ತಂಬಾಕು ತೆರಿಗೆಯಿಂದ ಲಕ್ಷಾಂತರ ಜನರ ಜೀವನೋಪಾಯ ಮತ್ತು ಕೃಷಿ ಕಾರ್ಮಿಕರ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ರೈತ ಸಂಘಟನೆಯ ಎಚ್ಚರಿಕೆ

ತಂಬಾಕು ಕೃಷಿ ಕಾರ್ಯಕ್ರಮ
ತಂಬಾಕು ಕೃಷಿ ಕಾರ್ಯಕ್ರಮ
Published on
ಮೈಸೂರು: ಲಕ್ಷಾಂತರ ರೈತರು ಮತ್ತು ಕೃಷಿ ಕಾರ್ಮಿಕರ ಹಿತರಕ್ಷಣೆಗಾಗಿ ಶ್ರಮಿಸುತ್ತಿರುವ ಲಾಭರಹಿತ ಸಂಸ್ಥೆಯಾದ ಫೆಡರೇಶನ್ ಆಫ್ ಆಲ್ ಇಂಡಿಯಾ ಫಾರ್ಮರ್ ಅಸೋಸಿಯೇಷನ್ಸ್ (ಎಫ್ಎಐಎಫ್ಎ), ತಂಬಾಕು ಕೃಷಿ ವಲಯದ ಮೇಲೆ ವಿಧಿಸಲಾದ ಅತಿಯಾದ ಅಬಕಾರಿ ಸುಂಕದ ಪರಿಣಾಮಗಳ ಕುರಿತು ತಜ್ಞರು ಸಿದ್ಧಪಡಿಸಿದ ವರದಿಯನ್ನು ಬಿಡುಗಡೆ ಮಾಡಿದೆ.
ವರದಿಯ ಪ್ರಕಾರ, ಸಿಗರೇಟ್ ಮೇಲಿನ ಹೊಸ ತೆರಿಗೆಯು ಎಫ್‌ಸಿವಿ ಬೆಳೆಗಳ ಮಾರಾಟವನ್ನು ಸುಮಾರು 20% ರಷ್ಟು ಕಡಿಮೆ ಮಾಡುತ್ತದೆ ಮತ್ತು ಕೃಷಿ ಹಾಗೂ ಸಂಬಂಧಿತ ಚಟುವಟಿಕೆಗಳಲ್ಲಿ ಸರಿಸುಮಾರು 2.6 ಮಿಲಿಯನ್ (26 ಲಕ್ಷ) ಮಾನವ ದಿನಗಳ ಉದ್ಯೋಗ ನಷ್ಟಕ್ಕೆ ಕಾರಣವಾಗಬಹುದು. ಭಾರತದಲ್ಲಿ ಉದ್ಯೋಗ ಪರಿಸ್ಥಿತಿಯು ಈಗಾಗಲೇ ಸಂಕಷ್ಟದಲ್ಲಿರುವ ಸಮಯದಲ್ಲಿ, ಇದು ಎಫ್‌ಸಿವಿ ತಂಬಾಕು ಬೆಳೆಗಾರರು, ಮಹಿಳೆಯರು ಸೇರಿದಂತೆ ಕೃಷಿ ಕಾರ್ಮಿಕರು ಮತ್ತು ಗೋದಾಮು, ಹರಾಜು, ಸಾರಿಗೆ ಮುಂತಾದ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಭಾರಿ ಹೊಡೆತ ನೀಡಲಿದೆ.
ಈ ಕುರಿತು ಎಫ್‌ಎಐಎಫ್‌ಎ ಜಂಟಿ ಕಾರ್ಯದರ್ಶಿ ವಿವೇಕ್ ಅರಸ್ ಅವರು ಮಾತನಾಡಿ, "ಹೊಸ ತೆರಿಗೆಯು ಭಾರತದ ತಂಬಾಕು ರೈತರನ್ನು, ವಿಶೇಷವಾಗಿ ದಕ್ಷಿಣ ಭಾರತದ ಎಫ್‌ಸಿವಿ ಬೆಳೆಗಾರರನ್ನು ಬಾಧಿಸಲಿದೆ. ಕಠಿಣ ಮತ್ತು ತಾರತಮ್ಯದ ತೆರಿಗೆ ಹಾಗೂ ಕಾನೂನುಬಾಹಿರ ತಂಬಾಕಿನ ಕ್ಷಿಪ್ರ ಬೆಳವಣಿಗೆಯಿಂದಾಗಿ ಒಟ್ಟಾರೆ ತಂಬಾಕು ಮಾರುಕಟ್ಟೆಯಲ್ಲಿ ಭಾರತೀಯ ಎಫ್‌ಸಿವಿ ರೈತರ ಪಾಲು ಈಗಾಗಲೇ 21% ರಿಂದ 10% ಕ್ಕೆ ಇಳಿದಿದೆ. ಈ ಪಾಲು ಇನ್ನು ಮುಂದಕ್ಕೆ ಮತ್ತಷ್ಟು ಕುಸಿಯಲಿದ್ದು, ಎಫ್‌ಸಿವಿ ಬೆಳೆಗಾರರಿಗೆ ಉದ್ಯೋಗ ಮುಂದುವರಿಸಲು ಜಾಗವೇ ಇಲ್ಲದಂತಾಗುತ್ತದೆ" ಎಂದು ಆತಂಕ ವ್ಯಕ್ತಪಡಿಸಿದರು.
"ಈ ತೆರಿಗೆ ನೀತಿಯು ಗ್ರಾಹಕರನ್ನು ಅಗ್ಗದ, ಅನಿಯಂತ್ರಿತ ಮತ್ತು ಕಾನೂನುಬಾಹಿರ ತಂಬಾಕು ಉತ್ಪನ್ನಗಳ ಕಡೆಗೆ ತಳ್ಳುತ್ತದೆ. ಇದು ಸಾರ್ವಜನಿಕ ಆರೋಗ್ಯದ ಗುರಿಗಳನ್ನು ಹಳಿತಪ್ಪಿಸುತ್ತದೆ ಮತ್ತು ಮಾರುಕಟ್ಟೆಯನ್ನು ವಿರೂಪಗೊಳಿಸುತ್ತದೆ. ಇದನ್ನು ಸರಿಪಡಿಸದಿದ್ದರೆ, ದಕ್ಷಿಣ ಭಾರತದ ಎಫ್‌ಸಿವಿ ತಂಬಾಕು ರೈತರು ಶಾಶ್ವತವಾಗಿ ಅಂಚಿಗೆ ತಳ್ಳಲ್ಪಡುವ ಅಪಾಯವಿದೆ. ಈ ವೈಪರೀತ್ಯವನ್ನು ತಕ್ಷಣವೇ ಸರಿಪಡಿಸುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ" ಎಂದು ಹೇಳಿದರು.
"ಅಕ್ರಮ ವ್ಯಾಪಾರಕ್ಕೆ ಭಾರಿ ಉತ್ತೇಜನ ನೀಡುವ ಮೂಲಕ ಈ ತೆರಿಗೆ ನೀತಿಯು ತಂಬಾಕು ಮೌಲ್ಯ ಸರಪಳಿಯನ್ನು ತೀವ್ರವಾಗಿ ಅಸ್ತವ್ಯಸ್ತಗೊಳಿಸುತ್ತದೆ ಎಂದು ವರದಿಯು ಎಚ್ಚರಿಸಿದೆ. ಬೆಲೆ ಏರಿಕೆಯಿಂದಾಗಿ ಕಾನೂನುಬಾಹಿರ ತಂಬಾಕು ಉತ್ಪನ್ನಗಳ ಬೇಡಿಕೆಯು ಸುಮಾರು 39% ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ, ಇದರಿಂದ ಅಕ್ರಮ ಸಿಗರೇಟ್ ಬಳಕೆ 46 ಶತಕೋಟಿಗೂ ಮೀರುವ ಸಾಧ್ಯತೆಯಿದೆ. ಇದು ಕಾನೂನುಬದ್ಧ ತಂಬಾಕು ಬೆಳೆಗಾರರಿಗೆ ಮತ್ತು ಇಡೀ ಉದ್ಯಮಕ್ಕೆ ಭಾರಿ ಹೊಡೆತ ನೀಡಲಿದ್ದು, ಜೀವನೋಪಾಯವನ್ನು ನಾಶಪಡಿಸಲಿದೆ" ಎಂದರು.
ಸಂಶೋಧನೆ ನಡೆಸಿದ ಅರ್ಥ ಆರ್ಬಿಟ್ರೇಜ್ ಕನ್ಸಲ್ಟಿಂಗ್ ಎಲ್‌ಎಲ್‌ಪಿ ಸಂಸ್ಥೆಯ ನವೀನ್ ಶ್ರೀವಾಸ್ತವ್ ಮಾತನಾಡಿ, "ಎಫ್‌ಸಿವಿ ತಂಬಾಕು ಕೃಷಿ ವಲಯವು ತೀವ್ರ ರಚನಾತ್ಮಕ ಒತ್ತಡವನ್ನು ಅನುಭವಿಸುತ್ತಿದೆ. ಹೊಸ ತೆರಿಗೆ ವ್ಯವಸ್ಥೆಗೆ ಮೊದಲೇ, ಎಫ್‌ಸಿವಿ ಎಲೆಗಳಿಂದ ತಯಾರಿಸಿದ ಉತ್ಪನ್ನಗಳ ಮೇಲೆ ಬೀಡಿ ಮತ್ತು ಅಗಿಯುವ ತಂಬಾಕಿಗಿಂತ 30-50 ಪಟ್ಟು ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿತ್ತು. ಇತ್ತೀಚಿನ ಅಬಕಾರಿ ಏರಿಕೆಯು ಈ ಅಸಮತೋಲನವನ್ನು ಮತ್ತಷ್ಟು ಹೆಚ್ಚಿಸಲಿದ್ದು, ಕಂದಾಯ-ಅಸಮರ್ಥ ಮತ್ತು ಅನೌಪಚಾರಿಕ ಬಳಕೆಯ ಚಾನೆಲ್‌ಗಳತ್ತ ಮಾರುಕಟ್ಟೆಯನ್ನು ಕೊಂಡೊಯ್ಯುತ್ತದೆ. ಇದರಿಂದ ಬರುವ ತೆರಿಗೆ ಆದಾಯಕ್ಕಿಂತ, ಕೃಷಿ ಆದಾಯದ ಕುಸಿತ ಮತ್ತು ಉದ್ಯೋಗ ನಷ್ಟದಿಂದ ಉಂಟಾಗುವ ಆರ್ಥಿಕ ಹಾನಿಯೇ ಹೆಚ್ಚಿರಲಿದೆ" ಎಂದರು.
ಉನ್ನತ ತೆರಿಗೆ ವ್ಯವಸ್ಥೆಯ ಸಾಮಾಜಿಕ-ಆರ್ಥಿಕ ಪರಿಣಾಮಗಳನ್ನು ಎತ್ತಿ ತೋರಿಸಿರುವ ವರದಿಯು, ಭಾರತದಲ್ಲಿ ತಂಬಾಕು ಕೃಷಿಯನ್ನು ಹೆಚ್ಚಾಗಿ ಸಣ್ಣ ಮತ್ತು ಅತಿಸಣ್ಣ ರೈತರು ಮಳೆಯಾಶ್ರಿತ ಮತ್ತು ಸೀಮಿತ ಸಂಪನ್ಮೂಲಗಳ ನಡುವೆ ಮಾಡುತ್ತಿದ್ದಾರೆ ಎಂದು ತಿಳಿಸಿದೆ. ಇಷ್ಟೆಲ್ಲಾ ಮಿತಿಗಳ ನಡುವೆಯೂ ತಂಬಾಕು ಗ್ರಾಮೀಣ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಮತ್ತು ರಾಷ್ಟ್ರೀಯ ಬೊಕ್ಕಸಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿದೆ.
ತೀವ್ರ ತೆರಿಗೆ ಏರಿಕೆ ಮತ್ತು ಅಕ್ರಮ ವ್ಯಾಪಾರದ ಬೆಳವಣಿಗೆಯ ನಡುವೆ ನೇರ ಸಂಬಂಧವಿದೆ ಎಂದು ವರದಿಯು ಜಾಗತಿಕ ಸಾಕ್ಷ್ಯಗಳನ್ನು ನೀಡಿದೆ. 71 ದೇಶಗಳನ್ನು ಒಳಗೊಂಡ ಜಾಗತಿಕ ಅಧ್ಯಯನದ ಪ್ರಕಾರ, ಸಿಗರೇಟ್ ಬೆಲೆ ಏರಿಕೆಯಿಂದ ಅದು ಜನರಿಗೆ ಖರೀದಿಸಲು ಅಸಾಧ್ಯವಾದಾಗ, ಅಕ್ರಮ ವ್ಯಾಪಾರವು ಹೆಚ್ಚಾಗುತ್ತದೆ. ಒಮ್ಮೆ ಮಾರುಕಟ್ಟೆಯಲ್ಲಿ ಅಕ್ರಮ ವ್ಯಾಪಾರ ಬೇರೂರಿದರೆ, ಅದನ್ನು ಕೇವಲ ಜಾರಿ ನಿರ್ದೇಶನಗಳ ಮೂಲಕ ನಿಯಂತ್ರಿಸಲು ಸಾಧ್ಯವಿಲ್ಲ.
ಕಾನೂನುಬದ್ಧ ಮಾರಾಟದ ಕುಸಿತ, ಸರ್ಕಾರದ ಕಂದಾಯ ನಷ್ಟ, ಸಂಘಟಿತ ಅಪರಾಧಗಳ ಬೆಳವಣಿಗೆ ಮತ್ತು ಗುಣಮಟ್ಟವಿಲ್ಲದ ಉತ್ಪನ್ನಗಳಿಂದ ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ಹೀಗೆ ಇದರ ಪರಿಣಾಮಗಳು ಗಂಭೀರವಾಗಿರುತ್ತವೆ. ಆದ್ದರಿಂದ, ರೈತರು ಮತ್ತು ಕಾರ್ಮಿಕರ ಮೇಲೆ ಆಗುವ ಭಾರಿ ಪರಿಣಾಮವನ್ನು ತಡೆಗಟ್ಟಲು ತೆರಿಗೆ ಮತ್ತು ಕೈಗೆಟಕುವ ಬೆಲೆಗಳು ನೀತಿ ನಿರೂಪಣೆಯ ಕೇಂದ್ರವಾಗಿರಬೇಕು ಎಂದು ವರದಿಯು ಒತ್ತಿಹೇಳಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net