು ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.
ಇಂತಹ ಉಪಟಳದಿಂದಲೇ ರೈತರು ಕಬ್ಬು ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ. 15ಲಕ್ಷ ಟನ್ ಕಬ್ಬು ಅರೆಯುವ ಸಾಮರ್ಥ್ಯ ಇರುವ ಬಣ್ಣಾರಿ ಕಾರ್ಖಾನೆಗೆ ಕೇವಲ 7.50 ಲಕ್ಷ ಟನ್ ಮಾತ್ರ ಸರಬರಾಜು ಮಾಡಿದ್ದಾರೆ. 
ಈ ಕಬ್ಬಿನ ಹೆಚ್ಚುವರಿ 7.50 ಕೋಟಿ ರೂ. ರೈತರಿಗೆ ಪಾವತಿಸದೆ ನಾಟಕವಾಡುತ್ತಿದ್ದು, ಕೂಡಲೇ ಜಿಲ್ಲಾಧಿಕಾರಿ ಗೋದಾಮುಗಳನ್ನು ಜಪ್ತಿ ಮಾಡಿ ಸಕ್ಕರೆ ಮಾರಾಟ ಮಾಡಿ ರೈತರ ಹಣ ಕೂಡಿಸಬೇಕು ಎಂದು ಒತ್ತಾಯಿಸಿದರು.
ಈ ವಿಚಾರವಾಗಿ ಜಿಲ್ಲಾಧಿಕಾರಿಯೊಂದಿಗೆ ಕಳೆದ ತಿಂಗಳು ಸಭೆ ನಡೆಸಲಾಗಿತ್ತು. ಬಾಕಿ ಹಣ ಕೊಡಿಸುವುದಾಗಿ ಒಪ್ಪಿಕೊಂಡಿದ್ದರು. ಆದರೆ, ಜಿಲ್ಲಾಧಿಕಾರಿಯಿಂದ ಇನ್ನೂ ಕೂಡ ಬಾಕಿ ಹಣ ಕೊಡಿಸುವ ಕೆಲಸ ಆಗಿಲ್ಲ. ಬಾಕಿ ಹಣ ರೈತರ ಕೈಗೆ ಸೇರುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದರು.
ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮೂಕಳ್ಳಿ ಮಹದೇವಸ್ವಾಮಿ, ಪಟೇಲ್ ಶಿವಮೂರ್ತಿ, ಉಡಿಗಾಲ ರೇವಣ್ಣ, ಸೋಮಶೇಖರ್, ಮಾರ್ಬಳ್ಳಿ ನೀಲಕಂಠಪ್ಪ, ವರಕೋಡು ನಾಗೇಶ್, ಲಕ್ಷ್ಮೀಪುರ ವೆಂಕಟೇಶ್, ಕುರುಬೂರು ಸಿದ್ದೇಶ್, ದೇವನೂರು ವಿಜಯೇಂದ್ರ, ಮಹದೇವ ಸ್ವಾಮಿ, ಕೆಂಡಗಣ್ಣಪ್ಪ, ನಾಗೇಶ್, ಕುರುಬೂರು ಪ್ರದೀಪ್, ಪ್ರಸಾದ್ ನಾಯಕ, ಗೌರಿಶಂಕರ್, ಗುರುಸ್ವಾಮಿ, ಅಂಬಳೆ ಮಂಜುನಾಥ್, ಪರಶಿವಮೂರ್ತಿ, ಸಾತಗಳ್ಳಿ ಬಸವರಾಜ, ಸುಂದರಪ್ಪ, ಸತೀಶ್, ದೇವನೂರು ಮಹಾದೇವಪ್ಪ, ರಂಗರಾಜು, ಕೆಂಡಗಣ್ಣ ಸ್ವಾಮಿ, ಶಿವಸ್ವಾಮಿ, ರವಿಕುಮಾರ್, ನಂಜುಂಡಸ್ವಾಮಿ, ನಾಗೇಂದ್ರ, ಕಮಲಮ್ಮ ಸೇರಿದಂತೆ ಸುಮಾರು 250 ರೈತರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net