ರೈತರಿಂದ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನ

ಮಿರ್ಲೆ ಚೆಸ್ಕಾಂ ಉಪ ಕಚೇರಿ ಎದುರು ರೈತರ ಪ್ರತಿಭಟನೆ
ಮಿರ್ಲೆ ಚೆಸ್ಕಾಂ ಉಪ ಕಚೇರಿ ಎದುರು ರೈತರ ಪ್ರತಿಭಟನೆ
Published on
ಸಾಲಿಗ್ರಾಮ: ಸರ್ಕಾರ ನಿಗದಿಪಡಿಸಿರುವ ದಿನಕ್ಕೆ 7 ಗಂಟೆ ವಿದ್ಯುತ್ತನ್ನು ನೀಡುವಂತೆ ಆಗ್ರಹಿಸಿ ಬುಧವಾರ ಮಿರ್ಲೆ ಗ್ರಾಮದ ರೈತರು ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಕಬ್ಬು, ತರಕಾರಿ ಸೇರಿದಂತೆ ಇನ್ನಿತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಸಾಲ ಸೋಲ ಮಾಡಿ, ಒಡವೆಗಳನ್ನು ಅಡವಿಟ್ಟು ಕೃಷಿ ಮಾಡಿದ್ದೇವೆ. ಆದರೆ ಸರ್ಕಾರದ ನಿಯಮ ದಿನಕ್ಕೆ ಏಳು ಗಂಟೆ ಪಂಪ್‌ಸೆಟ್ ಲೈನ್ ಕೊಡಬೇಕು ಎಂಬ ಆದೇಶ ಇದ್ದರೂ ಗ್ರಾಮದಲ್ಲಿರುವ ಸೆಸ್ಕ್ ಉಪ ಕಚೇರಿಯ ಅಧಿಕಾರಿಗಳು ವಿದ್ಯುತ್ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಭಾಸ್ಕರ್ ಅವರು ಸೆಸ್ಕ್ ಜೆಇ ಅವರನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರ ರೈತರಿಗೆ ಕೊಟ್ಟಿರುವ ಭರವಸೆಯಂತೆ 7 ಗಂಟೆ ವಿದ್ಯುತ್ ನೀಡುತ್ತೀರಿ ಎಂದು ಬೆಳೆಗಳನ್ನು ಹಾಕಿದ್ದೇವೆ. ಈಗ ಬಿಸಿಲಿಗೆ ಬೆಳೆ ಒಣಗುತ್ತಿದೆ. ನಿಮ್ಮ ಇಲಾಖೆಯಿಂದ 3 ಗಂಟೆ ಮಾತ್ರ ವಿದ್ಯುತ್ ನೀಡುತ್ತಿದ್ದೀರಿ, ಹೀಗಿರುವಾಗ ಒಣಗುತ್ತಿರುವ ಬೆಳೆಗೆ ನೀರು ಒದಗಿಸುವುದು ಹೇಗೆ ಎಂದು ಪ್ರಶ್ನಿಸಿದರು.
ಕೇಳಿದರೆ ಓವರ್ ಲೋಡ್ ಎನ್ನುತ್ತಾರೆ. ಓವರ್ ಲೋಡ್ ಏಕೆ ಆಗುತ್ತದೆ. ಹೊಸ ಟಿಸಿಗಳಿಗೆ ಕನೆಕ್ಷನ್ ಕೊಡುವುದು ಯಾರು?. ಹೊಸ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡಲು ಆಗುವುದಿಲ್ಲ ಎಂದರೆ ಕನೆಕ್ಷನ್ ಏಕೆ ಕೊಡುತ್ತೀರಿ ಎಂದು ಪ್ರಶ್ನಿಸಿದ ಅವರು, ಹೊಸ ಟಿಸಿ ಅಳವಡಿಸಲು ರೈತರಿಂದಲೇ ಹಣ ಕಟ್ಟಿಸಿಕೊಳ್ಳುತ್ತೀರಲ್ಲ, ಆಗ ನೀವು ಓವರ್ ಲೋಡ್ ನೋಡಿಕೊಂಡು ಟಿಸಿ ಕನೆಕ್ಷನ್ ಕೊಡಬೇಕಲ್ವಾ. ಈ ಕಥೆ ನಮಗೆ ಬೇಡ, ಏಳು ಗಂಟೆ ಕರೆಂಟ್ ಬೇಕೇ ಬೇಕು ಎಂದು ಪಟ್ಟು ಹಿಡಿದು ಕುಳಿತರು.
ಸೆಸ್ಕ್ ಅಧಿಕಾರಿಗಳ ನಿರ್ಲಕ್ಷೃದ ವಿರುದ್ಧ ಘೋಷಣೆ ಕೂಗಿದರು. ಸಾಲಿಗ್ರಾಮ ತಾಲೂಕು ಸೆಸ್ಕ್ ಅಧಿಕಾರಿ ಬರುವ ತನಕ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಕಚೇರಿ ಮುಂದೆ ಕುಳಿತರು. ಕಚೇರಿಯ ಕೆಲಸಕ್ಕೆ ಹೊರಗಡೆ ಹೋಗಿರುವುದರಿಂದ ಬರುವುದು ತಡವಾಗುತ್ತದೆ ಎಂದು ಫೋನ್ ಮುಖಾಂತರ ರೈತರೊಂದಿಗೆ ಸಾಲಿಗ್ರಾಮ ಸೆಸ್ಕ್ ಅಧಿಕಾರಿ ಮಧುಸೂದನ್ ಮಾತನಾಡಿ, ಶೀಘ್ರದಲ್ಲೇ ಹೊಸ ಲೈನ್ ಎಳೆಯುವ ಮೂಲಕ ಭಾಗದ ಎಲ್ಲ ರೈತರಿಗೆ 7 ಗಂಟೆಗಳ ನೀಡಲಾಗುವುದು ಸ್ವಲ್ಪ ದಿನ ಕಾಲಾವಕಾಶ ಕೊಡಬೇಕು ಎಂದು ತಿಳಿಸಿದರು.
ಹಿಂದೆ ಹಲವು ಬಾರಿ ಇದೇ ಭರವಸೆಗಳನ್ನು ಕೊಟ್ಟಿದ್ದೀರಿ, ಆದರೆ ಸಮರ್ಪಕ ವಿದ್ಯುತ್ ನೀಡಿಲ್ಲ. ಇದರಿಂದ ಸಾಕಷ್ಟು ಬೆಳೆ ನಷ್ಟ ಅನುಭವಿಸಿದ್ದೇವೆ ಎಂದು ಅಧಿಕಾರಿಗಳಿಗೆ ನಷ್ಟಕ್ಕೆ ಒಳಗಾದ ರೈತರು ಮನದಟ್ಟು ಮಾಡಿದರು. ಈಗ ಮತ್ತೆ ನಿಮಗೆ ಒಂದಷ್ಟು ದಿನಗಳು ಕೊಡುತ್ತೇವೆ, ಅಷ್ಟರಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ ಹರಿಸಬೇಕು, ಇಲ್ಲದಿದ್ದರೆ ಶಾಮಿಯಾನ ಹಾಕಿ ನಿರಂತರ ಪ್ರತಿಭಟನೆಗೆ ಕೂರುತ್ತೇವೆ ಎಂದು ಎಚ್ಚರಿಕೆ ನೀಡಿ ಪ್ರತಿಭಟನೆ ಕೈಬಿಟ್ಟರು.
ಕೃಷಿಕತ್ತಿನ ಸಹಕಾರ ನಿರ್ದೇಶಕ ಸುಧಾಕರ್, ರೈತ ಮುಖಂಡರಾದ ರಮೇಶ್, ಕೃಷ್ಣೇಗೌಡ, ಮಹೇಶ್, ವಸಂತ, ಪ್ರಸಾದ್, ಉಮೇಶ್, ರಘು, ಬಾಬು, ಮುರಳಿ, ಅಪ್ಪು, ಚಂದ್ರಹಾಸ, ಶಿವು, ಅನಿಲ್, ತುಕಾರಾಂ, ವಸಂತಕುಮಾರ್, ಮಧು, ಮಧುಸೂದನ್ ಮತ್ತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net